Home ಧಾರ್ಮಿಕ ಸುದ್ದಿ ಶ್ರೀಕೃಷ್ಣಮಠ ಸರೋವರದ ಶಿಲಾರಚನೆಗೆ ಸಹಜ ಸೊಬಗು

ಶ್ರೀಕೃಷ್ಣಮಠ ಸರೋವರದ ಶಿಲಾರಚನೆಗೆ ಸಹಜ ಸೊಬಗು

ಶಿಲಾರಚನೆಗಳ ಬಣ್ಣ ತೆಗೆಯುವಿಕೆ

771
0
SHARE

ಉಡುಪಿ: ಶ್ರೀಅದಮಾರು ಮಠದ ಪರ್ಯಾಯೋತ್ಸವದ ವೇಳೆ ಸುಣ್ಣ ಬಣ್ಣ ಕೊಡುವಾಗ ಶ್ರೀಕೃಷ್ಣಮಠದ ಎಲ್ಲ ಕಡೆಗೂ ಕೊಟ್ಟಿರಲಿಲ್ಲ. ಈಗ ಎಲ್ಲಿ ಕೊಡಬಾರದೋ ಅಂತಹ ಕಡೆ ಬಣ್ಣವನ್ನು ತೆಗೆಯುವ ಕೆಲಸ ನಡೆಸಲಾಗುತ್ತಿದೆ.

ಪರ್ಯಾಯದ ಗಡಿಬಿಡಿಯಲ್ಲಿ ಎಲ್ಲಿ ಬಣ್ಣ ಕೊಡಬೇಕು? ಎಲ್ಲಿ ಕೊಡಬಾರದು ಎಂದು ಹೇಳುವ ವ್ಯವಧಾನ ಯಾರಿಗೂ ಇಲ್ಲದೆ ಹಿಂದಿನ ಬಾರಿ ಕೊಟ್ಟಲ್ಲಿ ಬಣ್ಣ ಕೊಡುತ್ತಲೇ ಹೋಗುತ್ತಾರೆ. ಈ ಬಾರಿ ಹಾಗಾಗಲಿಲ್ಲ.

ಈಗ ಮಧ್ವಸರೋವರದಲ್ಲಿರುವ ಪ್ರಾಚೀನ ಶಿಲಾ ರಚನೆಗೆ ಅನೇಕ ವರ್ಷಗಳಿಂದ ಹಾಕುತ್ತಿದ್ದ ಬಣ್ಣಗಳನ್ನು ತೆಗೆಯಲಾಗುತ್ತಿದೆ. ಮೂರ್‍ನಾಲ್ಕು ದಿನಗಳಿಂದ ಕೆಲಸ ನಡೆಯುತ್ತಿದೆ. ಈಗ ಪ್ರಾಚೀನ ಶಿಲಾ ರಚನೆಗಳು ತನ್ನ ಯಥಾರೂಪವನ್ನು ಪಡೆದುಕೊಂಡಿವೆ. ಮುಂದೆ ಸರೋವರದಿಂದ ಮೇಲೆ ಬರುವಲ್ಲಿ ಮತ್ತು ಶ್ರೀಕೃಷ್ಣಮಠವನ್ನು ಪ್ರವೇಶಿಸುವಲ್ಲಿರುವ ಶಿಲಾ ರಚನೆಗಳ ಬಣ್ಣವನ್ನೂ ತೆಗೆದು ಅದರ ಸಹಜ ಸೌಂದರ್ಯ ತೋರುವಂತೆ ಮಾಡಲಾಗುತ್ತದೆ.

ಬಣ್ಣ ಹಾಕುವುದಕ್ಕಿಂತ ಹಲವು ವರ್ಷಗಳಿಂದ ಕೊಡುತ್ತಲೇ ಬಂದ ಬಣ್ಣವನ್ನು ತೆಗೆಯುವುದೂ ಹರಸಾಹಸ ಎಂಬುದು ಕಾರ್ಮಿಕರ ಶ್ರಮ ನೋಡಿದರೆ ತಿಳಿಯುತ್ತದೆ. ಮೂಗಿಗೆ ಧೂಳು ಹೋಗದಂತೆ ಬಟ್ಟೆ ಕಟ್ಟಿಕೊಂಡು ಕೆಲಸ ನಿರ್ವಹಿಸುತ್ತಿದ್ದಾರೆ. ಯಾರಾದರೂ ಶಿಲಾ ರಚನೆಗಳಿಗೆ ಬಣ್ಣ ಕೊಡುವುದಿದ್ದರೆ ಅದನ್ನು ಕೈಬಿಟ್ಟು ಅದನ್ನು ಯಥಾರೂಪದಲ್ಲಿ ನೋಡಲು ಅವಕಾಶ ಕೊಡಬೇಕು. ಸಹಜ ಬಣ್ಣಕ್ಕಿಂತ ಮಿಗಿಲಾದ ಬಣ್ಣ ಇನ್ನೊಂದಿಲ್ಲ ಎಂಬ ಸಂದೇಶ ಇಲ್ಲಿದೆ.

ಹಳೆ ಸೊಬಗು
ಹಳೆ ಸೊಬಗು ಗೊತ್ತಾಗಬೇಕು ಪೇಂಟ್‌ ಬಣ್ಣದಿಂದ ಹಳೆಯ ಸೊಬಗು ಗೊತ್ತಾಗುತ್ತಿರಲಿಲ್ಲ. ಬಣ್ಣವನ್ನು ಸಂಪೂರ್ಣ ತೆಗೆದ ಬಳಿಕ ಪಾರಂಪರಿಕ ಸ್ಥಳಕ್ಕೆ ಬಂದ ಅನುಭವ ಆಗುತ್ತದೆ. ಹಂಪಿಯ ಪರಿಸರ ಹೇಗಿದೆ ನೋಡಿ. ಹೇಗೆ ಪರಿಸರ ಇರುತ್ತದೋ ಹಾಗೆ ನಮ್ಮ ಮನಸ್ಸೂ ಇರುತ್ತದೆ.
-ಶ್ರೀಈಶಪ್ರಿಯತೀರ್ಥ ಶ್ರೀಪಾದರು,
ಪರ್ಯಾಯ ಶ್ರೀಅದಮಾರು ಮಠ, ಉಡುಪಿ

ಸರೋವರದ ಪ್ರಾಚೀನತೆ
ಮಧ್ವಸರೋವರದ ಮೇಲಿನ ಶಿಲಾ ರಚನೆಗಳನ್ನು ಕಂಡಾಗ ಇದರ ಪ್ರಾಚೀನತೆ ಅರಿವಾಗುತ್ತದೆ. ಇದು ಶ್ರೀಕೃಷ್ಣಮಠ ಸ್ಥಾಪನೆಗೂ ಹಿಂದೆ ಇತ್ತು ಎನ್ನುವುದು ತಿಳಿವಳಿಕೆಗೆ ಬರುತ್ತದೆ. ಸುಮಾರು 750 ವರ್ಷಗಳ ಹಿಂದೆ ಮಧ್ವಾಚಾರ್ಯರ ಕಾಲಕ್ಕಿಂತಲೂ ಹಿಂದೆ ಶ್ರೀಅನಂತೇಶ್ವರ ದೇವಸ್ಥಾನದ ಸರೋವರ ಇದಾಗಿತ್ತು. ಅನಂತೇಶ್ವರದ ಬಳಿಕ ಚಂದ್ರಮೌಳೀಶ್ವರ ದೇವಸ್ಥಾನ ನಿರ್ಮಾಣವಾಯಿತು.

LEAVE A REPLY

Please enter your comment!
Please enter your name here