Home ಧಾರ್ಮಿಕ ಸುದ್ದಿ ತುಳುನಾಡ ಜಾತ್ರೆ 2018 – ಶ್ರೀ ಒಡಿಯೂರು ರಥೋತ್ಸವ

ತುಳುನಾಡ ಜಾತ್ರೆ 2018 – ಶ್ರೀ ಒಡಿಯೂರು ರಥೋತ್ಸವ

ಧರ್ಮ ಮಾರ್ಗದಲ್ಲಿ ಜೀವನರಥ ಎಳೆಯಿರಿ: ಒಡಿಯೂರು ಶ್ರೀ

1722
0
SHARE
ವಿಟ್ಲ: ತುಳುನಾಡ್ದ ಜಾತ್ರೆ 2018 - ಶ್ರೀ ಒಡಿಯೂರು ರಥೋತ್ಸವದ ಧರ್ಮ ಸಭೆಯಲ್ಲಿ ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಅವರು ಆಶೀರ್ವಚನ ನೀಡಿದರು.

ವಿಟ್ಲ: ಧರ್ಮವನ್ನು ಮರೆತರೆ ಸುಖ, ಶಾಂತಿ ಇರದು. ಪರಿಪೂರ್ಣವಾದ ಅರ್ಪಣಾ ಭಾವ ಇದ್ದರೆ ಯಾವ ಭಯವೂ ಇಲ್ಲ. ವಿಜ್ಞಾನ ಸಾಕ್ಷಿಯನ್ನು ಹುಡುಕಿದರೆ, ಅಧ್ಯಾತ್ಮ ಅನುಭವವನ್ನು ಹೇಳುತ್ತದೆ. ಜೀವನ ರಥವನ್ನು ಎಳೆಯಲು ಧರ್ಮ ಮಾರ್ಗವಿರಬೇಕು ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು.

ಅವರು ಶನಿವಾರ ಒಡಿಯೂರು ಶ್ರೀ ಗುರು ದೇವದತ್ತ ಸಂಸ್ಥಾನದ ಧರ್ಮ ಚಾವಡಿಯಲ್ಲಿ ನಡೆದ ತುಳುನಾಡ್ದ ಜಾತ್ರೆ 2018 – ಶ್ರೀ ಒಡಿಯೂರು ರಥೋತ್ಸವ ಕಾರ್ಯಕ್ರಮದ
ಧರ್ಮ ಸಭೆಯಲ್ಲಿ ಆಶೀರ್ವಚನ ನೀಡಿದರು.

ಸಾಧ್ವಿ ಶ್ರೀ ಮಾತಾನಂದಮಯೀ ಆಶೀರ್ವಚನ ನೀಡಿ, ಸಂತೃಪ್ತ ಜೀವನ ಸಂತೋಷಕ್ಕೆ ದಾರಿ. ಧರ್ಮದ ನೆಲೆಯಲ್ಲಿ ಸಾಗಿದಾಗ ಸಮಾಜದಲ್ಲಿ ಶಾಂತಿ ನೆಲೆಸುತ್ತದೆ ಎಂದು ಹೇಳಿದರು.

ನೆರವು ವಿತರಿಸಿದ ರಾಜ್ಯ ಉಪಲೋಕಾಯುಕ್ತ ನ್ಯಾ|ಮೂ| ಸುಭಾಶ್‌ ಬಿ. ಅಡಿ ಮಾತನಾಡಿ, ತುಳುನಾಡು ಕರ್ನಾಟಕಕ್ಕೆ ವಜ್ರಮಾಲೆಯಂತಿದೆ. ತುಳುನಾಡಿನ ಜನರ ಭಾವನೆ ಆಪ್ಯಾಯ ಮಾನವಾಗಿದೆ. ನಂಬಿಕೆ ಮತ್ತು ಭಾವನೆಯೇ ಮುಖ್ಯ. ಪರರಿಗೆ ತೊಂದರೆ ನೀಡ ದಿರುವುದೇ ನಿಜವಾದ ಧರ್ಮ. ಗುರುವಿನ ಮಾರ್ಗ ದರ್ಶನವಿಲ್ಲದೆ ಸಮಾಜ ಇರಲು ಸಾಧ್ಯ ವಿಲ್ಲ, ಗುರುವೇ ದೇವರು. ಗುರುಗಳ ಸಂಸರ್ಗದಿಂದ ಜೀವನ ಸುಭದ್ರವಾಗುತ್ತದೆ ಎಂದರು.

