Home ಧಾರ್ಮಿಕ ಸುದ್ದಿ ಭಜಕರನ್ನು ಒಗ್ಗೂಡಿಸುವ “ಭಜನ ದರ್ಶನ’ ಆ್ಯಪ್‌

ಭಜಕರನ್ನು ಒಗ್ಗೂಡಿಸುವ “ಭಜನ ದರ್ಶನ’ ಆ್ಯಪ್‌

ಭಜನೆಗೆ ಡಿಜಿಟಲ್‌ ಸ್ಪರ್ಶ; 15 ಸಾವಿರ ಬಳಕೆದಾರರು 10 ಸಾವಿರ ಭಜನೆ ಸಾಹಿತ್ಯ

397
0
SHARE

ಉಡುಪಿ: ಭಜನೆ ಸಂಪ್ರದಾಯವನ್ನು ಅತ್ಯಾಧುನಿಕ ಡಿಜಿಟಲ್‌ ತಂತ್ರಜ್ಞಾನದ ಮೂಲಕ ದೇಶಾದ್ಯಂತ ವಿಸ್ತರಿಸಲು ಗಂಗೊಳ್ಳಿಯ ಸ್ವಾಮಿ ಭಜನ ಮಂಡಳಿ ಮುಂದಾಗಿದೆ. ಇದಕ್ಕಾಗಿ “ಭಜನ ದರ್ಶನ’ ಮೊಬೈಲ್‌ ಆ್ಯಪ್‌ ಸಿದ್ಧವಾಗಿದೆ. ರಾಜ್ಯದ ಎಲ್ಲ ಭಜನ ಮಂಡಳಿಗಳನ್ನು ಒಂದೇ ಸೂರಿನಡಿ ಒಗ್ಗೂಡಿಸುವ ಪ್ರಯತ್ನವನ್ನು ಈ ಮೂಲಕ ಮಾಡಲಾಗುತ್ತಿದೆ. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 300ಕ್ಕೂ ಅಧಿಕ ಭಜನ ತಂಡಗಳಿದ್ದು, ಅವುಗಳ ಸಂಪೂರ್ಣ ವಿವರಗಳು ಈ ಆ್ಯಪ್‌ನಲ್ಲಿ ಲಭ್ಯ. ಶೀಘ್ರದಲ್ಲಿಯೇ ರಾಜ್ಯದ 1,000 ಭಜನ ತಂಡಗಳೂ ಸೇರ್ಪಡೆಯಾಗಲಿವೆ.

ಪ್ಲೇಸ್ಟೋರ್‌ನಲ್ಲಿ ಲಭ್ಯ
2019ರಲ್ಲಿ ಈ ಆ್ಯಪ್‌ ಪ್ಲೇಸ್ಟೋರ್‌ನಲ್ಲಿ ಬಿಡುಗಡೆಯಾಗಿದ್ದು, ಪ್ರಸ್ತುತ ದೇಶ-ವಿದೇಶ ಸಹಿತ 15 ಸಾವಿರಕ್ಕೂ ಅಧಿಕ ಮಂದಿ ಬಳಕೆ ಮಾಡುತ್ತಿದ್ದಾರೆ. ಈ ವರ್ಷದಲ್ಲಿ ಆ್ಯಂಡ್ರಾಯ್ಡ, ಐಒಎಸ್‌, ವೆಬ್‌ಪೇಜ್‌ ಮೂಲಕ ಸಾಮಾಜಿಕ ಮಾಧ್ಯಮಗಳಲ್ಲಿ ಈ ಆ್ಯಪ್‌ ಸಕ್ರಿಯವಾಗಿ ಕಾರ್ಯಾಚರಿಸಲಿದೆ.

ಒಂದೆಡೆ ಸಿಗಲಿದೆ ಸರ್ವ ಮಾಹಿತಿ
ಭಜನೆಗೆ ಸಂಬಂಧಿಸಿದ ಸಾಹಿತ್ಯ, ಗ್ರಾಮ, ಜಿಲ್ಲೆ, ರಾಜ್ಯದಲ್ಲಿರುವ ಭಜನ ತಂಡಗಳು, ಅವುಗಳ ಕಾರ್ಯಕ್ರಮಗಳು, ಚಿತ್ರ ಮಾಹಿತಿ, ನಡೆದ ಕಾರ್ಯಕ್ರಮ, ನಡೆಯಬೇಕಿರುವ ಕಾರ್ಯಕ್ರಮಗಳ ಸಹಿತ ಹಲವಾರು ಮಾಹಿತಿಗಳು ಒಂದೆಡೆ ಸಿಗಲಿವೆ. ಯಾವುದೇ ಲಾಭಾಂಶ ಇಟ್ಟುಕೊಳ್ಳದೆ ಸೇವೆ ನೀಡಲು ಭಜನ ತಂಡಗಳು ಚಿಂತನೆ ನಡೆಸುತ್ತಿವೆ. ಈ ಮೂಲಕ ಭಾರತೀಯ ಭಜನೆ ಸಂಸ್ಕೃತಿಯನ್ನು ವಿಶ್ವಕ್ಕೆ ಪರಿಚಯಿಸಲು ಹೊರಟಿದೆ ಈ ಭಜನ ತಂಡ.

