ಉಡುಪಿ: ಪುತ್ತಿಗೆ ಮಠದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರ 46ನೆಯ ಚಾತುರ್ಮಾಸ್ಯ ಉದ್ಘಾಟನೆ ಸಮಾರಂಭವು ಬೆಂಗಳೂರಿನ ಪುತ್ತಿಗೆ ಮಠದ ಗೋವರ್ಧನ ಕ್ಷೇತ್ರದಲ್ಲಿ ನಡೆಯಿತು.
ಉದ್ಘಾಟನೆ ನೆರವೇರಿಸಿದ ಪುತ್ತಿಗೆ ಶ್ರೀಪಾದರು ಚಾತುರ್ಮಾಸ್ಯ ವ್ರತಾಚರಣೆಯ ಮಹತ್ವವನ್ನು ತಿಳಿಸಿ, ಸಮಾಜ ಅಭಿವೃದ್ಧಿ ಮತ್ತು ಏಕತೆಗಾಗಿ ಶ್ರೀಕೃಷ್ಣ ಮಂತ್ರವನ್ನು ಜಪಿಸಬೇಕೆಂದು ಆಶೀರ್ವಚನ ನೀಡಿದರು.
ಹಿರಿಯ ನ್ಯಾಯವಾದಿ ಬಿ.ವಿ. ಆಚಾರ್ಯ ಬಸವನಗುಡಿ ಅಧ್ಯಕ್ಷತೆ ವಹಿಸಿದ್ದರು. ಶಾಸಕ ರವಿಸುಬ್ರಹ್ಮಣ್ಯ, ಅದಮ್ಯ ಚೇತನ ಸಂಸ್ಥೆಯ ಮುಖ್ಯಸ್ಥೆ ತೇಜಸ್ವಿನಿ ಅನಂತ ಕುಮಾರ್, ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಭಾಸ್ಕರ ರಾವ್, ಚಾತುರ್ಮಾಸ್ಯ ಸಮಿತಿ ಕಾರ್ಯಾಧ್ಯಕ್ಷ ಅನಂತ ಬಲ್ಲಾಳ್, ಡಾ| ಎನ್. ವೆಂಕಟೇಶಾಚಾರ್, ಅಖೀಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಕೆ.ಎನ್. ವೆಂಕಟನಾರಾಯಣ, ಪ್ರೊ| ಸದಾನಂದ ದೀಕ್ಷಿತ್ ಒರಿಸ್ಸಾ, ಅಖೀಲ ಕರ್ನಾಟಕ ಮಾಧ್ವ ಮಹಾಸಭಾ ಅಧ್ಯಕ್ಷ ಡಾ| ಜಿ. ರಾಮಕೃಷ್ಣ ಉಪಸ್ಥಿತರಿದ್ದರು.