Home ಧಾರ್ಮಿಕ ಸುದ್ದಿ ಶ್ರೀಕೃಷ್ಣಾಷ್ಟಮಿಗೆ ದಿನಗಣನೆ

ಶ್ರೀಕೃಷ್ಣಾಷ್ಟಮಿಗೆ ದಿನಗಣನೆ

ಮನೆ-ಮನೆಗಳಲ್ಲಿ ಮೇಳೈಸಲಿದೆ ಸಂಭ್ರಮ

1548
0
SHARE

 ಪುನೀತ್‌ ಸಾಲ್ಯಾನ್‌
ಉಡುಪಿ:
ಆಷಾಢ ಮಾಸ ಹೋಗಿ ಶ್ರಾವಣ ಮಾಸ ಬಂತು. ಈ ಮಾಸದ ಮೊದಲ ಹಬ್ಬ ಎಂಬಂತೆ ಶ್ರೀಕೃಷ್ಣಾಷ್ಟಮಿಗೆ ದಿನಗಣನೆ ಆರಂಭವಾಗಿದೆ. ಶ್ರೀ ಕೃಷ್ಣನ ಜನನ ರಾತ್ರಿ ಆದದ್ದು. ಹೀಗಾಗಿ ಆತನ ಬರುವಿಕೆಯ ನಿರೀಕ್ಷೆಯಲ್ಲಿ ಹಗಲು ಉಪವಾಸವ್ರತ ಬೆಳೆದು ಬಂದು, ಮರುದಿನ ಜನ್ಮದ ಉತ್ಸವಾಚರಣೆ ಲೀಲೋತ್ಸವದ ಮೂಲಕ ಪ್ರಕಟವಾಗುತ್ತದೆ ಎಂಬುದು ವಿದ್ವಾಂಸರ ಅಭಿಪ್ರಾಯ. ಕರಾವಳಿಯಲ್ಲಿ ಇದನ್ನು ವಿಟ್ಲಪಿಂಡಿ ಎಂದು ಕರೆಯುತ್ತಾರೆ.

ಶ್ರೀಕೃಷ್ಣಮಠದಲ್ಲಿ ಕೃಷ್ಣಾಷ್ಟಮಿ ಹಬ್ಬಕ್ಕೆ ವಿಶೇಷ ಪ್ರಾಧಾನ್ಯವಿದೆ. ಉತ್ತರ ಭಾರತದ ದ್ವಾರಕೆ, ಮಥುರಾ, ವೃಂದಾವನ, ಚೈತನ್ಯ ಮಹಾಪ್ರಭುಗಳ ಕಾರ್ಯಕ್ಷೇತ್ರವಾದ ಪಶ್ಚಿಮಬಂಗಾಲದ ನವದ್ವೀಪ ಮೊದಲಾದ ಕ್ಷೇತ್ರಗಳಲ್ಲಿ ಭಾರೀ ಸಂಭ್ರಮವಿರುತ್ತದೆ. ಶ್ರೀಕೃಷ್ಣಮಠದಲ್ಲಿ ನಿರ್ಜಲ ಉಪವಾಸದಲ್ಲಿರುವ ಪರ್ಯಾಯ ಶ್ರೀಪಾದರು ರಾತ್ರಿ ಮಹಾಪೂಜೆ ಮಾಡಿ ಬಳಿಕ ಚಂದ್ರೋದಯದ ಹೊತ್ತಿಗೆ ಮಧ್ಯರಾತ್ರಿ ಶ್ರೀಕೃಷ್ಣನಿಗೆ ಅಘ್ಯರ್ಪ್ರದಾನ ಮಾಡುತ್ತಾರೆ. ಬೆಳಗ್ಗೆ ಕೃಷ್ಣನಿಗೆ ತಯಾರಿಸಿದ ಉಂಡೆ, ಚಕ್ಕುಲಿಗಳನ್ನು ರಾತ್ರಿ ಸಮರ್ಪಿಸುತ್ತಾರೆ. ಹಿಂದಿನ ದಿನ ಏಕಾದಶಿ ರೀತಿ ಆಚರಣೆ ಇರುವುದರಿಂದ ಮರುದಿನ ದ್ವಾದಶಿ ರೀತಿಯಲ್ಲಿ ಆಚರಣೆ. ಹೀಗಾಗಿ ಮರುದಿನವೇ ಪ್ರಸಾದದ ವಿತರಣೆ. ಮನೆ-ಮನೆಗಳಲ್ಲಿಯೂ ಕೃಷ್ಣನ ದೇಗುಲ-ಭಜನ ಮಂದಿರಗಳಲ್ಲಿಯೂ ಕೃಷ್ಣಾಷ್ಟಮಿ ಸಡಗರ ನಡೆಯುತ್ತದೆ.

