ಒಡಿಯೂರು: ಆರೋಗ್ಯ ಪೂರ್ಣ ಸಮಾಜಕ್ಕೆ ಸಾಹಿತ್ಯ ವಿಚಾರ – ವಿಮರ್ಶೆ ನಡೆಯಬೇಕು. ಅದು ಸಾರ್ವಕಾಲಿಕ ಸಾಹಿತ್ಯವಾಗಬೇಕು. ಸೃಜನಶೀಲತೆಗೆ ಇನ್ನೊಂದು ಹೆಸರು ತುಳುನಾಡ ಜಾತ್ರೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಸರ್ವರ ಸಹಕಾರದಿಂದ ನಿಜಾರ್ಥದ ಜಾತ್ರೆಯಾಗಿ ಮೂಡಿ ಬಂದಿದೆ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಮ್ನ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು.
ಅವರು ಶುಕ್ರವಾರ ಒಡಿಯೂರು ಶ್ರೀ ಗುರುದೇವ ಜ್ಞಾನ ಮಂದಿರದಲ್ಲಿ ತುಳುನಾಡ ಜಾತ್ರೆ 2018 – ಶ್ರೀ ಒಡಿಯೂರು ರಥೋತ್ಸವ ಕಾರ್ಯ ಕ್ರಮದ ಯಶಸ್ಸಿಗೆ ಶ್ರಮಿಸಿದ ಕಾರ್ಯಕರ್ತರಿಗೆ ಅಭಿನಂದನೆ ಸಭೆಯಲ್ಲಿ ಆಶೀರ್ವಚನ ನೀಡಿ, 19ನೇ ವರ್ಷದ ತುಳುನಾಡ ಜಾತ್ರೆಗೂ ಮುನ್ನ ತುಳುವಿಗೆ ಶಾಸ್ತ್ರೀಯ ಸ್ಥಾನಮಾನ ಸಿಗಬೇಕು. ಕ್ಷೇತ್ರದಲ್ಲಿ ತುಳುನಾಡ ಸಂಸ್ಕೃತಿ ದರ್ಶನ ತೆರೆದಿಡುವ ಚಿಂತನೆ ಇದೆ ಎಂದರು.
ತುಳು ಉಳಿವಿಗೆ ನಾಡಿನಲ್ಲಿ ತಿರುಗಾಟ ಮಾಡಬೇಕಾಗಿದೆ. ತುಳು ನಾಡಿನ ನಾಲ್ಕು ದಿಕ್ಕುಗಳಲ್ಲಿ ವರ್ಷಕ್ಕೆ ಒಂದು ಕಾರ್ಯಕ್ರಮ ನಡೆಸಬೇಕು. ಯುವ ಶಕ್ತಿಯಿಂದ ಉತ್ತಮ ಕಾರ್ಯ ನಡೆದಿದ್ದು, ಸಂಘಟನೆಯಲ್ಲಿ ರಾಜಕೀಯ ನುಸುಳದಂತೆ ಎಚ್ಚರ ವಹಿಸಬೇಕು. ಜಾತ್ರೆಯಲ್ಲಿ ಒಳ್ಳೆಯ ಮನಸ್ಸುಗಳ ಸಮ್ಮಿಲನವಾಗಿದೆ ಎಂದು ತಿಳಿಸಿದರು. ಸಾಧ್ವಿ ಶ್ರೀ ಮಾತಾನಂದಮಯೀ ಉಪಸ್ಥಿತರಿದ್ದರು.
ಅರ್ಥಪೂರ್ಣ ತುಳು ಸಮ್ಮೇಳನ
ತುಳುನಾಡ ನುಡಿ-ನಡಕೆ ಕಾರ್ಯಕ್ರಮದ ಸಂಚಾಲಕ ವಸಂತಕುಮಾರ್ ಪೆರ್ಲ ಮಾತನಾಡಿ, ಒಡಿಯೂರಿನಲ್ಲಿ ತುಳು ಸಮ್ಮೇಳನ ಅರ್ಥಪೂರ್ಣವಾಗಿ ಆಯೋಜಿಸಲ್ಪಟ್ಟು, ಭದ್ರ ಬುನಾದಿ ಹಾಕಿ ಕೊಟ್ಟಿದೆ. ಸ್ಥಳೀಯರ ಸಹಕಾರ, ಕಾರ್ಯಕರ್ತರ ಶ್ರಮ ಯಶಸ್ಸಿಗೆ ಕಾರಣವಾಗಿದೆ. ರಥವನ್ನು ಎಳೆಯುವ ಕಾರ್ಯವನ್ನು ನಿರಂತರವಾಗಿ ಮಾಡಬೇಕು. ನಾಡು ಕಟ್ಟುವ ಕೆಲಸಕ್ಕೆ ಮಾಧ್ಯಮ ನೀಡಿದ ಸಹಕಾರ ಮೆಚ್ಚತಕ್ಕದ್ದು ಎಂದರು.
ಹಿರಿಯ ಪತ್ರಕರ್ತ ಮಲಾರು ಜಯರಾಮ ರೈ, ಒಡಿಯೂರು ಶ್ರೀ ಗುರುದೇವ ಸೇವಾ ಬಳಗದ ಮಂಗಳೂರು ಘಟಕದ ಅಧ್ಯಕ್ಷ ಜಯಂತ್ ಜೆ. ಕೋಟ್ಯಾನ್, ಒಡಿಯೂರು ಶ್ರೀ ಗುರುದೇವ ಗ್ರಾಮ ವಿಕಾಸ ಯೋಜನೆಯ ಪ್ರಧಾನ ಸಂಚಾಲಕ ತಾರಾನಾಥ ಟಿ. ಕೊಟ್ಟಾರಿ, ವಜ್ರಮಾತಾ ಮಹಿಳಾ ವಿಕಾಸ ಕೇಂದ್ರದ ಅಧ್ಯಕ್ಷೆ ಸರ್ವಾಣಿ ಪಿ. ಶೆಟ್ಟಿ ಉಪಸ್ಥಿತರಿದ್ದರು. ವಿವಿಧ ಉಪಸಮಿತಿಗಳ ಸಂಚಾಲಕರು, ಸ್ವಯಂಸೇವಕರು ಅನಿಸಿಕೆ ವ್ಯಕ್ತಪಡಿಸಿದರು.
ಒಡಿಯೂರು ತುಳುಕೂಟದ ಅಧ್ಯಕ್ಷ ಎಚ್.ಕೆ. ಪುರುಷೋತ್ತಮ ಸ್ವಾಗತಿಸಿ, ಲೀಲಾ ಆಶಯಗೀತೆ ಹಾಡಿದರು. ಸಂತೋಷ್ ಭಂಡಾರಿ ವಂದಿಸಿದರು.