Home ನಂಬಿಕೆ ಸುತ್ತಮುತ್ತ ನೈವೇದ್ಯ ವೈವಿಧ್ಯ;ಅವರವರ ಭಾವಕ್ಕೆ ಅವರವರ ಭಕುತಿಗೆ

ನೈವೇದ್ಯ ವೈವಿಧ್ಯ;ಅವರವರ ಭಾವಕ್ಕೆ ಅವರವರ ಭಕುತಿಗೆ

4198
0
SHARE

ಸಾಲು ಸಾಲು ಹಬ್ಬಗಳು ಬಂದೇ ಬಿಟ್ಟವು. ಇನ್ನೇನು ಸಂಭ್ರಮವೋ ಸಂಭ್ರಮ ಎಂದುಕೊಳ್ಳುವಾಗ ದವಸಧಾನ್ಯಗಳ ಬೆಲೆ ಗಗನಕ್ಕೇರಿರುವ ಸುದ್ದಿಯೂ ಕಣ್ಣೆದುರಿಗೆ ಬರುತ್ತದೆ. ಆದರೂ ಬೆಲೆ ಜಾಸ್ತಿ ಅಂತ ಹಬ್ಬ ಮಾಡುವುದನ್ನು ಬಿಡಲಿಕ್ಕಾಗುತ್ತದೆಯೇ? ಹಿಂದಿನ ಕಾಲದಲ್ಲಿ ವಿಧವಿಧದ ತಿಂಡಿ ತಿನಿಸು ತಯಾರಿಸಿ ದೇವರಿಗೆ ನೈವೇದ್ಯ ಮಾಡುತ್ತಿರಲಿಲ್ಲವೇ?
ಹಿಂದಿನವರಿಗಾದರೆ ಯಾವ ದೇವರಿಗೆ ಯಾವ ನೈವೇದ್ಯ ಮಾಡಬೇಕು ಎಂಬುದು ಗೊತ್ತಿತ್ತು, ನಮಗೇನೂ ಗೊತ್ತಿಲ್ಲವಲ್ಲ ಎಂದೀಗ ಸಬೂಬು ಹೇಳುವಂತೆಯೂ ಇಲ್ಲ, ಏಕೆಂದರೆ ಯಾವ ದೇವರಿಗೆ ಯಾವ ನೈವೇದ್ಯ ಇಷ್ಟ ಎಂಬುದನ್ನು ಇಲ್ಲಿ ಕಾರಣದೊಂದಿಗೆ ವಿವರಿಸಲಾಗಿದೆ.

ಹಾಗಿದ್ದರೆ ತಡ ಯಾಕೆ? ನಿಮ್ಮ ಇಷ್ಟ ದೇವರ ನೈವೇದ್ಯ ತಯಾರಿಸಿ, ದೇವರ ಮುಂದಿಟ್ಟು ಆತನ ಕೃಪೆಗೆ ಪಾತ್ರರಾಗಿ! ಸರಳವಾಗಿ ತಯಾರಿಸಬಹುದಾದ ಒಂದಷ್ಟು ನೈವೇದ್ಯದ ವಿಧಾನಗಳು ಇಲ್ಲಿವೆ. ಅದೇ ನೈವೇದ್ಯ ಯಾಕೆ ಎಂಬ ಪ್ರಶ್ನೆಗೆ ಸಕಾರಣವಾದ ಉತ್ತರಗಳು ನಿಮಗಿಲ್ಲಿ ಸಿಗುತ್ತವೆ. ಮತ್ತೇಕೆ ತಡ, ತಯಾರಿಕೆಗೆ ತಯಾರಾಗಿ!
ಮೀರಾಬಾಯಿ ಶ್ರೀಕೃಷ್ಣನ ಭಕ್ತೆ. ಈಕೆ ಸಂಸಾರದ ಗೊಜಲುಗಳಿಂದ ದೂರವಾಗಿ ಭಕ್ತಿಯನ್ನೇ ಬದುಕಾಗಿಸಿಕೊಂಡಾಕೆ. ಇದನ್ನು ಸಹಿಸದ ಮೀರಾಳ ಭಾವ ರಾಣಾ ವಿಷದ ಪಾತ್ರೆಯನ್ನು ಆಕೆಯ ಕೈಗಿತ್ತು ಇದೇ ಅಮೃತವೆಂದು ಹೇಳಿ ಸೇವಿಸಲು ಕೊಟ್ಟ. ಮೀರಾಬಾಯಿ ತಾಣು ತಿನ್ನುವ ಮೊದಲು ಎಲ್ಲವನ್ನೂ ಶ್ರೀ ಕೃಷ್ಣನಿಗೆ ಸಮರ್ಪಿಸಿವವಳು. ಅದರಂತೆ ಈ ವಿಷವನ್ನೂ ಅರ್ಪಿಸಿದಳು. ಭಕ್ತಿಯಿಂದ ನಿವೇದಿಸಿದ ಕಾರಣ ವಿಷವೂ ಅಮೃತವಾಯಿತು. ಆಕೆಯ ಪ್ರಾಣಕ್ಕೇನೂ ಅಪಾಯವಾಗಲಿಲ್ಲ. ವಿಷ ಕೊಟ್ಟ ಧೂರ್ತರು ಮೂಗಿನ ಮೇಲೆ ಬೆರಳಿಟ್ಟು ಕೊಂಡರು!
ನೈವೇದ್ಯಕ್ಕಿರುವ ಶಕ್ತಿ ಅದು. ನಾವು ತಿನ್ನುವ ಆಹಾರ ದೇವರಿಗರ್ಪಿತಗೊಂಡ ಬಳಿಕ ಅದು ಪ್ರಸಾದವಾಗುತ್ತದೆ. ಅದರ ಮೇಲೊಂದು ತುಳಸಿ ಎಲೆ ಬಿದ್ದರೆ ಅದರ ರಜ ತಮ ಕಣಗಳ ಆವರಣ ಕಡಿಮೆಯಾಗುತ್ತದೆ. ಆಹಾರದಲ್ಲಿರುವ ಕೆಟ್ಟ ಅಂಶಗಳೆಲ್ಲ ಕಳೆದುಹೋಗಿ ಸೇವನೆಗೆ ಆರ್ಹವಾಗುತ್ತದೆ. ಹೀಗೆ ಅರ್ಪಣೆಗೊಂಡ ಪ್ರಸಾದದ ಸೇವನೆಯಿಂದ ಇಷ್ಟಾರ್ಥ ಸಿದ್ಧಿಯಾಗುತ್ತದೆ ಎಂಬುದು ಭಕ್ತರ ನಂಬಿಕೆ.

