Home ಧಾರ್ಮಿಕ ಸುದ್ದಿ ವೃಂದಾವನವೇ ಮಂದಿರವಾಗಿಹ ಇಂದಿರೆ ಶ್ರೀ ತುಳಸಿ

ವೃಂದಾವನವೇ ಮಂದಿರವಾಗಿಹ ಇಂದಿರೆ ಶ್ರೀ ತುಳಸಿ

ನ.9: ಉತ್ಥಾನ ದ್ವಾದಶಿಯಂದು ತುಳಸೀ ಪೂಜೆ

2294
0
SHARE

ಹಿಂದೂ ಧರ್ಮೀಯರ ಮನೆಯಂಗಳದಲ್ಲಿ ತುಳಸೀ ಕಟ್ಟೆ ಇರಲೇಬೇಕು. “ತುಳಸೀ ವೃಂದಾವನ’ ಇಲ್ಲದ ಮನೆ ಇಲ್ಲವೆಂದೇ ಹೇಳಬಹುದು. ಪ್ರತಿ ನಿತ್ಯ ಮಹಿಳೆಯರು ತುಳಸೀ ಪೂಜೆ ಮಾಡಿ ತುಳಸೀಯೊಂದಿಗೆ ಶ್ರೀ ಮಹಾವಿಷ್ಣುವಿನ ಅನುಗ್ರಹಕ್ಕೆ ಪಾತ್ರರಾಗುತ್ತಾರೆ. ತುಳಸೀ ದೇವಿಯ ಪ್ರದಕ್ಷಿಣೆ ಮಾಡುವಾಗ ಈ ಶ್ಲೋಕ ಪಠಿಸಬೇಕು.

ಯನ್ಮೂಲೇ ಸರ್ವತೀರ್ಥಾನಿ,
ಯನ್ಮಧ್ಯೇ ಸರ್ವದೇವತಾ||
ಯದಗ್ರೇ ಸರ್ವ ವೇದಾಶ್ಚ ತುಳಸಿ ತ್ವಾಂ ನಮಾಮ್ಯಹಮ್‌||
ತುಳಸೀಯ ಜನನದೇವತೆಗಳು, ದೈತ್ಯರು ಸೇರಿ ಸಮುದ್ರ ಮಥನ (ಕ್ಷೀರ ಸಮುದ್ರ) ಮಾಡಿದಾಗ ಕಾಮಧೇನು-ಕಲ್ಪವೃಕ್ಷ-ಹೀಗೆ ಹದಿನಾಲ್ಕು ಅಮೂಲ್ಯವಾದ ರತ್ನಗಳು ಬರುತ್ತವೆ. ಅನಂತರ ವಿಶಿಷ್ಟವಾದ “ಅಮೃತಕಲಶ’ ಹೊರ ಹೊಮ್ಮುತ್ತದೆ. ಶ್ರೀ ಮನ್ನಾರಾಯಣ ಇದನ್ನು ಕೈಯಲ್ಲಿ ಹಿಡಿದುಕೊಂಡು ಒಮ್ಮೆ ತನ್ನ ದಿವ್ಯ ದೃಷ್ಟಿ ಬಿಟ್ಟಾಗ ಆತನ ಕಣ್ಣುಗಳಿಂದ ಬಂದ “ಆನಂದಬಾಷ್ಪ’ದ ಹನಿಯು ಅಮೃತಕಲಶದೊಳಗೆ ಬಿತ್ತು. ಭಗವಂತನ “ಹನಿ’ಯಿಂದ ಒಂದು ಪುಟ್ಟ ಸಸ್ಯ ಜನಿಸಿತು. ಈ ಸಸ್ಯವನ್ನು ಹೋಲುವ ಇನ್ನೊಂದು ಗಿಡ ಜಗತ್ತಿನಲ್ಲಿ ಎಲ್ಲಿಯೂ ಇರಲು ಸಾಧ್ಯವಿಲ್ಲ. ಅಂದರೆ ಇದಕ್ಕೆ ತುಲನೆ ಅಥವಾ ಹೋಲಿಕೆ ಮಾಡಲು ಅಸಾಧ್ಯವಾದ ಗಿಡ ಇದು ಹಾಗಾಗಿ “ತುಳಸೀ’ ಎಂದು ಪರಮಾತ್ಮ ಕರೆದ. ಶ್ರೀ ಮಹಾವಿಷ್ಣು (ಶ್ರೀಮನ್ನಾರಾಯಣ) ಮಹಾಲಕ್ಷ್ಮೀ ಜತೆ ತುಳಸೀಯನ್ನು ಮದುವೆಯಾದ ಬಗ್ಗೆ “ಸ್ಕಂದ ಪುರಾಣ’ ಹಾಗೂ “ವಿಷ್ಣುಪುರಾಣ’ದಲ್ಲಿ ತಿಳಿಸಲಾಗಿದೆ. ಕ್ಷೀರ ಸಮುದ್ರದಲ್ಲಿ ತುಳಸೀ ಜನಿಸಿದ ಕಾರಣ “ಅಮೃತ ಸದೃಶ’ವಾದ ಗೋಮಾತೆಯ ಹಾಲಿನಿಂದ ತುಳಸೀಯನ್ನು ಪೂಜಿಸಿದರೆ ವಿಶೇಷ ಪುಣ್ಯ ಪ್ರಾಪ್ತವಾಗಲಿದೆ.

