Home ಧಾರ್ಮಿಕ ಸುದ್ದಿ ಉಡುಪಿ ಯತಿಗಳಿಗೆ ನಾಲ್ಕು ತಿಂಗಳು ಭಿನ್ನ ಆಹಾರ ಕ್ರಮ

ಉಡುಪಿ ಯತಿಗಳಿಗೆ ನಾಲ್ಕು ತಿಂಗಳು ಭಿನ್ನ ಆಹಾರ ಕ್ರಮ

3482
0
SHARE
ಸಾಂದರ್ಭಿಕ ಚಿತ್ರ

ಉಡುಪಿ: ಆಷಾಢ ಮಾಸದ ದ್ವಾದಶಿ, ಚಾತುರ್ಮಾಸ್ಯ ವ್ರತದ ಆಹಾರ ಪದ್ಧತಿ ಉಡುಪಿ ಸಂಪ್ರದಾಯದ ಮಠಗಳಲ್ಲಿ ನಾಲ್ಕು ತಿಂಗಳು ಪರ್ಯಂತ ನಡೆಯಲಿದೆ.

ಪ್ರಥಮನ ಏಕಾದಶಿಯಂದು ಉಪವಾಸವಿದ್ದು ತಪ್ತ ಮುದ್ರಾಧಾರಣೆ ಮಾಡಿದ ಅನಂತರ ನಾಲ್ಕು ತಿಂಗಳಲ್ಲಿ ನಾಲ್ಕು ತರಹದ ಆಹಾರ ಕ್ರಮ ಸಂಪ್ರದಾಯದಂತೆ ಇದು ನಡೆಯಲಿದೆ.

ಇದುವರೆಗಿನ ಆಹಾರ ಕ್ರಮಕ್ಕೂ ಮುಂದಿನ ಆಹಾರ ಕ್ರಮಕ್ಕೂ ವ್ಯತ್ಯಾಸಗಳಿರುತ್ತವೆ. ಸ್ವಾಮೀಜಿಯವರು ಚಾತುರ್ಮಾಸ್ಯ ವ್ರತವನ್ನು ಮುಂದಿನ ದಿನಗಳಲ್ಲಿ ಕೈಗೊಂಡರೂ ಆಹಾರ ವ್ರತ ಮಾತ್ರ ಜು. 2ರಿಂದಲೇ ಆರಂಭವಾಗಿ 4 ತಿಂಗಳ ಪರ್ಯಂತ ಇರುತ್ತದೆ.

ಶಾಕ ವ್ರತ
ಮೊದಲ ತಿಂಗಳ ಆಹಾರ ಕ್ರಮಕ್ಕೆ ಶಾಕವ್ರತ ಎಂದು ಹೆಸರು. ಈ ತಿಂಗಳಲ್ಲಿ ತರಕಾರಿ ಬಳಸುವುದಿಲ್ಲ. ಮಾವು ಹೊರತಾಗಿ ಇತರ ಹಣ್ಣುಗಳನ್ನು ಬಳಸುವುದಿಲ್ಲ. ಪೊನ್ನಂಗೈ ಸೊಪ್ಪು, ತಿಮರೆ ಸೊಪ್ಪು, ಮಾವಿನಕಾಯಿ, ಪಾಪಡ್ಕ ಕಾಯಿಯನ್ನು ಬಳಸುತ್ತಾರೆ.

