Home ಧಾರ್ಮಿಕ ಸುದ್ದಿ ಸಾಸ್ತಾನದಿಂದ ತಿರುಪತಿಗೆ ಪಾದಯಾತ್ರೆ

ಸಾಸ್ತಾನದಿಂದ ತಿರುಪತಿಗೆ ಪಾದಯಾತ್ರೆ

2196
0
SHARE

ಉಡುಪಿ: ಸಾಸ್ತಾನದಿಂದ ತಿರುಮಲ ತಿರುಪತಿ ವೆಂಕಟೇಶ್ವರನ ಸನ್ನಿಧಿಗೆ ಪಾದಯಾತ್ರಾ ತಂಡವೊಂದು ಹೊರಟಿದೆ.

ಇದು ಈ ತಂಡದ ಹತ್ತನೆಯ ವರ್ಷದ ಪಾದಯಾತ್ರೆ. ಪ್ರತಿ ವರ್ಷ ನಾಗರಪಂಚಮಿ ಮರುದಿನ ತಂಡವು ಪಾದಯಾತ್ರೆ ನಡೆಸುತ್ತಿದೆ. ಹೊನ್ನಾವರ, ಕುಮಟ, ಕಾರವಾರ, ಗಂಗೊಳ್ಳಿ, ಬೈಂದೂರು, ಕೊಲ್ಲೂರು, ಸಾಲಿಗ್ರಾಮ, ಸಾಸ್ತಾನ ಮೊದಲಾದೆಡೆಗಳಿಂದ ಬಂದ 110 ಭಕ್ತರು ತಂಡದಲ್ಲಿದ್ದಾರೆ. ಮೊದಲ ವರ್ಷದಲ್ಲಿ 9 ಜನರು ತಂಡದಲ್ಲಿದ್ದರು. ವರ್ಷದಿಂದ ವರ್ಷಕ್ಕೆ ಭಕ್ತರ ಸಂಖ್ಯೆ ಏರಿಕೆಯಾಗುತ್ತಿದೆ.

ಮೊದಲ ದಿನ ಹಿರಿಯಡಕ ಕೊಂಡಾಡಿಯಲ್ಲಿ ಉಳಿದುಕೊಳ್ಳುವ ತಂಡ ಅನಂತರ ಹೊಸ್ಮಾರು, ಧರ್ಮಸ್ಥಳ, ಗುಂಡ್ಯ, ಸಕಲೇಶಪುರ, ಹಾಸನ, ಚೆನ್ನರಾಯಪಟ್ಟಣ, ಎಡಿಯೂರು, ಶಿವಗಂಗೆ, ದಾಬಸ್‌ಪೇಟೆ, ರಾಜಘಾಟ್, ಕೈವಾರ, ರಾಯಲ್ ಪಾಡ್‌, ವಾಯಲ್ ಪಾಡ್‌, ಪೀಲೇರ್‌, ಭಾದ್ರಪೇಟೆ, ಚಂದ್ರಗಿರಿ ಬೆಟ್ಟ ಹೀಗೆ ತಿರುಪತಿ ತಿರುಮಲೆ ಪಾದಯಾತ್ರೆ ನಡೆಯುತ್ತದೆ.

ಪಾದಯಾತ್ರಿಗಳ ಜತೆ ನಾಲ್ಕು ವಾಹನಗಳಿವೆ. ಇದರಲ್ಲಿ ಎರಡು ವಾಹನಗಳು ಲಗೇಜು, ಆಹಾರ ಸಾಮಗ್ರಿಗಳನ್ನು ಕೊಂಡೊಯ್ಯುತ್ತವೆ. ಇನ್ನೆರಡು ಸೀಟರ್‌ ವಾಹನಗಳು. ಎಲ್ಲಿ ತಂಗುತ್ತಾರೋ ಅಲ್ಲಿ ತಿಂಡಿ, ಊಟಗಳನ್ನು ತಯಾರಿಸುತ್ತಾರೆ. ಐವರು ಅಡುಗೆ ಭಟರು ಇವರೊಂದಿಗೆ ಇದ್ದಾರೆ. ಇಷ್ಟು ವರ್ಷಗಳಲ್ಲಿ ಎಲ್ಲೆಲ್ಲಿ ರಾತ್ರಿ ತಂಗುತ್ತಿದ್ದರೋ ಅಲ್ಲಿಯೇ ತಂಗುತ್ತಿದ್ದಾರೆ. ಒಟ್ಟು 15 ದಿನಗಳ ಕಾಲ ನಡೆಯುವ ಪಾದಯಾತ್ರೆ ಬಳಿಕ ಕೆಲವರು ಬಸ್‌ನಲ್ಲಿಯೂ, ಕೆಲವರು ಖಾಸಗಿ ವಾಹನಗಳಲ್ಲಿಯೂ ಹಿಂದಿರುಗುತ್ತಾರೆ.

ಪಾದಯಾತ್ರೆಯನ್ನು ಆರಂಭಿಸಿದವರು ಬೆಂಗಳೂರಿನಲ್ಲಿ ವೆಂಕಟೇಶ್ವರ ಸ್ವೀಟ್ಸ್‌ ಆರಂಭಿಸಿದ್ದ ಕಮಲಮ್ಮ ಮತ್ತು ಗೋವಿಂದ ರಾವ್‌. ಈಗ ಇವರು ಇಲ್ಲ. ಇವರ ಪುತ್ರ ಲಕ್ಷ್ಮೀನಾರಾಯಣ ರಾವ್‌ ಊರಿನಲ್ಲಿ ನೆಲೆನಿಂತು ಕಲ್ಯಾಣಪುರ ಸಂತೆಕಟ್ಟೆ, ಸಾಸ್ತಾನದಲ್ಲಿ ವೆಂಕಟೇಶ್ವರ ಸ್ವೀಟ್ಸ್‌ ಅಂಗಡಿಯನ್ನು ತೆರೆದಿದ್ದು ಈಗ ತಂಡವನ್ನು ಮುನ್ನಡೆಸುತ್ತಿದ್ದಾರೆ.

ನಾವು ನಮ್ಮೊಂದಿಗೆ ಬರುವ ಯಾವ ಭಕ್ತರಿಂದಲೂ ಹಣವನ್ನು ತೆಗೆದುಕೊಳ್ಳುವುದಿಲ್ಲ. ಶ್ರೀನಿವಾಸನ ಕೃಪೆಯಿಂದ ಎಲ್ಲವೂ ಸಾಂಗವಾಗಿ ನಡೆಯುತ್ತಿದೆ ಎಂದು ಪಾದಯಾತ್ರೆ ತಂಡದ ಮುಖ್ಯಸ್ಥರಾದ ಲಕ್ಷ್ಮೀನಾರಾಯಣ ರಾವ್‌ ಅವರು ಹೇಳಿದರು.

LEAVE A REPLY

Please enter your comment!
Please enter your name here