ಉಡುಪಿ: ಕಳೆದ ವರ್ಷ ಅಸ್ತಂಗತರಾದ ಶ್ರೀ ಲಕ್ಷ್ಮೀವರತೀರ್ಥ ಶ್ರೀಪಾದರ ಪ್ರಥಮ ಆರಾಧನೋತ್ಸವ ಮತ್ತು ವೃಂದಾವನ ಪ್ರತಿಷ್ಠಾ ಕಾರ್ಯ ಕ್ರಮ ಶ್ರೀ ಶೀರೂರು ಮೂಲಮಠದಲ್ಲಿ ಬುಧವಾರ ಜರಗಿತು.
ವೈದಿಕರು ವಿರಜಾ ಹೋಮ, ಪವಮಾನ ಹೋಮವನ್ನು ಮತ್ತು ಶೀರೂರುಮಠದ ಪ್ರತಿಮೆಗಳಿಗೆ ವಿಶೇಷ ಅಭಿಷೇಕಗಳನ್ನು ನಡೆಸಿದರು. ಹೋಮದ ಸಂದರ್ಭ ಪೂಜಿಸಲಾದ ಕಲಶದ ತೀರ್ಥವನ್ನು ವೃಂದಾವನಕ್ಕೆ ಹಾಕಿ ಪೂಜಿಸಲಾಯಿತು. ಧಾರ್ಮಿಕ ಕಾರ್ಯಕ್ರಮ ಗಳ ನೇತೃತ್ವವನ್ನು ವೇ|ಮೂ| ಪಾಡಿಗಾರುಶ್ರೀನಿವಾಸ ತಂತ್ರಿಗಳು ವಹಿಸಿದ್ದರು.
ಆಗಮಿಸಿದ ಭಕ್ತರಿಗೆ ಔಷಧೀಯ ಸಸ್ಯಗಳನ್ನು ವಿತರಿಸಲಾಯಿತು. ನವಗ್ರಹವನ ಮತ್ತು ಶ್ರೀಗಂಧ ವನಗಳನ್ನುನಿರ್ಮಿಸಲು ಚಾಲನೆ ನೀಡಲಾಯಿತು.
ಆರಾಧನೆ ಪ್ರಯುಕ್ತ ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಪರ್ಯಾಯಶ್ರೀ ಪಲಿಮಾರು ಮಠದಿಂದ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು.
2018ರ ಜು. 19ರಂದು ಸ್ವಾಮೀಜಿ ನಿಧನ ಹೊಂದಿದ್ದರು. ತಿಥಿ ಪ್ರಕಾರ ಬುಧವಾರ ಆರಾಧನೋತ್ಸವವನ್ನು ನಡೆಸಲಾಯಿತು. ಉಡುಪಿ ಮಠಗಳ ಸಂಪ್ರದಾಯದಂತೆ ಸ್ವಾಮೀಜಿ ನಿಧನ ರಾದಾಗ ಸಮಾಧಿ ಮಾಡಿ ಮೊದಲ ವರ್ಷದ ಆರಾಧನೋತ್ಸವದ ವೇಳೆ ವೃಂದಾವನ ನಿರ್ಮಿಸುತ್ತಾರೆ. ಅದರಂತೆ ಸುಮಾರು ಮೂರು ಅಡಿ ಎತ್ತರದ ನೂತನ ವೃಂದಾವನವನ್ನು ಸುಮಾರು ನಾಲ್ಕು ತಿಂಗಳ ಪರಿಶ್ರಮದಲ್ಲಿ ನಿರ್ಮಿಸಲಾಗಿದೆ. ಮಂಗಳವಾರ ರಾತ್ರಿ ವೃಂದಾ ವನಕ್ಕೆ ವಾಸ್ತುಪೂಜೆ ನಡೆಸಲಾಯಿತು.
ಉದ್ಯಮಿ ಮನೋಹರ ಶೆಟ್ಟಿ, ಸೋದೆ ಮಠ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ರತ್ನಕುಮಾರ್, ಡಾ| ಉದಯಕುಮಾರ ಸರಳತ್ತಾಯ, ಮಧ್ವೇಶ ತಂತ್ರಿ, ವ್ಯವಸ್ಥಾಪಕ ಸುಬ್ರಹ್ಮಣ್ಯ ಭಟ್, ರಾಮದಾಸ ಭಟ್, ವಾಸುದೇವ ಭಟ್ ಪೆರಂಪಳ್ಳಿ, ಲಕ್ಷ್ಮೀನಾರಾಯಣ ಭಟ್ ಉಪಸ್ಥಿತರಿದ್ದರು.