ಉತ್ಥಾನ ದ್ವಾದಶಿ
ತುಳಸೀ ಪೂಜೆ ನಿತ್ಯ ಮಾಡಿ, ಕಾರ್ತಿಕ ಮಾಸದ ಹನ್ನೆರಡನೆಯ ದಿನ ‘ಉತ್ಥಾನ ದ್ವಾದಶೀ’ ಯಂದು ನೆಲ್ಲಿಯ ಕೊಂಬೆಯನ್ನು ತುಳಸೀ ಜತೆ ಇಟ್ಟು ಪೂಜಿಸುವುದು. ಪ್ರಾತಃ ಕಾಲದ ಪೂಜೆಯಲ್ಲಿ ಉದ್ದಿನ ದೋಸೆ, ನೆಲ್ಲಿಕಾಯಿಯ ಚಟ್ನಿ ನೈವೇದ್ಯಕ್ಕೆ, ನೆಲ್ಲಿಕಾಯಿಯ ಮೇಲ್ಭಾಗ ಕೆತ್ತಿ ಹತ್ತಿಯ ಹೂವಿನ ಬತ್ತಿಯನ್ನು ತುಪ್ಪದಲ್ಲಿ ನೆನೆಸಿ ದೀಪ ಬೆಳಗಿಸುವುದು ಮತ್ತು ಆರತಿ ಬೆಳಗುವುದು. ಸಂಜೆ ತುಳಸೀ ಸಂಕೀರ್ತನೆ, ಭಜನೆ, ನೈವೇದ್ಯಕ್ಕೆ ಅವಲಕ್ಕಿ ವಿವಿಧ ಬಗೆಯ ಹಣ್ಣುಗಳು, ತೆಂಗಿನಕಾಯಿ, ತುಳಸೀಯೊಂದಿಗೆ ಇರಿಸಿದ್ದ ‘ನೆಲ್ಲಿಕೊಂಬೆ’ ಅಂದರೆ ಸಾಕ್ಷಾತ್‌ ಮಹಾವಿಷ್ಣುವೇ ಆಗಿರುವುದರಿಂದ ತುಳಸೀ ಜತೆ ನೆಲ್ಲಿಕೊಂಬೆಗೆ ವಿವಾಹ ಮಾಡಿಸುವುದು, ಇದನ್ನು “ತುಳಸೀ ಕಲ್ಯಾಣ’ ಎಂದು ಶ್ರದ್ಧಾಪೂರ್ವಕವಾಗಿ ಮಾಡುವುದು. ಈ ಕಾರ್ತಿಕ ಮಾಸವಿಡಿ ಶ್ರೀ ಮಹಾವಿಷ್ಣು “ದಾಮೋದರ’ನಾಗಿ ತುಳಸೀಯೊಂದಿಗೆ ನೆಲೆಸಿ ಭಕ್ತರಿಗೆ ಅನುಗ್ರಹಿಸುವನು ಎಂಬುದು ಪುರಾಣಗಳಲ್ಲಿ ಉಲ್ಲೇಖ.ತುಳಸೀಕಟ್ಟೆ ಇರುವ ಮನೆಯನ್ನು “ತೀರ್ಥಕ್ಷೇತ್ರ’ಕ್ಕೆ ಹೋಲಿಸುತ್ತಾರೆ. ಇಂತಹ ಮನೆಗಳಿಗೆ ಚೋರ ಭಯ, ಮೃತ್ಯು ಭಯವಿರುವುದಿಲ್ಲ. ತುಳಸೀಯಲ್ಲಿ ಸಕಲದೇವತೆಗಳ ಸಾನ್ನಿಧ್ಯವಿರುತ್ತದೆ. ತುಳಸೀಯನ್ನು ಪೂಜಿಸಿದವರಿಗೆ ಇಹದಲ್ಲಿ ಸುಖ, ಸಂಪತ್ತು, ನೆಮ್ಮದಿ, ಸಕಲ ಇಷ್ಟಾರ್ಥ ಲಭಿಸುತ್ತದೆ.

