ಉಡುಪಿ: ಉಡುಪಿ ಶ್ರೀಕೃಷ್ಣ ಮಠದಲ್ಲಿ ಶಯನೀ ಏಕಾದಶಿ ಪ್ರಯುಕ್ತ ಶುಕ್ರವಾರ ರಾತ್ರಿ ಪರ್ಯಾಯ ಪಲಿಮಾರು ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು, ಅದಮಾರು ಕಿರಿಯ ಯತಿ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಹಾಗೂ ಪಲಿಮಾರು ಕಿರಿಯ ಮಠಾಧೀಶ ಶ್ರೀ ವಿದ್ಯಾರಾಜೇಶ್ವರತೀರ್ಥ ಶ್ರೀಪಾದರು ತುಳಸಿ ಹರಿವಾಣವನ್ನು ತಲೆಯ ಮೇಲಿಟ್ಟು ‘ಡಂಗುರಾವ ಸಾರಿ ಹರಿಯ…’ ದಾಸರಪದಕ್ಕೆ ನೃತ್ಯ ಮಾಡಿದರು.
ಕೃಷ್ಣ ದೇವರಿಗೆ ರಾತ್ರಿ ಪೂಜೆ ಆದ ಬಳಿಕ ಸೂರ್ಯವಾದ್ಯ, ನಾದಸ್ವರ, ಸಂಕೀರ್ತನೆ, ಸಂಗೀತ, ಭಾಗವತ ಪುರಾಣಗಳು ಚಂದ್ರಶಾಲೆಯಲ್ಲಿ ನಡೆದ ಅನಂತರ ದೇವರ ಎದುರಿನ ಮಂಟಪದಲ್ಲಿ ಸ್ವಾಮೀಜಿಯವರು ದೇವರಿಗೆ ಮಂಗಳಾರತಿ ಮಾಡಿ ತುಳಸಿ ಹರಿವಾಣವನ್ನು ತಲೆಯಲಿಟ್ಟು ನೃತ್ಯ ನಡೆಸಿ ಪ್ರದಕ್ಷಿಣೆ ಮಾಡುತ್ತಾರೆ. ಈ ಸೇವೆಯು ಆಷಾಢ ಮಾಸದ ಶುಕ್ಲ ಏಕಾದಶಿಯಿಂದ ಕಾರ್ತೀಕ ಮಾಸದ ಶುಕ್ಲ ಏಕಾದಶಿಯವರೆಗೆ ಚಾತುರ್ಮಾಸದ 8 ಏಕಾದಶಿಗಳವರೆಗೂ ನಡೆಯುತ್ತದೆ.