ಉಡುಪಿ: ಶ್ರೀ ಕೃಷ್ಣಮಠ ಮಠದಲ್ಲಿ ವಾದಿರಾಜಸ್ವಾಮಿಗಳಿಂದ ಪ್ರತಿಷ್ಠಾಪಿಸಲ್ಪಟ್ಟ ಮುಖ್ಯಪ್ರಾಣ (ಹನುಮಂತ) ದೇವರ ಗರ್ಭಗುಡಿ ಇದೇ ಮೊದಲ ಬಾರಿಗೆ ನವೀಕರಣಗೊಳ್ಳುತ್ತಿದೆ. ಅಯೋಧ್ಯೆ ಮೂರ್ತಿ ಸೋದೆ ಮಠದ ವಾದಿರಾಜ ಸ್ವಾಮೀಜಿ ಅಯೋಧ್ಯೆಯಿಂದ ತಂದ ಮುಖ್ಯಪ್ರಾಣ ದೇವರ ಮೂರ್ತಿಯನ್ನು ಶ್ರೀ ಕೃಷ್ಣ ದೇವರ ಗರ್ಭಗುಡಿಯ ಹೊರ ಭಾಗದ ಬಲ ಪಾರ್ಶ್ವದಲ್ಲಿ ಹಾಗೂ ಗರುಡ ದೇವರ ವಿಗ್ರಹವನ್ನು ಎಡ ಭಾಗದಲ್ಲಿ ಪ್ರತಿಷ್ಠಾಪನೆ ಮಾಡಿದ್ದರು.
10 ಲ.ರೂ. ವೆಚ್ಚದಲ್ಲಿ ನವೀಕರಣ ಮುಖ್ಯಪ್ರಾಣ ದೇವರ ಗರ್ಭಗುಡಿಯ ಹೊರಾಂಗಣವನ್ನು ಇದೀಗ ಸುಮಾರು 10 ಲ.ರೂ. ವೆಚ್ಚದಲ್ಲಿ ನವೀಕರಣ ಮಾಡಲಾಗುತ್ತಿದೆ. ಹಿಂದೆ ಗರ್ಭಗುಡಿಯ ಹೊರಾಂಗಣದ ಗೋಡೆಯನ್ನು ಮಣ್ಣಿನಿಂದ ನಿರ್ಮಿಸಲಾಗಿದ್ದು, ಅದರ ಮೇಲೆ ಮರದ ಹಲಗೆ ಹಾಗೂ ತಾಮ್ರದ ತಗಡಿನ ಹೊದಿಕೆಯನ್ನು ಹಾಕಲಾಗಿತ್ತು.
ಶಿಥಿಲಗೊಂಡ ಗೋಡೆ!
ಮುಖ್ಯಪ್ರಾಣ ದೇವರ ಗರ್ಭಗುಡಿಯ ಮಣ್ಣಿನ ಗೋಡೆಗೆ ಆಳವಡಿಸಲಾದ ಮರದ ಹಲಗೆ ಸಂಪೂರ್ಣವಾಗಿ ಶಿಥಿಲಾವಸ್ಥೆಯಲ್ಲಿ ಇರುವುದನ್ನು ಗಮನಿಸಿದ ಪಲಿಮಾರು ಶ್ರೀಪಾದರು ಮುಖ್ಯಪ್ರಾಣ ದೇವರ ಹೊರಾಂಗಣದ ಎಡಪಾರ್ಶ್ವ ಹಾಗೂ ಮುಂಭಾಗದ ಗೋಡೆಯನ್ನು ಸಂಪೂರ್ಣವಾಗಿ ನವೀಕರಿಸಲು ಮುಂದಾಗಿದ್ದಾರೆ. ಗೋಡೆ ನಿರ್ಮಾಣಕ್ಕೆ ಕಾರ್ಕಳದಿಂದ ತರಿಸಲಾದ ಕಲ್ಲುಗಳನ್ನು ಬಳಸಲಾಗಿದೆ. ಮಠಕ್ಕೆ ಬಂದು ಶ್ರೀ ಕೃಷ್ಣ ದೇವರ ದರ್ಶನ ಪಡೆದ ಭಕ್ತರು ಮುಖ್ಯಪ್ರಾಣ ಹಾಗೂ ಗುರುಡ ದೇವರ ದರ್ಶನ ಪಡೆಯದೆ ಹಿಂದಿರುಗುವುದಿಲ್ಲ. ಇದೀಗ ಗರ್ಭಗುಡಿ ಹೊರಾಂಗಣ ನವೀಕರಣದಿಂದ ಗರ್ಭಗುಡಿ ಇನ್ನಷ್ಟು ವಿಶಾಲವಾಗಿ ಕಾಣಿಸಲಿದೆ.
ಪಲಿಮಾರು ಶ್ರೀಗಳಿಂದ ಅಭಿವೃದ್ಧಿ:
ಪಲಿಮಾರು ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು ತಮ್ಮ ದ್ವಿತೀಯ ಪರ್ಯಾಯ ಅವಧಿಯಲ್ಲಿ ಶ್ರೀ ಕೃಷ್ಣಮಠದ ವಿನ್ಯಾಸದಲ್ಲಿ ಸಾಕಷ್ಟು ಬದಲಾವಣೆ ತಂದಿದ್ದಾರೆ. ಶ್ರೀ ಕೃಷ್ಣ ಮಠದ ಗರ್ಭಗುಡಿಗೆ ಸುಮಾರು 40 ಕೋ.ರೂ. ವೆಚ್ಚದಲ್ಲಿ ಸ್ವರ್ಣ ಹೊದಿಕೆ ನಿರ್ಮಾಣ, 8 ಶತಮಾನ ಗಳ ಹಿಂದಿನ ಮಧ್ವಾಚಾರ್ಯರು ಕುಳಿತು ಕೃಷ್ಣ ಆರಾಧನೆ ಮಾಡುತ್ತಿದ್ದ ಹಾಗೂ ಶಿಷ್ಯರಿಗೆ ಪಾಠ ಪ್ರವಚನ ಮಾಡುತ್ತಿದ್ದ ಸರ್ವಜ್ಞ ಪೀಠಕ್ಕೆ 25 ಲ.ರೂ. ವೆಚ್ಚದಲ್ಲಿ ದಾರುಶಿಲ್ಪದ ಮೆರುಗು ನೀಡಿದ್ದರು.