Home ಧಾರ್ಮಿಕ ಸುದ್ದಿ ಮನೆಯೊಳಗೆ ದಸರಾ ಬೊಂಬೆಗಳ ವೈಭವ

ಮನೆಯೊಳಗೆ ದಸರಾ ಬೊಂಬೆಗಳ ವೈಭವ

1391
0
SHARE

ಉಡುಪಿ: ವಿವಿಧ ದೇಶ, ರಾಜ್ಯಗಳ ಸಾಂಪ್ರದಾಯಿಕ ಬೊಂಬೆಗಳು, ವಿಗ್ರಹ ಮಾದರಿಗಳು, ಪಟ್ಟದರಾಣಿ, ದಶಾವತಾರ, ಪಶ್ಚಿಮಬಂಗಾಲದ ದುರ್ಗೆಯರ ವಿಗ್ರಹ, ಪುರಿಜಗನ್ನಾಥ, ಬಲರಾಮ, ಕೃಷ್ಣ, ಸುಭದ್ರೆಯ ವಿಗ್ರಹಗಳು ಕಂಡು ಬಂದಿದ್ದು ಅಜ್ಜರಕಾಡು ಸಮೀಪದ ರಾಜೇಂದ್ರ ಹಾಗೂ ಬೃಂದಾ ದಂಪತಿಯ ಮನೆಯಲ್ಲಿ.

ಬ್ಯಾಂಕ್‌ ಉದ್ಯೋಗಿಯಾದ ಅವರು ಮೂಲತಃ ಮೈಸೂರಿನವರು. ಅವರು ಕಳೆದ 35 ವರ್ಷಗಳಿಂದ ಇಲ್ಲಿ ನೆಲೆಸಿದ್ದು, 5 ವರ್ಷಗಳಿಂದ ತಮ್ಮ ಮನೆಯಲ್ಲಿ ದಸರಾ ಹಬ್ಬದ ಪ್ರಯುಕ್ತ ವಿವಿಧ ಬೊಂಬೆಗಳು, ವಿಗ್ರಹಗಳ ಅಲಂಕಾರ ಮಾಡುತ್ತಿದ್ದಾರೆ. ಹಳೆ ಮೈಸೂರು ಪ್ರಾಂತದಲ್ಲಿ ವಂಶಪಾರಂಪರ್ಯವಾಗಿ ಅವರ ಮನೆಯಲ್ಲಿ ಈ ವಿಗ್ರಹಗಳನ್ನು ರಚಿಸುತ್ತಾರಂತೆ. ಇಲ್ಲಿ ಕೂಡ ಆ ಸಂಪ್ರದಾಯವನ್ನು ಮುಂದುವರಿಸುವ ಇಚ್ಛೆ ಅವರದ್ದು. ಮೈಸೂರಿನ ಪ್ರತೀ ಮನೆಗಳಲ್ಲೂ ನವರಾತ್ರಿ ಸಮಯದಲ್ಲಿ ಈ ರೀತಿಯ ವಿಗ್ರಹಗಳನ್ನು ಮಾಡಲಾಗುತ್ತದೆ. ಪ್ರಸ್ತುತ ಸಾಂಪ್ರದಾಯಿಕ ಹಾಗೂ ಹಳ್ಳಿ ಎಂಬ ಎರಡು ಶೈಲಿಯಲ್ಲಿ ಮಾಡಲಾಗಿದೆ.

ಸಾಂಪ್ರದಾಯಿಕ ಶೈಲಿಯಲ್ಲಿ ಏನಿದೆ?
ಭೂಪಾಲ್‌, ಈಜಿಪ್ಟ್ನ ಸಾಂಪ್ರದಾಯಿಕ ವಿಗ್ರಹ, ಐಫೆಲ್‌ ಟವರ್‌, ವಿವಿಧ ಶೈಲಿಯ ದುರ್ಗೆಯರ ಬೊಂಬೆಗಳು, ದೀಪದ್‌ಮಲ್ಲಿ, ರಾಜಾರಾಣಿ ವಿಗ್ರಹ ಹಾಗೂ ಕಂಚಿನ ವಿಗ್ರಹಗಳನ್ನು 5 ಮೆಟ್ಟಲುಗಳನ್ನಾಗಿ ಮಾಡಿ ಇಡಲಾಗಿದೆ.

