ಬೆಳ್ತಂಗಡಿ: ಧರ್ಮಸ್ಥಳ ಭಗವಾನ್ ಶ್ರೀ ಬಾಹುಬಲಿಯ 4ನೇ ಬಾರಿಯ ಮಹಾಮಸ್ತಕಾಭಿಷೇಕವು ಸೋಮವಾರ ಮೂರನೇ ದಿನದ ಅಭಿಷೇಕದ ಮೂಲಕ ಸಂಪನ್ನಗೊಂಡಿದ್ದು, ಕೊನೆಯ ದಿನವೂ ಹೆಚ್ಚಿನ ಭಕ್ತರು ಅಭಿಷೇಕ ಕಾರ್ಯದಲ್ಲಿ ಹಾಗೂ ವೀಕ್ಷಣೆಯಲ್ಲಿ ಪಾಲ್ಗೊಂಡಿದ್ದರು. ಫೆ. 19ರಂದು ಕೂಡ ಮಸ್ತಕಾಭಿಷೇಕ ನಡೆಯಲಿದ್ದು, ಮುಂದೆ ವಾರಂತ್ಯದ ಎರಡು ದಿನಗಳಲ್ಲಿ ಭಕ್ತರ ಅಪೇಕ್ಷೆಯಂತೆ ಅಭಿಷೇಕ ಕಾರ್ಯ ನಡೆಯಲಿದೆ. ಜಿನಭಜನ್ ಕಾರ್ಯಕ್ರಮ ಮಹಾಮಸ್ತಕಾಭಿಷೇಕದ ಸಂದರ್ಭದಲ್ಲಿ ಸಂಗೀತ ಕಲಾವಿದರಿಂದ ಜಿನಭಜನ್ ಕಾರ್ಯಕ್ರಮ ನಡೆಯಿತು. ಈ ವೇಳೆ ಮಸ್ತಕಾಭಿಷೇಕ ಸಮಿತಿಯ ಪ್ರಧಾನ ಸಂಚಾಲಕ ಡಿ. ಸುರೇಂದ್ರಕುಮಾರ್ ಅವರು ಹಾಡುವ ಮೂಲಕ ಎಲ್ಲರ ಗಮನ ಸೆಳೆದರು.
ಬಿಸಿಲ ಬೇಗೆಯಿಂದ ತಂಪಾಗಿಸುವ ಹಿನ್ನೆಲೆಯಲ್ಲಿ ಬೀಸಣಿಕೆಯ ಮೂಲಕ ಗಾಳಿ ಬೀಸಿ ಕೊಂಡರು. ಇದಕ್ಕಾಗಿಯೇ ಮುಂಡಾಜೆ ಯಲ್ಲಿ 3 ಸಾವಿರಕ್ಕೂ ಅಧಿಕ ಬೀಸಣಿಕೆ ಸಿದ್ಧಗೊಂಡಿತ್ತು. ಮಸ್ತಕಾಭಿಷೇಕದ ಮೂರನೇ ದಿನವೂ ದ.ಕ. ಹಾಲು ಒಕ್ಕೂಟದವರು ಉಚಿತವಾಗಿ ನೀಡಿದ ಮಜ್ಜಿಗೆಯನ್ನು ಸ್ವಯಂಸೇವಕರು ಅಲ್ಲಲ್ಲಿ ವಿತರಿಸಿದರು. ಫೆ. 8ರಿಂದ ಸಂತ ಸಮ್ಮೇಳನದ ಮೂಲಕ ಆರಂಭಗೊಂಡ ಮಸ್ತಕಾಭಿಷೇಕದ ಕೊನೆಯ ದಿನದವರೆಗೂ ಸ್ವಯಂಸೇವಕರ ಶ್ರಮ ಎದ್ದು ಕಾಣುತ್ತಿತ್ತು. ಹೆಗ್ಗಡೆ ಮನೆತನದವರ ನಿರ್ದೇಶನದಂತೆ ಎಲ್ಲರೂ ಶಿಸ್ತಿನಿಂದ ಶ್ರಮಿಸಿದ್ದರು.
ಕುಣಿದು ಕುಪ್ಪಳಿಸಿದ ಜನತೆ ಮಹಾ ಮಸ್ತಕಾಭಿಷೇಕದ ಮೂರನೇ ದಿನದ ಮಜ್ಜನದ ಸಂದರ್ಭ ಶ್ರಾವಕ- ಶ್ರಾವಿಕೆಯರು ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು. ಹೆಗ್ಗಡೆ ಅವರ ಪುತ್ರಿ ಶ್ರದ್ಧಾ ಅಮಿತ್ ಸೇರಿದಂತೆ ಕುಟುಂಬದ ಸದಸ್ಯರು ಹಾಗೂ ಇತರರು ಪಾಲ್ಗೊಂಡಿದ್ದರು.
