Home ನಂಬಿಕೆ ಸುತ್ತಮುತ್ತ ಗಮನಿಸಬೇಕಾದ ವಿಷಯ ತುಂಬಾ ಇದೆ! ಟ್ರೀ ಗಣೇಶ ನಮೋಸ್ತುತೇ!

ಗಮನಿಸಬೇಕಾದ ವಿಷಯ ತುಂಬಾ ಇದೆ! ಟ್ರೀ ಗಣೇಶ ನಮೋಸ್ತುತೇ!

1349
0
SHARE

ಗೌರಿ ಗಣೇಶ ಹಬ್ಬದ ಸಡಗರಕ್ಕೆ ದಿನಗಣನೆ ಆರಂಭವಾಗಿದೆ. ನಿಮ್ಮ ಮನೆಗೆ ಯಾವ ರೀತಿಯ ಗಣೇಶನ ಮೂರ್ತಿ ತರುವುದು ಎಂದು ಯೋಚಿಸಿದ್ದೀರಾ? ಇದನ್ನು ನೀವೇ ಓದಿದ ಬಳಿಕ ನಿರ್ಧರಿಸಿ…!
ಪ್ರತಿಬಾರಿಯಂತೆ ಈ ಬಾರಿಯೂ ಕೃತಕ ವರ್ಣರಹಿತ ಗಣೇಶನ ವಿಗ್ರಹವನ್ನೇ ಪ್ರತಿಷ್ಠಾಪಿಸಿ ಗಣೇಶ ಹಬ್ಬ ಆಚರಿಸಿ ಎಂಬ ಮಾತುಗಳು ಕೇಳಿ ಬರುತ್ತಿವೆ. ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಗಳು ಈ ಕುರಿತು ಜಾಗೃತಿ ಮೂಡಿಸುವ ಉದ್ದೇಶದ ಕರಪತ್ರಗಳನ್ನು ಹಂಚಿ ಸುಮ್ಮನಾಗುತ್ತವೆ. ಆದರೆ ದೊಡ್ಡ ಗಾತ್ರದ, ಬಣ್ಣ ಬಣ್ಣದ, ಪರಿಸರಕ್ಕೆ ಮಾರಕವಾಗುವ ಗಣೇಶನನ್ನೇ ಇಷ್ಟಪಟ್ಟುಕೊಳ್ಳುವವರ ಸಂಖ್ಯೆ ಮಾತ್ರ ಕಡಿಮೆಯಾಗುವುದಿಲ್ಲ!

‘ಪ್ಲಾಸ್ಟರ್ ಆಫ್ ಪ್ಯಾರಿಸ್’ ನ ಗಣೇಶನ ಮೂರ್ತಿ ತಯಾರಿಕೆ ಹಾಗೂ ಮಾರಾಟವನ್ನು ಸಂಪೂರ್ಣ ನಿಷೇಧಿಸಲು ಒತ್ತಾಯವಿದ್ದರೂ ಅದು ಸಾಧ್ಯವಾಗಲಿಲ್ಲ. ಒಂದು ಬಣ್ಣದ ಗಣಪಮ ಪ್ರತಿಮೆಯಲ್ಲಿ 10ರಿಂದ 20 ಗ್ರಾಮ್ ನಷ್ಟು ಸೀಸವಿರುತ್ತದೆ.ಲಕ್ಷಾಂತರ ಗಣಪನ ಮೂರ್ತಿಗಳು ನೀರಿನಲ್ಲಿ ಮುಳುಗಿದಾಗ ಬಿಡುಗಡೆಯಾಗುವ ಸೀಸದ ಪ್ರಮಾಣ ಎಷ್ಟಿರಬಹುದು, ಊಹಿಸಿ. ಈ ಮಾಲಿನ್ಯವನ್ನು ಸರಿದೂಗಿಸುವುದಾದರೂ ಹೇಗೆ?

