Home ನಂಬಿಕೆ ಸುತ್ತಮುತ್ತ ಜೀವನವನ್ನು ಆವರಿಸುವ ನಮ್ಮೊಳಗಿನ ಆರು ಪರಮವೈರಿಗಳು

ಜೀವನವನ್ನು ಆವರಿಸುವ ನಮ್ಮೊಳಗಿನ ಆರು ಪರಮವೈರಿಗಳು

2282
0
SHARE

ಧರ್ಮಗಳು ಪ್ರತಿಯೊಬ್ಬರಿಗೂ ಜೀವನಪ್ರೀತಿಯನ್ನು ಕಲಿಸುವ ಪಾಠಶಾಲೆಗಳು. ಸಂಸ್ಕಾರವನ್ನು ಹೇಳುವ ಧರ್ಮವು ನೆಮ್ಮದಿಯ ಜೀವನ ಯಾವುದು? ಎಲ್ಲಿಂದ ನೆಮ್ಮದಿ ದೊರೆಯುತ್ತದೆ? ನೆಮ್ಮದಿಯನ್ನು ಕೆಡಿಸುವ ಸಂಗತಿಗಳಾವುವು? ಅವನ್ನು ಹೇಗೆ ನಿಯಂತ್ರಿಸಬೇಕು ಎಂಬುದನ್ನು ಹೇಳುತ್ತದೆ. ಸಂಸ್ಕಾರಕ್ಕೂ ಮನಶ್ಶಾಂತಿಗೂ ಅವಿನಾಭಾವ ಸಂಬಂಧವಿದೆ. ಸಂಸ್ಕಾರವಿದ್ದಾಗ ಮನಶ್ಶಾಂತಿ ಇರುತ್ತದೆ; ಮನಶ್ಶಾಂತಿ ಇದ್ದಾಗ ಸಂಸ್ಕಾರ ಬೆಳೆಯುತ್ತದೆ. ಜೀವನದ ಹಾದಿಯನ್ನೇ ತಪ್ಪಿಸುವ ಪರಮವೈರಿಗಳು ನಮ್ಮೊಳಗೇ ಜೀವಂತವಾಗಿ ಇದ್ದಾವೆ. ಇವು ಜೀವಂತವಾಗಿರುವ ತನಕವೂ ಧರ್ಮದ ಉನ್ನತಿ ಸಾಧ್ಯವಿಲ್ಲ.

ನಮ್ಮೊಳಗಿನ ಪರಮವೈರಿಗಳಾರು?
ನಮ್ಮನ್ನಾಳುವ ವೈರಿಗಳು ದೇವಲೋಕದಿಂದಲೋ ಪಾತಾಳದಿಂದಳೋ ಬಂದವುಗಳಲ್ಲ. ಅವು ನಮ್ಮೊಳಗೇ ಇದ್ದುಕೊಂಡು ನಮ್ಮನ್ನು ನಿಯಂತ್ರಿಸುವ ಭಾವಗಳಾಗಿವೆ. ಕಾಮ, ಕ್ರೋಧ, ಮದ, ಮೋಹ, ಲೋಭ ಮತ್ತು ಮಾತ್ಸರ್ಯ. ಈ ಆರು ವೈರಿಗಳೇ ನಮ್ಮ ಪರಮವೈರಿಗಳು. ಇವನ್ನು ಅರಿಷಡ್ ವರ್ಗಗಳು ಎಂದೇ ಗುರುತಿಸಲಾಗಿದೆ. ಮನಸ್ಸಿನ ಶಾಂತಿಯನ್ನು ಕೆಡಿಸುವ ಮನಸ್ಸಿನ ಭಾವನೆಗಳನ್ನೇ ಆರು ರೂಪಗಳಲ್ಲಿ ಗುರುತಿಸಿ ಅರಿಷಡ್ ವರ್ಗಗಳೆಂದು ಹೇಳಲಾಗಿದೆ.

