ಸುಬ್ರಹ್ಮಣ್ಯ: ರಾಜ್ಯ ಸರಕಾರದ ಮುಜರಾಯಿ ಇಲಾಖೆಯ ಧಾರ್ಮಿಕ ದತ್ತಿ ಇಲಾಖೆಗೆ ಒಳಪಟ್ಟ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇಗುಲದ ಅಧೀನ ದಲ್ಲಿ ದೇಶ ಹಾಗೂ ರಾಜ್ಯದ ಯಾವುದೇ ಭಾಗದಲ್ಲಿ ಮಠ, ಮಂದಿರ, ಇತರ ಶಾಖೆಗಳು ಹಾಗೂ ಉಪಶಾಖೆಗಳಾಗಲಿ ಹೊಂದಿಲ್ಲ. ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರಿಗೆ ಭಕ್ತರು ಸಲ್ಲಿಸುವ ಹರಕೆ, ಸೇವೆ ಕಾಣಿಕೆಗಳನ್ನು ಶ್ರೀ ದೇಗುಲದ ಕೌಂಟರ್ಗಳಲ್ಲಿ ಅಥವಾ ಕಚೇರಿಯಲ್ಲಿ ಸಂದಾಯ ಮಾಡಿದಲ್ಲಿ ಮಾತ್ರ ಅದು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರಿಗೆ ಸಲ್ಲುತ್ತದೆ ಎಂದು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಪ್ರಕಟನೆ ತಿಳಿಸಿದೆ.
ಕ್ಷೇತ್ರದ ಹೊರಗಿನ ಹಲವು ಸ್ಥಳಗಳಲ್ಲಿ ಮಧ್ಯವರ್ತಿಗಳ ಮೂಲಕ ಹೆಚ್ಚು ಹಣ ವಸೂಲು ಮಾಡಿ ಸೇವೆಗಳನ್ನು ಮಾಡಿಸಲಾಗುತ್ತಿದೆ. ಆದರೆ ಇದಕ್ಕೂ ಸುಬ್ರಹ್ಮಣ್ಯ ದೇಗುಲಕ್ಕೂ ಯಾವುದೇ ಸಬಂಧವಿಲ್ಲ ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ. ದೇಗುಲದಲ್ಲಿ ಹಲವಾರು ವರ್ಷಗಳಿಂದ ಸರ್ಪಸಂಸ್ಕಾರ ಸೇವೆ ನಡೆಸಿಕೊಂಡು ಬರಲಾಗುತ್ತಿದೆ. ಭಕ್ತರಿಗೆ ಒತ್ತಡ ರಹಿತ ಸೇವೆ ನಡೆಸಲು ದೇಗುಲದ ಅಧಿಕೃತ ವೆಬ್ಸೈಟ್ www.kukke.org ನಲ್ಲಿ ಮುಂದಾಗಿ ಕಾದಿರಿಸುವ ವ್ಯವಸ್ಥೆ ಮಾಡಲಾಗಿದೆ. ದಿನವೊಂದಕ್ಕೆ 135 ಸೇವೆ ಬುಕ್ಕಿಂಗ್ ಮಾಡಿಕೊಳ್ಳಲಾಗುತ್ತದೆ. ಹೆಚ್ಚಿನ ಕ್ರಿಯಾಕರ್ತೃಗಳು ಲಭ್ಯವಿದ್ದಲ್ಲಿ ಇನ್ನೂ ಹೆಚ್ಚಿನ ಸರ್ಪಸಂಸ್ಕಾರ ಸೇವೆಗಳನ್ನು ನೆರವೇರಿಸಲಾಗುವುದು. ಸರ್ಪಸಂಸ್ಕಾರ ಸೇವೆಗೆ ಸೇವಾ ಶುಲ್ಕ 3,200 ರೂ. ಮಾತ್ರ ಆಗಿರುತ್ತದೆ ಎಂದು ತಿಳಿಸಲಾಗಿದೆ.