ಬೇಕಿದೆ ರಾಷ್ಟ್ರವ್ಯಾಪಿ ಜಾಗೃತಿ
ತುಸು ಸಮಧಾನಕರ ಸಂಗತಿಯೆಂದರೆ, ಇತ್ತೀಚಿನ ದಿನಗಳಲ್ಲಿ ಜನ ಎಚ್ಚೆತ್ತಿದ್ದಾರೆ. ನಿಸರ್ಗದತ್ತ ಬಣ್ಣಗಳನ್ನು ಬಳಸಿ ಮಣ್ಣಿನ ಗಣಪನನ್ನು ಕೊಳ್ಳಿ ಎಂಬ ಕರೆಗೆ ಕಡಿಮೆ ಸಂಖ್ಯೆಯಲ್ಲಾದರೂ ಜನ ಓಗೊಡುತ್ತಿದ್ದಾರೆ. ಆದರೆ ಆ ಜಾಗೃತಿ ರಾಷ್ಟವ್ಯಾಪಿಯಾಗಬೇಕು, ಎಲ್ಲರಲ್ಲೂ ಅರಿವು ಮೂಡಬೇಕು ಎಂಬದು ಮಣ್ಣಿನಿಂದ ಮೂರ್ತಿ ತಯಾರಿಸುವವರ ಕಾಳಜಿ.

ಮುಂಬೈ ನಿವಾಸಿ ದತ್ತಾದ್ರಿ ಕೊತ್ತೂರು ಅವರು ಕಳೆದೆರಡು ವರ್ಷಗಳಿಂದ ಮಣ್ಣಿನ ಗಣಪನ ಮೂರ್ತಿಗಳನ್ನು ತಯಾರಿಸುತ್ತಿದ್ದಾರೆ. ಇವರು ಈ ಪ್ರತಿಮೆಗಳ ವೈಶಿಷ್ಟವೆಂದರೆ ಗಣಪನ ಮೂರ್ತಿಯೊಳಗೆ ಮೊಳಕೆಯೊಡೆದು ಬೆಳೆದು ಸಸಿಯಾಗಬಲ್ಲ ಬೀಜಗಳನ್ನಿಡುವುದು. ಇದಕ್ಕಾಗಿ ಇವರು ಕೆಂಪು ಮಣ್ಣು, ಸಾವಯುವ ಗೊಬ್ಬರ, ತುಳಸಿ ಇಲ್ಲವೇ ಬೆಂಡೆಕಾಯಿಯಂಥ ಗಿಡಗಳ ಬೀಜಗಳನ್ನು ಬಳಸಿಕೊಳ್ಳುತ್ತಿದ್ದಾರೆ.

ಗಣಪನ ಮೂರ್ತಿಯನ್ನು ಕುಳ್ಳಿರಿಸುವ ಪೀಠದ ಉದ್ದ 12 ರಿಂದ 20 ಇಂಚಿನ ಒಳಗಿರುತ್ತದೆ. ಪೀಠದ ತಳಭಾಗಕ್ಕಿಂತ ಕೊಂಚ ಮೇಲಿನ ಜಾಗದಲ್ಲಿ 10ರಿಂದ 12 ಬೀಜಗಳನ್ನು ಇಡುತ್ತಾರೆ. ಗಣೇಶನ ಆರಾಧನೆಯ ಬಳಿಕ ಇದನ್ನು ನೀರಿಗೆಸೆಯಬೇಕಿಲ್ಲ. ಮನೆಯ ತೋಟದ ಮೂಲೆಯಲ್ಲಿ ಇಟ್ಟು ನೀರೆರೆದರೆ ಸಾಕು, ಮೂರ್ತಿ ಕರಗಿ ಮಣ್ಣಾಗುತ್ತದೆ. ಸ್ಚಲ್ಪ ದಿನಗಳ ಆ ಜಾಗದಲ್ಲಿ ಹತ್ತಾರು ಗಿಡಗಳು ತಲೆಯೆತ್ತುತ್ತವೆ!.

