Home ಧಾರ್ಮಿಕ ಸುದ್ದಿ ತಾಯಿಯ ಸ್ಥಾನ ಪೂಜ್ಯವಾದುದು: ಪಲಿಮಾರು ಶ್ರೀ

ತಾಯಿಯ ಸ್ಥಾನ ಪೂಜ್ಯವಾದುದು: ಪಲಿಮಾರು ಶ್ರೀ

'ವನಿತಾಗೋಪುರಮ್‌'

810
0
SHARE
ಪಲಿಮಾರು ಶ್ರೀಗಳು ಮಾತನಾಡಿದರು.

ಉಡುಪಿ: ಭೂಮಿಯಲ್ಲಿ ಮಹಿಳೆಯರಿಗೆ ಶ್ರೇಷ್ಠವಾದ ಸ್ಥಾನವಿದೆ. ಮಗು ಮೊದಲು ತಾಯಿಯನ್ನು ನೋಡಿ ಅನಂತರ ತಂದೆಯನ್ನು ನೋಡುವುದೇ ನಮ್ಮ ದೇಶದ ಸಂಸ್ಕೃತಿ. ಮಹಿಳೆಯರು ಮಗುವಿನ ಭವಿಷ್ಯವನ್ನು ರಕ್ಷಣೆ ಮಾಡು ತ್ತಾರೆ. ಈ ಕಾರಣಕ್ಕಾಗಿಯೇ ತಾಯಿಯ ಸ್ಥಾನ ಪೂಜ್ಯವಾದುದು ಎಂದು ಪರ್ಯಾಯ ಶ್ರೀ ಪಲಿಮಾರು ಮಠಾಧೀಶ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು ನುಡಿದರು.

ಉಡುಪಿ ಶ್ರೀ ಕೃಷ್ಣಮಠದಲ್ಲಿ ನಡೆಯುತ್ತಿರುವ ಸುವರ್ಣ ಗೋಪುರ ಸಮರ್ಪಣೋತ್ಸವ ಹಾಗೂ ಬ್ರಹ್ಮಕಲಶಾಭಿಷೇಕದ ಪ್ರಯುಕ್ತ ಶುಕ್ರವಾರ ರಾಜಾಂಗಣದಲ್ಲಿ ನಡೆದ ವನಿತಾಗೋಪುರಮ್‌ ಕಾರ್ಯಕ್ರಮದಲ್ಲಿ ಅವರು ಅನುಗ್ರಹ ಸಂದೇಶ ನೀಡಿದರು.

ನಾವು ಮಕ್ಕಳಿಗೆ ತಿಳಿಸುವ ಸಂಸ್ಕೃತಿಯೇ ನಮಗೆ ಮರಳಿ ಲಭಿಸುತ್ತದೆ. ಸಮಾಜದಲ್ಲಿ ವಿಚ್ಚೇದನ ಎಂಬುದು ಇರಬಾರದು. ಇದಕ್ಕಾಗಿ ಹಿರಿಯರು ಕಿರಿಯರಿಗೆ ಮಾರ್ಗದರ್ಶನ ನೀಡಬೇಕು. ವಿಭಕ್ತ ಕುಟುಂಬವನ್ನು ಮಹಿಳೆಯರು ತಪ್ಪಿಸಿ ಅವಿಭಕ್ತ ಕುಟುಂಬ ಬೆಳೆಸುವಂತೆ ಪ್ರೋತ್ಸಾಹ ನೀಡಬೇಕು. ಈ ಕಾರ್ಯ ಮಹಿಳೆಯರಿಂದ ಮಾತ್ರ ಸಾಧ್ಯ ಎಂದರು.

