ಉಡುಪಿ: ಐತಿಹಾಸಿಕ, ಪವಿತ್ರ ಕ್ಷೇತ್ರಗಳು ಪಾಳು ಬೀಳದೆ/ನಾಶವಾಗದೆ ಉಳಿದು ಬೆಳೆಯಬೇಕಾದರೆ ಅದಕ್ಕೆ ಸ್ಥಳೀಯರ ಸಹಕಾರ ಅತ್ಯಗತ್ಯ ಎಂದು ಸೋದೆ ಮಠಾಧೀಶ ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರು ಹೇಳಿದರು.
ಜು.19ರಂದು ಶಿವಳ್ಳಿ ಶೀಂಬ್ರ ಶ್ರೀ ಸಿದ್ಧವಿನಾಯಕ ದೇವಸ್ಥಾನದ ಬಳಿ ನಿರ್ಮಿಸಲಾಗಿರುವ ಸಾರ್ವಜನಿಕ ಭೋಜನಗೃಹ, ಹೋಮ ಶಾಂತಿ ನಡೆಸುವ ಕೊಠಡಿ, ಸ್ವರ್ಣಾನದಿ ತೀರದ ಕಟ್ಟೆ ಬಳಿ ಶ್ರಾದ್ಧ/ಅಪರ ಕರ್ಮ ನಡೆಸಲು ಅನುಕೂಲ ವ್ಯವಸ್ಥೆ, ದೇವಳದ ಗರ್ಭಗೃಹ/ತೀರ್ಥಮಂಟಪಕ್ಕೆ 15 ಲ.ರೂ. ವೆಚ್ಚದಲ್ಲಿ ನಿರ್ಮಿಸಿದ ಮೇಲ್ಛಾವಣಿ ಮತ್ತು ಕಾಷ್ಠ ನಿರ್ಮಿತದ ದಳಿ ಸಹಿತ ನಿರ್ಮಾಣಗಳನ್ನು ಲೋಕಾರ್ಪಣೆಗೊಳಿಸಿ ಅವರು ಆಶೀರ್ವಚನ ನೀಡಿದರು.
ವಾದಿರಾಜರು ಗುರುತಿಸಿದ ಅತ್ಯಂತ ಪವಿತ್ರ ಕ್ಷೇತ್ರಗಳಲ್ಲಿ ಶೀಂಬ್ರ ಕ್ಷೇತ್ರ ಕೂಡ ಒಂದು. ಇಲ್ಲಿನ ಸ್ನಾನಘಟ್ಟದಲ್ಲಿ ಸ್ನಾನ ಮಾಡಿದರೆ ಪಾಪಗಳೆಲ್ಲ ತೊಳೆದು ಹೋಗುತ್ತವೆ ಎಂದು ವಾದಿರಾಜರು ಹೇಳಿದ್ದರು. ಇಂಥ ಕ್ಷೇತ್ರ ಮತ್ತಷ್ಟು ಬೆಳೆಯಬೇಕಾದರೆ ಸ್ಥಳೀಯರು ಇಲ್ಲಿ ಹೆಚ್ಚು ತೊಡಗಿಸಿಕೊಳ್ಳಬೇಕು. ಶ್ರದ್ಧೆ ವಹಿಸಬೇಕು ಎಂದು ಸೋದೆ ಶ್ರೀಗಳು ಹೇಳಿದರು.
ಬೆಂದ್ರ್ತೀರ್ಥ ಉಳಿಸಲು ಪ್ರಯತ್ನ
ಐತಿಹಾಸಿಕ ಹಾಗೂ ಅತ್ಯಂತ ಪವಿತ್ರ ಕ್ಷೇತ್ರಗಳಲ್ಲಿ ಒಂದಾದ, ದಕ್ಷಿಣ ಭಾರತದ ಏಕೈಕ ಬಿಸಿನೀರಿನ ಬುಗ್ಗೆಯಾಗಿರುವ ಪುತ್ತೂರು ತಾಲೂಕಿನ ಬೆಂದ್ರ್ ತೀರ್ಥ ನಿರ್ಲಕ್ಷಿಸಲ್ಪಟ್ಟಿದೆ. ಇದನ್ನು ಉಳಿಸುವುದಕ್ಕಾಗಿ ಅಗತ್ಯ ಕೆಲಸಗಳನ್ನು ಮಾಡಲು ಸಿದ್ಧರಿದ್ದೇವೆ. ಇದಕ್ಕೆ ಜನರು ಕೂಡ ಕೈಜೋಡಿಸಬೇಕು ಎಂದು ಶ್ರೀಗಳು ಹೇಳಿದರು.
ಕರ್ಣಾಟಕ ಬ್ಯಾಂಕ್ ಉಡುಪಿ ವಿಭಾಗೀಯ ಕಚೇರಿಯ ಸಹಾಯಕ ಮಹಾಪ್ರಬಂಧಕ ಗೋಪಾಲಕೃಷ್ಣ ಸಾಮಗ, ಸೋದೆ ಮಠದ ದಿವಾನ ಪಾಡಿಗಾರು ಶ್ರೀನಿವಾಸ ತಂತ್ರಿ, ಯು. ರಮೇಶ್ ರಾವ್, ರತ್ನಕುಮಾರ್, ಕೃಷ್ಣಮೂರ್ತಿ ಶಿವತ್ತಾಯ, ಹರಿಕೃಷ್ಣ ಶಿವತ್ತಾಯ, ಗೋಪಾಲಕೃಷ್ಣ ಭಟ್ ಉಪಸ್ಥಿತರಿದ್ದರು. ವಾಸುದೇವ ಭಟ್ ಪೆರಂಪಳ್ಳಿ ಪ್ರಸ್ತಾವನೆಗೈದು ಕಾರ್ಯಕ್ರಮ ನಿರ್ವಹಿಸಿದರು.