ಉಡುಪಿ: ಅದಮಾರು ಪರ್ಯಾಯ ಅಂಗವಾಗಿ ಶನಿವಾರ ನಡೆದ ಅದ್ದೂರಿ ಮೆರವಣಿಗೆಯಲ್ಲಿ ನಗರಸಭೆ ಸ್ವಚ್ಛತೆಗೆ ನೀಡಿದ ಪ್ರಾಮುಖ್ಯ ಪ್ರವಾಸಿಗರ ಮೆಚ್ಚುಗೆ ಪಡೆಯಿತು.
ಮೆರವಣಿಗೆ ಹೋಗುತ್ತಿದ್ದಂತೆ ರಸ್ತೆಯೂ ಸ್ವಚ್ಛ
ಶನಿವಾರ ಮುಂಜಾನೆ 2ಗಂಟೆಗೆ ಜೋಡುಕಟ್ಟೆಯಿಂದ ಆರಂಭವಾಗಿದ್ದ ಮೆರವಣಿಗೆಯು ಮುಂದೆ ಸಾಗುತ್ತಿದ್ದರೆ, ಹಿಂದೆಯೇ ಪೌರ ಕಾರ್ಮಿಕರು ರಸ್ತೆಯನ್ನು ಸ್ವಚ್ಛಗೊಳಿಸಿದರು. ಉಡುಪಿ ನಗರ ಪ್ರಮುಖ ಬೀದಿ ತೆಂಕಪೇಟೆ, ಸಿಟಿ ಹಾಗೂ ಸರ್ವೀಸ್ ಬಸ್ ನಿಲ್ದಾಣ, ಅಜ್ಜರಕಾಡು ರಸ್ತೆ, ಕಲ್ಸಂಕ ಅಡ್ಡ ರಸ್ತೆಯನ್ನು ಕ್ಷಣ ಮಾತ್ರದಲ್ಲಿ ಪೌರ ಕಾರ್ಮಿಕರು ಸ್ವಚ್ಛಗೊಳಿಸಿದರು.
ರಾತ್ರಿ 12ರಿಂದಲೇ ಕೆಲಸ
ರಾತ್ರಿ 12 ಗಂಟೆಯ ಸುಮಾರಿಗೆ ನಗರದ ವಿವಿಧ ಕಡೆಯಲ್ಲಿ ಹಮ್ಮಿಕೊಂಡ ಸಾಂಸ್ಕೃತಿಕ ಕಾರ್ಯಕ್ರಮ ಮುಗಿಯುತ್ತಿದಂತೆ ಸ್ಥಳವನ್ನು ಶುಚಿಗೊಳಿಸಲು ಶಿಸ್ತಿನ ಸಿಪಾಯಿಗಳಂತೆ ನಿಂತಿರುವ ದೃಶ್ಯಗಳು ಕಂಡು ಬಂದಿತು.
80 ಮಂದಿಯ ತಂಡ
ಸುಮಾರು 80 ಜನರ ಪೌರಕಾರ್ಮಿಕರ ತಂಡ ಹಾಗೂ ಪಿಪಿಸಿ ಕಾಲೇಜಿನ ಎನ್‌ಎಸ್‌ಎಸ್ ವಿದ್ಯಾರ್ಥಿಗಳು ಪರ್ಯಾಯ ಜೋಡುಕಟ್ಟೆಯಿಂದ ಕೃಷ್ಣಮಠದವರೆಗೆ ರಸ್ತೆಯನ್ನು ಸ್ವಚ್ಛಗೊಳಿಸಿದರು. ಸಂಗ್ರಹಿಸಿದ್ದ ತ್ಯಾಜ್ಯವನ್ನು ಎರಡು ಟೆಂಪೋಗಳ ಮೂಲಕ ತ್ಯಾಜ್ಯ ಸಂಗ್ರಹಣ ಘಟಕಕ್ಕೆ ತೆಗೆದುಕೊಂಡು ಹೋಗಲಾಗಿದೆ.