ನೈವೇದ್ಯ ಸಮರ್ಪಣೆ ಎಂಬುದು ಹಿಂದೂ ಧರ್ಮಿಯರ ಪೂಜೆಯ ಒಂದು ಭಾಗ. ಶೋಡಶೋಪಚಾರಗಳಲ್ಲಿ ಇದೂ ಒಂದು. ಮೂಲತಃ ನೈವೇದ್ಯ ಎಂಬುದು ಸಂಸ್ಕೃತ ಪದ. ಇದರ ಅರ್ಥ ದೈನ್ಯದ ಬೇಡಿಕೆ ಅಥವಾ ನಿವೇದನೆ. ಅಚಾರ ಹಾಗೂ ಪ್ರಾರ್ಥನೆಯ ಮೂಲಕ ದೇವರಿಗೆ ಮಾಡುವ ನಿವೇದನೆ ಅಥವಾ ಅರ್ಪಣೆಯೇ ನೈವೇದ್ಯವಾಗುತ್ತದೆ. ಹೀಗೆ ಅರ್ಪಿಸುವ ನೇವೇದ್ಯದ ತಯಾರಿಕೆಯ ವೇಳೆಯಲ್ಲಿ ಅದರ ರುಚಿ ನೋಡುವಂತಿಲ್ಲ. ದೇವರ ಮುಂದಿಟ್ಟು ಅರ್ಚಿಸಿದ ಬಳಿಕವೇ ಅದು ಸೇವನೆಗೆ ಯೋಗ್ಯ.

ದೇವರ ಮುಂದೆ ನೈವೇದ್ಯ ಇಡಲೂ ಒಂದು ಕ್ರಮವಿದೆ. ಸಾಮಾನ್ಯವಾಗಿ ಸ್ವಚ್ಛಗೊಳಿಸಿದ ಬಾಳೆ ಎಲೆಯ ಮೇಲೆ ನೈವೇದ್ಯ ಬಡಿಸುತ್ತಾರೆ. ಅದಕ್ಕೂ ಮುನ್ನ ನೆಲದ ಮೇಲೆ ಸೆಗಣಿ ನೀರು ಚುಮುಕಿಸಿ ಸ್ಚಚ್ಛಗೊಳಿಸುತ್ತಾರೆ. ಗಡಿಯಾರದ ಮುಳ್ಳುಗಳು ತಿರುಗುವ ದಿಕ್ಕಿನಲ್ಲೇ ನೀರು ಸಿಂಪಡಿಸಬೇಕು. ಇನ್ನು ಕೆಲವರು ನೈವೇದ್ಯವಿಡುವ ಸ್ಥಳದಲ್ಲಿ ರಂಗೋಲಿಯನ್ನೂ ಹಾಕುವುದುಂಟು. ದೇವರ ಮುಂದಿಟ್ಟು ನೈವೇದ್ಯದ ಮೇಲೆ ತುಳಸಿ ದಳವೊಂದನ್ನು ಹಾಕಿ ದೇವರಿಗೆ ಸಮರ್ಪಿಸುತ್ತಾರೆ.

ತುಳಸಿ ಎಲ್ಲಾ ದೇವತೆಗಳಿಗೂ ಬಲು ಪ್ರಿಯವಾದ್ದರಿಂದ ನೈವೇದ್ಯ ದೇವರನ್ನು ಸುಲಭವಾಗಿ ತಲುಪುತ್ತದೆ. ಅಲ್ಲದೆ ದೇವತೆಗಳಿಂದ ಬರುವ ಚೈತನ್ಯವನ್ನು ಇದು ಗ್ರಹಿಸಿ ನೈವೇದ್ಯದಲ್ಲಿ ಹರಡುತ್ತದೆ.ಹೀಗಾಗಿ ತುಳಸಿ ದಳದಲ್ಲೇ ನೈವೇದ್ಯ ಅರ್ಪಿಸುತ್ತಾರೆ. ಇನ್ನು ಕೆಲವೆಡೆ ಕಿಸ್ಕಾರ (ಕೇಪಳ), ಕಣಗಿಲೆ ಹೂವನ್ನೂ ನೈವೇದ್ಯದ ಮೇಲಿಡುವುದುಂಟು.
ಪ್ರತಿಯೊಂದು ದೇವತೆಗೂ ನಿಸಿಷ್ಟ ಬಗೆಯ ನೈವೇದ್ಯಗಳು ನಿಶ್ಚಿತವಾಗಿವೆ. ವಿಷ್ಣುವಿಗೆ ಕ್ಷೀರಾನ್ನ (ಖೀರು), ಗಣಪತಿಗೆ ಮೋದಕ, ದೇವಿಗೆ ಪಾಯಸ…ಹೀಗೆ ಆಯಾ ದೇವರ ನೈವೇದ್ಯವನ್ನು ತಯಾರಿಸಿ ಬಡಿಸಿದರೆ ಅಲ್ಲಿ ದೇವತೆಯ ಶಕ್ತಿ ಹೆಚ್ಚಿನ ಪ್ರಮಾಣದಲ್ಲಿ ಬಡಿಸಿದರೆ ಅಲ್ಲಿ ದೇವತೆಯ ಶಕ್ತಿ ಹೆಚ್ಚಿನ ಪ್ರಮಾಣದಲ್ಲಿ ಪ್ರಸಾದವಾಗಿ ನಾವು ಸ್ವೀಕರಿಸಿದರೆ ಆ ಶಕ್ತಿ ನಮ್ಮ ದೇಹದಲ್ಲೂ ಪ್ರವಹಿಸುತ್ತದೆ ಎಂಬುದು ನಂಬಿಕೆ.