ಸಂಸ್ಕೃತದಲ್ಲಿ ಒಂದು ಮಾತಿದೆ “ಕಾಮಾತುರಾಣಾಂ ನರುಚಿಂ ನ ವೇದಾ, ನ ಲಜ್ಜಾ” ಕಾಮಾಸಕ್ತಿಯುಳ್ಳವನಿಗೆ ವೇದಗಳು ಅರ್ಥವಾಗುವುದಿಲ್ಲ. ಅಂದರೆ ಹಿತನುಡಿಯೋ ನೈತಿಕತೆಯೋ ಅವನಿಗೆ ಅರಿವಾಗುವುದೇ ಇಲ್ಲ. ಮತ್ತು ಯಾವುದೇ ಹೀನ ಕಾರ್ಯಕ್ಕೂ ಹೇಸದ ಲಜ್ಜೆ, ಅಂದರೆ ಮರ್ಯಾದೆಯ ಛಾಯೆಯೂ ಇಲ್ಲದವನಾಗಿರುತ್ತಾನೆ. ಇದರಿಂದ ಅಧರ್ಮದ ಕಾರ್ಯಗಳು ಯಥೇಚ್ಛವಾಗಿ ನಡೆಯುತ್ತವೆ. ಇನ್ನು ಕ್ರೋಧಭಾವದಿಂದಾಗುವ ಅನಾಹುತಗಳು ಅನಂತ. ಅವು ಲೆಕ್ಕಕ್ಕೆ ಸಿಗಲಾರದಷ್ಟಿವೆ. ಆದರೆ ಇಡೀ ಪ್ರಪಂಚವನ್ನು ನಾಶ ಮಾಡುವ ಶಕ್ತಿ ಈ ಕೋಪ ಅಥವಾ ಕ್ರೋಧಬುದ್ಧಿಗಿದೆ. ಯಾಕೆಂದರೆ ಕ್ರೋಧಕ್ಕೊಳಗಾದವನು ಯಾವ ನೀತಿಯ ಮಾತಿಗೂ ಮಣಿಯಲಾರ. ಇನ್ನು ಮದಕ್ಕೆ ಬೇರೆ ಮದ್ದಿಲ್ಲ.

ಅಹಂಕಾರಕ್ಕೆ ಉದಾಸೀನವೇ ಮದ್ದು ಎಂಬ ಮಾತಿದೆ. ಮದವು ಸ್ವಾರ್ಥವನ್ನು ಹುಟ್ಟಿಸುವುದರಜೊತೆಗೆ ಸಮಾಜದ ಶಾಂತಿಯನ್ನೂ ಕೆಡಿಸುತ್ತದೆ. ಮೋಹವು ಮನುಷ್ಯನನ್ನು ಕುರುಡರನ್ನಾಗಿಸಿಬಿಡುತ್ತದೆ. ಮೋಹದಿಂದಾಗಿ ಸರಿ ತಪ್ಪುಗಳು ತಿಳಿಯುವುದೇ ಇಲ್ಲ. ಮೋಹಕ್ಕೆ ಒಳಗಾದವನು ಅದೇ ಗುಂಗಿನಲ್ಲಿರುತ್ತಾನೆ ಮತ್ತು ಹೊರಜಗತ್ತಿಗೆ ಬಾಧಕವಾಗುವ ಕಾರ್ಯಗಳಲ್ಲಿ ತೊಡಗಿಕೊಳ್ಳುತ್ತಾನೆ. ಲೋಭವು ಗಳಿಸಿದ ಕೀರ್ತಿಯನ್ನೂ ಉಳಿಸುವುದಿಲ್ಲ; ಧರ್ಮವನ್ನೂ ಉಳಿಸುವುದಿಲ್ಲ. ಮತ್ಸರವು ನಮ್ಮೊಳಗೇ ಇದ್ದುಕೊಂಡು ನಮ್ಮನ್ನೇ ಸುಡುವ ಬೆಂಕಿಯಿದ್ದಂತೆ. ಮತ್ಸರವಿದ್ದವನು ಏನನ್ನೂ ಸಾಧಿಸಲಾರ. ಪ್ರತಿ ಮನುಷ್ಯನಲ್ಲಿಯೂ ಅವನದೇ ಆದ ಶಕ್ತಿ ಯುಕ್ತಿಗಳಿರುತ್ತವೆ. ಅವನ್ನರಿತುಕೊಂಡು ಅಲ್ಲಿ ನಮ್ಮನ್ನು ತೊಡಗಿಸಿಕೊಳ್ಳಬೇಕೇ ಹೊರತೂ ಬೇರೆಯವರನ್ನು ನೋಡಿ ಕರುಬುವುದರಿಂದ ಅವನತಿಯೇ ಮತ್ಸರಕ್ಕೆ ಸಿಗುವ ಪ್ರತಿಫಲ.