‘ಗಣೇಶ ಹಬ್ಬದ ಬಳಿಕ ಸಮುದ್ರ ಕಿನಾರೆಗಳಿಗೆ ಭೇಟಿ ನೀಡುವಾಗೆಲ್ಲ ಬಲು ಬೇಸರವಾಗುತ್ತಿತ್ತು. ಎಲ್ಲೆಡೆ ಕೈ ಮುರಿದ, ಸೊಂಡಿಲು ಇಲ್ಲದ ವಿಚಿತ್ರ ಆಕಾರದ ಗಣೇಶನ ಮೂರ್ತಿಗಳೇ ಬಿದ್ದಿರುತ್ತಿದ್ದವು. ಇದರಿಂದ ಪರಿಸರಕ್ಕೂ ಹಾನಿ ಎಂದೂ ಅರಿತೆ. ಇದಕ್ಕೊಂದು ಪರಿಹಾರ ಹುಡುಕಲೇಬೇಕೆಂದು ಹಠ ತೊಟ್ಟೆ. ಆಗ ಮೂಡಿದ ಉಪಾಯವೇ ಇದು’ ಎನ್ನುತ್ತಾರೆ ಈ ಪ್ರತಿಮೆಗಳ ಕೃರ್ತ ದತ್ತಾದ್ರಿ.

2015ರಲ್ಲಿ ಮುಂಬಯಿ ನಗರವೊಂದರಲ್ಲೇ ಎರಡೂ ಲಕ್ಷಕ್ಕೂ ಅಧಿಕ ಗಣಪನ ಮೂರ್ತಿಗಳನ್ನು ವಿಸರ್ಜಿಸಲಾಗಿತ್ತು. ಅದರ ತ್ಯಾಜ್ಯವೆ 3,069 ಮೆಟ್ರಿಕ್ ಟನ್! ಇದನ್ನೆಲ್ಲಾ ಓದಿ ಕೇಳಿ ತಿಳಿದುಕೊಂಡ ದತ್ತಾದ್ರಿ ಎಂಟು ಜನ ಕಲಾವಿದ ಮಿತ್ರರೊಂದಿಗೆ ಸೇರಿಕೊಂಡು ಮಣ್ಣಿನ ಮೂರ್ತಿಗಳನ್ನು ತಯಾರಿಸಲು ಮುಂದಾದರು. ವಿಭಿನ್ನವಾಗಿರಬೇಕೆಂಬ ಕಾರನಕ್ಕೆ ಅದರೊಳಗೆ ಬೀಜ ತುಂಬಿ ಮತ್ತಷ್ಟು ಗಿಡಗಳ ಹುಟ್ಟಿಗೆ ಕಾರಣರಾದರು.

ಒಂದು ಪ್ರತಿಮೆಗೆ ಏಳರಿಂದ ಎಂಟುದಿನಗಳ ಕಾಲ ಸತತವಾಗಿ ನೀರು ಹಾಕಿದರೆ ಅದು ಸಂಪೂರ್ಣ ಮಣ್ಣಾಗುತ್ತದೆ. ನೀರು ಹಾಕಲು ಆರಂಭಿಸಿದ ಐದು ದಿನಗಳಲ್ಲಿ ಬೀಜ ಮೊಳಕೆಯೊಡೆಯುತ್ತದೆ. ತುಳಸಿ ಹಾಗೂ ಬೆಂಡೆಕಾಯಿಯ ಬೀಜಗಳು ಬಹುಬೇಗ ಮೊಳೆತು ಗಿಡವಾಗುತ್ತವೆ ಎಂಬ ಕಾರಣಕ್ಕೆ ಅದನ್ನೇ ಆಯ್ದುಕೊಂಡಿದ್ದೇನೆ ಎನ್ನುತ್ತಾರೆ ಅವರು.
‘ಟ್ರೀ ಗಣೇಶ’ ಅಭಿಯಾನ

