ವಾಮಂಜೂರು (ಕುಡುಪು) : ಶ್ರೀ ಅನಂತ ಪದ್ಮನಾಭ ದೇವಸ್ಥಾನ ಕುಡುಪು, ಮಂಗಳೂರು ಇಲ್ಲಿ ನಡೆದ ಷಷ್ಠಿ ಮಹೋತ್ಸವದ ಸಂಭ್ರಮ ಮುಗಿಲು ಮುಟ್ಟಿದ್ದು, ಮಧ್ಯಾಹ್ನದ ವೇಳೆ ನಡೆದ ಬ್ರಹ್ಮರಥೋತ್ಸವಕ್ಕೆ ಸಾವಿರಾರು ಮಂದಿ ಭಕ್ತರು ಆಗಮಿಸಿ ದೇವರ ದಿವ್ಯ ದರ್ಶನ ಪಡೆದರು. ಬೆಳಗ್ಗಿನಿಂದಲೇ ಜಿಲ್ಲೆಯ ನಾನಾ ಕಡೆಗಳಿಂದ ಆಗಮಿಸಿದ ಸಾವಿರಾರು ಭಕ್ತರು ಸರದಿ ಸಾಲಿನಲ್ಲಿ ನಿಂತು ಅನಂತಪದ್ಮನಾಭನ ದರ್ಶನ ಪಡೆದರು.
ಹಲವು ಭಕ್ತರು ಮಡೆಸ್ನಾನದಲ್ಲಿ ಪಾಲ್ಗೊಂಡರು. ದೇವರ ದರ್ಶನ ಪಡೆದ ಬಳಿಕ ದೇಗುಲದ ಹಿಂಭಾಗದಲ್ಲಿರುವ ನಾಗಬನದಲ್ಲಿ ನಾಗದೇವರ ದರ್ಶನ ಪಡೆದರು. ಅನಂತ ಪದ್ಮನಾಭನ ಪ್ರೀತ್ಯರ್ಥವಾಗಿರುವ ತಂಬಿಲ ಸೇವೆ, ಆಶ್ಲೇಷಾ, ಸೀಯಾಳ ಅಭಿಷೇಕ, ಪಂಚಾಮೃತ, ಕ್ಷೀರಾಭಿಷೇಕ ಹರಕೆ ಸಲ್ಲಿಸಿದರು. ಬೆಳ್ಳಿ ಹರಕೆ ಸಮರ್ಪಿಸಿದರು.
ಬ್ರಹ್ಮರಥೋತ್ಸವ
ನವಕ ಕಲಶಾಭಿಷೇಕ, ರಥ ಕಲಶ ಮಹಾಪೂಜೆ ನಡೆದ ಬಳಿಕ ದೇವರ ಬಲಿ ಉತ್ಸವ ನಡೆದು ಮಧ್ಯಾಹ್ನ ರಥಬೀದಿಯಲ್ಲಿ ಬ್ರಹ್ಮರಥೋತ್ಸವ ನಡೆಯಿತು. ಬ್ರಹ್ಮರಥೋತ್ಸವದಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು.
ಕ್ಷೇತ್ರದ ಆನುವಂಶಿಕ ಆಡಳಿತ ಮೊಕ್ತೇಸರರಾದ ಕುಡುಪು ನರಸಿಂಹ ತಂತ್ರಿ, ಕೃಷ್ಣ ರಾಜ ತಂತ್ರಿ, ಆನುವಂಶಿಕ ಅರ್ಚಕ ಮನೋಹರ ಭಟ್, ಪವಿತ್ರಪಾಣಿ ಬಾಲಕೃಷ್ಣ ಭಟ್, ಕ್ಷೇತ್ರದ ಆಡಳಿತ ಮೊಕ್ತೇಸರ ಭಾಸ್ಕರ್ ಕೆ., ಕಾರ್ಯನಿರ್ವಹಣಾಧಿ ಕಾರಿ ಅರವಿಂದ ಎ. ಸುತಗುಂಡಿ, ಸುಜನ್ ದಾಸ್ ಕುಡುಪು, ವಾಸುದೇವ ರಾವ್ ಕುಡುಪು, ಉದಯಕುಮಾರ್ ಕುಡುಪು ಮೊದಲಾದವರು ಇದ್ದರು.
