Home ಧಾರ್ಮಿಕ ಸುದ್ದಿ 16: ‘ಸಾಮೂಹಿಕ ಚಂದ್ರಗ್ರಹಣ ಶಾಂತಿ ಹೋಮ’

16: ‘ಸಾಮೂಹಿಕ ಚಂದ್ರಗ್ರಹಣ ಶಾಂತಿ ಹೋಮ’

ದೊಡ್ಡಣಗುಡ್ಡೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ

1247
0
SHARE

ಉಡುಪಿ: ಜು.16ರಂದು ಆಷಾಢ ಶುಕ್ಲ ಪೌರ್ಣಮಿಯ ಮಧ್ಯರಾತ್ರಿ ಚಂದ್ರನಿಗೆ ಉತ್ತರಾಷಾಢ ನಕ್ಷತ್ರದಲ್ಲಿ ಕೇತು ಗ್ರಹಣವು ಸಂಭವಿಸಲಿರುವುದರಿಂದ ಧನು ರಾಶಿಯಲ್ಲಿ ಗ್ರಹಣ ಸ್ಪರ್ಶವಾಗಿ ಮಕರ ರಾಶಿಯಲ್ಲಿ ಗ್ರಹಣ ಮೋಕ್ಷವಾಗಲಿದೆ. ಗ್ರಹಣ ಕಾಲದ ಅರಿಷ್ಟ ಪರಿಹಾರಾರ್ಥವಾಗಿ ಉಡುಪಿ ದೊಡ್ಡಣಗುಡ್ಡೆಯ ಶ್ರೀ ಚಕ್ರಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕಾರಣಿಕ ಕ್ಷೇತ್ರದಲ್ಲಿ ಜು.16ರಂದು ಗ್ರಹಣ ಮಧ್ಯಕಾಲದಿಂದ ಕ್ಷೇತ್ರದ ಧರ್ಮದರ್ಶಿ ಶ್ರೀ ರಮಾನಂದ ಗುರೂಜೀ ಅವರ ಮಾರ್ಗದರ್ಶನದಲ್ಲಿ ‘ಸಾಮೂಹಿಕ ಚಂದ್ರಗ್ರಹಣ ಶಾಂತಿ ಹೋಮ’ ನಡೆಯಲಿದೆ. ಈ ಗ್ರಹಣದಲ್ಲಿ ಕೃತ್ತಿಕಾ, ಉತ್ತರಾ, ಪೂರ್ವಾಷಾಢ, ಉತ್ತರಾಷಾಡ ಮತ್ತು ಶ್ರವಣ ನಕ್ಷತ್ರದವರಿಗೂ ವೃಷಭ, ಮಿಥುನ,ಕರ್ಕಾಟಕ, ಸಿಂಹ, ಧನು, ಮಕರ ಮತ್ತು ಕುಂಭ ರಾಶಿಯವರಿಗೂ ಅರಿಷ್ಟವಿದ್ದು, ರಾತ್ರಿ ಕಾಲದಲ್ಲಿ ಗೋಚರಿಸುವುದರಿಂದ ಮಕ್ಕಳು, ವೃದ್ಧರು, ರೋಗಿಗಳನ್ನು ಹೊರತುಪಡಿಸಿ ಇತರರಿಗೆ ಈ ದಿನ ಸಂಜೆ 4.30ರ ಅನಂತರ ಭೋಜನ ನಿಷಿದ್ಧವಿದೆ. ತತ್ಸಂಬಂಧಿತ ನಕ್ಷತ್ರ, ರಾಶಿಯವರು ಗ್ರಹಣ ಶಾಂತಿಯಲ್ಲಿ ಪಾಲ್ಗೊಳ್ಳಬಹುದು ಎಂದು ಶ್ರೀ ಕ್ಷೇತ್ರದ ಪ್ರಕಟನೆ ತಿಳಿಸಿದೆ.

