Home ಧಾರ್ಮಿಕ ಸುದ್ದಿ ನಾಳೆಯಿಂದ ಮಣಿಕ್ಕಾರ ಪಾಲ್ತಾಡು ವಿಷ್ಣುಮೂರ್ತಿ ದೇಗುಲದ ಬ್ರಹ್ಮಕಲಶ

ನಾಳೆಯಿಂದ ಮಣಿಕ್ಕಾರ ಪಾಲ್ತಾಡು ವಿಷ್ಣುಮೂರ್ತಿ ದೇಗುಲದ ಬ್ರಹ್ಮಕಲಶ

1273
0
SHARE

ಸವಣೂರು : ಕೊಳ್ತಿಗೆ ಗ್ರಾಮದ ಮಣಿಕ್ಕಾರ, ಪಾಲ್ತಾಡು ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಜೀರ್ಣೋದ್ಧಾರಗೊಂಡಿದ್ದು, ಡಿ. 23ರಿಂದ 28ರ ವರೆಗೆ ನವೀಕರಣ ಪುನಃಪ್ರತಿಷ್ಠಾಷ್ಟಬಂದ ಬ್ರಹ್ಮಕಲಶೋತ್ಸವ, ನಾಗಪ್ರತಿಷ್ಠೆ ಹಾಗೂ ದೈವಗಳ ಪ್ರತಿಷ್ಠೆ ಮತ್ತು ಅಶ್ವತೊಪನಯನ ನಡೆಯಲಿದೆ.

ಪಾಲ್ತಾಡುಗುತ್ತಿನ ಜೈನ ಬಲ್ಲಾಳ ಮನೆತನದ ಅಚ್ಚು – ಮೆಚ್ಚು ಎಂಬ ಸಹೋದರಿಯರು ಪೆರುವಾಜೆಯ ಜಲದುರ್ಗಾ ದೇವಸ್ಥಾನಕ್ಕೆ ಪೂಜೆಗೆ ತೆರಳುತ್ತಿದ್ದರು. ಒಂದು ಸಲ ದೇವಿಯ ದರ್ಶನವಾಗದೆ, ಪೂಜೆ-ಪುನಸ್ಕಾರಗಳನ್ನು ಮಾಡಿಸದೆ ಮರಳ ಬೇಕಾಯಿತು. ಇದರಿಂದ ಮನನೊಂದು ದೇವಾಲಯ ಕಟ್ಟುವ ಸಂಕಲ್ಪ ಕೈಗೊಂಡರು. ದೀಕ್ಷೆಯಂತೆ ಕಾರ್ಯ ಮುಗಿಸಿ, ದೇವರನ್ನು ಪ್ರತಿಷ್ಠಾಪಿಸಿದರು ಎಂದು ಪ್ರತೀತಿ. ಈ ದೇವಸ್ಥಾನ ಕಟ್ಟುವ ವೆಚ್ಚ ಭರಿಸಲು ಕರಿಮಣಿ ಸರವನ್ನೇ ಕರಗಿಸಿದ್ದರಿಂದ ಮಣಿ ಕರಾಯಿನ ಊರು ಮಣಿಕ್ಕಾರ ಆಗಿದೆ ಎಂಬ ಸ್ಥಳ ಪುರಾಣ ಇದೆ.

