ಉಡುಪಿ: ಉಡುಪಿ ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭತೀರ್ಥ ಶ್ರೀಪಾದರು ಹೈದರಾಬಾದ್ ನಗರದ ಕಾಚಿಗುಡ ಲಿಂಗಪಲ್ಲಿಯ ಶ್ರೀ ರಾಘವೇಂದ್ರ ಮಠದಲ್ಲಿ ಶನಿವಾರ ಪೂಜೆ ನೆರವೇರಿಸುವ ಮೂಲಕ ತಮ್ಮ 28ನೇ ಚಾತುರ್ಮಾಸ ವ್ರತ ಸಂಕಲ್ಪ ನೆರವೇರಿಸಿದರು.
ಈ ಸಂದರ್ಭ ಮೆರವಣಿಗೆಯ ಬಳಿಕ ನಡೆದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಶ್ರೀಪಾದರು, ಚಾತುರ್ಮಾಸ ಕಾಲದಲ್ಲಿ ವಿಶೇಷವಾಗಿ ಜ್ಞಾನಕಾರ್ಯ ನಡೆಯಬೇಕು. ಉತ್ತರಾಯಣ ಕಾಲ ದೇವತೆಗಳಿಗೆ ಹಗಲು ಮತ್ತು ದಕ್ಷಿಣಾಯನ ಕಾಲ ರಾತ್ರಿ. ಒಂದು ವರ್ಷ ದೇವತೆಗಳಿಗೆ ಒಂದು ದಿನ. ದಕ್ಷಿಣಾಯನದ ಆಷಾಢ ಶುಕ್ಲ ಏಕಾದಶಿಯಿಂದ ನಾಲ್ಕು ತಿಂಗಳು ದೇವತೆಗಳ ನಿದ್ರೆಯ ಸಮಯ. ಶ್ರೀಹರಿಗೆ ಅತಿ ಪ್ರಿಯವಾದ ಈ ನಾಲ್ಕು ತಿಂಗಳೇ ‘ಚಾತುರ್ಮಾಸ’. ಈ ಮಾಸಗಳಲ್ಲಿ ಸ್ನಾನ, ಜಪ, ಹೋಮ ಹವನಾದಿಗಳು ಅನಂತ ಪುಣ್ಯವನ್ನು ಅನುಗ್ರಹಿಸುತ್ತವೆ ಎಂದರು.
ಸೂರ್ಯನು ಮಕರ ರಾಶಿಯಲ್ಲಿರುವಾಗ ಮಾಘ ಮಾಸದಲ್ಲಿ ಮಾಡುವ ಪುಣ್ಯಕರ್ಮಗಳಿಗೆ ಸಿಗುವ ಫಲ ಇತರ ಅವಧಿಯಲ್ಲಿ ಗಳಿಸಿದ ಪುಣ್ಯಕ್ಕಿಂತ ಮಿಲಿಯ ಪಟ್ಟು ಅಧಿಕ. ಅದಕ್ಕಿಂತ ಕೋಟಿಪಟ್ಟು ವೈಶಾಖ ಮಾಸದಲ್ಲಿ ದೊರಕುತ್ತದೆ. ಆದರೆ ಚಾತುರ್ಮಾಸದಲ್ಲಿ ಗಳಿಸಿದ ಪುಣ್ಯಫಲವು ಎಲ್ಲ ಕಾಲಕ್ಕಿಂತಲೂ ಅನಂತ ಪಟ್ಟು ಮಿಗಿಲಾದುದು. ಮಳೆಗಾಲದ ಸಂದರ್ಭದಲ್ಲಿ ಸಂಚಾರ ಮಾಡುವ ಕ್ರಮವನ್ನು ಯತಿಗಳಿಗೆ ನಿಷೇಧಿಸಿರುವುದರಿಂದ ಯತಿಗಳು ಒಂದೆಡೆ ಚಾತುರ್ಮಾಸ ವ್ರತವನ್ನು ಕೈಗೊಳ್ಳುವ ಕ್ರಮ ನಡೆದು ಬಂದಿದೆ ಎಂದು ಶ್ರೀಪಾದರು ಆಶೀರ್ವಚನ ನೀಡಿದರು. ನಾಗೇಂದ್ರ ಪ್ರಸಾದ್ ಆಚಾರ್ಯ, ಜಯತೀರ್ಥ ಆಚಾರ್ ಪಗಡಾಲ್, ಬಿ.ಪಿ. ರಾಘವೇಂದ್ರ ರಾವ್ ಮೊದಲಾದವರು ಉಪಸ್ಥಿತರಿದ್ದರು.