ಗ್ರಹಣಾಚರಣೆಯ ಕ್ರಮ
ಗ್ರಹಣ ಸ್ಪರ್ಶ ಕಾಲದಿಂದ ಮೋಕ್ಷ ಕಾಲದ ವರೆಗೆ ದೇವರ ನಾಮಸ್ಮರಣೆ ಮಾಡುವುದರಿಂದ ಅರಿಷ್ಟಾದಿಗಳು ದೂರವಾಗಿ ಸನ್ಮಂಗಲವಾಗುವುದಲ್ಲದೆ, ಹೆಚ್ಚಿನ ಸತ್ಫಲ ದೊರೆಯುವುದು. ಬೇರೆ ದಿನಗಳಲ್ಲಿ ಮಾಡಲ್ಪಡುವ ಹತ್ತು ಜಪಗಳನ್ನು ಗ್ರಹಣ ಕಾಲದಲ್ಲಿ ಮಾಡಿದರೆ ಹತ್ತಕ್ಕೆ ನೂರರಷ್ಟು ಫ‌ಲ ಲಭಿಸುತ್ತದೆ. ಮಂತ್ರ ಸಿದ್ಧಿಸಿಕೊಳ್ಳುವವರಿಗೆ ಗ್ರಹಣ ಕಾಲ ಯೋಗ್ಯವಾಗಿದ್ದು, ಅಶುದ್ಧ, ಸೂತಕ ಇತ್ಯಾದಿಗಳಿದ್ದರೂ ಸಹ ಗ್ರಹಣ ಕಾಲದಲ್ಲಿ ಜಪ ಮಾಡಬಹುದು. ರಾತ್ರಿ 1.31ಕ್ಕೆ (ಸ್ಪರ್ಶ ಕಾಲ) ಆರಂಭಗೊಳ್ಳಲಿರುವ ಗ್ರಹಣದ ಮಧ್ಯಕಾಲ 3.01 ಆಗಿದ್ದು, 4.30 ಗ್ರಹಣ ಮೋಕ್ಷ ಕಾಲವಾಗಿದೆ. ಗ್ರಹಣಾರಂಭದಲ್ಲಿ ಸ್ನಾನ ಮಾಡಿ ದೇವರ ಜಪ ಪ್ರಾರಂಭಿಸಬೇಕು, ಹಾಗೆಯೇ ಗ್ರಹಣ ಮೋಕ್ಷ ಕಾಲದ ಅನಂತರ ಪುನಃ ಸ್ನಾನ ಮಾಡಿ ಪೂಜೆ ಮಾಡಬೇಕು. ಅರಿಷ್ಟ ಎದುರಾಗಲಿರುವ ರಾಶಿ, ನಕ್ಷತ್ರದವರು ಗ್ರಹಣ ಕಾಲದಲ್ಲಿ ದೇಗುಲಗಳಿಗೆ ತೆರಳಿ ಎಳ್ಳೆಣ್ಣೆ ಸಮರ್ಪಿಸುವುದು ಉತ್ತಮ. ಗ್ರಹಣ ಕಾಲದಲ್ಲಿ ಅಕ್ಕಿ ಮತ್ತು ಹುರುಳಿ ತೆಗೆದಿರಿಸಿ ಬೆಳಗ್ಗೆ ಗೋವು, ಬಡವರು, ಬ್ರಾಹ್ಮಣರಿಗೆ ದಾನ ಕೊಟ್ಟರೆ ವಿಶೇಷ ಫ‌ಲ ಲಭಿಸಲಿದೆ. ಗ್ರಹಣ ಕಾಲದಲ್ಲಿ ಬೆಳ್ತಿಗೆ ಅಕ್ಕಿ ಮತ್ತು ಹುರುಳಿ ದಾನ ಮಾಡುವುದು ಶ್ರೇಷ್ಠ.
ಶ್ರೀ ರಮಾನಂದ ಗುರೂಜೀ, ಧರ್ಮದರ್ಶಿ

LEAVE A REPLY

Please enter your comment!
Please enter your name here