ಮನಸೂರೆಗೊಂಡ ಸಂಗೀತ ಕಾರ್ಯಕ್ರಮ ಮಹಾಮಸ್ತಕಾಭಿಷೇಕದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಹಲವು ಮಂದಿ ಶ್ರೇಷ್ಠ ಕಲಾವಿದರು ತಮ್ಮ ಪ್ರತಿಭಾ ಪ್ರದರ್ಶನ ನೀಡಿದ್ದು, ರವಿವಾರ ರಾತ್ರಿ ಗಾಯಕ ಶಂಕರ್ ಮಹಾದೇವನ್ ಮತ್ತು ಬಳಗದಿಂದ ಸಂಗೀತ ಕಾರ್ಯಕ್ರಮ ಮನಸೂರೆಗೊಂಡಿತು.
ತೆರೆದ ವೇದಿಕೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಾವಿರಾರು ಪ್ರೇಕ್ಷಕರು ಪಾಲ್ಗೊಂಡಿದ್ದು, ಮಹಾದೇವನ್ ತನ್ನ ಹಾಡಿನ ಜತೆಗೆ ಪ್ರೇಕ್ಷಕರು ಕೂಡ ಪಾಲ್ಗೊಳ್ಳುವಂತೆ ಮಾಡಿದರು. ಮೌನ ಪ್ರಾರ್ಥನೆ, ಕಾರ್ಯಕ್ರಮ ಅರ್ಪಣೆ ಜಮ್ಮ ಕಾಶ್ಮೀರದಲ್ಲಿ ಉಗ್ರರಿಂದ ಹತರಾದ ವೀರ ಯೋಧರಿಗೆ ಮೌನ ಪ್ರಾರ್ಥನೆಯ ಜತೆಗೆ ತನ್ನ ಕಾರ್ಯಕ್ರಮವನ್ನು ಅರ್ಪಿಸಿದ ಅವರು ಎಲ್ಲರ ಮೆಚ್ಚುಗೆಗೆ ಪಾತ್ರರಾದರು. ಮಹಾದೇವನ್ ಅವರ ಪುತ್ರ ಸಿದ್ಧಾರ್ಥ್ ಮಹಾದೇವನ್ ಸೇರಿದಂತೆ ಇತರ ಗಾಯಕರು ಅದ್ಭುತವಾಗಿ ಸಾಥ್ ನೀಡಿದರು. ಜತೆಗೆ ಅಂತಾ ರಾಷ್ಟ್ರೀಯ ಚಿತ್ರ ಕಲಾವಿದ ವಿಲಾಸ್ ನಾಯಕ್ ಅವರು ಪ್ರತಿಭೆ ಪ್ರದರ್ಶಿಸಿದರು. ಧರ್ಮಾಧಿಕಾರಿಗಳು ಹಾಗೂ ಕುಟುಂಬದವರು ಕಾರ್ಯಕ್ರಮ ವೀಕ್ಷಿಸಿ ಸಂಭ್ರಮಿಸಿದರು.
ಭಕ್ತಿಗೆ ಪ್ರೇರಣೆ ಜೀವನದಲ್ಲಿ ಸಂಸ್ಕಾರ ಬೆಳೆಸಿಕೊಂಡು ಹೃದಯದಲ್ಲಿ ಮಂದಿರ ನಿರ್ಮಾಣ ಮಾಡಬೇಕು. ಸಂಪತ್ತೇ ಸುಖ ಕೊಡುತ್ತದೆ ಎಂಬ ಆಸೆ ಬಿಡಬೇಕು. ಸೇವೆ-ಭಕ್ತಿಗೆ ಮಸ್ತಕಾಭಿಷೇಕವು ಪ್ರೇರಣೆ ನೀಡುತ್ತದೆ.
-ಆಚಾರ್ಯ ಶ್ರೀ 108 ಪುಷ್ಪದಂತ ಸಾಗರ್ ಜಿ ಮಹಾರಾಜ್
ಜೈಕಾರ ಬಾಹುಬಲಿಗೆ ಜೈಕಾರ ಹಾಕುವ ಸಂದರ್ಭ ಮನದಲ್ಲಿ ಭಯ- ಭಕ್ತಿ- ವಿಶ್ವಾಸ ಇದ್ದಾಗ ಮಾತ್ರ ಪ್ರಯೋಜನ. ಪಂಚಮಹಾವೈಭವ ಹೊಸ ಇತಿಹಾಸವನ್ನೇ ಸೃಷ್ಟಿಸಿದೆ.
- ಬಾಲಾಚಾರ್ಯ ಶ್ರೀ ಸಿದ್ಧಸೇವಾ ಸಾಗರ್ ಜಿ ಮಹಾರಾಜ್