ಇಲ್ಲಿನ ಆರಾಧ್ಯ ದೈವಗಳು
ಶ್ರೀ ವಿಷ್ಣುಮೂರ್ತಿ ದೇವರ ಕ್ಷೇತ್ರದಲ್ಲಿ ಹಲವು ದೈವಗಳ ಆರಾಧನೆಯೂ ಆಗುತ್ತಿದೆ. ಅವುಗಳಲ್ಲಿ ಉಳ್ಳಾಕುಲು ದೈವ, ಮಹಿಷಂತಾಯ ದೈವ, ಹುಲಿಭೂತ, ರಕ್ತೇಶ್ವರಿ, ವಾರಾಹಿ ಮತ್ತು ಗುಳಿಗ ದೈವಗಳ ಆರಾಧನೆ ಇರುವುದು. ದೇವಸ್ಥಾನದ ಎದುರು ನಾಗನ ಮೂರ್ತಿ ಇದ್ದು, ಅಶ್ವತ್ಥವೃಕ್ಷ ಬೆಳವಣಿಗೆ ಹಂತದಲ್ಲಿದೆ. ದೈವಗಳ ಸಾನ್ನಿಧ್ಯ ಮೊದಲು ಸುತ್ತು ಪೌಳಿಯಲ್ಲೇ ಇತ್ತು. ಪ್ರಶ್ನಾ ಚಿಂತನೆಯಲ್ಲಿ ಕಂಡು ಬಂದಂತೆ ಭೂತದ ಎರಡು ಗುಡಿಗಳನ್ನು ದೇವಸ್ಥಾನದ ಎಡ ಮತ್ತು ಬಲ ಪಾರ್ಶ್ವದಲ್ಲಿ ನಿರ್ಮಿಸಲು ಸೂಚಿಸಿದ್ದು, ತಳಪಾಯವನ್ನು ಶ್ರೀ ಮಣಿಕ್ಕಾರ ಗೋಪಾಲಕೃಷ್ಣ ಶ್ಯಾನುಭಾಗರ ಸ್ಥಳದಲ್ಲಿ ರಚಿಸಲಾಗಿದೆ.

1961ರಲ್ಲಿ ಬ್ರಹ್ಮಕಲಶವಾಗಿತ್ತು. ಬಳಿಕ ಎ. ಮಹಾಬಲ ರೈ ಅವರು ಆಡಳಿತ ಮೊಕ್ತೇಸರರಾಗಿ 1994ರ ವರೆಗೆ ದೇವಸ್ಥಾನದ ಅಭಿವೃದ್ಧಿಗೆ ಶ್ರಮಿಸಿದರು. 1996ರಲ್ಲಿ ನಾರಾಯಣ ರೈ ಪಾಲ್ತಾಡು ಅವರ ನೇತೃತ್ವದಲ್ಲಿ ದೇವಸ್ಥಾನವನ್ನು ಜೀರ್ಣೋದ್ಧಾರಗೊಳಿಸಿ ಬ್ರಹ್ಮಕಲಶ ನೆರವೇರಿಸಲಾಯಿತು. ಹಿಂದೆ ಅಚ್ಚು ಮತ್ತು ಮೆಚ್ಚು ಬಂಗೇತಿ ಸೋದರಿಯರು ಈ ದೇವಸ್ಥಾನ ಪ್ರತಿಷ್ಠಾಪಿಸಿದ ಅನಂತರ ಪಾಲ್ತಾಡು ಗುತ್ತಿನಲ್ಲೂ ಮಣಿಕ್ಕಾರ ಮನೆತನದಲ್ಲೂ ಅನೇಕ ಬದಲಾವಣೆಗಳು ಆಗಿ ಹೋದವು. ಅದಕ್ಕನುಗುಣವಾಗಿ ಮಣಿಕ್ಕಾರ ಶ್ಯಾನಭಾಗ ಮನೆತನದವರೂ ಪೂಜಾ ಕೈಂಕರ್ಯದ ಕುಂಜತ್ತಾಯ ಮನೆತನದವರೂ ಪಾಲ್ತಾಡು ಗುತ್ತಿನ ಮನೆಯವರೂ ಏಕತ್ರರಾಗಿ ಸೇರಿ ಊರ ಪರವೂರ ಭಕ್ತರ ಸಹಾಯ – ಸಹಕಾರದಿಂದ ಕಾಲಕಾಲಕ್ಕೆ ದೇವಾಲಯವನ್ನು ಪುನಾರಚಿಸಿ, ಬ್ರಹ್ಮಕಲಶೋತ್ಸವ ಮಾಡಿಸಿದ್ದಾರೆ. ನಿತ್ಯ ಪೂಜೆ, ಜಾತ್ರೆ ಇತ್ಯಾದಿ ಸೇವೆಗಳನ್ನೂ ಮಾಡಿಕೊಂಡು ಬರುತ್ತಿದ್ದಾರೆ.

LEAVE A REPLY

Please enter your comment!
Please enter your name here