Home ನಂಬಿಕೆ ಸುತ್ತಮುತ್ತ ಪ್ರವಾಸಿಗರ ತಾಣ; ಜಗತ್ತಿನ ಅತೀ ಎತ್ತರ ಪ್ರದೇಶದ ಚರ್ಚ್ ಎಲ್ಲಿದೆ ಗೊತ್ತಾ?

ಪ್ರವಾಸಿಗರ ತಾಣ; ಜಗತ್ತಿನ ಅತೀ ಎತ್ತರ ಪ್ರದೇಶದ ಚರ್ಚ್ ಎಲ್ಲಿದೆ ಗೊತ್ತಾ?

3623
0
SHARE

ಜಗತ್ತಿನಲ್ಲಿ ಅತಿ ಎತ್ತರದ ಪ್ರದೇಶದಲ್ಲಿರುವ ಚರ್ಚ್ ಯಾವುದು ಎಂದು ಪ್ರಶ್ನಿಸಿದರೆ, ಜಾರ್ಜಿಯಾ ದೇಶದ ಕಡೆಗೆ ಬೆಟ್ಟು ಮಾಡಿ ತೋರಿಸುತ್ತೇವೆ. 2170 ಮೀಟರ್ ಎತ್ತರವಿರುವ ಮೌಂಟ್ ಕಾಜ್ಬೆಕಿ ಅಥವಾ ಕಾಕ್ ಸನ್ ಪರ್ವತದ ಮೇಲಿರುವ ಈ ಆರು ಶತಮಾನಗಳಿಗಿಂತ ಹಿಂದಿನ ವಾಸ್ತು ರಚನೆ, ಇಂದು ಅಸಂಖ್ಯಾತ ಪ್ರವಾಸಿಗಳನ್ನು ಕಡಿದಾದ ಹಾದಿಯಲ್ಲಿ ಅಲ್ಲಿಗೆ ಕರೆದೊಯ್ಯುತ್ತದೆ.

ಆ ಕಾಲದ ಸಾಂಪ್ರದಾಯಿಕ ಕಟ್ಟಡ ರಚನೆಯ ವಿನ್ಯಾಸಕ್ಕೆ ಮಾದರಿಯಾಗಿರುವ ಈ ಅಪೂರ್ವ ವಾಸ್ತು ಸೌಂದರ್ಯದ ಚರ್ಚ್ ಇರುವುದು ಜಾರ್ಜಿಯಾದಿಂದ ಸೋವಿಯೆತ್ ರಶ್ಯದ ಕಡೆಗೆ ಸಾಗುವ ಹಾದಿಯಲ್ಲಿ ಸಿಗುವ ಸ್ಟೆಫಾಂಟ್ಮಿಂಡಾ ಪಟ್ಟಣದ ಹೊರಗಿರುವ ಗರ್ಜಿಗಿಯಾ ಗ್ರಾಮದಲ್ಲಿ.

ಜಾರ್ಜಿಯನ್ ಭಾಷೆಯಲ್ಲಿ ‘ಕಾಜ್ಬೆಕಿ’ ಎಂದರೆ ಸಿಹಿ ಎಂದರ್ಥ. ‘ಕಾಕ್ ಸನ್’ ಎಂದರೆ ಹಿಮನದಿ. ಸಿಹಿಯಾದ ಹಿಮನದಿ ಎನ್ನುವ ಅನ್ವರ್ಥನಾಮ ಹೊಂದಿರುವ ಮಂಜು ಮುಸುಕಿದ ಪರ್ವತದ ಹಿನ್ನೆಲೆಯಲ್ಲಿ ಹರಡಿರುವ ಹಸಿರಿನ ಕಾಡಿನಿಂದಾಗಿ ಅದರ ನಯನ ಮನೋಹರ ಚೆಲುವು ಎದ್ದು ಕಾಣುತ್ತದೆ. ನಿರ್ಮಾನುಷವಾದ ಕಾಡಿನ ನಡುವೆ ಇರುವ ಪರ್ವತದ ತುತ್ತ ತುದಿಯಲ್ಲಿ ಇಂಥ ಚರ್ಚ್ ಯಾಕೆ ನಿರ್ಮಾಣವಾಯಿತೆಂಬ ಬಗೆಗೆ ನಿಖರ ಕಾರಣಗಳಿಲ್ಲ. 14ನೆಯ ಶತಮಾನದಲ್ಲಿ ಪರ್ಶಿಯನ್ ದಾಳಿಕೋರರ ಕಾಟದಿಂದ ಕ್ರಿಶ್ಚಿಯನ್ ಧಾರ್ಮಿಕ ಕೇಂದ್ರಗಳು ಹಾನಿ ಅನುಭವಿಸುವ ಪರಿಸ್ಥಿಯಿತ್ತು. ಹೀಗಾಗಿ ಸುಲಭವಾಗಿ ಬರಲು ಸಾಧ್ಯವಾಗದ ಕಠಿಣ ಹಾದಿಯಿರುವ ಸ್ಥಳದಲ್ಲಿ ಇದನ್ನು ಕಟ್ಟಿರಬಹುದು ಎಂದು ಊಹಿಸಲಾಗಿದೆ.