ಪೂಜೆ ಪುನಸ್ಕಾರಗಳ ಹೊರತಾಗಿಯೂ ನಿತ್ಯ ಪ್ರಾರ್ಥನೆ ಮಾಡುವವರೂ ನೈವೇದ್ಯ ತಯಾರಿಸಿ ದೇವರ ಮುಂದಿಡುವುದುಂಟು. ಭಗವದರ್ಪಿತ ನೈವೇದ್ಯವನ್ನೇ ಉಣ್ಣಬೇಕು. ಎಂಬುದು ವೈದಿಕರ ಪರಂಪರಾಗತ ಕ್ರಮ. ತಿನಿಸುಗಳ ಹೊರತಾಗಿ ಯುಗಾದಿ, ದೀಪಾವಳಿ ಮೊದಲಾದ ಹಬ್ಬದ ಸಂದರ್ಭದಲ್ಲಿ ಹೊಸ ವಸ್ತ್ರವನ್ನೂ ದೇವರ ಮುಂದಿಟ್ಟು ನಮಸ್ಕರಿಸಿ ಬಳಿಕ ಧರಿಸುತ್ತಾರೆ. ತಿನ್ನುವ ಮೊದಲೂ ಎಲ್ಲಾ ವಸ್ತ್ರಗಳನ್ನು ದೇವರ ಮುಂದಿಡುವವರೂ ನಮ್ಮಲ್ಲಿದ್ದಾರೆ.

ಸಾಮಾನ್ಯವಾಗಿ ನಿತ್ಯ ಪೂಜೆ ಮಾಡಿವವರು ದೇವರಿಗೆ ತೆಂಗಿನಕಾಯಿ ನೈವೇದ್ಯ ಮಾಡುತ್ತಾರೆ. ಶುಕ್ರವಾರದಂದು ದೇವಿಗೆಂದು ಬಾಳೇಹಣ್ಣು ನೈವೇದ್ಯ ಮಾಡುತ್ತಾರೆ.ದೇವಸ್ಥಾನಕ್ಕೆ ತೆರಳುವಾಗ ತೆಂಗಿನಕಾಯಿ ಹಾಗೂ ಬಾಳೆಹಣ್ಣನ್ನು ದೇವರ ನೈವೇದ್ಯಕ್ಕೆ ಕೊಂಡೊಯ್ಯುತ್ತಾರೆ. ಯಾಕೆಂದರೆ ಇವೆರಡು ಪವಿತ್ರ ಫಲಗಳು.
ಹೇಗೆನ್ನುತ್ತೀರಾ ಭೂಮಿಯಲ್ಲಿ ಬೆಳೆವ ಎಲ್ಲಾ ಗಿಡದ ಹಣ್ಣುಗಳನ್ನು ಪಶು ಪಕ್ಷಿ ಅಥವಾ ಮನುಷ್ಯರೇ ತಿಂದೆಸೆದ ಎಂಜಲಿನಿಂದ ಬೆಳೆದವು. ಅಂದರೆ ಬೀಜದಿಂದ ಮರುಹುಟ್ಟು ಪಡೆದವು. ಹೀಗಾಗಿ ಇವು ದೇವರಿಗೆ ಅರ್ಪಿಸಲು ಅರ್ಹವಾದುದಲ್ಲ. ಆದರೆ ತೆಂಗಿನಕಾಯಿ ಹಾಗೂ ಬಾಳೇಹಣ್ಣು ಮಾತ್ರ ಈ ವರ್ಗಕ್ಕೆ ಸೇರದ ಫಲಗಳು. ಅವು ಬೀಜ ಮೊಳಕೆಯೊಡೆದು ಸಸಿಯಾಗಿ ಅದರಲ್ಲಿ ಬೆಳೆದ ಹಣ್ಣುಗಳಲ್ಲ.

ದೇವರಿಗೆ ಅರ್ಪಿಸುವ ಬೆಲ್ಲವನ್ನು ಪ್ರಾಣಕ್ಕೂ ತೆಂಗಿನಕಾಯಿಯನ್ನು ದೇಹಕ್ಕೂ ಹೋಲಿಸುತ್ತಾರೆ. ತೆಂಗಿನಕಾಯಿ ಒಡೆಯುವುದೆಂದರೆ ನಮ್ಮ ಅಹಂ ಅನ್ನು ಮುರಿದಂತೆ. ತೆಂಗಿನಕಾಯಿಯೊಳಗಿರುವ ನೀರು ಕೆಳಗೆ ಚೆಲ್ಲುವುದೆಂದರೆ, ನಮ್ಮೊಳಗಿರುವ ಅಹಂಕಾರವನ್ನು ಕಳೆದುಕೊಂಡು ದೇವರಿಗೆ ಸಂಪೂರ್ಣವಾಗಿ ಶರಣಾಗಿ ತಲೆಬಾಗುವುದು ಎಂದೂ ಹೇಳಲಾಗುತ್ತದೆ.

