ಉಡುಪಿ: ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಧ್ಯಾರಾಧನೆಯು ಶನಿವಾರ ನಾಡಿನ ವಿವಿಧೆಡೆ ಜರಗಿತು. ಉಡುಪಿ ರಥಬೀದಿ ಯಲ್ಲಿರುವ ಮಂತ್ರಾಲಯದ ಶಾಖಾ ಮಠದ ರಾಯರ ಮೃತ್ತಿಕಾ ವೃಂದಾವನ ಸನ್ನಿಧಿಯಲ್ಲಿ ಮಹಾಪೂಜೆಯನ್ನು ಪರ್ಯಾಯ ಶ್ರೀ ಪಲಿಮಾರು ಮಠದಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಮತ್ತು ಶ್ರೀ ಅದಮಾರು ಮಠದ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ನೆರವೇರಿಸಿದರು. ನೂತನವಾಗಿ ನಿರ್ಮಿಸಲಾದ ಬೆಳ್ಳಿಯ ಕವಚವನ್ನು ಸ್ವಾಮೀಜಿಯವರು ರಾಯರಿಗೆ ಸಮರ್ಪಿಸಿದರು. ಇದಕ್ಕೂ ಮುನ್ನ ಅರ್ಚಕರು ಪಂಚಾಮೃತ ಅಭಿಷೇಕವನ್ನು ನಡೆಸಿದರು.
ಮಧ್ಯಾಹ್ನ ಅನ್ನಸಂತರ್ಪಣೆಗೆ ಮುನ್ನ ಪಲ್ಲಪೂಜೆಯನ್ನು ಉಭಯ ಸ್ವಾಮೀಜಿಯವರು ನೆರವೇರಿಸಿದರು. ಸಾವಿರಾರು ಭಕ್ತರಿಗೆ ಅನ್ನಸಂತರ್ಪಣೆ ಜರಗಿತು. ಸಂಜೆ ರಾಘವೇಂದ್ರ ಸ್ವಾಮಿ ಗಳ ಪೂರ್ವಾವತಾರ ಪ್ರಹ್ಲಾದರಾಜ ರಿಗೆ ವ್ಯವಸ್ಥಾಪಕ ಜಯತೀರ್ಥ ಆಚಾರ್ಯರ ನೇತೃತ್ವದಲ್ಲಿ ರಥೋ ತ್ಸವ ಜರಗಿತು. ಪಲಿಮಾರು ಸ್ವಾಮೀಜಿ ಯವರು ಮಂಗಳಾರತಿ ನೆರವೇರಿಸಿ ರಥೋತ್ಸವದಲ್ಲಿ ಪಾಲ್ಗೊಂಡು ಶ್ರೀಕೃಷ್ಣ ಮಠದ ಚಂದ್ರಶಾಲೆಯಲ್ಲಿ ಪೂಜೆ ನಡೆಸಿದರು. ವಿವಿಧ ಕಡೆಗಳಲ್ಲಿರುವ ರಾಯರ ಮಠಗಳು ಭಕ್ತರಿಂದ ಕಿಕ್ಕಿರಿದ್ದವು. ರಾಯರ ಮಠಗಳನ್ನು ವಿದ್ಯುದ್ದೀಪಗಳು, ಹೂವುಗಳಿಂದ ಅಲಂಕರಿಸ ಲಾಗಿತ್ತು. ಶುಕ್ರವಾರ ಪೂರ್ವಾರಾಧನೆ ನಡೆದಿದ್ದು, ರವಿವಾರ ಉತ್ತರ ಆರಾಧನೆ ನಡೆಯಲಿದೆ.