ಉಡುಪಿ: ಕರಾವಳಿಯ ರೈತರು ಅನಾದಿ ಕಾಲದಿಂದ ಕದಿರುಕಟ್ಟುವ (ಹೊಸ್ತು) ಹಬ್ಬಕ್ಕೆ ಅಗತ್ಯವಿರುವ ಭತ್ತದ ತೆನೆ ದೊರಕದೆ ಕಂಗಲಾಗಿದ್ದಾರೆ.
ಮುಂಗಾರ ಪ್ರವೇಶ ವಿಳಂಬ
ಹಿಂದೆ ರೈತರು ಮೇನಲ್ಲಿ ಭತ್ತದ ಬೀಜ ಬಿತ್ತನೆ ಮಾಡಿ ಜೂನ್ನಲ್ಲಿ ನಾಟಿ ಮಾಡುತ್ತಿದ್ದರು. ಸೆಪ್ಟಂಬರ್ (ಮೂರು ತಿಂಗಳ ಅನಂತರ) ಮೊದಲ ವಾರದಲ್ಲಿ ಗಿಡದಲ್ಲಿ ಪೈರು ಹೊರ ಬರುತ್ತಿತ್ತು. ಆದರೆ ಈ ಬಾರಿ ಉಡುಪಿ ಜಿಲ್ಲೆಯಲ್ಲಿ ಮುಂಗಾರು ಪ್ರವೇಶ ಸುಮಾರು 50 ದಿನಗಳು ತಡವಾಗಿ ಪ್ರವೇಶಿಸಿದ ಹಿನ್ನೆಲೆ ಕೃಷಿ ಚಟುವಟಿಕೆ ಎರಡು ತಿಂಗಳು ಸ್ಥಗಿತಗೊಂಡಿತ್ತು.
ನಿಯಮಪಾಲನೆ
ಕರಾವಳಿಯ ಕೃಷಿ ಪರಂಪರೆಯಲ್ಲಿ ಕದಿರು ಕಟ್ಟುವ ಹಬ್ಬಕ್ಕೆ ವಿಶೇಷ ಮಹತ್ವವಿದೆ. ಗದ್ದೆಯಲ್ಲಿ ಬೆಳೆದ ಬತ್ತದ ಪೈರುಗಳು ತೆನೆಬಿಟ್ಟ ಸಂಭ್ರಮಕ್ಕೆ ಭಕ್ತಿ ಭಾವದಿಂದ ಆಚರಿಸುವ ಹಬ್ಬವಾಗಿದೆ. ಕದಿರು ಕಟ್ಟುವುದಕ್ಕೆ ನಿಯಮ ಪಾಲನೆ ಮಾಡಬೇಕು. ಹಬ್ಬದ ದಿನ ಮುಂಜಾನೆ ಮನೆಯನ್ನು ಸಂಪೂರ್ಣ ಸ್ವಚ್ಛಗೊಳಿಸಿ ಅಂಗಳವನ್ನು ಸೆಗಣಿಯಿಂದ ಸಾರಿಸಿ, ಮನೆಯ ಗೋಡೆಗಳಿಗೆ ಶೇಡಿ (ಸುಣ್ಣ) ಸಿಂಗರಿಸಲಾಗುತ್ತದೆ. ಗದ್ದೆಯಿಂದ ತೆನೆಯನ್ನು ಹಬ್ಬದ ಹಿಂದಿನ ರಾತ್ರಿ ತಂದಿಡಲಾಗುತ್ತದೆ.
ವಿಶೇಷ ಪ್ರಾರ್ಥನೆ
ಮುಂಜಾನೆ ಮನೆಯವರು ಮಡಿ ಯುಟ್ಟು ತುಳಿಸಿ ಕಟ್ಟೆ ಮೇಲೆ ತೆನೆ ಇರಿಸಿ ಪೂಜೆ ಸಲ್ಲಿಸಬೇಕು. ಅನಂತರ ಹಾಲು ಎರೆದು, ಸೌತೆಕಾಯಿ, ವೀಳ್ಯದೆಲೆ ಇಟ್ಟು ವಿಶೇಷ ಪೂಜೆ ಸಲ್ಲಿಸುವಾಗ ಘಂಟೆ, ಜಾಗಟೆ, ಶಂಖ ನಾದ ಮೊಳಗಿಸಲಾಗುತ್ತದೆ. ಅನಂತರ ಕದಿರು ಬುಟ್ಟಿ ಹೊತ್ತು ಮನೆಯ ಒಳಗೆ ಪ್ರವೇಶಿಸುವ ವ್ಯಕ್ತಿಯ ಕಾಲು ಮನೆ ಹೆಣ್ಣು ಮಗಳು ತೊಳೆಯಬೇಕು. ಬಳಿಕ ಕದಿರಿನ ಬುಟ್ಟಿಯನ್ನು ದೇವರ ಮುಂದಿಟ್ಟು ಪ್ರಾರ್ಥಿಸಲಾಗುತ್ತದೆ. ಅನಂತರ ಹಲಸು ಹಾಗೂ ಮಾವಿನ ಎಲೆಯೊಳಗೆ ಭತ್ತದ ತೆನೆಯಿಟ್ಟು ಕವಾಲುನಿಂದ ಕಟ್ಟಿದ ಕದಿರಿನ ಗುಚ್ಛವನ್ನು ಮನೆ ಬಾಗಿಲು, ತುಳಸಿಕಟ್ಟೆ, ವಾಹನ, ಆಯುಧಗಳಿಗೆ ಸೇರಿದಂತೆ ವಿವಿಧ ಕಡೆ ಕಟ್ಟಲಾಗುತ್ತದೆ. ಹಬ್ಬದ ಪ್ರಯುಕ್ತ ಮನೆಯಲ್ಲಿ ವಿಶೇಷ ಊಟವನ್ನು ತಯಾರಿಸಲಾಗುತ್ತದೆ.