ಅರಿ ಎಂದರೆ ಶತ್ರು ಎಂದರ್ಥ. ಈ ಆರು ವಿಧದ ಮನಸ್ಸಿನ ಭಾವಗಳು ನಮ್ಮ ಬದುಕಿಗೆ ಶತ್ರುವಾಗಿರುವುದರಿಂದ ಇವನ್ನು ಅರಿಷಡ್ ವರ್ಗ ಅಂದರೆ ಆರು ವೈರಿಗಳು ಎಂದು ಪರಿಗಣಿಸಲಾಗಿದೆ. ಈ ಆರುಭಾವಗಳೇ ನಮ್ಮ ಸ್ವಭಾವವನ್ನೂ ವ್ಯಕ್ತಿತ್ತ್ವವನ್ನೂ ನಿರ್ಧರಿಸುತ್ತವೆ. ಹಾಗಾಗಿ ಅವನು ಕೋಪಿಷ್ಟ, ಇವನು ಅಹಂಕಾರಿ, ಆತ ಜಿಪುಣ, ಈತ ಹೊಟ್ಟೆಕಿಚ್ಚಿನ(ಮತ್ಸರದ) ಮನುಷ್ಯ ಎಂದೆಲ್ಲಾ ಗುರುತಿಸುತ್ತೇವೆ. ಈ ಆರು ಶತ್ರುಗಳೂ ನಮ್ಮೊಳಗಿನವುಗಳೇ ಆದರೂ ಅವುಗಳಿಂದಾಗುವ ಪರಿಣಾಮ ಮಾತ್ರ ವಿಶ್ವಕುಟುಂಬದ ಶಾಂತಿಯನ್ನು ಕೆಡಿಸುವಂತದ್ದು. ಹಾಗಾಗಿ ಇವನ್ನು ನಮ್ಮಿಂದ ದೂರವಿಡಲು ಮೊದಲು ಮನಸ್ಸನ್ನು ನಿಯಂತ್ರಿಸಬೇಕು. ಅದಕ್ಕೆ ಮನಸ್ಸಿನ ಏಕಾಗ್ರತೆ ಅತ್ಯವಶ್ಯಕ. ಈ ಏಕಾಗ್ರತೆಗಾಗಿಯೇ ಧ್ಯಾನ, ಭಜನೆ, ಕೀರ್ತನಾದಿಗಳಿವೆ ಮತ್ತು ದೇವಾಲಯದಂತಹ ಧನಾತ್ಮಕ ತರಂಗಗಳುಳ್ಳ ಸ್ಥಳಗಳು ಹುಟ್ಟಿಕೊಂಡಿವೆ. ಈ ಮೂಲಕ ಚಿತ್ತಶಾಂತಿಯನ್ನು ಪಡೆದರೆ ಈ ಆರುಭಾವಗಳು ಪ್ರಕಟವಾಗದಂತಹ ಸಂಯಮ ನಮ್ಮಲ್ಲಿ ವೃದ್ಧಿಯಾಗುತ್ತದೆ.

||ಸರಳವಾಗಿ ಯೋಚಿಸಿ ಸಂಸ್ಕಾರಯುತರಾಗಿ ಸರಳರಾಗಿ ಜೀವಿಸಿ||

ವಿಷ್ಣು ಭಟ್, ಹೊಸ್ಮನೆ (ಭಾಸ್ವ).

LEAVE A REPLY

Please enter your comment!
Please enter your name here