ತೆಂಗಿನಕಾಯಿ ನೈವೇದ್ಯ ಹಿಂದೊಂದು ಪೌರಾಣಿಕ ಕತೆಯಿದೆ. ಬಾಲಕನಾಗಿದ್ದ ಗಣಪ ಶಿವನ ಮೂರನೇ ಕಣ್ಣಿನೊಂದಿಗೆ ಆಟವಾಡಲು ಮುಂದಾದನಂತೆ. ಶಿವನ ಮೂರನೇ ಕಣ್ಣನ್ನು ಮುಟ್ಟಿದರೆ ಸುಟ್ಟು ಕರಕಲಾಗುವ ಭೀತಿಯಿಂದ ಶಿವನೇ ಮೂರು ಕಣ್ಣುಳ್ಳ ತೇಂಗಿನಕಯಿಯನ್ನು ಸೃಷ್ಟಿಸಿದ ಮಗನಿಗೆ ಆಟವಾಡಲು ಕೊಟ್ಟನಂತೆ. ಆದ್ದರಿಂದ ಇಂದಿಗೂ ಗಣಪನ ಪೂಜೆಯ ವೇಳೆ ಮರೆಯದೆ ತೆಂಗಿನಕಾಯಿ ಒಡೆಯುತ್ತಾರೆ.

ಯಜ್ಞ, ಪೂಜೆ ಹಾಗೂ ಭೋಜನಕ್ಕೆ ಮೊದಲು ನೈವೇದ್ಯ ಮಾಡುವ ಪದ್ಧತಿ ಅನಾದಿ ಕಾಲದಿಂದಲೂ ಹಿಂದೂ ಸಂಸ್ಕೃತಿಯಲ್ಲಿ ಬೆಳೆದು ಬಂದಿದೆ. ಯಜ್ಞ ಹೋಮಗಳ ಸಂದರ್ಭ ಅರೆಬೆಂದ ಅನ್ನ (ಚರು), ಎಳ್ಳು, ತುಪ್ಪಗಳನ್ನು ನೈವೇದ್ಯವಾಗಿ ಅಗ್ನಿಗೆ ಸಮರ್ಪಿಸುತ್ತಾರೆ ಇದು ಸುಡುವಾಗ ಹೊರಬೀಳುವ ಹೊಗೆ ಓಝೋನ್ ಪದರವನ್ನು ತಲುಪುತ್ತದೆ, ಈ ಗಾಳಿಯ ಸೇವನೆ ಆರೋಗ್ಯಕ್ಕೂ ಒಳ್ಳೆಯದು ಎನ್ನಲಾಗಿದೆ.

ನಮ್ಮ ಕರಾವಳಿಯ ಜನರಲ್ಲಿ ನೈವೇದ್ಯಕ್ಕೆ ಪರ್ಯಾಯವಾಗಿ ‘ಎಡೆ ಇಡುವುದು’ ಎಂಬ ಒಂದು ಕ್ರಮವಿದೆ. ಕುಟುಂಬದಲ್ಲಿ ಸತ್ತ ಹಿರಿಯರಿಗೆ, ಮನೆಯ ಊರಿನ ದೈವಗಳಿಗೆ ಇದೇ ಪ್ರಕಾರದಲ್ಲಿ ನೈವೇದ್ಯ ಬಡಿಸುತ್ತಾರೆ. ನಿತ್ಯದ ಅಡುಗೆಯ ಹೊರತಾದ ಎಲ್ಲಾ ವಿಶೇಷ ತಿನಿಸುಗಳನ್ನು, ಸಿಹಿ ತಿಂಡಿಗಳನ್ನು, ಮಾಂಸಾಹಾರದ ಅಡುಗೆಗಳನ್ನು ದೈವಕ್ಕೆ ಅರ್ಪಿಸಿಯೇ ಸೇವಿಸುತ್ತಾರೆ.

ಇನ್ನು ಕೆಲವು ದೈವಗಳಿಗೆ ಸಾರಾಯಿ, ಬೀಡಿ, ಬೀಡಾಗಳನ್ನೂ ಒಂದು ಮರದ ಮಣೆಯಲ್ಲಿ ವ್ಯವಸ್ಥಿತವಾಗಿ ಇರಿಸಿ ಅರ್ಪಿಸುವುದುಂಟು. ಮನೆಯಲ್ಲಿ ಹೊಸ ಅಡುಗೆ ತಯಾರಾದರೆ, ಹೊಸ ವಸ್ತ್ರ ಆಭರಣ ಮನೆಗೆ ತಂದರೆ ಅದನ್ನೂ ಮಣೆಯ ಮೇಲಿಟ್ಟು ನಮಸ್ಕರಿಸಿ ಬಳಿಕವೇ ಉಪಯೋಗಿಸುತ್ತಾರೆ. ಕರಾವಳಿಯ ತುಳುವರು ಜಾನಪದ ಮೂಲದ ದೈವಗಳನ್ನು, ಕುಟುಂಬದ ಹಿರಿಯರನ್ನು(ಗತಿಸಿದ ಪಿತೃಗಳನ್ನು) ನೆಚ್ಚಿ ನಂಬುವುದೂ ಇದಕ್ಕೊಂದು ಕಾರಣವಿರಬಹುದು.

