ತೆಕ್ಕಟ್ಟೆ : ಕೋವಿಡ್ 19 ಭೀತಿ ಹಿನ್ನೆಲೆಯಲ್ಲಿ ಮಾ.18 ಬುಧವಾರದಿಂದ ಉಡುಪಿ ಜಿಲ್ಲಾಧಿಕಾರಿಗಳ ಆದೇಶದಂತೆ ಕುಂಭಾಸಿ ಆನೆಗುಡ್ಡೆ ಶ್ರೀ ವಿನಾಯಕ ದೇಗುಲಕ್ಕೆ ಯಾವುದೇ ಸೇವೆ ಹಾಗೂ ತೀರ್ಥ ಪ್ರಸಾದ , ಹಣ್ಣುಕಾಯಿ ಸೇವೆಗಳು ನಡೆಯದೇ ಕೇವಲ ದರ್ಶನಕ್ಕೆ ಮಾತ್ರ ಅವಕಾಶ ಕಲ್ಪಿಸ ಲಾಗಿದೆ.
ಆದರೆ ಭಕ್ತರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿರುವ ಪರಿ ಣಾಮ ದೇಗುಲದ ಪರಿಸರ ಭಕ್ತರಿಲ್ಲದೆ ಬಿಕೋ ಎನ್ನುತ್ತಿತ್ತು. ಅಲ್ಲಲ್ಲಿ ಕೊರೊನಾ ವೈರಸ್ ಮುನ್ನೆಚ್ಚರಿಕಾ ಕ್ರಮವಾಗಿ ಭಕ್ತಾದಿಗಳೆಲ್ಲರೂ ಕಡ್ಡಾಯವಾಗಿ ಕೈ ತೊಳೆದು ದೇಗುಲ ಪ್ರವೇಶಿಸುವಂತೆ ಪ್ರಕಟನಾ ನಾಮಫಲಕಗಳನ್ನು ಅಲ್ಲಲ್ಲಿ ಅಳವಡಿಸಿರುವುದು ಕಂಡುಬಂತು.
ಅಂಗಡಿ ಮುಂಗಟ್ಟು
ಸಂಪೂರ್ಣ ಬಂದ್
ದೇಗುಲದ ಪರಿಸರದಲ್ಲಿ ಹೂವಿನ ಅಂಗಡಿ ಹಾಗೂ ಇನ್ನಿತರ ವ್ಯಾಪಾರಗಳು ಸಂಪೂರ್ಣ ಬಂದ್ ಮಾಡಲಾಗಿದ್ದು ಗುಂಪು ಗುಂಪಾಗಿ ವಾಹನಗಳಲ್ಲಿ ಬಂದ ಭಕ್ತರಿಗೆ, ದೇಗುಲದ ವಸತಿ ಗೃಹದಲ್ಲಿ ಭಕ್ತರಿಗೆ ತಂಗಲು ಅವಕಾಶವಿಲ್ಲ ಹಾಗೂ ನಡೆಯುವ ಭೋಜನ ಪ್ರಸಾದ ವಿತರಣೆಯೂ ಕೂಡಾ ಸ್ಥಗಿತಗೊಳಿಸಲಾಗಿದೆ .
ಮಾನವೀಯತೆ ಮೆರೆದ ಅಂಗಡಿ ಮಾಲಕ !
ದೇಗುಲದ ಪರಿಸರದಲ್ಲಿನ ಹೂವಿನ ವ್ಯಾಪಾರ ಅಂಗಡಿಗಳು ಅನಿರೀಕ್ಷಿತ ಕಾಲಗಳ ವರೆಗೆ ಮುಚ್ಚಬೇಕಾದ ಅನಿವಾರ್ಯತೆ ಇರುವ ಪರಿಣಾಮ ಇಲ್ಲಿನ ಅಂಗಡಿ ಮಾಲಕ ಪಾಡುರಂಗ ಕಾಮತ್ ಅವರು ತನ್ನ ಅಂಗಡಿಯಲ್ಲಿದ್ದ ಸುಮಾರು 500 ಬಾಳೆಹಣ್ಣನ್ನು ಆಗುಂಬೆಯ ಘಾಟ್ನಲ್ಲಿರುವ ಮಂಗಗಳಿಗೆ ಹಾಗೂ ಇನ್ನಿತರ ಸುಮಾರು 8ಬಾಳೆಹಣ್ಣಿನ ಗೊನೆಯನ್ನು ಉಚಿತವಾಗಿ ದೇಗುಲಕ್ಕೆ ಆಗಮಿಸಿ ಭಕ್ತರಿಗೆ ಹಾಗೂ ಗೋವುಗಳಿಗೆ ವಿತರಿಸಿದ್ದಾರೆ. ಅಂಗಡಿಯಲ್ಲಿದ್ದ ಹೂಗಳನ್ನು ಕೂಡಾ ಸಮೀಪದ ನಾಗ ಬನ ಹಾಗೂ ಗೋಪಾಡಿ ದೈವಸ್ಥಾನಗಳಿಗೆ ನೀಡುವ ತನಗೆ ವ್ಯಾಪಾರವಿಲ್ಲದಿದ್ದರೂ ಕೂಡಾ ಇತರರಿಗೆ ಅದರ ಪ್ರಯೋಜನವಾಗಬೇಕು ಎನ್ನುವ ನಿಟ್ಟಿನಿಂದ ಅಂಗಡಿ ಮಾಲಕರು ಮಾನವೀಯತೆ ಮರೆದಿದ್ದಾರೆ.
ಭಕ್ತರಿಂದಲೇ ವಾಹನ ಪೂಜೆ
ಪ್ರತಿ ದಿನ ದೇಗುಲದಲ್ಲಿ ನಡೆಯುತ್ತಿದ್ದ ವಾಹನ ಪೂಜೆಗಳು ಸ್ಥಗಿತಗೊಂಡಿರುವುದರಿಂದ ಹೊಸದಾಗಿ ಖರೀದಿಸಿದ ವಾಹನ ಮಾಲಕರು ತಮ್ಮ ವಾಹನಗಳಿಗೆ ನಿಂಬೆ ಹಣ್ಣು ಇರಿಸಿ ಹಾಗೂ ತೆಂಗಿನ ಕಾಯಿಯನ್ನು ಒಡೆದು ಪೂಜಿಸುತ್ತಿರುವ ದೃಶ್ಯ ಸಾಮಾನ್ಯವಾಗಿ ಕಂಡು ಬಂತು.