Home ಧಾರ್ಮಿಕ ಸುದ್ದಿ ಉಡುಪಿ: ಸಂಭ್ರಮದ ಲಕ್ಷದೀಪೋತ್ಸವಕ್ಕೆ ಚಾಲನೆ

ಉಡುಪಿ: ಸಂಭ್ರಮದ ಲಕ್ಷದೀಪೋತ್ಸವಕ್ಕೆ ಚಾಲನೆ

1457
0
SHARE

ಉಡುಪಿ: ಶ್ರೀಕೃಷ್ಣ ಮಠದಲ್ಲಿ ಶನಿವಾರ ಉತ್ಥಾನ ದ್ವಾದಶಿಯಂದು ಬೆಳಗ್ಗೆ ತುಳಸೀಪೂಜೆ, ಸಂಜೆ ಕ್ಷೀರಾಬ್ದಿ ಪೂಜೆ ನಡೆದ ಬಳಿಕ ತೆಪ್ಪೋತ್ಸವ ಸಹಿತ ಲಕ್ಷದೀಪೋತ್ಸವ, ವಾರ್ಷಿಕ ರಥೋತ್ಸವ ಆರಂಭಗೊಂಡಿತು.

ಸಂಜೆ ಮಧ್ವಸರೋವರದ ಮಧ್ಯದ ಮಂಟಪದಲ್ಲಿ ಕ್ಷೀರಾಬ್ದಿ ಅರ್ಘ್ಯವನ್ನು ನೀಡಲಾಯಿತು. ಪರ್ಯಾಯ ಶ್ರೀ ಪಲಿಮಾರು ಮಠದ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು, ಕಿರಿಯರು, ಪೇಜಾವರ ಮಠದ ಹಿರಿಯ, ಕಿರಿಯ, ಕೃಷ್ಣಾಪುರ, ಅದಮಾರು, ಕಾಣಿಯೂರು ಮಠಾಧೀಶರು ಪಾಲ್ಗೊಂಡರು. ಇದೇ ಸಂದರ್ಭ ಪ್ರಭೋದೋತ್ಸವದ ಅಂಗವಾಗಿ ವೇದ-ದಾಸ ಗಾನ ಉತ್ಸವ ನಡೆಯಿತು. ಕರಾವಳಿಯ ಭಜನ ಮಂಡಳಿಗಳ ಸದಸ್ಯರು ಗೋಷ್ಠಿ ಗಾನದಲ್ಲಿ ದಾಸರ ಹಾಡುಗಳನ್ನು ಹಾಡಿದರು.

ಅಪರಾಹ್ನ ರಥಬೀದಿಯಲ್ಲಿ ಅಳವಡಿಸಿದ ದಳಿಗಳ ಮೇಲೆ ಗೋಮಯವನ್ನು ಇರಿಸಿ ಅದರ ಮೇಲೆ ಹಣತೆ ಇಡುವ ಮುಹೂರ್ತವನ್ನು ಪರ್ಯಾಯ ಪಲಿಮಾರು ಹಿರಿಯ, ಕಿರಿಯ, ಪೇಜಾವರ ಕಿರಿಯ, ಕಾಣಿಯೂರು ಸ್ವಾಮೀಜಿ ನಡೆಸಿದರು.

ರಾತ್ರಿ ಆಕರ್ಷಕ ತೆಪ್ಪೋತ್ಸವ ನಡೆಯಿತು. ಇದೇ ವೇಳೆ ರಥಬೀದಿ, ಮಧ್ವಸರೋವರದಲ್ಲಿ ಸಾವಿರಾರು ಹಣತೆಗಳ ದೀಪಗಳು ಕಂಗೊಳಿಸಿದವು. ತೆಪ್ಪೋತ್ಸವದ ಬಳಿಕ ರಥೋತ್ಸವ ನಡೆಯಿತು. ಚಾತುರ್ಮಾಸ್ಯ ಮುಗಿದ ಬಳಿಕ ಇದೇ ಮೊದಲ ಉತ್ಸವವಾಗಿದ್ದು, ಉತ್ಸವ ಮೂರ್ತಿಗಳನ್ನು ರಥದಲ್ಲಿರಿಸಿ ರಥೋತ್ಸವ ನಡೆಯಿತು. ರಥ ಚಲಿಸುವಾಗ ಭಜನ ಮಂಡಳಿಗಳ ಸದಸ್ಯರು ಕುಣಿತದ ಭಜನೆಗಳನ್ನು ಹಾಡಿದರು.

ಬೆಳಗ್ಗೆ ಪಲಿಮಾರು ಸ್ವಾಮೀಜಿಯವರು ಮಹಾಪೂಜೆ ಬಳಿಕ ತುಳಸಿ ಪೂಜೆ ನಡೆಸಿದರು. ನ. 13ರ ವರೆಗೆ ನಿತ್ಯ ಲಕ್ಷದೀಪೋತ್ಸವ ನಡೆಯಲಿದೆ. ಏಕಾದಶಿ ಪ್ರಯುಕ್ತ ಶುಕ್ರವಾರ ರಾತ್ರಿ ಮೈಸೂರು ರಾಮಚಂದ್ರಾಚಾರ್‌ ಅವರು ದಾಸರ ಹಾಡುಗಳಿಂದ ಜಾಗರಣೆ ನಡೆಸಿದರು.

ತೆಪ್ಪೋತ್ಸವ ನಡೆಯುವಾಗ ವೇದ ಪಾರಾಯಣವನ್ನು ಆಯೋಜಿಸಲಾಗಿದ್ದು, ಶನಿವಾರ ಋಗ್ವೇದ ಪಾರಾಯಣವನ್ನು ನಡೆಸಲಾಯಿತು. ನಿತ್ಯ ಒಂದೊಂದು ವೇದವನ್ನು ಪಾರಾಯಣ ಮಾಡಲಾಗುತ್ತದೆ.

LEAVE A REPLY

Please enter your comment!
Please enter your name here