ಸವದತ್ತಿ: ಏಳುಕೊಳ್ಳದ ನಾಡು ರೇಣುಕಾ ಯಲ್ಲಮ್ಮನ ಸನ್ನಿಧಾನದಲ್ಲಿ ಬನದ ಹುಣ್ಣಿಮೆ ಜಾತ್ರೆ ವಿಜೃಂಭಣೆಯಿಂದ ಜರುಗಿತು. ಮಹಾರಾಷ್ಟ್ರ, ಆಂಧ್ರ, ಗೋವಾ ಸೇರಿದಂತೆ ದೇಶದ ವಿವಿಧೆಡೆಯಿಂದ ಲಕ್ಷಾಂತರ ಭಕ್ತ ಸಮೂಹ ಬಂದು ದೇವಿಯ ದರ್ಶನ ಪಡೆದು ಪುನೀತರಾದರು. ಸುಕ್ಷೇತ್ರ ಯಲ್ಲಮ್ಮ ದೇವಸ್ಥಾನ ಅಕ್ಷರಶಃ ಭಂಡಾರಮಯವಾಗಿತ್ತು. ಜಾತ್ರೆಗೆ ಚಕ್ಕಡಿ ಮತ್ತು ವಾಹನಗಳ ಮೂಲಕ ಬಂದ ಭಕ್ತರು ಎರಡು-ಮೂರು ದಿನಗಳ ಮಟ್ಟಿಗೆ ಇಲ್ಲಯೇ ವಾಸ್ತವ್ಯ ಮಾಡುತ್ತಾರೆ.
ದೇವಿಗೆ ನೈವೇದ್ಯಕ್ಕಾಗಿ ಕಡಬು, ಹೋಳಿಗೆ ಜೊತೆಗೆ ವಿವಿಧ ಭೋಜನಗಳನ್ನು ತಯಾರಿಸಿ ಪಡ್ಡಲಗಿ ತುಂಬ ಕಾರ್ಯ ಮಾಡುತ್ತಾರೆ. ಪಡ್ಡಲಗಿ ತುಂಬಿಸಲು ತಯಾರಿಸಲಾದ ನೈವೇದ್ಯ, ಕಾಯಿ, ಬೆಳ್ಳಿ ಬಂಗಾರಗಳನ್ನಿಟ್ಟು ದೇವಿಯನ್ನು ಬೇಡಿಕೊಂಡರು. ಯಲ್ಲಮ್ಮನ ಸನ್ನಿಯಲ್ಲಿ ಬಳೆಗಳ ವ್ಯಾಪಾರ ಭರ್ಜರಿಯಾಗಿ ನಡೆಯಿತು. ಶ್ರೀದೇವಿಗೆ ಪಡ್ಡಲಗಿ ತುಂಬಿಸುವ ಮುನ್ನ ಸುಮಂಗಲೆಯರಿಗೆ ಹೊಸ ಹಸಿರು ಬಳೆ ತೊಡಿಸುವುದು ವಾಡಿಕೆ. ಇದರಿಂದಾಗಿ ದೇವಸ್ಥಾನದ ಪಕ್ಕದ ಬೀದಿಗಳಲ್ಲಿ ಬಳೆ ಅಂಗಡಿಗಳ ಮುಂದೆ ಮಹಿಳೆಯರು ಮತ್ತು ಜೋಗತಿಯರು ಬಳೆ ವ್ಯಾಪಾರದಲ್ಲಿ ನಿರತರಾಗಿದ್ದರು. ಕುಂಕುಮ-ಭಂಡಾರದ ವ್ಯಾಪಾರವೂ ಜೋರಾಗಿತ್ತು. ಭಕ್ತರು ಕುಂಕುಮ-ಭಂಡಾರ ಖರೀದಿಸಿ ಪರಸ್ಪರ ಎರಚಾಡಿದ ದೃಶ್ಯಗಳು ಕಂಡು ಬಂದವು. ದೇವಸ್ಥಾನ ಭಂಡಾರಮಯವಾಗಿ ಕಂಗೊಳಿಸಿತು.