ಉಡುಪಿ: ಗುರುವಾದವನು ಪರರನ್ನು ಅರಿತು ಜಾಣನಾದರೆ ಸಾಲದು, ತನ್ನನ್ನು ತಾನು ಅರಿತು ಜ್ಞಾನಿಯಾಗಬೇಕು. ಅಜ್ಞಾನದಿಂದ ಸುಜ್ಞಾನದೆಡೆಗೆ ನಡೆಯುವ ದಾರಿಯಲ್ಲಿ ಹಲವಾರು ಎಡರು-ತೊಡರುಗಳನ್ನು ದಾಟಿ ಸಾಧನೆಗೈಯ್ಯಲು ಗುರುವೊಬ್ಬರ ಮಾರ್ಗದರ್ಶನ ಅತೀ ಅಗತ್ಯವಿದೆ. ಸಚ್ಚಾರಿತ್ರ್ಯ ಗುರುವಿನ ಒಡನಾಟ, ಮಾರ್ಗದರ್ಶನ ಅಮೃತವಿದ್ದಂತೆ ಎಂದು ದೊಡ್ಡಣಗುಡ್ಡೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರದ ಧರ್ಮದರ್ಶಿ ಶ್ರೀ ರಮಾನಂದ ಗುರೂಜಿ ನುಡಿದರು.
ಪ್ರಜ್ಞಾ ಇಂಟರ್‌ನ್ಯಾಶನಲ್ ಶಾಲೆ, ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರದ ವತಿಯಿಂದ ಹಮ್ಮಿಕೊಳ್ಳಲಾದ ಗುರುವಂದನ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಅಮೃತತ್ವವುಳ್ಳ ಮಾರ್ಗದರ್ಶನದ ಸತ್ಫಲ ಪಡೆಯಬೇಕಾದರೆ ಶಿಷ್ಯನಾದವನು ಕಾಯಾ, ವಾಚಾ, ಮನಸಾ ಗುರುವಿನ ಆಜ್ಞಾಪಾಲಕನಾಗಿರಬೇಕು. ಹಲವು ಜಂಜಾಟಗಳಿಂದ ಕೂಡಿದ ಈ ತಾಂತ್ರಿಕ ಬದುಕಿನಲ್ಲಿ ಸಮಸ್ಯೆಯ ಸುಳಿಯಿಂದ ಹೊರಬರಲು ಗುರುವಿನ ಮಾರ್ಗದರ್ಶನ ಅತೀ ಅಗತ್ಯವಿದೆ. ಜೀವನದಲ್ಲಿ ಮುನ್ನಡೆಯಲು ದಾರಿ ತೋರಿಸಿದ ಗುರುವಿಗೆ ವಂದನೆ ಸಲ್ಲಿಸಲು ಗುರು ಹುಣ್ಣಿಮೆಯು ಪರ್ವಕಾಲವಾಗಿದೆ. ವ್ಯಾಸ ಮಹರ್ಷಿಯ ಜನ್ಮದಿನವಾದ ಗುರು ಹುಣ್ಣಿಮೆಯ ಪರ್ವಕಾಲದಲ್ಲಿ ತನ್ನನ್ನು ಅಭಿನಂದಿಸಿದ ಎಲ್ಲ ಭಕ್ತ ಸಮೂಹಕ್ಕೆ ಶ್ರೀ ದುರ್ಗಾ ಆದಿಶಕ್ತಿ ಪೂರ್ಣಾನುಗ್ರಹ ಕೊಟ್ಟು ನಡೆಸಲಿ ಎಂದು ಆಶೀರ್ವಚನ ನೀಡಿದರು.
ಪ್ರಜ್ಞಾ ಶಾಲಾ ಪ್ರಾಂಶುಪಾಲೆ ಉಷಾ ರಮಾನಂದ, ಶಿಕ್ಷಕ-ಶಿಕ್ಷಕಿಯರು, ವಿದ್ಯಾರ್ಥಿ-ವಿದ್ಯಾರ್ಥಿನಿಯರು, ಭಕ್ತ ಸಮೂಹ ಉಪಸ್ಥಿತರಿದ್ದರು. ಮಧ್ಯಾಹ್ನ ವಿಶೇಷ ಅಲಂಕೃತಗೊಳಿಸಿದ್ದ ದುರ್ಗಾ ಆದಿಶಕ್ತಿಗೆ ವಿಶೇಷ ಪೂಜೆಯೊಂದಿಗೆ ಮಹಾ ಅನ್ನಸಂತರ್ಪಣೆ ನಡೆಯಿತು.