ನಿರಂತರ ಅನ್ನದಾನ
ಭಕ್ತರ ಅನುಕೂಲಕ್ಕಾಗಿ ಕುಡುಪು ದೇವಸ್ಥಾನದಲ್ಲಿ ನಿರತಂತರ ಅನ್ನದಾನವನ್ನು ಬೆಳಗ್ಗಿನಿಂದಲೇ ಕಲ್ಪಿಸಲಾಗಿತ್ತು. ಭಕ್ತರಿಗೆ ಯಾವುದೇ ಅನನುಕೂಲವಾಗದಂತೆ 15 ಕೌಂಟರ್ಗಳಲ್ಲಿ ಅನ್ನದಾನಕ್ಕೆ ವ್ಯವಸ್ಥೆ ಮಾಡಿದ್ದರಿಂದ ಯಾವುದೇ ನೂಕುನುಗ್ಗಲು ಉಂಟಾಗಿಲ್ಲ. ಸಂಜೆಯ ತನಕವೂ ನಿರಂತರ ಅನ್ನದಾನ ನಡೆದಿದ್ದು, ಸಾವಿರಾರು ಮಂದಿ ಭಕ್ತರು ಭೋಜನ ಸವಿದಿದ್ದಾರೆ. ಸ್ವಯಂಸೇವಕರು ಭೋಜನ ಬಡಿಸುವ ಸೇವೆಯಲ್ಲಿ ಉತ್ಸಾಹದಿಂದ ಪಾಲ್ಗೊಂಡರು.
ಬುಧವಾರ ರಾತ್ರಿ ರಾತ್ರಿ ಸವಾರಿ ಬಲಿ, ಕಟ್ಟೆಪೂಜೆಗಳು, ತೆಪ್ಪೋತ್ಸವ, ಎರಡನೇ ಬಲಿ ಉತ್ಸವ, ಚಂದ್ರಮಂಡಲ ಉತ್ಸವ, ಅಶ್ವವಾಹನೋತ್ಸವ, ಪಾಲಕಿ ಉತ್ಸವ ನಡೆದ ಬಳಿಕ ಪ್ರಸಾದ ವಿತರಣೆ ನಡೆದಿತ್ತು. ಜಿಲ್ಲೆಯನ್ನಲ್ಲದೆ ಹೊರ ಜಿಲ್ಲೆ, ಹೊರ ರಾಜ್ಯಗಳಿಂದಲೂ ಸಾವಿರಾರು ಭಕ್ತರು ಆಗಮಿಸಿದ್ದರಿಂದ ಪಾರ್ಕಿಂಗ್ ಸಮಸ್ಯೆ ತಲೆದೋರಿತ್ತು. ಸ್ವಯಂ ಸೇವಕರು, ಟ್ರಾಫಿಕ್ ಪೊಲೀಸರು ಹಾಗೂ ಪೊಲೀಸರು ಟ್ರಾಫಿಕ್ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ನೋಡಿಕೊಂಡರು.
ಸಾರಿಗೆ ವಾಹನಗಳಿಗೆ ನಿರ್ಬಂಧ
ಕುಡುಪು ದೇವಸ್ಥಾನದಲ್ಲಿ ಬ್ರಹ್ಮ ರಥೋತ್ಸವ ಇದ್ದ ಕಾರಣ 12.30ರ ಬಳಿಕ ನೀರುಮಾರ್ಗ ಕ್ರಾಸ್ ಹಾಗೂ ವಾಮಂಜೂರು ಮಂಗಳಜ್ಯೋತಿ ಸಮೀ ಪದ ಮಂಗಳೂರು ಕ್ರಾಸ್ ವರೆಗೆ ಸಾರಿಗೆ ವಾಹನಗಳಿಗೆ ನಿರ್ಬಂಧ ಹೇರಿದ್ದು, ಕೇವಲ ದೇವಸ್ಥಾನಕ್ಕೆ ಬರುವ ಭಕ್ತರ ವಾಹ ನಕ್ಕೆ ಮಾತ್ರ ಅವಕಾಶ ನೀಡಲಾಗಿತ್ತು. ಬ್ರಹ್ಮರಥವು ದೇವಸ್ಥಾನದ ರಥಬೀದಿಯಲ್ಲಿ ಸಾಗಿ ಕುಡುಪು ಕಟ್ಟೆಗೆ ಬಂದು ಯಥಾ ಸ್ಥಾನದಕ್ಕೆ ತೆರಳಿ ನಿಲ್ಲುವವರೆಗೆ ಈ ನಿರ್ಬಂಧ ವಿಧಿಸಲಾಗಿತ್ತು.
