ಉಡುಪಿ : ಶ್ರೀಕೃಷ್ಣ ಮಠದ ಕನಕಗೋಪುರದ ಬಳಿ ನಡೆಯುತ್ತಿರುವ ಅಖಂಡ ಭಜನೆ- ಹರಿಸಂಕೀರ್ತನೆ 700ನೇ ದಿನದತ್ತ ದಾಪುಗಾಲು ಇಡುತ್ತಿದೆ. 2018ರ ಜ.18ರ ಬೆಳಗ್ಗೆ 6 ಗಂಟೆಗೆ ಆರಂಭಗೊಂಡ ಅಖಂಡ ಭಜನೆ ಹಗಲೂ ರಾತ್ರಿ ನಿರಂತರ ನಡೆಯುತ್ತಿದ್ದು, ಡಿ. 17ರಂದು 700ನೇ ದಿನಕ್ಕೆ ಕಾಲಿಡಲಿದೆ. 2020ರ ಜ. 18ರ ಮುಂಜಾನೆ ಎರಡು ವರ್ಷ ಪೂರೈಸಿ ಅಖಂಡ ಭಜನೆಯನ್ನು ಸಮಾಪನಗೊಳಿಸಲಾಗುತ್ತಿದೆ.
ತಿರುಪತಿ ತಿರುಮಲ ದೇವಸ್ಥಾನದ ದಾಸ ಸಾಹಿತ್ಯ ಪ್ರಾಜೆಕ್ಟ್, ಮಂತ್ರಾಲಯದ ಗುರುಸಾರ್ವಭೌಮ ದಾಸ ಸಾಹಿತ್ಯ ಪ್ರಾಜೆಕ್ಟ್ ಮತ್ತು ಉಡುಪಿ ಜಿಲ್ಲಾ ಭಜನ ಮಂಡಳಿಗಳ ಒಕ್ಕೂಟದಲ್ಲಿ ನೋಂದಣಿಯಾದ ಭಜನ ಮಂಡಳಿಗಳ ಸದಸ್ಯರು ನಾಮ ಸಂಕೀರ್ತನೆ ನಡೆಸುತ್ತಿದ್ದಾರೆ. ದಿನದಲ್ಲಿ ಆರು ತಂಡಗಳ ಸದಸ್ಯರು ಎರಡು ಎರಡು ಗಂಟೆಗಳಂತೆ ದಾಸರ ಕೀರ್ತನೆಗಳನ್ನು ಪಾಳಿಯಲ್ಲಿ ಹಾಡುತ್ತಾರೆ.
ಜಾತಿಮತ ಭೇದವಿಲ್ಲದ ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು, ಕೇರಳ ಮೊದಲಾದ ರಾಜ್ಯಗಳಿಂದ ಉಡುಪಿಗೆ ಬಂದು ಸಂಕೀರ್ತನೆ ಸೇವೆಯನ್ನು ನೀಡುತ್ತಿದ್ದಾರೆ. ಹುಬ್ಬಳ್ಳಿ, ಕೌತಾಳಂನಿಂದ ಮುಸ್ಲಿಮರೂ ಬಂದು ಸೇವೆ ಸಲ್ಲಿಸಿದ್ದಾರೆ. ದಾವಣಗೆರೆಯಲ್ಲಿ ನೀರು ಸರಬರಾಜು ಇಲಾಖೆಯ ಎಂಜಿನಿಯರ್ ಆಗಿ ಸೇವೆ ಸಲ್ಲಿಸಿ ನಿವೃತ್ತರಾದ ಕಂಪ್ಲಿ ಗುರುರಾಜ ಆಚಾರ್ಯ ಮತ್ತು ಪತ್ನಿ ಗೀತಾ ಅವರು ಯೋಜನೆಯ ಸಂಚಾಲಕರಾಗಿ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ.
ನಮಗೆ ಈ ಎರಡು ವರ್ಷ ವಿಶಿಷ್ಟ ಅನುಭವವಾಗಿದೆ. ಶೇ. 95ರಷ್ಟು ಭಜನ ಮಂಡಳಿಗಳ ಸದಸ್ಯರು ನಮ್ಮನ್ನು ತಂದೆ ತಾಯಿಗಳಂತೆ ಪರಿಗಣಿಸುತ್ತಿದ್ದಾರೆ. ಕೆಲವರಂತೂ ಹೋಗುವಾಗ ಅಳುತ್ತ ಹೋಗುತ್ತಾರೆ. ಪರ್ಯಾಯ ಶ್ರೀ ಪಲಿಮಾರು ಮಠಾಧೀಶರು ನಮಗೆ ಸಂಭಾವನೆ ಕೊಡುವುದಾಗಿ ತಿಳಿಸಿದರು. ನಾವು ಹಣ ತೆಗೆದುಕೊಂಡರೆ ಅದನ್ನು ಸೇವೆ ಎಂದು ಕರೆಯಲು ಆಗುತ್ತದೆಯೆ? ಇಂತಹ ಅವಕಾಶ ಕೊಟ್ಟದ್ದೇ ದೊಡ್ಡದು. ನಾವು ಹಣ ತೆಗೆದುಕೊಳ್ಳದೆ ಶ್ರೀಕೃಷ್ಣನ ಸೇವೆ ಮಾಡುತ್ತೇವೆಂದು ಹೇಳಿದೆವು. ಇದುವೇ ನಮ್ಮ ಜೀವನದ ಧನ್ಯತೆಯ ಕ್ಷಣ.
– ಕಂಪ್ಲಿ ಗುರುರಾಜ ಆಚಾರ್ಯ ಮತ್ತು ಗೀತಾ
ದಂಪತಿ, ಅಖಂಡ ಭಜನೆ ಯೋಜನೆಯ ಸಂಚಾಲಕರು