ಟ್ಯಾಬ್ಲೋ -ಸ್ವಚ್ಛತೆ ಸಂದೇಶ
ಪರ್ಯಾಯ ಮೆರವಣಿಗೆಯಲ್ಲಿ ನಗರಸಭೆಯ ಸ್ವಚ್ಛ ನಗರ ಪರಿಕಲ್ಪನೆಯ ಟ್ಯಾಬ್ಲೋ ನೆರೆದಿದ್ದ ಜನರ ಗಮನಸೆಳೆಯಿತು.ಅದಕ್ಕೆ ತಕ್ಕಂತೆ ನಗರಸಭೆಯ ಪೌರ ಕಾರ್ಮಿಕರು ಸ್ವಚ್ಛತೆ ಕಾಪಾಡಿರುವುದು ಜನರ ಮೆಚ್ಚುಗೆಗೆ ಪಾತ್ರವಾಗಿದೆ.
ವಿದ್ಯಾರ್ಥಿಗಳ ಸಹಕಾರ
ಪರ್ಯಾಯಕ್ಕೆ ಪೂರ್ಣಪ್ರಜ್ಞ ಪದವಿ ಹಾಗೂ ಪದವಿ ಪೂರ್ವ ಕಾಲೇಜಿನ ಎನ್‌ಎಸ್‌ಎಸ್ ಸ್ವಯಂಸೇವಕರು, ಗಾಂಧಿ ಆಸ್ಪತ್ರೆಯ ಸಿಬಂದಿ ಕೃಷ್ಣ ಮಠ ಸೇರಿದಂತೆ ವಿವಿಧ ಸ್ಥಳವನ್ನು ಸ್ವಚ್ಛಗೊಳಿಸಿದರು.
ಊಟದ ತಟ್ಟೆ ಎಸೆಯದಂತೆ ಎಚ್ಚರ
ಕಳೆದ ಎರಡು ದಿನಗಳಿಂದ ಮಠದ ಕಾರ್ ಪಾರ್ಕಿಂಗ್ ಸಮೀಪ ಭಕ್ತರಿಗೆ ವಿಶೇಷ ಭೋಜನ ವ್ಯವಸ್ಥೆ ಕಲ್ಪಿಸಲಾಯಿತು. ಮಧ್ಯಾಹ್ನ ಹಾಗೂ ರಾತ್ರಿ ಸಾವಿರಾರು ಜನರು ಊಟ ಸೇವಿಸಿದರೂ ಒಂದೇ ಒಂದು ತಟ್ಟೆ ಹೊರಗಡೆ ಕಾಣ ಸಿಗಲಿಲ್ಲ. ಊಟದ ತಟ್ಟೆಯನ್ನು ಹೊರಗಡೆ ಎಸೆಯದಂತೆ ಎಚ್ಚರ ವಹಿಸಲಾಗಿತ್ತು. ಪೌರ ಕಾರ್ಮಿಕರು, ಸ್ವಯಂಸೇವಕರು ಊಟದ ತಟ್ಟೆ ಸಂಗ್ರಹವಾಗುತ್ತಿದ್ದಂತೆ ಟೆಂಪೋಗಳ ಮೂಲಕ ತ್ಯಾಜ್ಯ ಸಂಗ್ರಹಣ ಘಟಕದಲ್ಲಿ ಡಂಪ್ ಮಾಡಿದರು.
ಇತರರಿಗೆ ಮಾದರಿ
ಮೆರವಣಿಗೆ ಹೋಗುತ್ತಿದಂತೆ ಪೌರ ಕಾರ್ಮಿಕರು, ವಿದ್ಯಾರ್ಥಿಗಳು, ಇತರೆ ಸ್ವಯಂ ಸೇವಕರು ರಸ್ತೆಗಳನ್ನು ಕ್ಷಣ ಮಾತ್ರದಲ್ಲಿ ಸ್ವಚ್ಛಗೊಳಿಸಿದ್ದಾರೆ. ನಗರಸಭೆ ಸ್ವಚ್ಛತೆಗೆ ಪ್ರಾಮುಖ್ಯ ನೀಡಿದೆ. ಈ ಕಾರ್ಯ ಇತರರಿಗೆ ಮಾದರಿಯಾಬೇಕು. ದರ್ಬಾರ್ ಸಭೆಯಲ್ಲಿ ಹಿರಿಯ ಪೌರಕಾರ್ಮಿಕರೊಬ್ಬರನ್ನು ಸಮ್ಮಾನಿಸುತ್ತಿರುವುದು ಶ್ಲಾಘನೀಯ.
-ಭರತ್ ಶೆಟ್ಟಿ, ಮಂಗಳೂರು