ಸತ್ಯಭಾಮೆಯ ಸೊಕ್ಕಡಗಿಸಿದ ಕತೆ
ಒಮ್ಮೆ ಸತ್ಯಭಾಮೆ ತನ್ನ ಪ್ರತಿಷ್ಠೆಗಾಗಿ “ಅಹಂಕಾರ’ ದೊಂದಿಗೆ ಭಗವಂತ (ಶ್ರೀಕೃಷ್ಣನಿಗೆ) ತುಲಾಭಾರ ಮಾಡುವುದಾಗಿ ತೀರ್ಮಾನಿಸಿ ಅದರಂತೆ ಒಂದು ತಕ್ಕಡಿ ಯಲ್ಲಿ ಭಗವಂತ ಇನ್ನೊಂದರಲ್ಲಿ ಚಿನ್ನಾಭರಣ, ವಜ್ರ ವೈಢೂರ್ಯಗಳು ಹಾಕಿ ಎಷ್ಟೇ ಆಭರಣ ಹಾಕಿದರೂ ತಕ್ಕಡಿ ಮೇಲೇಳದಂತಾಯಿತು. ಸತ್ಯಭಾಮೆ ಚಿಂತಿತಳಾಗುತ್ತಾಳೆ. ಪರಮಾತ್ಮ ನಗುತ್ತಾ ತಕ್ಕಡಿಯಲ್ಲಿ ಕುಳಿತು ನೋಡುತ್ತಿದ್ದಾನೆ. ಆಗ ದೇವಿ ರುಕ್ಮಿಣಿ ನಿಂತು ನೋಡಿ ಮನದಲ್ಲಿ ಶ್ರೀ ಕೃಷ್ಣನನ್ನು ಸ್ಮರಿಸುತ್ತಾ ಒಂದು ದಳ ತುಳಸೀ ಆ ಆಭರಣದ ತಕ್ಕಡಿಗೆ ಇರಿಸಿ ತಕ್ಕಡಿಗೆ ಹಾಕುತ್ತಾಳೆ. ತಕ್ಕಡಿ ಮೇಲೆದ್ದು ತೂಗಿತು. ಈ ಘಟನೆಯಿಂದ ಲೋಕಕ್ಕೆ ಒಂದು ವಿಶೇಷ ಸಂದೇಶ ತಲುಪಿತು. ಪರಮಾತ್ಮ ಧನ ಕನಕಗಳಿಗೆ ಎಂದೂ ಒಲಿಯುವುದಿಲ್ಲ. ಆತ ಭಕ್ತಿಗೆ ಮಾತ್ರ ಮೆಚ್ಚುತ್ತಾನೆ ಎಂಬ ಅಂಶ ಜಗತ್ತಿಗೆ ತಿಳಿದಂತಾಯಿತು. ಜತೆಯಲ್ಲಿ ಸತ್ಯಭಾಮೆಯ “ಅಹಂ’ ಮುರಿಯಿತು. ದೇವಿ ರುಕ್ಮಿಣಿಯ ಭಕ್ತಿಯೊಂದಿಗೆ ತುಳಸೀಯ ಮಹತ್ವ ಪ್ರಪಂಚಕ್ಕೆ ತಿಳಿಯುವಂತಾಯಿತು.

ಶ್ರೀಮನ್ನಾರಾಯಣ ತನ್ನ ಪೂಜೆಯಲ್ಲಿ ತುಳಸೀಗೆ ಅಗ್ರಸ್ಥಾನ ನೀಡಿ ಅನುಗ್ರಹಿಸಿದ. ಭಗವಂತ ಏನನ್ನೂ ಬಯಸುವುದಿಲ್ಲ. ಭಕ್ತರ ಭಕ್ತಿಗೆ ‘ಒಂದು ದಳ ತುಳಸೀ’ಗೆ ಒಲಿದು ಅನುಗ್ರಹಿಸುತ್ತಾನೆ. ಅಂತಹ ಮಹಿಮೆಯುಳ್ಳ ತುಳಸೀಯನ್ನು ಪ್ರತಿನಿತ್ಯ ಭಕ್ತಿ ಶ್ರದ್ಧೆಯಿಂದ ಪೂಜಿಸುವು ದರೊಂದಿಗೆ ಕಾರ್ತಿಕ ಮಾಸವಿಡೀ ಪೂಜಿಸಿ “ಉತ್ಥಾನ ದ್ವಾದಶೀ’ಯಂದು ವಿಶೇಷವಾಗಿ ಪೂಜಿಸಿದರೆ ಜಗದೊಡೆಯನಾದ ಶ್ರೀಮನ್ನಾರಾಯಣನ (ಶ್ರೀ ಹರಿ-ಶ್ರೀ ಮಹಾವಿಷ್ಣು) ಪೂರ್ಣಾನುಗ್ರಹ ಪ್ರಾಪ್ತಿಯಾಗು ವುದೆಂಬುದು ನಂಬಿಕೆ.

 ವೈ. ಎನ್‌. ವೆಂಕಟೇಶಮೂರ್ತಿ ಭಟ್ಟರು
ಪ್ರಧಾನ ಅರ್ಚಕರು, ಶ್ರೀ ಮುಖ್ಯಪ್ರಾಣ ದೇವಸ್ಥಾನ, ದೊಡ್ಮನೆಬೆಟ್ಟು ಕೋಟೇಶ್ವರ.

LEAVE A REPLY

Please enter your comment!
Please enter your name here