ಶಿಕ್ಷಣ ಸಂಸ್ಥೆಗಳಲ್ಲೂ ಮೊಳಗಲಿದೆ ಭಜನೆ
ಪ್ರತೀ ಮನೆಯಲ್ಲಿ ಭಜನೆ ಸಂಸ್ಕೃತಿ ಬೆಳೆಸುವುದಲ್ಲದೆ ಶಾಲೆ – ಕಾಲೇಜುಗಳಿಗೆ ವಿಸ್ತರಿಸುವ ಯೋಜನೆ ರೂಪಿಸಲಾಗಿದೆ. ವಾರಕ್ಕೊಂದು ದಿನ 1 ಗಂಟೆ ಕಾಲ ಮಕ್ಕಳಿಗೆ ಭಜನೆ ತರಬೇತಿ ನೀಡಲು ಚಿಂತಿಸಲಾಗಿದೆ. ಅನುಮತಿಯನ್ನು ತೆಗೆದುಕೊಳ್ಳುವ ಪ್ರಕ್ರಿಯೆಗಳು ನಡೆದಿವೆ. ಕುಣಿತ ಭಜನೆ, ಕುಳಿತು ಭಜನೆ, ಉಗಾಭೋಗಗಳ ಸಹಿತ ದೇಶಾದ್ಯಂತ ಇರುವ ಹಲವು ಮಾದರಿಯ ಭಜನೆಗಳನ್ನು ಆಯಾಯ ರಾಜ್ಯ, ಜಿಲ್ಲೆಗಳಿಗೆ ಅನುಗುಣವಾಗಿ ಸ್ಥಳೀಯ ತಂಡಗಳು ಕಲಿಸಲಿವೆ.

ಯಾಕಾಗಿ ಭಜನೆ?
ಭಗವಂತನ ನಾನಾ ರೂಪಗಳನ್ನು ಸಂಗೀತ ಮಾಧ್ಯಮದಲ್ಲಿ ಸ್ಮರಿಸಿಕೊಳ್ಳುವಂತೆ ಮಾಡುವ ರಾಗ-ಲಯ ಬದ್ಧವಾದ ಕಾವ್ಯ ಸಾಹಿತ್ಯವೇ ಭಜನೆ. ಹಿಂದೆಲ್ಲ ಸಂಧ್ಯಾ ಕಾಲದಲ್ಲಿ ಎಲ್ಲ ಮನೆಗಳಲ್ಲಿ ಭಜನೆಯ ನಿನಾದ ಕೇಳಿಸುತ್ತಿತ್ತು. ಈಗ ಕೆಲವೇ ಮನೆಗಳಿಗೆ ಸೀಮಿತವಾಗಿದೆ. ಇದು ಕೇವಲ ಧಾರ್ಮಿಕ ಪ್ರಕ್ರಿಯೆಯಾಗಿರದೆ ಸಾಂಸ್ಕೃತಿಕ ಪ್ರಕ್ರಿಯೆ ಅಗೋಚರವಾಗಿ ಮಿಳಿತವಾಗಿರುತ್ತದೆ. ತಾಳ, ಖಂಜಿರ, ಹಾರ್ಮೋನಿಯಂ, ಮೃದಂಗವೇ ಮೊದಲಾದ ಸ್ವರವಾದ್ಯಗಳು ಸಾಂಸ್ಕೃತಿಕ ಪ್ರತಿನಿಧಿಗಳಾಗಿವೆ. ಎಂಜಿನಿಯರಿಂಗ್‌ನಲ್ಲಿ ಎರಡು ಸ್ನಾತಕೋತ್ತರ ಪದವಿ ಗಳಿಸಿ ಅಮೆರಿಕದಲ್ಲಿ ನೆಲೆಸಿರುವ ಹೆಸರಾಂತ ಹಾಡುಗಾರ ಮಹೇಶ್‌ ಕಾಳೆ ಅವರು “ವಿಟuಲ’ನ ನಾಮಸ್ಮರಣೆಯೇ ಆರೋಗ್ಯವರ್ಧಕ ಎನ್ನುವ ಮುನ್ನವೇ ಓದು-ಬರೆಹ ಗೊತ್ತಿಲ್ಲದವರೂ ವಿಟuಲನನ್ನು ಭಜಿಸಿಕೊಂಡು ಬಂದಿರುವುದು ಉಲ್ಲೇಖನೀಯ.

ದೇಶದ ಎಲ್ಲ ಭಜನ ಮಂಡಳಿಗಳನ್ನು ಒಂದೇ ಸೂರಿನಡಿ ತರುವ ಯತ್ನವೇ ನಮ್ಮದು. ಮುಂದಿನ ದಿನಗಳಲ್ಲಿ ಶಾಲಾ-ಕಾಲೇಜುಗಳಲ್ಲಿ ಭಜನೆಯ ಮಹತ್ವವನ್ನು ತಿಳಿಸುವುದಲ್ಲದೆ ವಿದ್ಯಾರ್ಥಿಗಳಿಗೆ ತರಬೇತಿ ನೀಡುವ ಚಿಂತನೆಯೂ ಇದೆ.
– ಶ್ಯಾಂ, ಆ್ಯಪ್‌ ರೂಪಿಸಿದವರು
(ಗುಲ್ವಾಡಿ ವೀರಾಂಜನೇಯ ಭಜನ ಮಂಡಳಿ ಸದಸ್ಯ)

– ಪುನೀತ್‌ ಸಾಲ್ಯಾನ್‌

LEAVE A REPLY

Please enter your comment!
Please enter your name here