ಶಿಥಿಲವಾಗದ ಘಂಟಾಗೋಪುರ

ಜನಪದ ಕತೆಯ ಪ್ರಕಾರ ಅಮಿರಾನಿ ಎಂಬ ಧರ್ಮಾಂಧನಾದ ಜನನಾಯಕನೊಬ್ಬನಿದ್ದ. ಅವನು ದೇವರ ಕೈಯಲ್ಲಿದ್ದ ಬೆಂಕಿಯನ್ನು ಅಪಹರಿಸಿ ತಂದು ತನ್ನ ಪ್ರಜೆಗಳಿಗೆ ಕೊಡುಗೆಯಾಗಿ ನೀಡಿದ. ಇದರಿಂದ ಕುಪಿತರಾದ ದೇವತೆಗಳಿಂದ ಶಿಕ್ಷೆಯಾಗಬಹುದೆಂದು ಭಯಗೊಂಡ. ದೇವರ ಸಂಪ್ರೀತಿಗಾಗಿ ದೇವತೆಗಳಿಂದ ಶಿಕ್ಷೆಯಾಗಬಹುದೆಂದು ಭಯಗೊಂಡ. ದೇವರ ಸಂಪ್ರೀತಿಗಾಗಿ ಇಲ್ಲೊಂದು ಪ್ರಾರ್ಥನಾ ಕೇಂದ್ರವನ್ನು ನಿರ್ಮಿಸಿದ ಎನ್ನುತ್ತಾರೆ ಸ್ಥಳಿಯರು. ಲಭ್ಯವಿರುವ ಕಾಡಿನ ಕಲ್ಲುಗಳು ಮತ್ತು ಗಾರೆಯ ಕೆಲಸಕ್ಕೆ ಸುಣ್ಣವನ್ನು ಬಳಸಿ ಗೋಡೆಗಳನ್ನು ಕಟ್ಟಿದ್ದರೂ ಅವು ಇಂದಿಗೂ ಅತ್ಯಂತ ದೃಢವಾಗಿವೆ. ಇದರ ಮುಂದಿರುವ ಎತ್ತರವಾದ ಘಂಟೆಯ ಗೋಪುರ ಕೂಡ ಶಿಥಿಲವಾಗದೆ ಉಳಿದುಕೊಂಡಿದೆ.

18ನೆಯ ಶತಮಾನದಲ್ಲಿ ಜಾರ್ಜಿಯಾ, ಪರ್ಶಿಯನ್ನರ ತೀವ್ರ ದಾಳಿಗೊಳಗಾಯಿತು. ಆಗ ಅವರ ಧರ್ಮಕ್ಕೆ ಸಂಬಂಧಿಸಿದ ಸಂತ ನಿಕೋಸನ ಕ್ರಾಸ್ ಸೇರಿದಂತೆ ಹಲವಾರು ಅಮೂಲ್ಯವಾದ ವಸ್ತು ವಿಶೇಷಗಳನ್ನು ಮಿಟ್ಸ್ಯೇಟಾದಿಂದ ತಂದು ಇದೇ ಚರ್ಚಿನಲ್ಲಿ ಸುರಕ್ಷಿತವಾಗಿ ಜೋಪಾನ ಮಾಡಲಾಗಿತ್ತು. 20ನೆಯ ಶತಮಾನದ ಸೋವಿಯೆತ್ ಯುಗದಲ್ಲಿ ಎಲ್ಲ ಧಾರ್ಮಿಕ ಕೇಂದ್ರಗಳನ್ನು ನಿಷೇಧಿಸಲಾಯಿತು. ಆಗ ಇಲ್ಲಿ ನಡೆಯುತ್ತಿದ್ದ ಪ್ರಾರ್ಥನೆ ಮತ್ತಿತ್ತರ ವಿಧಿಗಳು ಪೂರ್ಣವಾಗಿ ನಿಂತುಹೋದವು. 1990ರ ದಶಕದಲ್ಲಿ ಚರ್ಚಿನ ಚಟುವಟಿಕೆಗಳು ಪುನರಾರಂಭವಾದವು.

ಈಗ ಇದೊಂದು ಜನಪ್ರಿಯವಾಗಿರುವ ಪ್ರವಾಸಿ ತಾಣ. ದುರ್ಗಮವಾದ ಹಾದಿಯಲ್ಲಿ ಚಾರಣ ಮಾಡುತ್ತ, ಅಲ್ಲಿಗೆ ಕರೆದೊಯ್ಯುವ ಟ್ಯಾಕ್ಸಿ ಸೌಲಭ್ಯವೂ ಇದೆ. ಜಾರ್ಚಿಯಾದ ಉತ್ತರ ಭಾಗದಲ್ಲಿ ಗುಮ್ಮಟವಿರುವ ಏಕೈಕ ಚರ್ಚು ಇದೆಂಬ ಹೆಗ್ಗಳಿಕೆಯೂ ಇದೆ. ಇದರ ಒಳಭಾಗದ ಛಾಯಾಚಿತ್ರಗಳನ್ನು ತೆಗೆಯಲು ನಿರ್ಬಂಧವಿದೆ. ಗೋಡೆಯಲ್ಲಿ ಕಿಟಕಿಗಳಿದ್ದರೂ ಗೋಪ್ಯ ಕಾಪಾಡುವ ದೃಷ್ಟಿಯಿಂದ ಒಳಗೆ ಬೆಳಕು ಬಾರದಂತೆ ಮುಚ್ಚಲಾಗಿದೆ.

LEAVE A REPLY

Please enter your comment!
Please enter your name here