Home ಧಾರ್ಮಿಕ ಸುದ್ದಿ 60 ದಿನಗಳ ಹರಿಕಥಾ ಜ್ಞಾನಯಜ್ಞಕ್ಕೆ ಚಾಲನೆ

60 ದಿನಗಳ ಹರಿಕಥಾ ಜ್ಞಾನಯಜ್ಞಕ್ಕೆ ಚಾಲನೆ

1059
0
SHARE
ಕಾರ್ಯಕ್ರಮವನ್ನು ಪಲಿಮಾರು ಮಠದ ಶ್ರೀವಿದ್ಯಾಧೀಶತೀರ್ಥ ಶ್ರೀಪಾದರು ಉದ್ಘಾಟಿಸಿದರು.

ಉಡುಪಿ: ಮನುಷ್ಯ ನಿರಂತರವಾಗಿ ಹರಿಕಥೆ ಕೇಳಿದಾಗ ಮನಸ್ಸಿನಲ್ಲಿ ಅಡಗಿದ ಅಹಂ ಭಾವನೆ ದೂರವಾಗುತ್ತದೆ ಎಂದು ಪರ್ಯಾಯ ಪಲಿಮಾರು ಮಠದ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಅಭಿಪ್ರಾಯಪಟ್ಟರು.

ಶ್ರೀಕೃಷ್ಣ ಮಠ, ಪರ್ಯಾಯ ಪಲಿಮಾರು ಮಠ ಹಾಗೂ ಮಂಗಳೂರು ಹರಿಕಥಾ ಪರಿಷತ್ತು, ಬೆಂಗಳೂರು ಅಖೀಲ ಕರ್ನಾಟಕ ಕೀರ್ತನ ಕಲಾ ಪರಿಷತ್‌ ಹಾಗೂ ಕಾರ್ಕಳ ಶ್ರೀ ಹಂಡೆದಾಸ ಪ್ರತಿಷ್ಠಾನದ ಸಹಯೋಗದಲ್ಲಿ ಬುಧವಾರ ಮಧ್ವಾಂಗಣದಲ್ಲಿ ಆಯೋಜಿಸಿದ್ದ ’60 ದಿನಗಳ ಹರಿಕಥಾ ಜ್ಞಾನ ಯಜ್ಞ’ಕ್ಕೆ ಚಾಲನೆ ನೀಡಿ ಮಾತನಾಡಿದರು.

ಭಗವಂತ ಹೇಗೆ ಭಕ್ತನಿಗೆ ಬೇಡವಾಗಿರುವುದನ್ನು ಹಿಂಪಡೆದು ಬೇಕಾಗಿರುವುದನ್ನು ನೀಡುತ್ತಾನೆಯೋ ಅಂತೆಯೇ ಹರಿಕಥೆಗಳು ಸಹ ಮನಸ್ಸಿನಲ್ಲಿನ ಅಶಾಂತಿಯನ್ನು ಹೋಗಲಾಡಿಸಿ ಶಾಂತಿ ಯನ್ನು ನೆಲೆಸುವಂತೆ ಮಾಡುತ್ತದೆ ಎಂದವರು ತಿಳಿಸಿದರು.

ಪಲಿಮಾರು ಮಠದ ಕಿರಿಯ ಶ್ರೀ ವಿದ್ಯಾರಾಜೇಶ್ವರತೀರ್ಥ ಶ್ರೀಪಾದರು ಮಾತನಾಡಿ, ಹರಿಕಥೆ ಕೇವಲ ಮನೋರಂಜನೆಗೆ ಸಿಮೀತವಾಗಿಲ್ಲ. ಇದು ಪೌರಾಣಿಕ ವಿಷಯವನ್ನು ಸ್ವಾರಸ್ಯವಾಗಿ ತಿಳಿಸುತ್ತದೆ ಎಂದರು.

ಅದಮಾರು ಮಠದ ಕಿರಿಯ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಆಶೀರ್ವಚನ ನೀಡಿದರು.

ಮಂಗಳೂರು ಹರಿಕಥಾ ಪರಿಷತ್ತು ಗೌರವಾಧ್ಯಕ್ಷ ಹರಿಕೃಷ್ಣ ಪುನರೂರು, ಅಧ್ಯಕ್ಷ ಮಹಾಬಲ ಶೆಟ್ಟಿ, ಕಾರ್ಕಳ ಶ್ರೀ ಹಂಡೆದಾಸ ಪ್ರತಿಷ್ಠಾನದ ರುಕ್ಮಿಣಿ ಹಂಡೆ, ಉಡುಪಿ ಸಿಂಡಿಕೆಟ್ ಬ್ಯಾಂಕ್‌ ನಿವೃತ್ತ ಜಿ.ಎಂ. ದೇವಾನಂದ ಉಪಾಧ್ಯಾಯ ಉಪಸ್ಥಿತರಿದ್ದರು.

ಹರಿಕಥಾ ಪರಿಷತ್ತಿನ ಜಿಲ್ಲಾ ಸಂಚಾಲಕ ವೈ. ಅನಂತಪದ್ಮನಾಭ ಭಟ್ ಸ್ವಾಗತಿಸಿದರು, ಮಂಗಳೂರು ಹರಿಕಥಾ ಪರಿಷತ್ತು ಪ್ರ. ಕಾರ್ಯದರ್ಶಿ ತೋನ್ಸೆ ಪುಷ್ಕಳ್‌ ಕುಮಾರ್‌ ವಂದಿಸಿದರು.

LEAVE A REPLY

Please enter your comment!
Please enter your name here