Home ನಂಬಿಕೆ ಸುತ್ತಮುತ್ತ ತುಲಸಿ ತ್ವಾಂ ನಮಾಮ್ಯಹಮ್

ತುಲಸಿ ತ್ವಾಂ ನಮಾಮ್ಯಹಮ್

943
0
SHARE

ಪ್ರಕೃತಿಯೇ ದೇವರು; ಪ್ರಕೃತಿಯಲ್ಲಿನ ಎಲ್ಲಾ ಸಂಪತ್ತುಗಳೂ ದೇವರೇ. ಅಂತಹದ್ದರಲ್ಲಿ ಭಾರತೀಯರು ಶ್ರೇಷ್ಠಸಸ್ಯವೆಂದು ಪೂಜಿಸುವ, ಪೂಜೆಗಾಗಿ ಉಪಯೋಗಿಸುವ ತುಲಸಿ ಅಥವಾ ತುಳಸಿಗಿಡವೂ ಒಂದು. ವಿಶಿಷ್ಟವಾದ ಸುವಾಸನೆ ಮತ್ತು ಔಷಧೀಯ ಶಕ್ತಿಯಿಂದಾಗಿ ಸಂಜೀವಿನಿ ಎಂದೇ ಕರೆಯಿಸಿಕೊಂಡಿರುವ ಈ ಗಿಡವು ದೈವತ್ವವನ್ನೂ ಹೊಂದಿರುವ ಸಸ್ಯವಾಗಿದೆ. ಹಿಂದೂಗಳ ಮನೆಯಂಗಳದಲ್ಲಿ ಕಟ್ಟೆಯೊಂದರಲ್ಲಿ ಇದನ್ನು ಬೆಳೆಸಿ, ಪೂಜಿಸುವ ಪದ್ಧತಿ ಅನಾದಿಕಾಲದಿಂದಲೂ ಇದ್ದು, ತುಲಸಿಕಟ್ಟೆಯಿರುವ ಮನೆಗಳು ಹಿಂದೂಗಳ ಮನೆ ಎಂಬ ಸೂಚಕವೂ ಆಗಿದೆ. ಶ್ರೀಹರಿಯನ್ನು ತುಲಸೀದಳಗಳಿಂದ ಪೂಜಿಸಿದರೆ ಸದ್ಗತಿ ದೊರೆಯುತ್ತದೆ ಮತ್ತು ತುಲಸಿ ಎಲೆಗಳನ್ನು ನೀರಿಗೆ ಹಾಕಿ ಆ ನೀರಿನಿಂದ ಸ್ನಾನ ಮಾಡಿದರೆ ಆರೋಗ್ಯವು ವೃದ್ಧಿಸುತ್ತದೆ ಎಂಬುದನ್ನು ಪುರಾಣಗಳು ಹೇಳುತ್ತವೆ. ತುಲಸಿಯು ಪ್ರಕೃತಿಯಲ್ಲಿ ಆಮ್ಲಜನಕವನ್ನು ಹೆಚ್ಚಾಗಿ ಉತ್ಪಾದಿಸುವ ಸಸ್ಯಗಳಲ್ಲಿ ಒಂದಾಗಿದ್ದು, ಕೀಟಾಣುಗಳನ್ನು ನಮ್ಮಿಂದ ದೂರವಿಡುವುದರಿಂದ ವೈಜ್ಞಾನಿಕವಾಗಿಯೂ ಇದು ಹೆಚ್ಚಿನ ಪ್ರಾಮುಖ್ಯತೆಯನ್ನು ಪಡೆದಿದೆ.