ಇಂದು ಪೂಜೆಯ ವಿಧಾನ ವೈವಿಧ್ಯಮಯವಾಗಿದೆ. ಪೂಜಾ ಸಂದರ್ಭದಲ್ಲಿ ಆಹಾರ ವಸ್ತುಗಳ ದೇವರಿಗೆ ಅರ್ಪಿಸಿದ ಬಳಿಕವಷ್ಟೇ ಪ್ರಸಾದ ರೂಪದಲ್ಲಿ ಸ್ವೀಕರಿಸಲಾಗುತ್ತದೆ. ಉತ್ತರ ಕರ್ನಾಟಕಕ್ಕೆ ಹೋದಂತೆಲ್ಲಾ,ನೈವೇದ್ಯ ಸಮರ್ಪಿಸುವ ರೀತಿಯೂ ಬದಲಾಗುತ್ತದೆ. ಅಲ್ಲಿ ಮಹಿಳೆಯರು ಮಡಿಯುಟ್ಟು, ಬೆಳ್ತಿಗೆ ಅನ್ನ ತಯಾರಿಸಿ ಪೂಜೆ  ನೈವೇದ್ಯ ಮುಗಿಸಿ ಬಳಿಕ ಪ್ರಸಾದವಾಗಿ ಅದೇ ಅನ್ನವನ್ನು ಉಣ್ಣುತ್ತಾರೆ. ಸ್ಥಳೀಯ ಪದ್ಧತಿ ಆಚಾರ ವಿಚಾರಗಳಿಗೆ ಅನುಗುಣವಾಗಿ ಬದಲಾಗುತ್ತವೆ.
ಭಗವದ್ಗೀತೆಯಲ್ಲಿ ಕೃಷ್ಣ ಹೀಗೆನ್ನುತ್ತಾನೆ:
‘ಪತ್ರಂ ಪುಷ್ಟಂ ಫಲಂ ತೋಯಂ ಯೋ ಮೇ ಭಕ್ತ್ಯಾ ಪ್ರಯಚ್ಛತಿ| ತದಹಂ ಭಕ್ತ್ಯ ಪಹೃತಂ ಅಶ್ನಾಮಿ ಪ್ರಯತಾತ್ಮನಃ||

ಎಂದರೆ ಭಕ್ತರು ತನಗೆ ಭಕ್ತಿಯಿಂದ ನೀಡಿದ ಎಲೆಯಾಗಲಿ, ಹೂವಾಗಲಿ, ಹಣ್ಣಾಗಲಿ ನೀರಾಗಲಿ ನಾನು ಅದನ್ನು ಸ್ಚೀಕರಿಸುತ್ತೇನೆ.
ಭಕ್ತಿಯಿಂದ ನೀಡಿದ ಯಾವುದೇ ವಸ್ತು ಭಗವಂತನಿಗೆ ಪ್ರಿಯವಾಗುತ್ತದೆ.ಅದಕ್ಕೆ ಮೃಷ್ಟಾನವೇ ಆಗಬೇಕಿಲ್ಲ. ಆದರೆ ಅರ್ಪಿಸುವ ನೈವೇದ್ಯ ಶುಚಿಯಾಗಿರಬೇಕು. ಭಕ್ತಿ ಭಾವದಿಂದ ಅರ್ಪಿಸಬೇಕು. ಪೂಜೆಯ ಬಳಿಕ ತೀರ್ಥ ಸೇವಿಸಿ ಅನಂತರ ನೈವೇದ್ಯವನ್ನು ಪ್ರಸಾಧ ರೂಪದಲ್ಲಿ ಸ್ವೀಕರಿಸಬೇಕು.

ನೈವೇದ್ಯಗಳೆಂದು ನಾವು ದೇವರಿಗೆ ಅರ್ಪಿಸುವ ಪದಾರ್ಥ ಪೋಷಕಾಂಶಗಳ ಕಣಜ. ನಮ್ಮ ದೇಹಕ್ಕೆ ಅತ್ಯಗತ್ಯವಾದ ಖನಿಜಗಳನ್ನು ಒದಗಿಸುತ್ತದೆ ಎಂಬುದು ನಿಸ್ಸಂಶಯ. ಸರ್ವಕಾಲಕ್ಕೂ ಪ್ರಸುತ್ತ ಎನಿಸುವ ಒಂದಷ್ಟು ನೈವೇದ್ಯಗಳ ಪಟ್ಟಿ ಇಲ್ಲಿದೆ. ಕೆಲವೊಮ್ಮೆ ಸ್ಥಳಿಯ ಸಂಪ್ರದಾಯಗಳಿಗೆ ಅನುಗುಣವಾಗಿ ಕೆಲವೊಂದು ದೇವರಿಗೆ ಅರ್ಪಿತವಾಗುವ ನೈವೇದ್ಯಗಳಲ್ಲಿ ವ್ಯತ್ಯಾಸವಿರಬಹುದು ಅಷ್ಟೇ…