ಜನ್ಮಸಂಭ್ರಮ
ಕೃಷ್ಣಜಯಂತಿ ಮರುದಿನ ಕೃಷ್ಣಲೀಲೋತ್ಸವ ನಡೆಯುತ್ತದೆ. ಇದನ್ನು ವಿಟ್ಲಪಿಂಡಿ ಉತ್ಸವ ಎಂದೂ ಕರೆಯಲಾಗುತ್ತದೆ. ಶ್ರೀ ಕೃಷ್ಣಮಠದಲ್ಲಿ ಪ್ರಾತಃಕಾಲ ಎಂದಿನಂತೆ ಮಹಾಪೂಜೆ, ಬಳಿಕ ಕೃಷ್ಣವೇಷ ಸ್ಪರ್ಧೆ, ಮಧ್ಯಾಹ್ನ ಅನ್ನಸಂತರ್ಪಣೆ ನಡೆಯುತ್ತದೆ. ಬೆಳಗ್ಗೆಯಿಂದಲೇ ಅಷ್ಟಮಿ ಪ್ರಸಾದ ವಿತರಣೆ ಆರಂಭಗೊಳ್ಳುತ್ತದೆ.

ಸಿದ್ಧಗೊಂಡಿದೆ ಗುಜ್ಜಿಗಳು
ಮೊಸರು ಕುಡಿಕೆಗೆಂದೇ ಪ್ರಮುಖ ಆಕರ್ಷಣೆಯಾಗಿ ರಥಬೀದಿಯ ಸುತ್ತ ಎರಡು ಮಂಟಪ ಸೇರಿ 15 ಗುಜ್ಜಿಗಳನ್ನು ಮಾಡಲಾಗಿದೆ. 21 ವರ್ಷಗಳಿಂದ ಕೆಲಸ ನಿರ್ವಹಿಸುತ್ತಿರುವ ಸುಂದರ ಕರ್ಜೆ ಅವರು 12 ಮಂದಿ ಸಹಾಯಕರೊಂದಿಗೆ ಈ ಕೆಲಸದಲ್ಲಿ ನಿರತರಾಗಿದ್ದಾರೆ. ಆ.22ರಂದು ಪೂರ್ಣಗೊಳಿಸುವ ನಿರೀಕ್ಷೆಯನ್ನು ಹೊಂದಿದ್ದಾರೆ. ಈ ಗುಜ್ಜಿಗೆ ಮೊಸರು, ಲಡ್ಡು, ವಿವಿಧ ಬಣ್ಣದ ನೀರು ತುಂಬಿದ ಕುಡಿಕೆಗಳನ್ನು ಗುಜ್ಜಿಗಳ ಮೇಲ್ಭಾಗದಲ್ಲಿ ಕಟ್ಟಿರುತ್ತಾರೆ. ಇದನ್ನು ಒಡೆಯುವ ಸ್ಪರ್ಧೆ ಗೋವಳರಿಗೆ. ಮೊಸರು ಕುಡಿಕೆ ಒಡೆದಂತೆ ಉತ್ಸವ ಮುಂದೆ ಮುಂದೆ ಸಾಗುತ್ತದೆ. 15 ಗುಜ್ಜಿಗಳಲ್ಲಿ ಎರಡು ದೊಡ್ಡದು. ಇದರಲ್ಲಿ 8 ಕೃಷ್ಣಮಠ, 6 ಅನಂತೇಶ್ವರ ದೇವಸ್ಥಾನದ ವತಿಯಿಂದ ನಿರ್ಮಿಸಲಾಗುತ್ತದೆ. ಸುಮಾರು 25 ಅಡಿ ಎತ್ತರದ ಅಡಿಕೆ ಮರವನ್ನು ಕನಕಗೋಪುರದ ಬಳಿ ನೆಡಲಾಗುತ್ತದೆ. ಇದನ್ನು ನುಣ್ಣಗೆ ಮಾಡಿ, ಎಣ್ಣೆ ಸವರಿ ಸರಾಗವಾಗಿ ಜಾರುವಂತೆ ಮಾಡಲಾಗುತ್ತದೆ. ಇದರ ಮೇಲೆ ತಿಂಡಿ, ಹಣದ ಗಂಟನ್ನು ಕಟ್ಟಲಾಗುತ್ತದೆ. ಇದರಲ್ಲಿದ್ದ ಹಣ ಸ್ಪರ್ಧಾ ವಿಜೇತರಿಗೆ. ಈ ಈವೆಂಟ್ ಈಗ ಇತಿಹಾಸಕ್ಕೆ ಸೇರಿ ಹೋಗಿದೆ. ಅಪಾಯಕರ ಸ್ಪರ್ಧೆಯಾದ ಕಾರಣ ಕೆಲವು ವರ್ಷಗಳ ಹಿಂದೆ ರದ್ದುಪಡಿಸಲಾಗಿತ್ತು.

