Home ಧಾರ್ಮಿಕ ಸುದ್ದಿ ಉಡುಪಿ ಅದಮಾರು ಮಠದಿಂದ ಪ್ರಧಾನ ಮಂತ್ರಿ ಕೋವಿಡ್ ಪರಿಹಾರ ನಿಧಿಗೆ ದೇಣಿಗೆ

ಉಡುಪಿ ಅದಮಾರು ಮಠದಿಂದ ಪ್ರಧಾನ ಮಂತ್ರಿ ಕೋವಿಡ್ ಪರಿಹಾರ ನಿಧಿಗೆ ದೇಣಿಗೆ

ಅದಮಾರು ಮಠ ಹಾಗೂ ಮಠದ ಶಿಕ್ಷಣ ಸಂಸ್ಥೆಗಳ ವತಿಯಿಂದ 55,55,555 ರೂ. ದೇಣಿಗೆ

810
0
SHARE

ಉಡುಪಿ: ಪ್ರಧಾನ ಮಂತ್ರಿಯವರ ಕೋವಿಡ್ ಸಂತ್ರಸ್ತರ ನಿಧಿಗೆ ಪರ್ಯಾಯ ಶ್ರೀ ಅದಮಾರು ಮಠ ಹಾಗೂ ಮಠದ ಶಿಕ್ಷಣ ಸಂಸ್ಥೆಗಳ ವತಿಯಿಂದ 55,55,555.00 ( ಐವತ್ತೈದು ಲಕ್ಷದ ಐವತ್ತೈದು ಸಾವಿರದ ಐನೂರ ಐವತ್ತೈದು) ರೂಪಾಯಿಗಳನ್ನು ದೇಣಿಗೆಯಾಗಿ ನೀಡಲಾಯಿತು.

ಅದಮಾರು ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು ಹಾಗೂ ಪರ್ಯಾಯ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಸಂಸದೆ ಶೋಭಾ ಕರಂದ್ಲಾಜೆ, ಜಿಲ್ಲಾಧಿಕಾರಿ ಜಗದೀಶ್, ಉಡುಪಿ ಶಾಸಕರಾದ ರಘುಪತಿ ಭಟ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್ ಇವರ ಸಮ್ಮುಖದಲ್ಲಿ ಅದಮಾರು ಮಠದಲ್ಲಿ ಇಂದು ದೇಣಿಗೆಯ ಚೆಕ್ ನೀಡಿದರು.

ಕಾಲ ಕಾಲಕ್ಕೆ ಮಳೆ ಬರಬೇಕು ಮಳೆಯಿಂದ ಬೆಳೆ ಬೆಳೆಯಬೇಕು. ಆದರೆ ಪ್ರಸ್ತುತ ಯಾರೋ ಒಬ್ಬರು ಮಾಡಿದ ತಪ್ಪಿನಿಂದ ವಿಶ್ವದ ಪ್ರತೀಯೊಬ್ಬರೂ ಬೆಲೆ ತೆರಬೇಕಾದ ಪ್ರಸಂಗ ಬಂದು ಜಗತ್ತಿಗೆ ದೊಡ್ಡ ಅನಾಹುತ ಬಂದಿದೆ. ನಮ್ಮ ದೇಶದ ಪ್ರಧಾನಿಯವರು ಸಂಕಷ್ಟದಲ್ಲಿರುವ ದೇಶದ ಜನರ ಪರಿಹಾರಕ್ಕಾಗಿ ಮಾಡುತ್ತಿರುವ ಕೆಲಸಕ್ಕೆ ಎಲ್ಲರೂ ಕೈಜೋಡಿಸಬೇಕು.

ಈ ನಿಟ್ಟಿನಲ್ಲಿ ನಾವು ನಮ್ಮ ಮಠದಿಂದ ದೇವರಲ್ಲಿ ಪ್ರಾರ್ಥಿಸಿ ಮೊತ್ತವನ್ನು ಪ್ರಸಾದ ರೂಪವಾಗಿ ನೀಡಿದ್ದೇವೆ. ಆದಷ್ಟು ಬೇಗ ಎಲ್ಲರೂ ಆರೋಗ್ಯವಂತರಾಗಲೆಂದು ದೇವರಲ್ಲಿ ಪ್ರಾರ್ಥಿಸುತ್ತೇವೆ ಎಂದು  ಅದಮಾರು ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು ಈ ಸಂದರ್ಭದಲ್ಲಿ ತಮ್ಮ ಸಂದೇಶವನ್ನು ನೀಡಿದರು.


ದೇಶದ ಈ ಸಂಕಷ್ಟ ಕಾಲದಲ್ಲಿ ಸರ್ಕಾರಕ್ಕೆ ಯಾವುದೇ ಮೂಲಗಳಿಂದ ತೆರಿಗೆ ರೂಪದ ಆದಾಯವಿರುವುದಿಲ್ಲ. ಆದರೆ ವಿವಿಧ ಇಲಾಖೆಗಳ ಖರ್ಚು ಸಾರ್ವಜನಿಕರ ಆರೋಗ್ಯದ ಖರ್ಚುಗಳು ಇದ್ದೆ ಇರುತ್ತದೆ. ಇದಕ್ಕೆ ನಾವು ವಾರದಲ್ಲಿ ಮೂರೂ ಹೊತ್ತಿನ ಊಟವನ್ನು ಬಿಟ್ಟು ಅದರ ಉಳಿತಾಯವನ್ನು ಕಷ್ಟದಲ್ಲಿರುವವರಿಗೆ ನಾವು ಹಂಚಬಹುದು. ಎಲ್ಲರ ಪರಿಶ್ರಮದಿಂದ ವಿಶ್ವದಲ್ಲಿಯೇ ಭಾರತ ದೇಶವು ಪ್ರಥಮ ಕೋವಿಡ್ ಮುಕ್ತ ದೇಶವಾಗಿ ವಿಶ್ವಗುರುವಾಗಿ ಹೊರಹೊಮ್ಮಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇವೆ ಎಂದರು.

ಈ ಹಿಂದೆ ಅದಮಾರು ಮಠದ ವತಿಯಿಂದ ಎರಡು ಲಕ್ಷ ರೂಪಾಯಿಗಳನ್ನು ಪ್ರಧಾನ ಮಂತ್ರಿಯವರ ಕೋವಿಡ್ ಪರಿಹಾರ ನಿಧಿಗೆ ನೀಡಲಾಗಿತ್ತು. ಪರ್ಯಾಯ ಶ್ರೀ ಅದಮಾರು ಮಠ ಹಾಗೂ ಶ್ರೀ ಕೃಷ್ಣ ಮಠದ ವತಿಯಿಂದ ದಿನವಹಿ ಸಾಮಗ್ರಿಗಳ 1000 ಕಿಟ್ ಗಳನ್ನೂ ಹಾಗೂ ಅದಮಾರು ಮಠದ ಆಡಳಿತದಲ್ಲಿರುವ ಕುಂಜಾರುಗಿರಿ ಶ್ರೀ ದುರ್ಗಾ ದೇವಾಸ್ಥಾನದಿಂದ 250 ಕಿಟ್ ಗಳನ್ನೂ ನೀಡಲಾಗಿದೆ ಎಂದು ಮಠದ ಮೂಲಗಳು ತಿಳಿಸಿವೆ.

LEAVE A REPLY

Please enter your comment!
Please enter your name here