ಈ ಹಿನ್ನೆಲೆ ಯಲ್ಲಿ ಮಂಗಳೂರಿನಿಂದ ಮೂಡುಬಿದಿರೆ- ಕಾರ್ಕಳಕ್ಕೆ ಸಾಗುವ ವಾಹನಗಳು ನಂತೂರಿ ನಿಂದ ಕೆಪಿಟಿ ರಸ್ತೆಯಾಗಿ ಪಚ್ಚನಾಡಿ ಬೋಂದೆಲ್ ಮುಖಾಂತರ ವಾಮಂಜೂ ರಿಗೆ ಸಾಗಿ ಬಂದು ತಮ್ಮ ಗಮ್ಯ ಸ್ಥಾನವನ್ನು ತಲುಪಿದವು. ಈ ಕಾರಣದಿಂದ ಮಂಗಳೂರಿಗೆ ಸಾಗುವ ಭಕ್ತರು ದೇವಸ್ಥಾನದಿಂದ ನೀರುಮಾರ್ಗ ಕ್ರಾಸ್ ತನಕ, ಕುಡುಪುನಿಂದ ಗುರುಪುರ, ಕೈಕಂಬ ಮುಂತಾದ ಕಡೆ ಸಾಗುವ ಭಕ್ತರು ವಾಮಂಜೂರಿನ ಮಂಗಳಜ್ಯೋತಿ ತನಕ ಸುಮಾರು 1 ಕಿ.ಮೀ. ವರೆಗೆ ನಡೆದುಕೊಂಡು ಸಾಗಿದ್ದಾರೆ.
ಡಿ. 21ರಂದು ಧ್ವಜಾರೋಹಣ
ಕುಡುಪು ದೇವಸ್ಥಾನದಲ್ಲಿ ಡಿ. 21ರಿಂದ ಮೊದಲ್ಗೊಂಡು 24ರ ವರೆಗೆ ವಾರ್ಷಿಕೋತ್ಸವ ಜರಗಲಿದೆ. ಡಿ. 21ರಂದು ಪ್ರಾರ್ಥನ ಪೂಜೆ ಸಲ್ಲಿಸಿದ ಬಳಿಕ ರಾತ್ರಿ 7 ಗಂಟೆಗೆ ಧ್ವಜಾರೋಹಣ ಉತ್ಸವ ನಡೆದು, ಅದೇ ದಿನ ರಥೋತ್ಸವ ಜರಗಲಿದೆ. ಡಿ. 22ಕ್ಕೆ ಜೋಡು ದೇವರ ಉತ್ಸವ, ಮಾನಸ ಪೂಜೆ ನಡೆಯಲಿದೆ. ಡಿ. 23ರಂದು ಬೆಳಿಗ್ಗೆ 7 ಗಂಟೆಗೆ ಕವಾಟೋದ್ಘಾಟನಾ ಪೂಜೆ, ರಾತ್ರಿ ಶ್ರೀಬೂತ ಬಲಿ ನಡೆಯಲಿದೆ. ಡಿ.24ರಂದು ಬೆಳಿಗ್ಗೆ 9ರಿಂದ ತುಲಾಭಾರ ಸೇವೆ, 11.30ಕ್ಕೆ ಮಹಾಪೂಜೆ, ರಥೋತ್ಸವ, ರಾತ್ರಿ ಸವಾರಿ ಬಲಿ, ಕಟ್ಟೆ ಪೂಜೆ, ಅವಭೃಥೋತ್ಸವದ ಬಳಿಕ ಧ್ವಜಾವರೋಹಣ ನಡೆದು ವಾರ್ಷಿಕೋತ್ಸವ ಸಂಪನ್ನಗೊಳ್ಳಲಿದೆ. ಡಿ. 25ರಂದು ಜಾರಂದಾಯ ನೇಮ ನಡೆಯಲಿದೆ. ಜನವರಿ 12ರಂದು ದೇವಸ್ಥಾನದಲ್ಲಿ ಕಿರುಷಷ್ಠಿ ಉತ್ಸವ ನಡೆಯಲಿದೆ.