ಉಡುಪಿ : ಶ್ರೀ ವೆಂಕಟರಮಣ ದೇವರು ಸಕಲರ ಎಲ್ಲ ಕಷ್ಟಗಳನ್ನು ನಿವಾರಣೆ ಮಾಡುವವರು. ದೇವರು ಉಡುಪಿಯ ಈ ಸ್ಥಳದಲ್ಲಿ ನೆಲೆ ನಿಂತು ಭಕ್ತರ ಅಭೀಷ್ಟಗಳನ್ನು ನೆರವೇರಿಸುತ್ತಿದ್ದಾರೆ ಎಂದು ಶ್ರೀ ಕಾಶೀ ಮಠದ ಶ್ರೀಮದ್ ಶ್ರೀ ಸಂಯಮೀಂದ್ರ ತೀರ್ಥ ಶ್ರೀಪಾದರು ಹೇಳಿದರು.
ರವಿವಾರ ಉಡುಪಿ ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನದಲ್ಲಿ ಪುನರ್ ನಿರ್ಮಾಣಗೊಂಡ ಸುತ್ತು ಪೌಳಿಯನ್ನು ಲೋಕಾರ್ಪಣಗೊಳಿಸಿ ಮತ್ತು ಪರಿವಾರ ದೇವರುಗಳನ್ನು ಪುನರ್ ಪ್ರತಿಷ್ಠಾಪಿಸಿ ಸ್ವಾಮೀಜಿ ಆಶೀರ್ವಚನ ನೀಡಿದರು. ಅಭಿವೃದ್ಧಿ ಕೆಲಸಗಳನ್ನು ದಾಖಲೆಯ ಐದು ತಿಂಗಳಲ್ಲಿ ಭಕ್ತರ ಸಹಕಾರದಿಂದ ನೆರವೇರಿಸಿದ್ದು ಶ್ರೀದೇವರು ಸರ್ವ ರಿಗೂ ಶುಭವನ್ನು ಉಂಟು ಮಾಡಲಿ. ಶ್ರೀ ಕಾಶೀ ಮಠ ಸಂಸ್ಥಾನದ ಶ್ರೀಭುವನೇಂದ್ರತೀರ್ಥರು, ಶ್ರೀವರದೇಂದ್ರ ತೀರ್ಥರು ದೇವರ ಪ್ರತಿಷ್ಠಾ ಕಾರ್ಯ ನೆರವೇರಿಸಿದ್ದು ಇದರಿಂದ ಸಮಾಜಕ್ಕೆ ಒಳಿತಾಗಿದೆ. ಇನ್ನು ಮುಂದೆಯೂ ದೇವಸ್ಥಾನದ ಅಭಿವೃದ್ಧಿ, ಭಕ್ತರ ಶ್ರೇಯೋಭಿವೃದ್ಧಿ ನಡೆಯಲಿ ಎಂದು ಶ್ರೀ ಸಂಯಮೀಂದ್ರತೀರ್ಥ ಶ್ರೀಪಾದರು ಹಾರೈಸಿದರು.
ದೇವಸ್ಥಾನದ ಆಡಳಿತ ಮೊಕ್ತೇಸರ ಪಿ.ವಿ. ಶೆಣೈ ಸ್ವಾಗತಿಸಿದರು. ವೇ|ಮೂ|ಶ್ರೀಕಾಂತ ಭಟ್ ಚೇಂಪಿ ಪ್ರಸ್ತಾವನೆಗೈದರು. ಮೊಕ್ತೇಸರರಾದ ಪುಂಡಲೀಕ ಕಾಮತ್, ಮಲ್ಪೆ ವಿಶ್ವನಾಥ ಭಟ್, ನಾರಾಯಣ ಪ್ರಭು, ಎಚ್. ಉಮೇಶ ಪೈ, ರೋಹಿತಾಕ್ಷ ಪಡಿಯಾರ್, ಡಾ| ಕೈಲಾಸನಾಥ ಶೆಣೈ, ಅಶೋಕ ಬಾಳಿಗಾ, ದೇವದಾಸ ಪೈ, ಮಟ್ಟಾರ್ ವಸಂತ ಕಿಣಿ, ಪ್ರಕಾಶ ಭಕ್ತ, ಸುರೇಶ ನಾಯಕ್, ಶಾಂತಾರಾಮ ಶಾನುಭಾಗ್, ಸುಬ್ರಹ್ಮಣ್ಯ ಪೈ ಮತ್ತು ಪುರಸಭೆಯ ಮಾಜಿ ಅಧ್ಯಕ್ಷ ಎಂ.ಸೋಮಶೇಖರ ಭಟ್, ಉದ್ಯಮಿ ಮುರಳೀಧರ ಬಾಳಿಗಾ ಉಪಸ್ಥಿತರಿದ್ದರು.
ಸಚಿವ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಕೆ.ರಘುಪತಿ ಭಟ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಕೆ.ಸುರೇಶ ನಾಯಕ್ ದೇವಸ್ಥಾನಕ್ಕೆ ಭೇಟಿ ನೀಡಿದರು. ಯಜ್ಞದ ಮಹಾಪೂರ್ಣಾಹುತಿ ನೆರವೇರಿಸಿದ ಸ್ವಾಮೀಜಿಯವರು ಬಳಿಕ ನವೀಕೃತ ಸುತ್ತುಪೌಳಿಯಲ್ಲಿ ಮಹಾ ಲಕ್ಷ್ಮೀ, ಮಹಾಗಣಪತಿ, ಆಂಜನೇಯ, ಗರುಡ ದೇವರನ್ನು ಪ್ರತಿಷ್ಠಾಪಿಸಿದರು. ಧಾರ್ಮಿಕ ಕಾರ್ಯಕ್ರಮಗಳನ್ನು ಚೇಂಪಿ ಶ್ರೀಕಾಂತ ಭಟ್ ಮಾರ್ಗದರ್ಶನದಲ್ಲಿ ಚೇಂಪಿ ರಾಮಚಂದ್ರ ಭಟ್, ಜಗದೀಶ ಭಟ್, ತ್ರಿವಿಕ್ರಮ ಭಟ್, ರವೀಂದ್ರ ಭಟ್, ವಿನಾಯಕ ಭಟ್ ಮತ್ತು ಅರ್ಚಕ ವೃಂದದವರು ನಡೆಸಿಕೊಟ್ಟರು.