ಉಡುಪಿ: ದೊಡ್ಡಣಗುಡ್ಡೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರದಲ್ಲಿ ಸೋಣೆ ಮಾಸದ ದಿನಂಪ್ರತಿ ಸೆ. 17ರ ತನಕ ವಿಶೇಷ ಸೋಣಾರತಿ ಸೇವೆ ನಡೆಯಲಿದೆ. ಕ್ಷೇತ್ರದಲ್ಲಿ ಪ್ರತೀ ಶುಕ್ರವಾರ ವಿಶೇಷ ಪೂಜೆ ನಡೆಯುತ್ತಿದ್ದು, ಸೋಣೆ ಮಾಸದಲ್ಲಿ ಬರುವ ನಾಲ್ಕು ಶುಕ್ರವಾರಗಳಂದು ಹೂವಿನ ಪೂಜೆ, ರಂಗಪೂಜೆ, ಹಾಲು ಪಾಯಸ, ಅನ್ನಸಂತರ್ಪಣೆಯೊಂದಿಗೆ ಸೋಣಾರತಿ ಸೇವೆಯು ಮಧ್ಯಾಹ್ನ ಮತ್ತು ರಾತ್ರಿ ಸೇವಾರ್ಥಿಗಳಿಂದ ಸಮರ್ಪಿಸಲ್ಪಡುತ್ತದೆ.
ಸೋಣಾರತಿಗೆ ಮರದಾರತಿ
ಸೋಣಾರತಿಗೆ ಹಲಸಿನ ಮರದ ವಿವಿಧ ಆಕೃತಿಗಳ 12 ಆರತಿಗಳನ್ನು ಬೆಳಗಲಾಗುತ್ತದೆ. ಪ್ರತೀ ಶುಕ್ರವಾರ ಬೆಳಗಲ್ಪಡುವ 14 ಆರತಿಗಳೊಂದಿಗೆ 12 ಆರತಿಗಳು ಸೇರಿ ಒಟ್ಟು 26 ಆರತಿಗಳು ಬೆಳಗಲ್ಪಡುತ್ತವೆ. ಆರತಿಗೂ ಪ್ರಕೃತಿಗೂ ಅವಿನಾಭಾವ ಸಂಬಂಧವಿದೆ. ಹಲಸಿನ ಮರ (ಹಾಲು ಬರುವ ಜೀವಚ್ಛಕ್ತಿಯುಳ್ಳ) ದಿಂದ ಆರತಿ ಬೆಳಗಿದರೆ ಆರತಿಯ ಜ್ವಾಲೆಯನ್ನು ಸ್ವೀಕರಿಸುವ ತಾಯಿ ಆರತಿಯನ್ನು ವೀಕ್ಷಿಸುತ್ತಿರುವ ಭಕ್ತರಿಗೆ ಜ್ವಾಲೆಯೊಂದಿಗೆ ತನ್ನ ಪ್ರಭಾಶಕ್ತಿ ಹಿಂದಿರುಗಿಸಿ ಭಕ್ತರಲ್ಲಿರುವ ನಕಾರಾತ್ಮಕ ಶಕ್ತಿ ಕ್ಷಯಗೊಳಿಸಿ ಚೈತನ್ಯ ಶಕ್ತಿ ತುಂಬುತ್ತಾಳೆನ್ನುವ ನಂಬಿಕೆಯಿದೆ. ಆರತಿ ಬೆಳಗುವುದು, ಆರತಿ ಬಟ್ಟಲಿಗೆ ಬತ್ತಿ ಜೋಡಿಸುವುದೂ ಕೂಡ ಶ್ರಮದಾಯಕ ಕಾರ್ಯ. ಇಲ್ಲಿ ಭಕ್ತರು ಕೃತಜ್ಞತಾಪೂರ್ವಕವಾಗಿ ಸೋಣಾರತಿ ಸಲ್ಲಿಸಿ ತಮ್ಮ ಮನೋಕಾಮನೆಗಳನ್ನು ಈಡೇರಿಸಿಕೊಳ್ಳುತ್ತಿದ್ದಾರೆ.
ಸೋಣೆ ವೈಶಿಷ್ಟ್ಯತೆ
ಸೋಣೆ ಮಾಸದಲ್ಲಿ ಮುತ್ತೈದೆಯರು ಶ್ರೀ ದೇವಿಗೆ ವಿಶೇಷವಾಗಿ ಪೂಜಿಸಿದ ಚೂಡಿ, ಗಾಜಿನ ಬಳೆ, ಬಾಗೀನ ಸಮರ್ಪಿಸುತ್ತಾರೆ. ಸೋಣೆ ಮಾಸದ ಪ್ರಥಮ ಶುಕ್ರವಾರ ಕೃಷ್ಣಾಷ್ಟಮಿಯಂದು ದೇವಿಗೆ ಕೃಷ್ಣನ ಅಲಂಕಾರ ಮಾಡಿ ಪೂಜಿಸಲಾಯಿತು. ಆ. 30ಕ್ಕೆ ದೇವಿಯನ್ನು ಗಾಜಿನ ಬಳೆಗಳಿಂದ ಸಿಂಗರಿಸಿ ಪೂಜೆ, ಸೆ. 6ಕ್ಕೆ ಕ್ಷೇತ್ರದ ವತಿಯಿಂದ ಸಾಮೂಹಿಕ ಹೂವಿನ ಪೂಜೆ, ಸೆ. 13ಕ್ಕೆ ವಸಂತ ಪೂಜೆಯೊಂದಿಗೆ ಸೋಣಾರತಿ ಸೇವೆ ನಡೆಯಲಿದೆ ಎಂದು ಕ್ಷೇತ್ರದ ಉಸ್ತುವಾರಿ ಕುಸುಮಾ ನಾಗರಾಜ್ ತಿಳಿಸಿದ್ದಾರೆ.