ಮೃಣ್ಮಯ ಮೂರ್ತಿ ವೈಶಿಷ್ಟ್ಯ
ಶ್ರೀಕೃಷ್ಣ ಜನ್ಮಾಷ್ಟಮಿ ಉತ್ಸವಕ್ಕೆ ಉಡುಪಿಯಲ್ಲಿ ಪೂಜೆಗೊಳ್ಳುವುದು ಮೃಣ್ಮಯ (ಮಣ್ಣಿನ) ಮೂರ್ತಿ. ಜನ್ಮಾಷ್ಟಮಿ ಸಡಗರ ಚಾತುರ್ಮಾಸ ವ್ರತದ ಅವಧಿಯಲ್ಲಿ ನಡೆಯುವ ಕಾರಣ ಉತ್ಸವ ಮೂರ್ತಿಯನ್ನು ಹೊರಗೆ ತರುವುದಿಲ್ಲ. ಹೀಗಾಗಿ ಅಷ್ಟಮಿಯಂದು ಮಣ್ಣಿನ ಮೂರ್ತಿ ಪೂಜಿಸುವ ಸಂಪ್ರದಾಯ ನಡೆದುಬಂದಿದೆ. ಮಣ್ಣಿನ ಈ ಮೂರ್ತಿಯನ್ನು ವಿಟ್ಲಪಿಂಡಿಯಂದು ಪೂಜಿಸಿ ಉತ್ಸವದಲ್ಲಿ ಕೊಂಡೊಯ್ಯಲಾಗುತ್ತದೆ. ಉತ್ಸವ ಸಮಾಪನದಲ್ಲಿ ಮಧ್ವಸರೋವರದಲ್ಲಿ ವಿಸರ್ಜಿಸಲಾಗುತ್ತದೆ. ಇದನ್ನು 20 ವರ್ಷಗಳಿಂದ ರಚಿಸಿಕೊಂಡು ಬರುತ್ತಿರುವವರು ಕಲಾವಿದ ಸೋಮನಾಥ ಚಿಟ್ಪಾಡಿ ಅವರು. ಹಿಂದೆ ಇವರ ತಂದೆ ದಿ| ಕೃಷ್ಣಪ್ಪನವರು ಮೂರ್ತಿಯನ್ನು ರಚಿಸುತ್ತಿದ್ದರು. ಉತ್ಸವ ಮೂರ್ತಿಯನ್ನು ಇಡುವ ಅಟ್ಟೆ ಪ್ರಭಾವಳಿಗೆ ಸೂಕ್ತವಾಗಿ 9 ಇಂಚು ಎತ್ತರದ ಮಣ್ಣಿನ ಮೂರ್ತಿಯನ್ನು ರಚಿಸಲಾಗುತ್ತದೆ. ಸೂಕ್ಷ್ಮ ಕೆಲಸವಾದ ಕಾರಣ ವಿಗ್ರಹ ರಚಿಸಲು ಸುಮಾರು 1ವಾರ ಬೇಕಾಗುತ್ತದೆ ಎನ್ನುತ್ತಾರೆ ಸೋಮನಾಥ.

LEAVE A REPLY

Please enter your comment!
Please enter your name here