ಈ ಅಭಿಯಾನಕ್ಕೆ ದತ್ತಾದ್ರಿ ಕೊಟ್ಟ ‘ಟ್ರೀ ಗಣೇಶ’. ಅವರು ತಯಾರಿಸುವ ಗಣಪನ ಮೂರ್ತಿಗಳಲ್ಲಿ ಯಾವುದೇ ರಾಸಾಯನಿಕ ವಸ್ತುಗಳಿಲ್ಲ. ಕಣ್ಣುಗಳಿಗೆ ಮಾತ್ರ ನೈಸರ್ಗಿಕ ಬಣ್ಣಗಳನ್ನು ಬಳಸಿದ್ದಾರೆ. ಜುಲೈ ತಿಂಗಳಲ್ಲೇ ಈ ಗಣಪನನ್ನು ಕೊಳ್ಳಲು ನೋಂದಣಿ ಆರಂಭವಾಗುತ್ತದೆ. ಫೋನ್ ಮೂಲಕ ಇಲ್ಲವೇ ಅಂತರ್ಜಾಲದಲ್ಲಿ ಬುಕ್ಕಿಂಗ್ ಮಾಡಬಹುದು. ‘ಕಳೆದ ವರ್ಷ ಮೂರೇ ದಿನಗಳಲ್ಲಿ ನೋಂದಣಿಯನ್ನು ನಿಲ್ಲಿಸಬೇಕಾಯಿತು. ನಮಗೆ ಬಂದಿದ್ದ ಬೇಡಿಕೆಗಳನ್ನು ಪೂರೈಸುವುದು ಸವಾಲಿನ ಕೆಲಸವಾಯಿತು’ ಎನ್ನುತ್ತಾರೆ ದತ್ತಾದ್ರಿ.

ಈ ಬಾರಿ ಭಾರತ ಮಾತ್ರವಲ್ಲದೇ ಮಾರಿಷನ್, ಅಮೇರಿಕಾದಿಂದಲೂ ಬೇಡಿಕೆ ಬಂದಿದೆ. ಈ ವರ್ಷ 800 ಮೂರ್ತಿಗಳು ಬುಕ್ ಆಗಿವೆ. 500 ಮೂರ್ತಿಗಳನ್ನೂ ಈಗಾಗಲೇ ತಯಾರಿಸಲಾಗಿದೆ. ಇವರೊಂದಿಗಿರುವ ತಂಡದ ಸದಸ್ಯರ ಸಂಖ್ಯೆ 8ರಿಂದ 12ಕ್ಕೇರಿದೆ. ಹೆಚ್ಚಿನವರು ಕಲಾ ಅಭಿರುಚಿ ಉಳ್ಳವರು. ವೃತ್ತಿಯಲ್ಲಿ ಐಟಿ ಇಲ್ಲವೇ ಬ್ಯಾಂಕ್ ಉದ್ಯೋಗಸ್ಥರು. ಗಣೇಶ ಚತುರ್ಥಿಯ ಮೂರು ತಿಂಗಳ ಮೊದಲೇ ಇವರ ಕೆಲಸ ಆರಂಭವಾಗುತ್ತದೆ.

