Home ಧಾರ್ಮಿಕ ಸುದ್ದಿ ತೇರನೇರಿ ಬರುವ ಕಸ್ತೂರಿ ರಂಗನ ನೋಡದ ಕಂಗಳಿದ್ಯಾತಕೋ

ತೇರನೇರಿ ಬರುವ ಕಸ್ತೂರಿ ರಂಗನ ನೋಡದ ಕಂಗಳಿದ್ಯಾತಕೋ

ಜನ್ಮಾಷ್ಟಮಿಗೆ ಬಂದ ವರುಣ, ಲೀಲೋತ್ಸವ ವೇಳೆ ವಿರಮಿಸಿದ‌ | ವರ್ಣರಂಜಿತ ವಿಟ್ಲಪಿಂಡಿಗೆ ಭಕ್ತ ಜನಸಾಗರ

2494
0
SHARE
ವಿಟ್ಲಪಿಂಡಿ ಉತ್ಸವದ ಸಂದರ್ಭ ಉಡುಪಿ ರಥಬೀದಿಯ ಒಂದು ವಿಹಂಗಮ ನೋಟ.

ಉಡುಪಿ: ಶ್ರೀಕೃಷ್ಣನ ಜನ್ಮವನ್ನು ಸ್ಮರಿಸುವ, ಸಂಭ್ರಮಿಸುವ ವಿಟ್ಲಪಿಂಡಿ ಉತ್ಸವ ಶ್ರೀಕೃಷ್ಣ ಮಠದಲ್ಲಿ ವೈಭವದಿಂದ ಸಂಪನ್ನಗೊಂಡಿತು.

ಅಷ್ಟಮಿ ದಿನ ನಿರ್ಜಲ ಉಪವಾಸವಿರುವ ಕಾರಣ ಶನಿವಾರ ದ್ವಾದಶಿಯಂತೆ ಮುಂಜಾವ ಶ್ರೀಕೃಷ್ಣ – ಮುಖ್ಯಪ್ರಾಣರಿಗೆ ಪರ್ಯಾಯ ಶ್ರೀ ಪಲಿಮಾರು ಮಠದ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಪೂಜೆ ಸಲ್ಲಿಸಿದರು. ಇದಕ್ಕೂ ಮುನ್ನ ಶ್ರೀ ಅದಮಾರು ಮಠದ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಶ್ರೀಕೃಷ್ಣ ಲೀಲೋತ್ಸವದ ಅಂಗವಾಗಿ ಗೋಪಾಲಕೃಷ್ಣನ ಅಲಂಕಾರ ನಡೆಸಿದರು. ಪೂಜೆ ಬಳಿಕ ಅನ್ನಸಂತರ್ಪಣೆ ನಡೆಯಿತು. ಅಪರಾಹ್ನ ರಥಬೀದಿಯಲ್ಲಿ ವೈಭವದ ವಿಟ್ಲಪಿಂಡಿ ಮೆರವಣಿಗೆ ನಡೆಯಿತು.

ಮೂರು ವಿಗ್ರಹಗಳ ಉತ್ಸವ
ಚಿನ್ನದ ರಥದಲ್ಲಿ ಮಣ್ಣಿನಿಂದ ತಯಾರಿಸಿದ ಶ್ರೀಕೃಷ್ಣನ ಮೂರ್ತಿಯೂ, ನವರತ್ನ ರಥದಲ್ಲಿ ಅನಂತೇಶ್ವರ ಮತ್ತು ಚಂದ್ರಮೌಳೀಶ್ವರ ದೇವಸ್ಥಾನದ ಉತ್ಸವ ಮೂರ್ತಿಗಳ ಉತ್ಸವ ನಡೆಯಿತು.

ಉತ್ಸವದಲ್ಲಿ ಪರ್ಯಾಯ ಶ್ರೀ ಪಲಿಮಾರು, ಶ್ರೀ ಕೃಷ್ಣಾಪುರ, ಶ್ರೀ ಅದಮಾರು ಕಿರಿಯ, ಶ್ರೀ ಪಲಿಮಾರು ಕಿರಿಯ ಶ್ರೀಪಾದರು ಪಾಲ್ಗೊಂಡಿದ್ದರು. ನೆಟ್ಟ ಗುರ್ಜಿಗಳಲ್ಲಿ ತೂಗು ಹಾಕಿದ ಒಂದೊಂದೇ ಮಡಕೆಗಳನ್ನು ಸಾಂಪ್ರ ದಾಯಿಕ ಗೊಲ್ಲರ ವೇಷ ಧರಿಸಿದವರು ಒಡೆಯುತ್ತ ಸಾಗಿದರು. ಅಲಂಕೃತ ಆನೆ ಸುಭದ್ರೆ 3 ವರ್ಷಗಳ ಬಳಿಕ ಮೆರವಣಿಗೆಗೆ ಶೋಭೆ ನೀಡಿತು.ಮುಂಬಯಿಯಿಂದ ಬಂದ ಅಲಾರೆತಂಡದವರು ಮಾನವ ಪಿರಮಿಡ್‌ ಮೂಲಕ ಮೊಸರು ಕುಡಿಕೆಗಳನ್ನು ಒಡೆದರು. ಕೊನೆಯಲ್ಲಿ ಶ್ರೀಕೃಷ್ಣನ ಮಣ್ಣಿನ ಮೂರ್ತಿಯನ್ನು ಮಧ್ವ ಸರೋವರದಲ್ಲಿ ವಿಸರ್ಜಿಸಲಾಯಿತು.

