Home ಧಾರ್ಮಿಕ ಸುದ್ದಿ ಪರ್ಯಾಯ ಉತ್ಸವದ ಬಳಿಕ ನಗರ ಎಂದಿನಂತೆ

ಪರ್ಯಾಯ ಉತ್ಸವದ ಬಳಿಕ ನಗರ ಎಂದಿನಂತೆ

ಸ್ವಚ್ಛತೆ ಮುಕ್ತಾಯ, ಭಕ್ತರಿಂದ ದೇಗುಲ, ಮಠ ಭೇಟಿ

1362
0
SHARE

ಉಡುಪಿ: ಶ್ರೀಕೃಷ್ಣ ನಗರಿಯಲ್ಲಿ ಸಹಸ್ರ ಭಕ್ತರ ಸಮ್ಮುಖ ಧಾರ್ಮಿಕ, ಸಾಂಸ್ಕೃತಿಕ, ವೈಭವಗಳ ಮೂಲಕ ಗೌಜಿ ಗದ್ದಲಗಳಿಂದ ನಡೆದ ಅದಮಾರು ಪರ್ಯಾಯೋತ್ಸವ ಮುಕ್ತಾಯದ ಬಳಿಕ ನಗರ ರವಿವಾರ ಎಂದಿನ ಲಯಕ್ಕೆ ಮರಳಿದೆ.

ವಿದ್ಯುತ್‌ ದೀಪಗಳ ತೆರವು ಕಾರ್ಯ
ಪರ್ಯಾಯೋತ್ಸವದ ಸಂದರ್ಭ ಸಿದ್ಧತೆಗಾಗಿ ವಿವಿಧೆಡೆ ಹಾಕಿದ್ದ ಚಪ್ಪರ, ಪೆಂಡಾಲ್‌ಗ‌ಳ ತೆರವು ಕಾರ್ಯ ಆರಂಭಗೊಂಡಿದೆ. ಪೆಂಡಾಲ್‌ ಹಾಗೂ ಅದರೊಳಗಿನ ನೆಲಹಾಸುಗಳ ತೆರವು ಕಾರ್ಯವನ್ನು ವಿಭಾಗಗಳ ಕಾರ್ಮಿಕರು ನಡೆಸುತ್ತಿದ್ದಾರೆ. ಅಲಂಕಾರಕ್ಕಾಗಿ ರಸ್ತೆಗಳ ಬದಿ ಹಾಕಿರುವ ಶುಭ ಕೋರುವ ಬ್ಯಾನರ್‌, ಪತಾಕೆ, ಗೂಡುದೀಪಗಳು, ಅಲಂಕಾರಗಳನ್ನು ಹಾಗೆಯೇ ಉಳಿಸಿಕೊಳ್ಳಲಾಗಿದೆ. ಅಲಂಕೃತ ವಿದ್ಯುತ್‌ ದೀಪಗಳನ್ನು ತೆರವುಗೊಳಿಸುವ ಕಾರ್ಯ ನಡೆಯುತ್ತಿದೆ.

ಪರ್ಯಾಯದ ಪ್ರಯುಕ್ತ ಎರಡು ದಿನಗಳ ಕಾಲ ರಾತ್ರಿ ಮತ್ತು ಹಗಲು ಹೊತ್ತು ಮಠದ ಪಾರ್ಕಿಂಗ್‌ ಸಮೀಪ ಹಾಗೂ ಮಠದ ಹಿಂಭಾಗದಲ್ಲಿ ಭಕ್ತರಿಗೆ ಅನ್ನಪ್ರಸಾದ ವಿತರಣೆಗೆ ವ್ಯವಸ್ಥೆ ಕಲ್ಪಿಸಲಾಗಿತ್ತು. ಪಾರ್ಕಿಂಗ್‌ ಬಳಿ ವಿಶಾಲ ಪೆಂಡಾಲ್‌ ಹಾಕಿ ಊಟಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಅಧಿಕ ಪ್ರಮಾಣದ‌ಲ್ಲಿ ಭಕ್ತರು ಈ ಸ್ಥಳಗಳಲ್ಲಿ ಭೋಜನ ಸವಿದಿದ್ದರು.
ಭಕ್ತರು ಊಟ ಮಾಡಿದ ಬಳಿಕ ಪರಿಸರವನ್ನು ಸ್ವತ್ಛಗೊಳಿಸಲಾಗಿದ್ದು ಪರಿಸರದಲ್ಲಿ ಒಂದು ತಟ್ಟೆಯೂ ಈಗ ಕಾಣಿಸುತಿಲ್ಲ. ಸಾಂಸ್ಕೃತಿಕ ಕಾರ್ಯಕ್ರಮ ನಡೆಯುವ ಸ್ಥಳ, ರಥಬೀದಿ, ಪಾರ್ಕಿಂಗ್‌, ಮಠಕ್ಕೆ ತೆರಳುವ ರಸ್ತೆ ಮೊದಲಾದೆಡೆಗಳಲ್ಲಿ ಕೂಡ ಸ್ವಚ್ಛತೆ ನಡೆದು ಪರಿಸರ ಸುಂದರವಾಗಿ ಗೋಚರಿಸುತ್ತಿದೆ.