ದತ್ತಾದ್ರಿ ಖಾಸಗಿ ಕಂಪೆನಿಯೊಂದರಲ್ಲಿ ಜಾಹೀರಾತು ವಿಭಾಗದಲ್ಲಿ ಕೆಲಸ ಮಾಡುತ್ತಾರೆ. ಗಣೇಶ ಮೂರ್ತಿ ತಯಾರು ಮಾಡುವ ಸಂದರ್ಭದಲ್ಲಿ ಒಂದು ತಿಂಗಳು ಕಂಪೆನಿಯಿಂದ ರಜೆ ಪಡೆದುಕೊಳ್ಳುತ್ತಾರೆ. ಗೆಳೆಯರ ತಂಡದೊಂದಿಗೆ ಕುಂಬಾರ ಕೇರಿಗೆ (ಮುಂಬೈಯ ಧಾರಾವಿ ನಗರದಲ್ಲಿ) ಹೋಗಿ ಬೇಕಿದಷ್ಟು ಮಣ್ಣು ತರುತ್ತಾರೆ. ಕಚೇರಿ ಆವರಣಕ್ಕೆಂದು ಮೂರು ತಿಂಗಳ ಮಟ್ಟಿಗೆ ಬಾಡಿಗೆ ಕೊಠಡಿ ಪಡೆದುಕೊಳ್ಳುತ್ತಾರೆ. ವಾರಾಂತ್ಯಗಳಲ್ಲಿ ಗೆಳೆಯರೆಲ್ಲಾ ಒಟ್ಟಾಗಿ ಕೆಲಸ ಮಾಡುತ್ತಾರೆ.

ಲಾಭದ ಉದ್ದೇಶದಿಂದ ಇದನ್ನು ಆರಂಭಿಸಿಲ್ಲ. ಪರಿಸರ ಕಾಳಜಿಯಷ್ಟೇ ನಮ್ಮನ್ನು ಈ ಕೆಲಸಕ್ಕೆ ಕೈ ಹಾಕಲು ಪ್ರೇರೇಪಿಸಿದೆ ಎನ್ನುತ್ತಾರೆ ದತ್ತಾದ್ರಿ. ಒಂದು ಮೂರ್ತಿಯ ಬೆಲೆ ಗಾತ್ರದ ಆಧಾರವಾದ ಮೇಲೆ 1800ರಿಂದ 3000ರೂ.ವರೆಗಿದೆ.ಸಾಮಾಜಿಕ ಜಾಲತಾಣಗಳೇ ಇವರ ಪ್ರಚಾರದ ವೇದಿಕೆ. ಈಗ ಮುಂಬೈ ಹಾಗೂ ಪುಣೆ ನಗರಗಳಿಗೆ ಸೀಮಿತವಾಗಿ ಮೂರ್ತಿ ತಯಾರಿಸಿ ಕೊಡುತ್ತಿದ್ದಾರೆ.

ಸತತ ಅಧ್ಯಯನದ ಫಲ
ಇದಕ್ಕೂ ಮುನ್ನ ದತ್ತಾದ್ರಿ ಗಾರ್ಡನಿಂಗ್ ಹಾಗೂ ನರ್ಸರಿ ಕುರಿತಾದ ಕೋರ್ಸ್ ಮುಗಿಸಿದ್ದಾರೆ. ಪ್ರಾಯೋಗಿಕವಾಗಿ ಅದೆಷ್ಟೋ ಮೂರ್ತಿಗಳೊಳಗೆ ಬೀಜವಿಟ್ಟು ಗಿಡ ಮಾಡಿದ್ದಾರೆ. ಎಷ್ಟು ದಿನದೊಳಗೆ ಬೀಜ ಮೊಳಕೆ ಬರುತ್ತದೆ, ಎಷ್ಟು ನೀರು ಹಾಕಿದರೆ ಬೀಜ ಕೊಳೆಯುವುದಿಲ್ಲ ಎಂದೆಲ್ಲಾ ತಿಳಿದುಕೊಂಡಿದ್ದಾರೆ. ಸಾವಯುಗ ಗೊಬ್ಬರ ಬಳಸುವುದರಿಂದ ಮೂರ್ತಿಯೊಳಗೆ ಬೀಜ ಒಣಗುವುದಿಲ್ಲ ಎಂಬುದು ಅವರಿಗೆ ತಳಿದಿದೆ. ಮೂರ್ತಿ ಕೊಳ್ಳುವವರಿಗೂ ಅದನ್ನೇ ವಿವರಿಸಿ ಹೇಳುತ್ತಾರೆ.