ತುಳು 8ನೇ ಪರಿಚ್ಛೇದಕ್ಕೆ: ನಳಿನ್‌ ಭರವಸೆ
ಮಂಗಳೂರು ಸಂಸದ ನಳಿನ್‌ ಕುಮಾರ್‌ ಕಟೀಲು ಮಾತನಾಡಿ, ಸರಕಾರದ ಕೆಲಸವನ್ನು ಒಡಿಯೂರು ಕ್ಷೇತ್ರ ಮಾಡುತ್ತಿದೆ. ತುಳು ಭಾಷೆಯ ಒಳಿತಿಗಾಗಿ ನಿರಂತರವಾಗಿ ಶ್ರಮಿಸುತ್ತಿರುವ ಕ್ಷೇತ್ರ ಒಡಿಯೂರು. ರಾಜಪೀಠಕ್ಕಿಂತ ಗುರುಪೀಠ ಶ್ರೇಷ್ಠ. ಇಂತಹ ಮಠಗಳ ರಕ್ಷಣೆಗೆ ಸಮಾಜ ನಿಲ್ಲಬೇಕು. ಸಂಸ್ಕೃತಿಯನ್ನು ಉಳಿಸುವ ಕಾರ್ಯ ಒಡಿಯೂರು ಕ್ಷೇತ್ರದಲ್ಲಾಗುತ್ತಿದೆ. ತುಳು ಭಾಷೆ 8ನೇ ಪರಿಚ್ಛೇದಕ್ಕೆ ಸೇರಿಸಲು 11 ಮಂದಿ ತುಳು ಬರುವ ಸಂಸದರಿದ್ದು, ಪಕ್ಷ ಬಿಟ್ಟು ತುಳುವಿನ ಉಳಿವಿಗಾಗಿ ಪ್ರಯತ್ನಿಸುತ್ತೇವೆ. ರಾಜ್ಯಸರಕಾರ ಒದಗಿಸಬೇಕಾದ ಕಡತ ಸೇರ್ಪಡೆಯಾದಲ್ಲಿ ಕಾರ್ಯ ಸುಲಭವಾಗುತ್ತದೆ. ಒಡಿಯೂರು ಶ್ರೀಗಳ ಜತೆಗೆ ಸಂಸದರನ್ನು ಒಗ್ಗೂಡಿಸಿಕೊಂಡು ದಿಲ್ಲಿಯಲ್ಲಿ ಪ್ರಧಾನಿ ಯವರಿಗೆ ಮನವಿ ಸಲ್ಲಿಸಲು ವ್ಯವಸ್ಥೆ ಮಾಡಲಾಗುವುದು ಮತ್ತು ಈ ಶ್ರಮದಿಂದ ತುಳು 8ನೇ ಪರಿಚ್ಛೇದಕ್ಕೆ ಸೇರ್ಪಡೆಯಾಗುವ ಸಾಧ್ಯತೆಯಿದೆ ಎಂದು ತಿಳಿಸಿದರು.

ಲೋಕಾಯುಕ್ತ ಡೆಪ್ಯುಟಿ ರಿಜಿಸ್ಟ್ರಾರ್‌ ಶಿವಪ್ಪ ಸಾಲೇಗಾರ್‌, ಕರ್ನಾಟಕ ಲೋಕಸೇವಾ ಆಯೋಗದ ಅಧ್ಯಕ್ಷ ಡಾ| ಟಿ. ಶ್ಯಾಮ ಭಟ್‌, ವಾಶಿ ನವಿಮುಂಬಯಿ ಉದ್ಯಮಿ ಶಂಕರ ಶೆಟ್ಟಿ ಅಣ್ಣಾವರ, ವಿಟ್ಲ ಪುಷ್ಪಕ್‌ ಕ್ಲಿನಿಕ್‌ನ ಡಾ| ವಿ.ಕೆ. ಹೆಗ್ಡೆ, ನೋಟರಿ ಮತ್ತು ನ್ಯಾಯವಾದಿ ಜಯರಾಮ ರೈ, ಸ್ವಾಗತ ಸಮಿತಿಯ ಮುಖ್ಯಸ್ಥರಾದ ಉದ್ಯಮಿ ವಾಮಯ್ಯ ಬಿ. ಶೆಟ್ಟಿ ಮುಂಬಯಿ, ಕೃಷ್ಣ ಎಲ್‌. ಶೆಟ್ಟಿ ಚೆಂಬೂರು ಮುಂಬಯಿ, ಸಿದ್ದರಾಮಪ್ಪ ದಾವಣಗೆರೆ, ರೋಹಿತ್‌ ಡಿ. ಶೆಟ್ಟಿ ನಗ್ರಿಗುತ್ತು ಪುಣೆ, ಜಯಂತ ಜೆ. ಕೋಟ್ಯಾನ್‌, ಸರ್ವಾಣಿ ಪಿ.ಶೆಟ್ಟಿ ಮಂಗಳೂರು, ರೇವತಿ ವಿ.ಶೆಟ್ಟಿ ಚೆಂಬೂರು, ಸುಮಾ ರಾಜಶೇಖರ್‌ ದಾವಣಗೆರೆ, ಅಜಿತ್‌ ಕುಮಾರ್‌ ಪಂದಳಮ್‌, ಆರ್ಥಿಕ ಸಮಿತಿ ಸದಸ್ಯ ಎ. ಅಶೋಕ್‌ ಕುಮಾರ್‌ ಬಿಜೈ, ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಅಧ್ಯಕ್ಷ ಸುರೇಶ್‌ ರೈ, ಒಡಿಯೂರು ತುಳುಕೂಟದ ಅಧ್ಯಕ್ಷ ಎಚ್‌. ಕೆ. ಪುರುಷೋತ್ತಮ ಮತ್ತಿತರರು ಉಪಸ್ಥಿತರಿದ್ದರು.