ಬೆಳ್ತಿಗೆ ಅನ್ನ ನೈವೇದ್ಯ
ನಿತ್ಯ ಪೂಜೆ ನಡೆಸುವ ಎಲ್ಲಾ ಮನೆಗಳಲ್ಲಿ ಪ್ರತಿದಿನ ದೇವರಿಗೆ ಅರ್ಪಿತವಾಗುವ ಸಾಮಾನ್ಯ ನೈವೇದ್ಯವಿದು. ಬೆಳ್ತಿಗೆ ಅಕ್ಕಿಯನ್ನು ಚೆನ್ನಾಗಿ ತೊಳೆದು, ಅದಕ್ಕೆಂದೇ ಮೀಸಲಾದ ಪ್ರತ್ಯೇಕ ಪಾತ್ರೆಯಲ್ಲಿ ಅನ್ನ ಮಾಡಿ ದೇವರ ಮುಂದೆ ಇಡಲಾಗುತ್ತದೆ. ಸಾಮಾನ್ಯವಾಗಿ ಬೆಳ್ತಿಗೆ ಅನ್ನ ಮಾಡಲು ಹಿತ್ತಾಳೆಯ ಪಾತ್ರೆಯನ್ನೇ ಬಳಸುತ್ತಾರೆ. ದೇವರಿಗೆ ಸಮರ್ಪಣೆ ಮಾಡಿ ಪೂಜೆ ಮುಗಿದ ಬಳಿಕ ಮನೆಮಂದಿಯೆಲ್ಲಾ ಇದನ್ನು ಸೇವಿಸುತ್ತಾರೆ. ನಿತ್ಯ ಪೂಜೆಯ ಹೊರತಾಗಿ ಮಹಾವಿಷ್ಣುವಿಗೆ ಬಿಳಿ ಅನ್ನ ಬಲು ಪ್ರಿಯ. ವಿಷ್ಣವನ್ನು ಪೂಜಿಸುವಾಗ ಬಿಳಿ ಅನ್ನವನ್ನು ನೈವೇದ್ಯವಾಗಿ ಸಮರ್ಪಿಸುತ್ತಾರೆ. ಆ ಬಳಿಕ ಪ್ರಸಾದವನ್ನು ಹಸುಗಳಿಗೆ ತಿನ್ನಿಸುವವರೂ ಇದ್ದಾರೆ.

ಹಾಲು ಪಾಯಸ
‘ಪಾಯಸ’ ಪದ ಪೀಯೂಷ ಎಂಬ ಪದದಿಂದ ಬಂದಿದೆ. ಇದರರ್ಥ ಮಕರಂದ/ಸಿಹಿಯಾದದ್ದು. ಅಕ್ಕಿಯಿಂದ ತಯಾರಿಸಿದ ಹಾಲಿನ ಪಾಯಸಕ್ಕೆ ಹಿಂದೂ ಧಾರ್ಮಿಕ ಪರಂಪರೆಯಲ್ಲಿ ವಿಶಿಷ್ಟವಾದ ಸ್ಥಾನವಿದೆ. ಅಕ್ಕಿ ಪಾಯಸ ಚಂದ್ರಗ್ರಹನಿಗೆ ಬಲು ಪ್ರಿಯ. ಸುಬ್ರಹ್ಮಣ್ಯ ಹಾಗೂ ವಿಷ್ಣುವಿಗೆ ಬಲು ಪ್ರಿಯ ಈ ಕ್ಷೀರ ಪರಮಾನ್ನ.

ತುಪ್ಪದ ಅನ್ನ
ಶುಕ್ರದೇವನಿಗೆ ತುಪ್ಪದ ಅನ್ನ ಬಲು ಪ್ರಿಯ. ಭೋಗ ಜೀವನದ ಅನೇಕ ಸವಲತ್ತುಗಳನ್ನುಒದಗಿಸುವವನು ಈ ಶುಕ್ರ. ಜತೆಗೆ ದುರ್ಗೆ ಹಾಗೂ ಸರಸ್ವತಿಯವರಿಗೂ ಇದು ಇಷ್ಟದ ನೈವೇದ್ಯ. ಮನಸ್ಸಿನ ಏಕಾಗ್ರತೆ ಪಡೆಯಲು ನೆರವಾಗುವ ಈ ಶಕ್ತಿಗಳನ್ನು ಒಲಿಸಿಕೊಳ್ಳಲು ತುಪ್ಪದ ಅನ್ನ ತಯಾರಿಸಿ ನೈವೇದ್ಯ ಮಾಡಬಹುದು. ಮನೆಯಲ್ಲಿ ಅನಾರೋಗ್ಯದಿಂದ ಬಳಲುವವರು, ವೈದ್ಯಕೀಯದಲ್ಲಿ ವಾಸಿಯಾಗದ ರೋಗವಿದ್ದರು ತುಪ್ಪದ ಅನ್ನ ಮಾಡಿ ನೈವೇದ್ಯವಿಟ್ಟರೆ ಒಳ್ಳೆಯದು ಎಂಬ ನಂಬಿಕೆಯಿದೆ.