ಇವರ ಕಾಳಜಿಗೆ ಮೆಚ್ಚಿದ ಚಿತ್ರನಟಿ,ಪರಿಸರವಾದಿ ದಿಯಾ ಮಿರ್ಜಾ ಇವರೊಂದಿಗೆ ಸೇರಿ ಮಣ್ಣಿನ ಗಣೇಶನ ಮೂರ್ತಿ ತಯಾರಿಸುವ ಮೂರು ನಿಮಿಷಗಳ ಅವಧಿಯ ವೀಡಿಯೋ ಮಾಡಿದ್ದಾರೆ(ಯೂಟ್ಯೂಬ್ನಲ್ಲಿ ಲಭ್ಯವಿದೆ). ಗಣೇಶನ ಮೂರ್ತಿಯೊಳಗೆ ಬೀಜವಿಟ್ಟು ಸಸಿಮಾಡುವ ಅಭಿಯಾನ ವಿಶ್ವದಲ್ಲೇ ಪ್ರಥಮ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. ಮಹಾರಾಷ್ಟದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಕೂಡ ಈ ತಂಡವನ್ನು ಸಮ್ಮಾನಿಸಿದ್ದಾರೆ. ಅನೇಕ ಚಿತ್ರ ಚಿತ್ರನಟ-ನಟಿಯರು ಮುಂದೆ ಬಂದು ಇವರೊಂದಿಗೆ ಕೈಜೋಡಿಸಿದ್ದಾರೆ. ರಾಜ್ಯದ ಪರಿಸರ ಇಲಾಖೆಯೂ ಇವರ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿದೆ.

ದೇವರನ್ನು ಮೆಚ್ಚುಸುವುದು ಎಷ್ಟು ಮುಖ್ಯವೋ, ಪರಿಸರವನ್ನು ಕಾಪಾಡುವುದು ಅಷ್ಟೇ ಮುಖ್ಯ, ಪರಿಸರಕ್ಕೆ ಹಾನಿ ಮಾಡುವುದು ದೇವರಿಗೂ ಇಷ್ಟವಾಗದು ಎಂಬುದು ದತ್ತಾದ್ರಿ ಅವರ ಮಾತು. ಬಾಲ್ಯದಿಂದಲೇ ಅಂದರೆ, ಕಲೆಯಲ್ಲಿ ಆಸಕ್ತಿ ಮೂಡಿದಂದಿನಿಂದ ನಾನು ಮನೆಯಲ್ಲಿ ಮಣ್ಣಿನ ಗಣಪನನ್ನು ಮಾಡಿ ಪೂಜಿಸುತ್ತಿದ್ದೆ ಎನ್ನುತ್ತಾರವರು.

ಬರದ ಛಾಯೆ ರಾಜ್ಯಾದ್ಯಂತ ಹಬ್ಬಿರುವಾಗ ಇರುವ ಕೆಲವೇ ಕೆರೆಕಟ್ಟೆಗಳನ್ನು, ಹೊಳೆಗಳನ್ನು ಕಲುಷಿತ ಮಾಡದೆ ಸಾಮಾಜಿಕ ಕಳಕಳಿ ತೋರುವುದು ಅತ್ಯಗತ್ಯ. ಭಕ್ತಿಯ ಹೆಸರಿನಲ್ಲಿ ಮೂರ್ತಿಯ ರಂಗಿಗೆ ಮರಳಾಗುವ ಬದಲು ಮಣ್ಣಿನ ಗಣಪನನ್ನು ಮನೆಗೆ ಕರೆದೊಯ್ದು ಹಬ್ಬ ಆಚರಿಸೋಣ, ಏನಂತೀರಾ?

LEAVE A REPLY

Please enter your comment!
Please enter your name here