ಪ್ರಸಾದ ವಿತರಣೆ
ಉತ್ಸವ ನಡೆಯುವಾಗ ಪ್ರಸಾದ ಎಸೆಯುವ ಕ್ರಮವನ್ನು ಕೇವಲ ಸಾಂಕೇತಿಕವಾಗಿ ಹಣ್ಣುಗಳಿಗೆ ಮಾತ್ರ ಸೀಮಿತವಾಗಿಡಲಾಯಿತು. ದೇವರ ದರ್ಶನ ಮಾಡಿ ಹೊರಬರುವವರಿಗೆ ಪ್ರಸಾದ ವಿತರಿಸಲಾಯಿತು.

85 ವರ್ಷಗಳ ಹಿಂದೆ ಅಸಲಿ
ಗಾಂಧಿ, ಈಗ ವೇಷಧಾರಿ ಗಾಂಧಿ!
ಈ ಬಾರಿ ಗಾಂಧೀಜಿ ವೇಷ ತೊಟ್ಟ ಉತ್ತರ ಕರ್ನಾಟಕದ ಐಹೊಳೆ ಮೂಲದ ಹನುಮಂತ ಅವರು ಕನಕದಾಸರ ಗುಡಿ ಎದುರು ನಿಂತು ಜನರನ್ನು ಆಕರ್ಷಿಸಿದರು. ಅವರೊಂದಿಗೆ ಫೋಟೋ ಕ್ಲಿಕ್ಕಿಸಲು ಭಾರೀ ಬೇಡಿಕೆ ಇತ್ತು. 85 ವರ್ಷಗಳ ಹಿಂದೆ 1934ರ ಫೆ. 25ರಂದು ಗಾಂಧೀಜಿಯವರು ಉಡುಪಿ ಅಜ್ಜರಕಾಡಿನಿಂದ ಕಲ್ಸಂಕಕ್ಕೆ ಇದೇ ರಥಬೀದಿ ಮಾರ್ಗವಾಗಿ ಕುಂದಾಪುರಕ್ಕೆ ತೆರಳಿದ್ದರು. ಅವರು ದಲಿತೋದ್ಧಾರಕ್ಕಾಗಿ ನಿಧಿ ಸಂಗ್ರಹಿಸಲು ಬಂದಿದ್ದರೆ, ವೇಷಧಾರಿ ಗಾಂಧಿ ಉತ್ತರ ಕರ್ನಾಟಕದಲ್ಲಿ ಅತಿವೃಷ್ಟಿಯಿಂದ ಸಂತ್ರಸ್ತರಾದವರಿಗೆ ನೆರವಾಗಲು ನಿಧಿ ಸಂಗ್ರಹಿಸಿದ್ದು ವಿಶೇಷ.

ನ್ಯಾಯಾಧೀಶರ ದಂಡು
ಜಿಲ್ಲಾ ನ್ಯಾಯಾಧೀಶ ಸಿ.ಎಂ. ಜೋಶಿ ಸಹಿತ ಜಿಲ್ಲೆಯ ಬಹುತೇಕ ಎಲ್ಲ ನ್ಯಾಯಾಧೀಶರು ವಿಟ್ಲಪಿಂಡಿ ಉತ್ಸವದಲ್ಲಿ ಪಾಲ್ಗೊಂಡರು.

ಮಕ್ಕಳು, ಪರ್ಸ್‌ ನಾಪತ್ತೆ
ವಿಟ್ಲಪಿಂಡಿಯ ಜನಜಂಗುಳಿಯಲ್ಲಿ ನಾಪತ್ತೆಯಾದ ಮಕ್ಕಳು, ಮಹಿಳೆಯರು ಹಾಗೂ ಪರ್ಸ್‌ಗಳು ಕೆಲ ಸಮಯದ ಅನಂತರ ಪತ್ತೆಯಾಗಿರುವ ಬಗ್ಗೆ ವರದಿಯಾಗಿದೆ. ಪೊಲೀಸರು ಉತ್ಸವದಲ್ಲಿ ಅನುಮಾನಾಸ್ಪದವಾಗಿ ವರ್ತಿಸುತ್ತಿದ್ದ ವ್ಯಕ್ತಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದರು.

LEAVE A REPLY

Please enter your comment!
Please enter your name here