ಬಿಸಿಬೇಳೆ ಬಾತ್
ಪ್ರತ್ಯಂಗೀರಾ ದೇವಿಯ ಬಗ್ಗೆ ನೀವೆಲ್ಲಾ ಕೇಳಿರುತ್ತಿತಲ್ಲಾ. ಈಕೆ ನರಸಿಂಹನ ಸ್ತ್ರೀರೂಪ. ನಾರಸಿಂಹೀ ಅಥವಾ ನರಸಿಂಹಿಕಾ ಎಂದೂ ಕರೆಯಿಸಿಕೊಳ್ಳುವ ಈಕೆಯ ದೇಹದ ಅರ್ಧ ಮಹಿಳೆಯ ರೂಪದಲ್ಲಿದೆ. ಉಳಿದರ್ಥ ಸಿಂಹರೂಪದಲ್ಲಿದೆ. ಶಕ್ತಿಯ ಪ್ರತಿರೂಪವಾಗಿರುವ ಈಕೆಯನ್ನು ವಿಜಯ/ಗೆಲುವಿನ ಅಧಿದೇವತೆಯಾಗಿಯೂ ಪೂಜಿಸುತ್ತಾರೆ.
ಒಳ್ಳೆತನ ಹಾಗೂ ಕೆಡಕುಗಳನ್ನು ಸಮಾನವಾಗಿ ಸ್ವೀಕರಿಸಿ ಬದುಕು ನಡೆಸಬೇಕು ಎಂದು ಸಂದೇಶ ಸಾರುತ್ತಾಳೆ ಈ ಪ್ರತ್ಯಂಗೀರಾ ದೇವಿ. ಹೀಗಾಗಿ ಕೆಡಕುಗಳನ್ನೆಲ್ಲಾ ದೂರಮಾಡಲು ಅನೇಕ ದೇವಸ್ಥಾನಗಳಲ್ಲಿ ಪ್ರತ್ಯಂಗೀರಾ ದೇವಿಗೆ ಹೋಮ, ಹವನ ನಡೆಸುತ್ತಾರೆ. ಶತ್ರು ಭೀತಿ ಇರುವವರು ಮನೆಯಲ್ಲೂ ಈ ದೇವಿಯನ್ನು ತೃಪ್ತಿಪಡಿಸಬಹುದು. ಹೇಗೆನ್ನುತ್ತೀರಾ?
ಆಕೆಗೆ ಇಷ್ಟವಾದ ಬಿಸಿಬೇಳೆ ಬಾತನ್ನು ನೈವೇದ್ಯ ರೂಪದಲ್ಲಿ ಸಮರ್ಪಇಸುವ ಮೂಲಕ. ಈರುಳ್ಳಿ, ಬೆಳ್ಳುಳ್ಳಿಗಳನ್ನು ಬಳಸದೆ ಸರಳವಾಗಿ ಮನೆಯಲ್ಲೇ ಬಿಸಿಬೇಳೆ ಬಾತ್ ತಯಾರಿಸಬಹುದು. ಮಧ್ಯಾಹ್ನದ ನೈವೇದ್ಯದ ವೇಳೇಗಾದರೆ ಅಕ್ಕಿಯನ್ನುಬಳಸಬಹುದು. ಬೆಳಗ್ಗಿನ ಪೂಜೆಯ ವೇಳೆಗೆ ನೈವೇದ್ಯ ಮಾಡುವವರಾದರೆ, ಅಕ್ಕಿಯ ಬದಲು ದಪ್ಪ ಅವಲಕ್ಕಿಯನ್ನು ಬಳಸಬಹುದು.
ಚಿತ್ರಾನ್ನ
ಕೇತುವಿನಿಂದಾಗಿ ದೋಷಗಳಿದ್ದರೆ ಚಿತ್ರಾನ್ನ ತಯಾರಿಸಿ ನೈವೇದ್ಯ ಮಾಡಿದ್ದಲ್ಲಿ ಕಷ್ಟಗಳು ಪರಿಹಾರವಾಗುತ್ತದೆ ಎಂಬುದು ನಂಬಿಕೆ. ಕೇತುಗ್ರಹದ ಅಭಿಮಾನಿ ದೇವತೆ ಮಹಾಗಣಪತಿ. ಹೀಗಾಗಿ ಅಷ್ಟದ್ರವ್ಯ ಪಂಚಕಚ್ಚಾಯವೂ ಕೇತುವಿನ ಕಾಟವನ್ನೂ ಶಮನಗೊಳಿಸುತ್ತದೆ. ಹಳದಿ ಬಣ್ಣದ ಚಿತ್ರಾನ್ನ ದೇವಿಗೂ ಬಲು ಪ್ರಿಯ. ಮಾಂಗಲ್ಯ ದೋಷಗಳನ್ನು ಇದು ನಿವಾರಿಸುತ್ತದೆ ಹಾಗೂ ದಾಂಪತ್ಯ ಕಲಹಗಳು ಕಡಿಮೆಯಾಗುತ್ತವೆ ಎಂದೂ ಹೇಳಲಾಗುತ್ತದೆ.

ಕುಜದೋಷ ಇದ್ದವರು, ಕಂಕಣ ಭಾಗ್ಯ ಕೂಡಿಬಾದರೆ ಇದ್ದವರೂ ಚಿತ್ರಾನ್ನ ತಯಾರಿಸಿ ನೈವೇದ್ಯ ಮಾಡಿ ಸುಮಂಗಲಿಯರಿಗೆ ಹಂಚಬೇಕು. ಇದರಿಂದ ವಿವಾಹ ದೋಷಗಳೂ ನಿವಾರಣೆಯಾಗುತ್ತವೆ ಎನ್ನಲಾಗಿದೆ.

ಮೊಸರನ್ನ
ಮನೆದೇವರಿಗೆ ಮೊಸರನ್ನ ನೈವೇದ್ಯ ಮಾಡುವುದು ವಾಡಿಕೆ. ಅದರ ಹೊರತು ಶುಕ್ರವಾರ ಮಹಾಲಕ್ಷ್ಮೀ ದೇವಿಗೆ ಮೊಸರನ್ನ ಇಟ್ಟು ಪೂಜೆ ಮಾಡಿದರೆ ಲಕ್ಷ್ಮೀ ಒಲಿಯುತ್ತಾಳೆ ಎಂಬ ನಂಬಿಕೆಯಿದೆ. ಮೊಸರನ್ನ ಮಾಡುವ ವೇಳೆ ದಾಳಿಂಬೆ ಹಣ್ಣಿನ ಬೀಜ ಸೇರಿಸಿದರೆ ಶತ್ರು ಭಯ ನಾಶವಾದರೆ, ಒಣಖರ್ಜೂರ ಸಣ್ಣಗೆ ಕತ್ತರಿಸಿ ಹಾಕಿದರೆ ಹಣಕಾಸಿನ ತೊಂದರೆ ಕಾಣಿಸಿಕೊಳ್ಳುವುದಿಲ್ಲ, ಕೊಬ್ಬರಿ ಹಾಕಿ ನೈವೇದ್ಯ ಮಾಡಿ ಗಣಪತಿಗೆ ಅರ್ಪಿಸಿದರೆ ಸಂಕಷ್ಟಗಳು ದೂರವಾಗುತ್ತವೆ ಎಂದೂ ಹೇಳಲಾಗುತ್ತದೆ.