ಸ್ತ್ರೀಯರಲ್ಲಿ ಧೈರ್ಯ ಹೆಚ್ಚು
ಧೈರ್ಯಕ್ಕೆ ಬೇಕಿರುವ ಎಲ್ಲ ಗುಣ ಗಳೂ ಸ್ತ್ರೀಯರಲ್ಲಿವೆ. ಅರ್ಥಶಾಸ್ತ್ರದಲ್ಲಿ ಮಹಿಳೆಯರು ಅಪಾರ ಪ್ರಾವಿಣ್ಯ ಹೊಂದಿದ್ದಾರೆ. ಇದೇ ಕಾರಣಕ್ಕೆ ಸನಾತನ ಧರ್ಮದಲ್ಲಿ ಮಹಿಳೆಯರಿಗೆ ಉತ್ತಮ ಸ್ಥಾನ ನೀಡಲಾಗಿದೆ. ಮಹಿಳೆಯರಲ್ಲಿ ಅಪಾರ ವಿಶ್ವಾಸವಿದೆ. ಇದೇ ಕಾರಣಕ್ಕೆ ಇವರು ಮನೆಯ ಅರ್ಥವ್ಯವಸ್ಥೆಯನ್ನು ನಿಭಾಯಿಸುತ್ತಾರೆ. ಇತ್ತೀಚಿನ ಕೆಲವು ದಿನಗಳಲ್ಲಿ ಪಾಶ್ಚಾತ್ಯ ಸಂಸ್ಕೃತಿಯ ಲಕ್ಷಣದಿಂದಾಗಿ ಮಹಿಳೆಯರು ಅತೀ ಆಸೆಗೆ ಬೀಳುತ್ತಿದ್ದಾರೆ. ಇದರಿಂದ ಪುರುಷರ ಮೇಲೆ ಸಹಜವಾಗಿಯೇ ಒತ್ತಡ ಬೀಳುತ್ತಿದೆ. ಇದು ಕೂಡ ಭ್ರಷ್ಟಾಚಾರಕ್ಕೆ ಕಾರಣವಾಗುತ್ತಿದೆ. ಪ್ರತೀ ಮನೆಯ ಅರ್ಥವ್ಯವಸ್ಥೆ ಚೆನ್ನಾಗಿದ್ದರೆ ಭ್ರಷ್ಟಾಚಾರವನ್ನು ತೊಲಗಿಸಬಹುದು. ಇದರಲ್ಲಿ ಮಹಿಳೆಯರ ಪಾತ್ರ ಅಪಾರ ಎಂದರು. ರಕ್ಷಣೆಯ ವಿಚಾರದಲ್ಲಿ ಮಹಿಳೆಯರಿಗೆ ಸ್ವಾತಂತ್ರ್ಯ ಸಿಗಬೇಕು ಎಂದು ಅಭಿಪ್ರಾಯಪಟ್ಟರು.

ಧರ್ಮಜಾಗೃತಿ
ಶ್ರೀರಂಗಮ್‌ನ ವಿದ್ವಾಂಸರಾದ ಸರಸ್ವತೀ ಶ್ರೀಪತಿ ಮಾತನಾಡಿ, ಧಾರ್ಮಿಕ ಚಿಂತನೆ ಮೈಗೂಡಿಸಿಕೊಳ್ಳುವುದರಿಂದ ಮಕ್ಕಳಲ್ಲಿ ಧರ್ಮ ಜಾಗೃತಿ ಮೂಡಲು ಸಾಧ್ಯ. ಒಬ್ಬಳು ಮಹಿಳೆಯಿಂದ ಒಂದು ಕುಟುಂಬ ಸುಖವಾಗಿರಲು ಸಾಧ್ಯ ಎಂದರು.

ದಾನದಿಂದ ಪುಣ್ಯ ಪ್ರಾಪ್ತಿ
ಸ್ವಸ್ಥ ಜೀವನಕ್ಕೆ ಹಣದ ಆವಶ್ಯಕತೆಯ ಬಗ್ಗೆ ಮಾತನಾಡಿದ ಶೋಭಾ ಉಪಾಧ್ಯಾಯ, ಮನುಷ್ಯ ದಾನ ಮಾಡುವುದರಿಂದ ಪುಣ್ಯ ಪ್ರಾಪ್ತಿಯಾಗಿ ಮತ್ತಷ್ಟು ಹಣ ಲಭಿಸುತ್ತದೆ. ಹೆಣ್ಣಿಗೆ ಮನೆಯಲ್ಲಿ ಗೌರವ ಸಿಕ್ಕಿದರೆ ಮನೆಯಲ್ಲಿ ಲಕ್ಷ್ಮೀ ಪ್ರಾಪ್ತಿಯಾಗುತ್ತದೆ ಎಂದರು.

ಸುಲಕ್ಷಣಾ ವೆಂಕಟಾಚಾರ್ಯ, ಡಾ| ಪರಿಮಳಾ ಅವರು ಸ್ವಸ್ಥ ಜೀವನದ ಬಗ್ಗೆ ಮಾಹಿತಿ ನೀಡಿದರು. ವೆಂಕಟೇಶ ಆಚಾರ್ಯ ಸ್ವಾಗತಿಸಿ, ವಂದಿಸಿದರು. ಸರಸ್ವತೀ ಶ್ರೀಪತಿ ನಿರೂಪಿಸಿದರು.

LEAVE A REPLY

Please enter your comment!
Please enter your name here