ಉಡುಪಿ: ದೊಡ್ಡಣಗುಡ್ಡೆ ಶ್ರೀ ಚಕ್ರಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರದಲ್ಲಿ ವಿಜಯದಶಮಿ ಪರ್ವ ಕಾಲದಲ್ಲಿ ಕ್ಷೇತ್ರದ ಧರ್ಮದರ್ಶಿ ಶ್ರೀ ರಮಾನಂದ ಗುರೂಜಿ ಅವರ ಉಪಸ್ಥಿತಿಯಲ್ಲಿ ತ್ರಿಕುಂಡ ತ್ರಿಚಂಡಿಕಾಯಾಗ ಪೂರ್ವಕ ವಾಗಿ ಮಹಾ ಚಂಡಿಕಾಯಾಗ ಸಂಪನ್ನಗೊಂಡಿತು.
ಬೆಳಗ್ಗೆ ಸಾಮೂಹಿಕ ಪ್ರಾರ್ಥನೆಯೊಂದಿಗೆ ಸಾಂಪ್ರದಾಯಿಕವಾಗಿ ಮಂಗಲವಾದ್ಯ ಸಹಿತ ಕ್ಷೇತ್ರದ ಉತ್ಸವ ಮೂರ್ತಿಯನ್ನು ಮೆರವಣಿಗೆಯಲ್ಲಿ ಯಾಗ ಮಂಟಪಕ್ಕೆ ತರಲಾಯಿತು. ವಿಶೇಷವಾಗಿ ರಚಿಸಲಾಗಿದ್ದ ಯಜ್ಞ ಮಂಟಪದಲ್ಲಿ ಸಿಂಗರಿಸಿದ್ದ ಪುಷ್ಪಾಲಂಕೃತ ಚಪ್ಪರದ ತೊಟ್ಟಿಲಿನೊಳಗೆ ವೇದಘೋಷಗಳೊಂದಿಗೆ ಬರಮಾಡಿ ಕೊಳ್ಳಲಾಯಿತು.
ಮಂಡಲದಲ್ಲಿ ಶ್ರೀ ದುರ್ಗಾ ಆದಿಶಕ್ತಿ ದೇವಿಯನ್ನು ಪಂಚವರ್ಣದಲ್ಲಿ ಮಂಡಲಾತ್ಮಕವಾಗಿ ಚಿತ್ರಿಸಲಾಗಿತ್ತು. ಏಕಕಾಲದಲ್ಲಿ ನಾಲ್ಕು ಕುಂಡಗಳಲ್ಲಿ ಯಾಗ ಆರಂಭಗೊಂಡು ಏಕಕಾಲದಲ್ಲಿ ನಾಲ್ಕು ಕುಂಡಗಳಲ್ಲಿ ಯಾಗದ ಪೂರ್ಣಾಹುತಿ ನಡೆಯಿತು.
ಕ್ಷೇತ್ರದ ವತಿಯಿಂದ ಸಾಮೂಹಿಕವಾಗಿ ಸಂಪನ್ನಗೊಂಡ ಮಹಾ ಚಂಡಿಕಾ ಯಾಗದ ಪೂರ್ಣಾಹುತಿಗೆ ಭಕ್ತರು ಅಪಾರ ಪ್ರಮಾಣದಲ್ಲಿ ದ್ರವ್ಯ ಸಮರ್ಪಿಸಿದರು. ಪೂರ್ಣಾಹುತಿಯಲ್ಲಿ ಅಪಾರ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದ್ದು, ಯಾಗದ ಅಂಗವಾಗಿ ಕನ್ನಿಕಾರಾಧನೆ, ದಂಪತಿ ಪೂಜೆ, ಆಚಾರ್ಯ ಪೂಜೆ ನೆರವೇರಿತು. ಮಧ್ಯಾಹ್ನದ ಮಹಾಪೂಜೆಯಲ್ಲಿ ಆದಿಶಕ್ತಿ ದೇವಿಯನ್ನು ಪುಷ್ಪಾಲಂಕೃತ ತೊಟ್ಟಿಲೊಳಗೆ ಅಸೀನಳಾದಂತೆ ಅಲಂಕರಿಸಲಾಗಿತ್ತು. ಮಹಾಪೂಜೆ, ಪಲ್ಲಪೂಜೆ ನೆರವೇರಿತು. ಕ್ಷೇತ್ರದ ವಿಶೇಷ ನೃತ್ಯ ಸೇವೆಯು ಡಾ| ಮಂಜರಿ ಚಂದ್ರ, ಜಾನಕಿ, ಯಶಸ್ವಿನಿ, ಸಂಹಿತಾ ಹೆಗ್ಡೆ, ಉನ್ನತಿ, ಸ್ವಾತಿ ಆಚಾರ್ಯ ಅವರಿಂದ ಸಮರ್ಪಿಸಲ್ಪಟ್ಟಿತು. ಪಂಚಭಕ್ಷ್ಯ ಸಹಿತವಾದ ಮೃಷ್ಟಾನ್ನ ಸಂತರ್ಪಣೆಯಲ್ಲಿ ಆರು ಸಾವಿರಕ್ಕೂ ಮಿಕ್ಕಿದ ಭಕ್ತರು ಅನ್ನಪ್ರಸಾದ ಸ್ವೀಕರಿಸಿದರು. ಕ್ಷೇತ್ರದಲ್ಲಿ ಅಕ್ಷರಾಭ್ಯಾಸ, ತುಲಾಭಾರ ಸೇವೆ ನೆರವೇರಿತು. ರಾತ್ರಿ ರಂಗಪೂಜಾ ಮಹೋತ್ಸವ, ಬಲಿ ಉತ್ಸವ, ತೊಟ್ಟಿಲು ಉತ್ಸವ, ವಸಂತ ಪೂಜೆ ಜರಗಿತ್ತು ಎಂದು ಕ್ಷೇತ್ರದ ಉಸ್ತುವಾರಿ ಕುಸುಮಾ ನಾಗರಾಜ್ ತಿಳಿಸಿದ್ದಾರೆ.