ಹೊರೆಕಾಣಿಕೆ ದಾಸ್ತಾನು ಕೇಂದ್ರ ತೆರೆದಿದೆ
ಪಾರ್ಕಿಂಗ್‌ ಸ್ಥಳದ ಪಕ್ಕದಲ್ಲಿ ಹೊರೆಕಾಣಿಕೆ ಸಂಗ್ರಹ ಉಗ್ರಾಣ ತೆರೆದಿದೆ. ಉಗ್ರಾಣದಲ್ಲಿ ಹೊರೆಕಾಣಿಕೆ ಮೂಲಕ ಸಂಗ್ರಹಿಸಿಡಲಾಗಿದ್ದ ಅಕ್ಕಿ, ತರಕಾರಿ, ದವಸಧಾನ್ಯಗಳನ್ನು ಪರ್ಯಾಯದ ಸಂದರ್ಭ ನಡೆದ ಭಕ್ತರ ಭೋಜನದ ಅಡುಗೆಗೆ ಬಳಸಿಕೊಳ್ಳಲಾಗಿದೆ. ಅಕ್ಕಿ ಹಾಗೂ ಚಿಲ್ಲರೆ ಸಾಮಗ್ರಿಗಳು ಇದೆ. ಮುಂದಿನ ದಿನಗಳಲ್ಲಿ ಹೊರೆಕಾಣಿಕೆ ಬರಲಿರುವುದರಿಂದ ಕೌಂಟರ್‌ ತೆರೆದಿರುತ್ತದೆ ಎಂದು ಹಸುರುವಾಣಿ ಸಮಿತಿಯವರು ತಿಳಿಸಿದ್ದಾರೆ.

ಮರಳಿ ಊರಿಗೆ
ನಾಡಿನೆಲ್ಲೆಡೆಯಿಂದ ಲಕ್ಷಕ್ಕೂ ಮಿಕ್ಕಿದ ಭಕ್ತರು ಪರ್ಯಾಯದ ಮಹೋತ್ಸವಕ್ಕೆ ಆಗಮಿಸಿ ಮೆರವಣಿಗೆ, ದರ್ಬಾರ್‌ ಕಂಡು ಪುನೀತ ರಾಗಿದ್ದರು. ಭಕ್ತರು ಶ್ರೀಕೃಷ್ಣ ದೇವರ ದರ್ಶನ, ಅನಂತೇಶ್ವರ ಮತ್ತು ಚಂದ್ರಮೌಳೀಶ್ವರ ದೇವರ ದರ್ಶನಗಳನ್ನು ಪಡೆದು ತೆರಳುತ್ತಿದ್ದಾರೆ.

ಕುರುಹು ಸಿಗದಂತೆ ಸ್ವಚ್ಛತೆ
ಕಳೆದ ಎರಡು ದಿನಗಳ ಹಿಂದೆ ಜೋಡುಕಟ್ಟೆಯಿಂದ ಕೃಷ್ಣ ಮಠದವರೆಗೆ ನಡೆದ ಮೆರವಣಿಗೆ ವೇಳೆ ರಸ್ತೆಯಲ್ಲಿ ಬಿದ್ದಿದ್ದ ಕಸಗಳನ್ನು ತತ್‌ಕ್ಷಣವೇ ತೆರವುಗೊಳಿಸುವ ಕಾರ್ಯವನ್ನು ಪೌರ ಕಾರ್ಮಿಕರು ಮತ್ತು ಪಿಪಿಸಿ ಕಾಲೇಜಿನ ವಿದ್ಯಾರ್ಥಿಗಳು ನಡೆಸಿದ್ದರು. ಸಂಗ್ರಹಿಸಿದ ಕಸಗಳನ್ನು ಟೆಂಪೋಗಳ ಮೂಲಕ ತ್ಯಾಜ್ಯ ಸಂಗ್ರಹಣ ಸ್ಥಳಕ್ಕೆ ಸಾಗಿಸಿದ್ದರು. ಮೆರವಣಿಗೆಗೆ ಆಗಮಿಸಿದ ಜನ ಎಲ್ಲೆಂದರಲ್ಲಿ ಕಸಗಳನ್ನು ಎಸೆದು ಮಲೀನಗೊಳಿಸಿದ್ದರು. ಅವೆಲ್ಲ ಜಾಗಗಳು ಈಗ ಸ್ವತ್ಛಗೊಂಡಿವೆ. ಎರಡು ದಿನಗಳ ಹಿಂದೆ ಲಕ್ಷ ಮಂದಿ ಸೇರಿದ್ದ ಜಾಗ ಇದಾಗಿತ್ತೆ ಎನ್ನುವ ಸಣ್ಣ ಕುರುಹು ಕೂಡ ಈಗ ಕಾಣಿಸುತಿಲ್ಲ.

LEAVE A REPLY

Please enter your comment!
Please enter your name here