ಉಡುಪಿ : ಶ್ರೀಕೃಷ್ಣ ಮಠದಲ್ಲಿ ಕಂಕಣ ಸೂರ್ಯಗ್ರಹಣ ನಡೆಯುವ ಡಿ. 26ರಂದು ಗ್ರಹಣ ಮುಕ್ತಾಯಗೊಂಡ ಬಳಿಕವೇ ಪೂಜೆ ಪುನಸ್ಕಾರಗಳು ನಡೆಯಲಿವೆ. ಬೆಳಗ್ಗೆ 8.04ಕ್ಕೆ ಗ್ರಹಣ ಆರಂಭವಾಗಿ 11.03ಕ್ಕೆ ಮುಕ್ತಾಯ ಗೊಳ್ಳುತ್ತದೆ. ರಾಜ್ಯದ ಕರಾವಳಿಯಲ್ಲಿ 9.24 ಗಂಟೆಗೆ ಕಂಕಣ ಕಂಡುಬರುತ್ತದೆ.
ಬೆಳಗ್ಗೆ ನೈವೇದ್ಯ ಸಹಿತ ಯಾವುದೇ ಪೂಜೆ ಇರುವುದಿಲ್ಲ. ಹಿಂದಿನ ದಿನದ ಹೂವುಗಳನ್ನು ತೆಗೆದು ಶುಚಿಗೊಳಿಸುವ ನೈರ್ಮಾಲ್ಯ ವಿಸರ್ಜನೆ ಪೂಜೆ ಮಾತ್ರ ನಡೆಯುತ್ತದೆ. ಮಹಾಪೂಜೆ ಸುಮಾರು 12.30 ಗಂಟೆಗೆ ನಡೆಯುತ್ತದೆ. ಹೀಗಾಗಿ ಅಡುಗೆ ತಯಾರಿ, ತರಕಾರಿ ಹೆಚ್ಚುವಿಕೆ ಎಲ್ಲವೂ 11 ಗಂಟೆ ಬಳಿಕ ನಡೆಯಬೇಕು.
ಅಡುಗೆ ತಯಾರಿಸಲು ಸುಮಾರು 3 ತಾಸು ಬೇಕಾಗುವ ಕಾರಣ ಅಪರಾಹ್ನ 3 ಗಂಟೆಯ ಬಳಿಕ ಊಟ ಬಡಿಸಲಾಗುವುದು. ರಾತ್ರಿ ಎಂದಿನಂತೆ ಅನ್ನಪ್ರಸಾದದ ವ್ಯವಸ್ಥೆ ಇರುತ್ತದೆ. ದೇವರ ದರ್ಶನ ಎಂದಿನಂತೆ ಇರಲಿದೆ. ಗ್ರಹಣ ಕಾಲದಲ್ಲಿ ಗ್ರಹಣ ಶಾಂತಿ, ಜಪಗಳನ್ನು ಶ್ರೀಕೃಷ್ಣ ಮಠದಲ್ಲಿ ಆಯೋಜಿಸಲಾಗಿದೆ. ಗ್ರಹಣದ ಸಮಯದಲ್ಲಿ ದೇವರ ದರ್ಶನಕ್ಕೆ ಅವಕಾಶವಿರುತ್ತದೆ
2064ರಲ್ಲಿ ಕಂಕಣ ಗ್ರಹಣ
ದಕ್ಷಿಣ ಭಾರತದಲ್ಲಿ ಈ ಶತಮಾನದಲ್ಲಿ ಎರಡೇ ಕಂಕಣ ಗ್ರಹಣಗಳು ಕಂಡು ಬರುತ್ತವೆ. ಈಗ ಡಿ. 26 ರಂದು ಗ್ರಹಣ ನಡೆದರೆ ಇನ್ನು ಬರುವುದು 2064ರ ಫೆ. 17 ರಂದು. ಈ ಶತಮಾನದಲ್ಲಿ ಖಗ್ರಾಸ ಗ್ರಹಣವಿಲ್ಲ.