ಹುಣಿಸೆಹುಳಿ ಬದಲು ಮಾವಿನಕಾಯಿಯನ್ನು, ಹಸಿ ಮೆಣಸು- ಒಣ ಮೆಣಸಿನ ಬದಲು ಕಾಳು ಮೆಣಸು ಬಳಸುತ್ತಾರೆ. ಇದಕ್ಕಾಗಿ ಮಾವಿನಕಾಯಿಯನ್ನು ಬೇಸಗೆಯಲ್ಲಿ ಒಣಗಿಸಿ ಇಟ್ಟು ಈಗ ಬಳಸುತ್ತಾರೆ. ಉದ್ದು, ಹೆಸರು ಬೇಳೆ ಹೊರತುಪಡಿಸಿ ಇನ್ನಾವುದೇ ಬೇಳೆಯನ್ನು ಬಳಸುವುದಿಲ್ಲ. ಒಟ್ಟಿನಲ್ಲಿ ಬೇರು (ಭೂಮಿಯಡಿ ಬೆಳೆಯುವಂಥದ್ದು), ಕಾಂಡ (ತರಕಾರಿಗಳು), ಪತ್ರ (ಪತ್ರೊಡೆಯಂತಹ ಖಾದ್ಯ ತಯಾರಿ ಎಲೆಗಳು), ಪುಷ್ಪ (ಕುಂಬಳ, ದಾಸವಾಳದಂತಹ ಹೂವು), ಹಣ್ಣುಗಳನ್ನು ಬಳಸುವುದಿಲ್ಲ. ಸಾರು, ಸಾಂಬಾರು, ಪಲ್ಯ, ಪಾಯಸಕ್ಕೆ ಹೆಸರು ಬೇಳೆ ಮುಖ್ಯ. ಪಂಚಕಜ್ಜಾಯವನ್ನು ಹೆಸರುಬೇಳೆಯಿಂದ ಮಾಡಲಾಗುತ್ತದೆ. ಹೀಗಾಗಿ ಕೃಷ್ಣಮಠದ ಮುಖ್ಯಪ್ರಾಣ ದೇವರಿಗೆ ನಿತ್ಯ ಮಾಡುವ ಪಂಚಕಜ್ಜಾಯವನ್ನು ಹೆಸರು ಬೇಳೆಯಿಂದ ಮಾಡಲಾಗು ತ್ತದೆ. ಕಡಲೆ ಬೇಳೆ ಮಡ್ಡಿಯ ಬದಲು ಹೆಸರು ಬೇಳೆ ಮಡ್ಡಿ ಮಾಡುತ್ತಾರೆ. ಇದು ಸ್ವಾಮೀಜಿಯವರು ಇರುವ ಎಲ್ಲ ಕಡೆಗೂ ಅನ್ವಯವಾಗುತ್ತದೆ.

ಕ್ಷೀರ- ದಧಿವ್ರತ
ಎರಡನೆಯ ತಿಂಗಳ ವ್ರತವನ್ನು ಕ್ಷೀರ ವ್ರತ ಎಂದು ಕರೆಯುತ್ತಾರೆ. ಈ ತಿಂಗಳಲ್ಲಿ ಹಾಲಿನ ಬಳಕೆ ಇಲ್ಲ. ಮೂರನೆಯ ತಿಂಗಳಿನ ವ್ರತ ದಧಿವ್ರತ. ಈ ತಿಂಗಳಲ್ಲಿ ಮೊಸರನ್ನು ಬಳಸುವುದಿಲ್ಲ.

ದ್ವಿದಳ ವ್ರತ
ನಾಲ್ಕನೆಯ ತಿಂಗಳ ಆಹಾರ ಕ್ರಮದ ಹೆಸರು ದ್ವಿದಳ ವ್ರತ. ಈ ತಿಂಗಳಲ್ಲಿ ದ್ವಿದಳ ಧಾನ್ಯ ಬಳಕೆಯಾಗುವುದಿಲ್ಲ. ಬೇಳೆ ಮಾತ್ರವಲ್ಲದೆ ಹಸಿ ಮೆಣಸು, ಒಣಮೆಣಸನ್ನು ಬಳಸುವುದಿಲ್ಲ. ಭೂಮಿಯಡಿ ಬೆಳೆಯುವ ಗೆಡ್ಡೆ ಗೆಣಸು, ಬಾಳೆ ದಿಂಡು, ಬಾಳೆಕಾಯಿ, ಬಾಳೆಕೂಂಬೆ ಬಳಸುತ್ತಾರೆ. ಹಣ್ಣುಗಳಲ್ಲಿ ಬಾಳೆ ಹಣ್ಣನ್ನು ಬಳಸಲಾಗುತ್ತದೆ. ಈ ತಿಂಗಳಲ್ಲಿ ಅರಳಿನ ಚಿತ್ರಾನ್ನ, ಪಲ್ಯ, ಅವಲಕ್ಕಿಯ ಪಾಯಸ ಮಾಡುತ್ತಾರೆ. ಯಾವುದೇ ಬೇಳೆ ಬಳಸದ ಕಾರಣ ಕಡಲೆ ಬೇಳೆ ಮಡ್ಡಿ ಮಾಡುವುದಾದರೆ ರವೆಯಿಂದ ಮಡ್ಡಿ ತಯಾರಿಸುತ್ತಾರೆ. ಮೊದಲ ಮತ್ತು ಕೊನೆಯ ತಿಂಗಳಲ್ಲಿ ಗೋಡಂಬಿ, ದ್ರಾಕ್ಷಿ, ಲವಂಚ, ಏಲಕ್ಕಿಯಂತಹ ಪರಿಮಳ ದ್ರವ್ಯಗಳನ್ನು ಬಳಸುವುದಿಲ್ಲ.

LEAVE A REPLY

Please enter your comment!
Please enter your name here