ಉಡುಪಿ: ಲಾಕ್ಡೌನ್ನಿಂದಾಗಿ ಹಲವು ಕ್ಷೇತ್ರಗಳಲ್ಲಿ ತೊಡಗಿರುವವರಿಗೆ ತೊಂದರೆಯಾಗಿವೆ. ಸುತ್ತಾಟದ ಮೂಲಕವೇ ಕಲೆಗಳನ್ನು ಪ್ರದರ್ಶಿಸುವ ನಾಟಕ, ಯಕ್ಷಗಾನಗಳಂತಹ ಕಲಾವಿದರ ಸ್ಥಿತಿಯೂ ಇದಕ್ಕೆ ಹೊರತಲ್ಲ. ಆದರೆ ಈ ಸಾಲಿನಲ್ಲಿ ಉಡುಪಿಯ ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಮಾತ್ರ ಭಿನ್ನವಾಗಿ ನಿಲ್ಲುತ್ತದೆ. ಆನ್ಲೈನ್ ಮಾದರಿಯಲ್ಲಿ ರಂಗಕಲಿಕೆಯ ಪರಿಕಲ್ಪನೆಯನ್ನು ಆರಂಭಿಸಿ ದೇಶ- ವಿದೇಶದ ಕಲಾವಿದರನ್ನು ಒಂದೆಡೆ ಸೇರಿಸುವ ವಿನೂತನ ಕೆಲಸಕ್ಕೆ
ಮುಂದಾಗಿದೆ.
ಏನು ಹೊಸ ಪ್ರಯೋಗ?
ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಮೊದಲ ಬಾರಿಗೆ ವಿನೂತನ ಪ್ರಯೋಗಕ್ಕೆ ಕೈ ಹಾಕಿದ್ದು ನಾಟಕದಲ್ಲಿ “ಮಾತುಗಾರಿಕೆ ಮತ್ತು ಅಭಿನಯ’ ಎಂಬ ವಿಷಯದ ಮೂಲಕ ಬೇರೆ ಬೇರೆ ಭಾಗದಲ್ಲಿರುವವರಿಗೆ ಸಂದೇಶಗಳನ್ನು ಕಳುಹಿಸುವ ಮೂಲಕ ಈ ವಿಷಯದ ಬಗ್ಗೆ ನಿರ್ದಿಷ್ಟ ಮಿತಿಯ ವೀಡಿಯೋ ತುಣುಕನ್ನು ಚಿತ್ರಿಸಿ ಆನ್ಲೈನ್ ಮೂಲಕ ಕಳುಹಿಸಲು ಸೂಚಿಸಿವೆ. ಬಳಿಕ ಅವೆಲ್ಲವನ್ನು ಸುಂದರವಾಗಿ ಜೋಡಿಸಿ ವಿಷಯಕ್ಕೆ ತಕ್ಕಂತೆ ಪ್ರಸ್ತುತಿಯನ್ನು ಡಾಕ್ಯುಮೆಂಟರಿ ರೂಪದಲ್ಲಿ ನೀಡಿದೆ. ಈ ಮೂಲಕ ರಂಗಕಲಿಕೆಗೆ ಪೂರಕ ವ್ಯವಸ್ಥೆ ಮಾಡಿಕೊಂಡಿದೆ.
ಹಲವೆಡೆ ಆನ್ಲೈನ್ ತರಬೇತಿ
ಕ್ರಿಕೆಟ್, ಜಿಮ್, ಸಂಗೀತ, ನೃತ್ಯಗಳ ತರಬೇತಿಗಳು ಆನ್ಲೈನ್ನಲ್ಲಿ ನಡೆಯುತ್ತಿವೆ. ವಿವಿಧ ಕಂಪೆನಿಗಳ ಸಿಬಂದಿ ವರ್ಕ್ ಫ್ರಮ್ ಹೋಮ್ ಕೆಲಸ ಮಾಡುತ್ತಿದ್ದು, ವಿದ್ಯಾರ್ಥಿಗಳು ಆನ್ಲೈನ್ ತರಬೇತಿಪಡೆಯುತ್ತಿದ್ದಾರೆ. ಈ ರೀತಿಯಲ್ಲಿ ಸರಕಾರದ ನಿಯಮಗಳಿಗೆ ಚ್ಯುತಿ ಬಾರದಂತೆ ಮತ್ತು ತಮ್ಮ ಕರ್ತವ್ಯಗಳನ್ನು ನಡೆಸುವ ಮೂಲಕ ಮಾದರಿ ನಡೆ ಅನುಸರಿಸುತ್ತಿದ್ದಾರೆ. ಈಗ ಈ ಸಾಲಿನಲ್ಲಿ ಉಡುಪಿಯ ಸಂಸ್ಕೃತಿ ವಿಶ್ವ ಪ್ರತಿಷ್ಠಾನವೂ ಸೇರಿದಂತಾಗಿದೆ.
ಸಮಯದಲ್ಲಿ ಟಿವಿ, ಮೊಬೈಲ್ಗಳನ್ನೆ ನೋಡಿ ಸಾಕಾಗಿ ಹೋಗಿದೆ. ಈ ರೀತಿಯ ರಂಗ ತರಬೇತಿ ಮೂಲಕ ಸಮಯ ಸದುಪಯೋಗ ಮಾಡಿದಂತಾಗುತ್ತದೆ. ನಾಟಕ ಅಭಿನಯದ ಬಗ್ಗೆ ವಿವಿಧ ವಿಭಾಗಗಳ ನುರಿತ ರಂಗಕರ್ಮಿಗಳಿಂದ ಮಾಹಿತಿ ಪಡೆಯಲು ಸಾಧ್ಯವಿದೆ. ಇದು ನಾಟಕಾಭಿನಯ ಕ್ಷೇತ್ರದ ಹೊಸ ಪ್ರಯೋಗ. ಜೀವನ್ ರಾಂ ಸುಳ್ಯ ಅವರ ಮಾರ್ಗದರ್ಶನದಲ್ಲಿ ಮಾಡಲಾಗಿದೆ. ಒಂದೇ ದಿನದ ಕಾಲಾವಧಿಯಲ್ಲಿ ರೂಪುಗೊಂಡಿದೆ. ದೇಶದ ಹಲವು ರಾಜ್ಯ ಹಾಗೂ ವಿದೇಶಗಳಲ್ಲಿ ನೆಲೆಸಿದ ಖ್ಯಾತ ಹಿರಿಯ ಹಾಗೂ ಕಿರಿಯ ಕಲಾವಿದರ ಕಲಾ ಸಂಗಮದ ಜತೆಗೆ ಬಹುಭಾಷಾ ಕೃತಿಗಳ ಸಮನ್ವಯದ ಮೂಲಕ ಮಾಡಲಾಗಿದೆ. ಇದು ಬಿಡುವಿನ ಸಮಯದಲ್ಲಿ ಹೊಸ ಆಲೋಚನೆ. ಇದು ಯುಟ್ಯೂಬ್ನ “ಸಂಸ್ಕೃತಿ ವಿಶ್ವ ಚಾನಲ್’ (https://youtu.be/YMxyFfSzTfk) ನಲ್ಲಿ ಲಭ್ಯ.
– ರವಿರಾಜ್ ಎಚ್.ಪಿ., ಸಂಚಾಲಕರು, ಉಡುಪಿ ಸಂಸ್ಕೃತಿ ವಿಶ್ವ ಪ್ರತಿಷ್ಠಾನ