ಉಡುಪಿ: ಶ್ರೀಕೃಷ್ಣ ಜನ್ಮಾಷ್ಟಮಿ ಸಡಗರಕ್ಕೆ ಶ್ರೀಕೃಷ್ಣ ಮಠ ಸಜ್ಜಾಗಿದೆ. ಆ. 23ರ ಬೆಳಗ್ಗೆ 10ರಿಂದ ಸಂಜೆ 6ರ ವರೆಗೆ ಮಧ್ವಮಂಟಪದಲ್ಲಿ ಪ್ರಸಿದ್ಧ ಭಜನ ತಂಡಗಳಿಂದ ನಡೆಯಲಿರುವ ಭಜನ ಕಾರ್ಯಕ್ರಮಕ್ಕೆ ಪರ್ಯಾಯ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಚಾಲನೆನೀಡಲಿದ್ದಾರೆ. ಬಳಿಕ ಮುದ್ದುಕೃಷ್ಣ ವೇಷ ಸ್ಪರ್ಧೆ ನಡೆಯಲಿದೆ. ಮಧ್ಯಾಹ್ನ 12ರಿಂದ ಪುತ್ತಿಗೆ ಚಂದ್ರಶೇಖರ್ ಬಳಗದಿಂದ ಸ್ಯಾಕ್ಸೋಫೋನ್ ವಾದನ ನಡೆಯಲಿದೆ.
ಶ್ರೀಕೃಷ್ಣ ಮುಖ್ಯಪ್ರಾಣ ಸೇವಾ ಸಮಿತಿ ವತಿಯಿಂದ ಶ್ರೀಕೃಷ್ಣ ಮಠ ಮತ್ತು ಮುಖ್ಯಪ್ರಾಣ ದೇವರ ಮುಂಭಾಗ ವಿಶೇಷ ಹೂವಿನ ಅಲಂಕಾರ ನಡೆಯಲಿದೆ. ಬೆಳಗ್ಗೆ ಮಹಾಪೂಜೆ ನಡೆಸಿದ ಬಳಿಕ ಶ್ರೀಕೃಷ್ಣನ ನೈವೇದ್ಯಕ್ಕಾಗಿ ಲಡ್ಡು ತಯಾರಿಗೆ ಮುಹೂರ್ತ ನಡೆಸಲಿದ್ದಾರೆ.
ಆ. 24ರ ವಿಟ್ಲಪಿಂಡಿಯಂದು ಬೆಳಗ್ಗೆ 9ರಿಂದ ಓಲಗ ಮಂಟಪದಲ್ಲಿ ಪವನ ಬಿ. ಆಚಾರ್ ನಿರ್ದೇಶನದಲ್ಲಿ ಪಂಚ ವೀಣಾವಾದನ, ಬೆಳಗ್ಗೆ 10ಕ್ಕೆ ರಾಜಾಂಗಣದಲ್ಲಿ ಭಜನೆ, ಮಾನವ ನಿರ್ಮಿತ ಪಿರಮಿಡ್ ‘ಅಲಾರೆ ಗೋವಿಂದ’ ತಂಡದ ಪ್ರದರ್ಶನಕ್ಕೆ ಶ್ರೀಗಳು ಚಾಲನೆ ನೀಡಲಿದ್ದಾರೆ. ಬೆಳಗ್ಗೆ 10ಕ್ಕೆ ಪಲಿಮಾರು ಶ್ರೀಗಳು ರಾಜಾಂಗಣದಲ್ಲಿ ಸಾರ್ವಜನಿಕ ಅನ್ನಸಂತರ್ಪಣೆಗೆ ಚಾಲನೆ ನೀಡುವರು.