ಪಾಡ್ಯದಂದು ಪ್ರತಿಷ್ಠೆ
ಈ ಎಲ್ಲ ವಿಗ್ರಹಗಳನ್ನು ಪಾಡ್ಯದಂದು ಪ್ರತಿಷ್ಠಾಪನೆ ಮಾಡಲಾಗಿದೆ. ವಿಜಯದಶಮಿ ಯಂದು ತೆಗೆಯಲಾಗುತ್ತದೆ. ವಿವಿಧ ಪ್ರದೇಶಗಳಿಗೆ ಭೇಟಿ ನೀಡಿದಾಗ ಇಂತಹ ಕಲಾಕೃತಿ, ವಿಗ್ರಹ, ಬೊಂಬೆಗಳನ್ನು ಇವರು ಖರೀದಿಸುತ್ತಾರೆ. ನವರಾತ್ರಿಯ ಸಂದರ್ಭದಲ್ಲಿ ಇದನ್ನು ಅಲಂಕಾರವಾಗಿ ಇಡಲಾಗುತ್ತದೆ. ಈ ಬಾರಿ ಸುಮಾರು 200ರಿಂದ 250ರಷ್ಟು ಬೊಂಬೆ, ವಿಗ್ರಹಗಳನ್ನು ಇಟ್ಟಿದ್ದಾರೆ. ಕಳೆದ ಬಾರಿ ಸಾಂಪ್ರದಾಯಿಕ ಹಾಗೂ ಪ್ರಾಣಿ ಸಂಗ್ರಹಾಲಯ ಮಾದರಿಯಲ್ಲಿ ಮಾಡಿದ್ದರು. ಈ ಎಲ್ಲ ಕಲಾಕೃತಿಗಳನ್ನು ವೀಕ್ಷಿಸಲೆಂದೇ ಹಲವಾರು ಮಂದಿ ಭೇಟಿ ನೀಡುತ್ತಾರೆ ಎಂದು ಹೇಳುತ್ತಾರೆ ರಾಜೇಂದ್ರ.

ಹಳ್ಳಿ ಶೈಲಿಯಲ್ಲಿ ಏನಿದೆ?
ಈ ದಂಪತಿಯ ಮನೆಯ ಒಳಗೆ ಸಾಂಪ್ರದಾಯಿಕ ಹಳ್ಳಿಯನ್ನು ನಿರ್ಮಿಸಲಾಗಿದೆ. ಇದರೊಳಗೆ ಬಾವಿ, ರಸ್ತೆ, ಕೆರೆ, ತರಕಾರಿ, ಹಣ್ಣುಹಂಪಲು, ಏತ, ಕಿರಣಿ ಅಂಗಡಿ, ಪ್ರಾಣಿ-ಪಕ್ಷಿಗಳು, ಜನರು, ಹುಲ್ಲಿನ ಮನೆ ಅದರ ಮೇಲೊಂದು ಹಾವು, ದೊಡ್ಡದಾದ ಬೆಟ್ಟ ಅದರ ಮೇಲೆ ಚಾಮುಂಡಿ ವಿಗ್ರಹವನ್ನು ಮಾಡಲಾಗಿದೆ.

ಸಂಪ್ರದಾಯ ಉಳಿಸುವ ಕೆಲಸ
ಮೈಸೂರಿನಲ್ಲಿ ನಮ್ಮ ಹಿರಿತನದಿಂದಲೂ ಈ ಸಂಪ್ರದಾಯವನ್ನು ಆಚರಿಸಿಕೊಂಡು ಬರುತ್ತಿದ್ದೇವೆ. ಉಡುಪಿಗೆ ಬಂದ ಅನಂತರವೂ ಇದನ್ನು ಮುಂದುವರಿಸುವ ಇಚ್ಛೆಯಾಯಿತು. ಅದರಂತೆ ಕಳೆದ 5 ವರ್ಷಗಳಿಂದ ಮನೆಯಲ್ಲಿ ಇದನ್ನು ಆಚರಿಸುತ್ತಿದ್ದೇವೆ. ಆ ಮೂಲಕ ಸಂಪ್ರದಾಯವನ್ನು ಉಳಿಸುವ ಕೆಲಸ ಮಾಡುತ್ತಿದ್ದೇವೆ.
– ರಾಜೇಂದ್ರ

LEAVE A REPLY

Please enter your comment!
Please enter your name here