Home ಧಾರ್ಮಿಕ ಸುದ್ದಿ ಮುನಿಗಳಂತೆ ಬದುಕಿದ ಪುರಂದರದಾಸರು

ಮುನಿಗಳಂತೆ ಬದುಕಿದ ಪುರಂದರದಾಸರು

ಪುರಂದರದಾಸರ ಆರಾಧನೋತ್ಸವದಲ್ಲಿ ಶ್ರೀ ಈಶಪ್ರಿಯತೀರ್ಥರು

303
0
SHARE

ಉಡುಪಿ: ಪುರಂದರದಾಸರು ಋಷಿಮುನಿಗಳಂತೆ ತನ್ನ ಎಲ್ಲ ಪರಿಶ್ರಮವನ್ನು ಸಮಾಜಕ್ಕಾಗಿ ಧಾರೆಯೆರೆದರು ಎಂದು ಪರ್ಯಾಯ ಶ್ರೀ ಅದಮಾರು ಮಠದ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಅಭಿಪ್ರಾಯಪಟ್ಟರು.

ಶುಕ್ರವಾರ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ನಡೆದ ಪುರಂದರದಾಸರ ಆರಾಧನೋತ್ಸವದಲ್ಲಿ ಅವರು ಆಶೀರ್ವಚನ ನೀಡಿದರು. ನೀರು ಹಿಟ್ಟನ್ನು ಒಟ್ಟು ಮಾಡುವಂತೆ ಪುರಂದರ ದಾಸರು ಸಮಾಜವನ್ನು ಒಗ್ಗೂಡಿಸಿದರು. ನೀರು ಕೊಳೆಯನ್ನು ತೆಗೆಯುವಂತೆ ಅಂತರಂಗದ ಶುದ್ಧಿಗಾಗಿ ಹಾಡುಗಳನ್ನು ರಚಿಸಿ ಸಮಾಜವನ್ನು ಶುದ್ಧೀಕರಿಸಿದರು. ನೀರಿಗೆ ಕೊಳೆ ಸೇರಿದರೂ ಕೆಲವೇ ಸಮಯದಲ್ಲಿ ತಿಳಿಯಾಗುವಂತೆ ನಿರ್ಮಮಕಾರದಿಂದ ಇದ್ದರು ಎಂದು ಸ್ವಾಮೀಜಿ ಹೇಳಿದರು.

ಜನರ ಪ್ರೀತಿ, ವಿಶ್ವಾಸ ಗಳಿಸಿದ್ದರೂ ತಾನು ಏನನ್ನೂ ಬಯಸಲಿಲ್ಲ. ಹೀಗಾಗಿಯೇ ನಾಲ್ಕೈದು ಶತಮಾನಗಳ ಹಿಂದಿನಿಂದ ಇಂದಿನವರೆಗೂ ಅವರನ್ನು ಸ್ಮರಿಸಿಕೊಳ್ಳುತ್ತಾರೆ ಮತ್ತು ಅನೇಕ ದಾಸವರೇಣ್ಯರು ಇವರ ಹಾದಿ ಹಿಡಿದು ಆ ಕೆಲಸವನ್ನು ಮುಂದುವರಿಸಿದ್ದಾರೆ. ಋಷಿಮುನಿಗಳು ಯಾವಾಗಲೂ ಲೋಕೋದ್ಧಾರಕ್ಕಾಗಿಯೇ ಚಿಂತನೆ ನಡೆಸುತ್ತಾರೆ. ಅದರಂತೆ ಪುರಂದರದಾಸರೂ ಬಾಳಿ ಬದುಕಿದರು ಎಂದು ಸ್ವಾಮೀಜಿ ಸ್ಮರಿಸಿದರು.

ಪುರಂದರ ದಾಸರು ಸಂಸ್ಕೃತ ಸಾಹಿತ್ಯವನ್ನು ಜನಸಾಮಾನ್ಯರಿಗಾಗಿ ಕನ್ನಡ ಭಾಷೆಯಲ್ಲಿ ರಚಿಸಿದರು ಎಂದು ಉಪನ್ಯಾಸ ನೀಡಿದ ಹೆರ್ಗ ರವೀಂದ್ರ ಭಟ್‌ ತಿಳಿಸಿದರು. ಕುತ್ಪಾಡಿ ಕೃಷ್ಣರಾಜ ಭಟ್‌ ಕಾರ್ಯಕ್ರಮ ನಿರ್ವಹಿಸಿದರು. ಪುರಂದರದಾಸರ ಭಾವಚಿತ್ರವನ್ನು ರಥದಲ್ಲಿರಿಸಿ ರಥಬೀದಿಯಲ್ಲಿ ಮೆರವಣಿಗೆ ಬಂದ ಬಳಿಕ ವಿದ್ವತ್ಸಭೆ ನಡೆಯಿತು.

LEAVE A REPLY

Please enter your comment!
Please enter your name here