ತುಲಸಿಯ ಜನ್ಮದ ಬಗೆಗೆ ಹಲವಾರು ಕಥೆಗಳಿವೆ. ಶಿವಪುರಾಣ, ದೇವೀಭಾಗವತ, ಗಣೇಶಪುರಾಣ, ಸ್ಕಂದಪುರಾಣ ಮೊದಲಾದ ಪುರಾಣಗಳಲ್ಲಿ ಭಿನ್ನ-ಭಿನ್ನವಾದ ಕಥೆಗಳು ತುಲಸಿಯ ಜನ್ಮವನ್ನು ಹೇಳುತ್ತವೆ. ಒಂದು ಕಥೆ ಈ ರೀತಿ ಇದೆ; ದೇವ-ದಾನವರು ಸೇರಿ ಸಮುದ್ರಮಥನ ಮಾಡುವಾಗ ಎಲ್ಲ ಸುಭೋಗವಸ್ತುಗಳು ಸಿಕ್ಕಿದ ಬಳಿಕ ಕೊನೆಯಲ್ಲಿ ಚಿರಂಜೀವಿಯಾಗಿಸುವಂತಹ ಅಮೃತವು ದೊರೆಯುತ್ತದೆ. ಇದರಿಂದ ದೇವತೆಗಳಿಗೆ ಒಳಿತಾಗುವುದನ್ನು ಗ್ರಹಿಸಿದ ವಿಷ್ಣುವಿನ ಕಣ್ಣಲ್ಲಿ ಆನಂದಭಾಷ್ಪವು ಉಕ್ಕಿ, ಅವನ ಕೈಯಲ್ಲಿದ್ದ ಈ ಅಮೃತದ ಕಲಶದೊಳಗೆ ಬಿತ್ತು. ಆಗ ಅದರಿಂದ ಸರ್ವಸುಂದರಿಯೂ ಸುಲಕ್ಷಣಳೂ ಆದ, ಯಾರಿಗೂ ಹೊಲಿಸಲಾಗದ ಕನ್ಯೆಯ ಜನನವಾಯಿತು. ಇವಳು ಅತುಲ್ಯೆಯಾದ ಕಾರಣ ತುಲಸೀ ಎಂದೇ ಕರೆದರು. ದೇವತೆಗಳೆಲ್ಲರೂ ಸೇರಿ ಈಕೆಯನ್ನು ವಿಷ್ಣುವಿಗೇ ಸಮರ್ಪಿಸಿದರು. ವಿಷ್ಣುವು ಈಕೆಯನ್ನು ಪತ್ನಿಯಾಗಿ ಪರಿಗ್ರಹಿಸಿದ. ಈಕೆ ಹರಿಪ್ರಿಯೆ ಎಂದೂ ಪ್ರಖ್ಯಾತಳಾದಳು. ಶಿವಪುರಾಣದಲ್ಲಿ ಜಲಂದರ ಮತ್ತು ವೃಂದೆಯ ಕಥೆಯನ್ನು ಹೇಳಲಾಗಿದೆ. ದೇವೀಭಾಗವತದಲ್ಲಿ ಶಂಖಚೂಡನನ್ನು ವರಿಸುವ ತುಲಸಿ ನಂತರ ತನ್ನ ಗಂಡನ ವಧೆಗೆ ಕಾರಣವಾಗುವ ವಿಷ್ಣುವನ್ನು ತನ್ನ ತಪಸ್ಸಿನ ಶಕ್ತಿಯಿಂದ ಭೂಲೋಕದಲ್ಲಿ ಪಾಷಾಣವಾಗುವಂತೆ ಶಪಿಸುತ್ತಾಳೆ. ವಿಷ್ಣುವು ಇವಳ ತಪಸ್ಸು ಮತ್ತು ನಿಷ್ಠೆಗೆ ಮೆಚ್ಚಿ ಗಂಡಕೀ ಎಂಬ ನದಿಯಾಗುವಂತೆಯೂ ಪೂಜೆಗಳಿಗಾಗಿ ಪವಿತ್ರ ತುಳಸಿಯ ಗಿಡವಾಗುವಂತೆಯೂ ಹರಸುತ್ತಾನೆ. ಇಂದಿಗೂ ತುಳಸಿಯಿಲ್ಲದೆ ಪೂಜಾ ಕಾರ್ಯ ಸಂಪೂರ್ಣವಾಗುವುದಿಲ್ಲ. ಮರಣಕಾಲದಲ್ಲಿ ತುಲಸೀಜಲಪಾನದಿಂದ ವೈಕುಂಠ ಪ್ರಾಪ್ತಿಯಾಗುತ್ತದೆಂಬ ನಂಬಿಕೆ ಈಗಲೂ ಇದೆ.

ಕಾರ್ತಿಕಮಾಸದಲ್ಲಿ ತುಳಸಿಪೂಜೆಗೆ ಹೆಚ್ಚಿನ ಮಹತ್ತ್ವವಿದೆ. ಕಾರ್ತಿಕ ಶುಕ್ಲ ಹನ್ನೆರಡನೆಯ ದಿನ ಅಂದರೆ ಉತ್ಥಾನದ್ವಾದಶಿ ಎಂದೇ ಹೆಸರಾಗಿರುವ ದ್ವಾದಶಿಯ ದಿನ ಸಂಜೆ ವಿಶೇಷವಾಗಿ ತುಳಸಿಯನ್ನು ಪೂಜಿಸಲಾಗುತ್ತದೆ. ಹೂವುಗಳಿಂದ ಅಲಂಕರಿಸಿ, ಹಣತೆಯ ದೀಪಗಳನ್ನಿಟ್ಟು, ನೈವೇದ್ಯಗಳನ್ನು ಸಮರ್ಪಿಸಿ ಪೂಜೆ ಮಾಡುವ ಕ್ರಮವಿದೆ. ಕೆಲವೆಡೆ ತುಲಸಿಯ ಜೊತೆಗೆ ಕೃಷ್ಣನ ವಿಗ್ರಹವನ್ನೂ ಇರಿಸಿ ತುಲಸೀ ವಿವಾಹ ಮಹೋತ್ಸವನ್ನೂ ಆಚರಿಸುವ ಕ್ರಮವಿದೆ.

ಮನುಷ್ಯನ ಆರೋಗ್ಯವನ್ನು ಕಾಪಾಡುವ ಗಿಡಗಳು ದೇವರ ಸ್ವರೂಪದಲ್ಲಿ ನಮ್ಮ ಹತ್ತಿರವೇ ಇರಬೇಕು, ಪ್ರಕೃತಿಯನ್ನು ಶುದ್ಧವಾಗಿರಿಸುವ ಇಂತಹ ಗಿಡಗಳನ್ನು ನಾವು ಹೆಚ್ಚೆಚ್ಚು ಬೆಳೆಸಿ, ಉಳಿಸಬೇಕು ಎಂಬುದು ಇದರ ಮೂಲ ಉದ್ದೇಶವಾಗಿದೆ. ಇಂತಹ ಗಿಡಗಳೆಲ್ಲವೂ ಸದಾ ಪೂಜಾರ್ಹ ಮತ್ತು ವಂದನಾರ್ಹ.

||ಸರಳವಾಗಿ ಯೋಚಿಸಿ-ಸಂಸ್ಕಾರಯುತರಾಗಿ-ಸರಳರಾಗಿ ಜೀವಿಸಿ||

ವಿಷ್ಣು ಭಟ್ಟ ಹೊಸ್ಮನೆ.(ಭಾಸ್ವ)

LEAVE A REPLY

Please enter your comment!
Please enter your name here