ಸಂಪ್ರದಾಯದಂತೆ ಸೇವೆ
ದೇಗುಲದಲ್ಲಿ ನಡೆಸುವ ಸರ್ಪಸಂಸ್ಕಾರ ಸೇವೆ 2 ದಿನಗಳದ್ದಾಗಿದ್ದು ಇದನ್ನು ಮೂವರು ಪುರೋಹಿತರು ನಡೆಸುತ್ತಾರೆ. ಆದಿಸುಬ್ರಹ್ಮಣ್ಯದಲ್ಲಿ ಇರುವ ಅಧಿಕೃತ
ಯಾಗಶಾಲೆಯಲ್ಲಿ ಸೇವೆಗಳು ನಡೆಯುತ್ತವೆ. ದೇಗುಲದಲ್ಲಿ ನಡೆಯುವ ಸೇವಾ ಸಂಪ್ರದಾಯದಂತೆ ಈ ಸೇವೆಯನ್ನು ಕರ್ತೃಗಳ ನಿಯೋಜನೆಯಡಿ ಮಾಡಲಾಗುತ್ತದೆ. ಸೇವೆಯನ್ನು
ನಡೆಸುವ ಕರ್ತೃವಿಗೆ ಸೇವೆ ಒಂದರ 650 ರೂ.ಗಳಂತೆ ಕ್ರಿಯಾ ದಕ್ಷಿಣೆಯನ್ನು ದೇಗುಲದ ವತಿಯಿಂದ ಪಾವತಿಸಲಾಗುತ್ತದೆ. ಸೇವೆ ನಡೆಸಲು ಬರುವ ಭಕ್ತರಿಗೆ ದೇಗುಲದ ವತಿಯಿಂದ ಭೋಜನ ಪ್ರಸಾದ ಮತ್ತು ಫಲಾಹಾರದ ವ್ಯವಸ್ಥೆಗಳನ್ನು ಆದಿ
ಸುಬ್ರಹ್ಮಣ್ಯದಲ್ಲಿರುವ ಸರ್ಪ ಸಂಸ್ಕಾರ ಭೋಜನ ಶಾಲೆಯಲ್ಲಿ ಪ್ರತ್ಯೇಕವಾಗಿ ಮಾಡಲಾಗುತ್ತದೆ. ಪ್ರಥಮ ದಿನದ ಸರ್ಪಸಂಸ್ಕಾರ ಸೇವೆ ಆದಿಸುಬ್ರಹ್ಮಣ್ಯದಲ್ಲಿಯೂ ಮತ್ತು ಎರಡನೇ ದಿನದ ನಾಗಪ್ರತಿಷ್ಠೆ ಸೇವೆಯನ್ನು ಶ್ರೀ ದೇಗುಲದ ನಾಗಪ್ರತಿಷ್ಠಾ ಮಂಟಪದಲ್ಲಿ ನೆರವೇರಿಸಿ ಪ್ರಸಾದ ನೀಡಲಾಗುತ್ತದೆ.
ದಾರಿ ತಪ್ಪಿಸುವ ವೆಬ್ಸೈಟ್ಗಳು
ಪ್ರಸ್ತುತ ಚಾಲ್ತಿಯಲ್ಲಿರುವ www.
snsmutt.com ಎಂಬ ವೆಬ್ಸೈಟ್ ಮತ್ತು ಖಾಸಗಿಯಾಗಿರುವ www.
kukketemple.com ಎಂಬ ವೆಬ್ ಸೈಟ್ಗಳ ಮೂಲಕ ಸಾರ್ವಜನಿಕ ಭಕ್ತರು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಮತ್ತು ಮಠ ಎಂಬ ಪದಗಳ ವ್ಯತ್ಯಾಸ ಅರಿಯದೆ ಗೊಂದಲಕ್ಕೆ ಒಳಗಾಗುತ್ತಿದ್ದಾರೆ. ದೇಗುಲದಲ್ಲಿ ಈ ಸೇವೆಗಳನ್ನು ಸಾಮೂಹಿಕವಾಗಿ ನಡೆಸಲಾಗುತ್ತಿದೆ. ನಮ್ಮಲ್ಲಿ ವೈಯಕ್ತಿಕವಾಗಿ ನಡೆಸಲಾಗುತ್ತದೆ. ಇದರಿಂದ ಹೆಚ್ಚಿನ
ಫಲ ಸಿಗುತ್ತದೆ ಎಂದು ತಪ್ಪು ಮಾಹಿತಿ ನೀಡಲಾಗುತ್ತಿದೆ. ಭಕ್ತರು ಇದಕ್ಕೆ ಬಲಿಯಾಗಬಾರದು ಎಂದು ದೇಗುಲದ
ವ್ಯವಸ್ಥಾಪನ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ರವೀಂದ್ರ ಎಂ.ಎಚ್. ತಿಳಿಸಿದ್ದಾರೆ.
ವ್ಯತಾಸ ಅರಿಯಿರಿ
ಶ್ರೀ ಸಂಪುಟ ನರಸಿಂಹ ಸ್ವಾಮಿ ಮಠ ಸುಬ್ರಹ್ಮಣ್ಯ ಈ ಸಂಸ್ಥೆಯ ನಾಮಫಲಕ, ಆಹ್ವಾನ ಪತ್ರಿಕೆ, ಜಾಹೀರಾತು ಇತ್ಯಾದಿ ಎಲ್ಲ ಪ್ರಕಟನೆಗಳು ಸಹಿತ ಸುಬ್ರಹ್ಮಣ್ಯ ಮಠ
ಎಂಬ ಹೆಸರಿನಲ್ಲಿ ಪ್ರಕಟವಾಗುತ್ತಿವೆ. ಇದರಿಂದಾಗಿ ಭಕ್ತರಲ್ಲಿ ದೇಗುಲ ಮತ್ತು ಮಠ ಎರಡೂ ಒಂದೇ ಎಂಬ ಅಭಿಪ್ರಾಯ ಮೂಡುತ್ತದೆ. ಮಠ ಹಾಗೂ ದೇಗುಲಕ್ಕೆ ಯಾವುದೇ ಸಂಬಂಧ ಇರುವುದಿಲ್ಲ ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.