ಒಡಿಯೂರು ವಿದ್ಯಾ ಪೀಠದ ಶಿಕ್ಷಕಿ ರೇಣುಕಾ ಎಸ್‌. ರೈ ಆಶಯಗೀತೆ ಹಾಡಿದರು. ಯಶವಂತ ವಿಟ್ಲ ಸ್ವಾಗತಿಸಿದರು. ಒಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆಯ ಬಂಟ್ವಾಳ ಮೇಲ್ವಿಚಾರಕ ಸದಾಶಿವ ಅಳಿಕೆ ವಂದಿಸಿದರು. ಪ್ರಧಾನ ಸಂಚಾಲಕ ತಾರಾನಾಥ ಟಿ. ಕೊಟ್ಟಾರಿ, ಪ್ರಕಾಶ್‌ ಕೆ. ಶೆಟ್ಟಿ ಪೇಟೆಮನೆ ನಿರ್ವಹಿಸಿದರು.

ಠರಾವು ಹಸ್ತಾಂತರ
ಇದೇ ಸಂದರ್ಭ ಮಲಾರು ಜಯರಾಮ ರೈ, ಎಚ್‌.ಕೆ. ಪುರುಷೋತ್ತಮ ಅವರು ಶ್ರೀ ಗುರುದೇವಾನಂದ ಸ್ವಾಮೀಜಿಯವರ ಮೂಲಕ ಸಂಸದ ನಳಿನ್‌ ಕುಮಾರ್‌ ಕಟೀಲು ಅವರಿಗೆ ತುಳು ಭಾಷೆಯನ್ನು ಭಾರತದ ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ಸೇರಿಸಬೇಕೆಂಬ ಠರಾವನ್ನು ಹಸ್ತಾಂತರಿಸಿದರು.

ನೆರವು ವಿತರಣೆ
43 ಮಂದಿಗೆ 3.39 ಲಕ್ಷ ರೂ. ಮೊತ್ತದ ನೆರವನ್ನು ವಿತರಿಸಲಾಯಿತು. ಇದೇ ಸಂದರ್ಭ ದಾನಿಗಳನ್ನು ಹಾಗೂ ಸ್ವಯಂಸೇವಕರನ್ನು ಗೌರವಿಸಲಾಯಿತು. ವೇ|ಮೂ| ಚಂದ್ರಶೇಖರ ಉಪಾಧ್ಯಾಯರ ಪೌರೋಹಿತ್ಯದಲ್ಲಿ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ, ಒಡಿಯೂರು ಶ್ರೀ ಜೈಗುರುದೇವ ಕಲಾ ಕೇಂದ್ರ ಮತ್ತು ಶ್ರೀ ಸಂಸ್ಥಾನದ ಸಹಸಂಸ್ಥೆಗಳ ಸದಸ್ಯ ರಿಂದ ಸಾಂಸ್ಕೃತಿಕ ವೈವಿಧ್ಯ, ಸನಾತನ ನಾಟ್ಯಾಲಯದ ಶಾರದಾಮಣಿ ಶೇಖರ್‌ ಮತ್ತು ಶ್ರೀಲತಾ ನಾಗರಾಜ್‌ ನಿರ್ದೇಶನದಲ್ಲಿ ರಾಷ್ಟ್ರದೇವೋಭವ ನಡೆಯಿತು.

 

LEAVE A REPLY

Please enter your comment!
Please enter your name here