ಉಡುಪಿ: ಅಂಬಲಪಾಡಿ ಶ್ರೀ ಜನಾರ್ದನ ಮಹಾಕಾಳಿ ದೇವಸ್ಥಾನ ಶುಕ್ರವಾರ ಹೂವು ಹಾಗೂ ಫಲವಸ್ತುಗಳಿಂದ ಅಲಂಕಾರದಿಂದ ಕಂಗೊಳಿಸಿತ್ತು.
ಚಿಕ್ಕ ಬಳ್ಳಾಪುರದ ನಗರಸಭೆಯ ಸದಸ್ಯ ರಮೇಶ ಅವರು ಕಳೆದ ಆರು ವರ್ಷಗಳಿಂದ ಆಷಾಢದ ಮೂರನೇ ಶುಕ್ರವಾರ ಹೂವಿನ ವಿಶೇಷ ಅಲಂಕಾರದ ವಿಶಿಷ್ಟ ಸೇವೆಯನ್ನು ದೇವಸ್ಥಾನಕ್ಕೆ ಅರ್ಪಿಸುತ್ತಾ ಬಂದಿದ್ದಾರೆ. ಈ ಬಾರಿ 40 ಮಂದಿ ಯುವಕರ ತಂಡದ ಜೊತೆ ರಮೇಶ್ ಲಕ್ಷಾಂತರ ರೂಪಾಯಿ ಹೂವುಗಳನ್ನು ಹೊತ್ತು ಉಡುಪಿಗೆ ಜು. 11ರಂದು ಆಗಮಿಸಿದ್ದಾರೆ. ಗುರುವಾರ ಬೆಳಗ್ಗೆ 11 ಗಂಟೆಗೆ ಪ್ರಾರಂಭಿಸಿದ ದೇಗುಲ ಅಲಂಕಾರ ಶುಕ್ರವಾರ ಬೆಳಗ್ಗೆ 8 ಗಂಟೆಗೆ ಮುಗಿದಿದೆ. ಸಂಪೂರ್ಣ ದೇವಸ್ಥಾನವನ್ನು ಬಣ್ಣಬಣ್ಣದ ಹೂವುಗಳಿಂದ ಸಿಂಗರಿಸಿದ್ದು, ಶಿಲಾಮಯ ಕೆತ್ತನೆಗಳುಳ್ಳ ದೇವಸ್ಥಾನ ಹೂವಿನ ದೇಗುಳವಾಗಿ ಪರಿವರ್ತನೆಗೊಂಡಿತ್ತು.
ದೇಗುಲದ ಆಡಳಿತ ಮಂಡಳಿ ವತಿಯಿಂದ ಸೇವಾಕರ್ತರಿಗೆ ಊಟ ಮತ್ತು ವಸತಿ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು. ಈ ಸಂದರ್ಭ ಚಿಕ್ಕಬಳ್ಳಾಪುರ ನಗರಸಭಾ ಅಧ್ಯಕ್ಷ ಮುನಿಕೃಷ್ಣ, ತಾಲೂಕು ಬಿಜೆಪಿ ಅಧ್ಯಕ್ಷ ಚಂದ್ರಶೇಖರ್, ಆಟೋ ಯೂನಿಯನ್ ಅಧ್ಯಕ್ಷ ಶ್ರೀನಿವಾಸ್ ಉಪಸ್ಥಿತರಿದ್ದರು.