ವಿಷ್ಣು ಸಹಸ್ರನಾಮ ಇಲ್ಲವೇ ಲಕ್ಷ್ಮೀ ಸಹಸ್ರನಾಮ ಜಪಿಸುವ ವೇಳೇಯಲ್ಲಿ ಮೊಸರನ್ನಕ್ಕೆ ಜೇನುತುಪ್ಪ ಸೇರಿಸಿ ನೈವೇದ್ಯ ಮಾಡುವುದುಂಟು.ಇದರಿಂದ ಆರೋಗ್ಯದ ಸಮಸ್ಯೆಗಳೂ ದೂರವಾಗುತ್ತವೆ. ವೈಷ್ಣದ ದೇವಾಲಯಗಳಲ್ಲಿ ಇದನ್ನು ದೇವರಿಗೆ ಅರ್ಪಿಸಿದ ಬಳಿಕ ನೈವೇದ್ಯವಾಗಿ ಭಕ್ತರಿಗೆ ಹಂಚಲಾಗುತ್ತದೆ.
ಹೆಸರುಬೇಳೆ ಪೊಂಗಲ್ ಸಂಕ್ರಾತಿ ಬಂತೆಂದರೆ ಸಿಹಿ ಖಾರದ ಥರಥರದ ಪೊಂಗಲ್ ಗಳು ಪ್ರತಿ ಮನೆಯಲ್ಲೂ ತಯಾರಾಗುತ್ತವೆ.ಕೈ ತುಂಬಾ ಫಸಲು ಕೊಟ್ಟ ಸೂರ್ಯದೇವನಿಗೆ ನಮಿಸುವ ದಿನವದು. ಈ ಹಬ್ಬದ ದಿನ ಎಳ್ಳು ಬೆಲ್ಲವನ್ನೂ ಮೊದಲು ದೇವರ ಮುಂದಿಟ್ಟು ಬಳಿಕ ಎಲ್ಲರಿಗೂ ಹಂಚಿ ತಿನ್ನುವ ಪ್ರತೀತಿ ಇದೆ. ಇದು ಧ್ಯಾನ್ಯಲಕ್ಷ್ಮಿಯನ್ನು ಪೂಜಿಸುವ ದಿನ. ಈ ದಿನ ಪೊಂಗಲ್ ತಯಾರಿಸಿ ದೇವರಿಗೆ ನೈವೇದ್ಯ ಮಾಡುವುದು ರೂಢಿ.

ಇದರ ಹೊರತಾಗಿ, ವಿಷ್ಣು, ಮಹಾಲಕ್ಷ್ಮೀ, ದುರ್ಗೆ ಹಾಗೂ ಸೂರ್ಯದೇವರಿಗೂ ಇದು ಪ್ರೀತಿಯ ನೈವೇದ್ಯ. ಕೋಪ ಕಡಿಮೆಯಾಗಲು, ಗ್ರಹಣ ಶಕ್ತಿ, ನೆನಪಿನ ಶಕ್ತಿ ಹೆಚ್ಚಲು, ಚರ್ಮಕ್ಕೆ ಸಂಬಂಧಿಸಿದ ಕಾಯಿಲೆಗಳು ಗುಣವಾಗಲು, ವಿದ್ಯಾಭ್ಯಾಸದಲ್ಲಿ ನಿಪುಣತೆ ಹೊಂದಲು ಈ ದೇವರನ್ನು ಬೇಡಿಕೊಳ್ಳುತ್ತಿರಾದರೆ ಹೆಸರುಬೇಳೆ ಪೊಂಗಲ್ ತಯಾರಿಸಿ ಆತನ ಮುಂದಿಡಿ. ನಿಮ್ಮ ಕೋರಿಕೆ ಈಡೇರಿದಂತೆಯೇ!

ಗಣೇಶ ಚತುರ್ಥಿ ವಿಶೇಷ
ಪಂಚಕಜ್ಜಾಯ

ಬೆಲ್ಲ/ಸಕ್ಕರೆ, ಬೇಳೆ ತರಿ/ಪುಡಿ, ತೆಂಗಿನಕಾಯಿ ತುರಿ, ಹುರಿದ ಎಳ್ಳು, ತುಪ್ಪ/ಜೇನುತುಪ್ಪ ಹೀಗೆ ಐದು ಬಗೆಯ ಸಾಮಾಗ್ರಿಗಳನ್ನು ಬಳಸಿ ಮಾಡುವ ಕಜ್ಜಾಯಕ್ಕೆ ಪಂಚಕಜ್ಜಾಯ ಎಂದು ಕರೆಯುತ್ತಾರೆ. ರುಚಿ ಹೆಚ್ಚಳಕ್ಕೆ ಹುರಿದ ಒಣದ್ರಾಕ್ಷಿ, ಕಲ್ಲುಸಕ್ಕರೆ, ಒಣಖರ್ಜೂರ ಬಳಸುತ್ತಾರಷ್ಟೇ. ಎಳ್ಳಿನ ಬದಲು ಎಲ್ಲಾ ಬಗೆಯ ಧಾನ್ಯಗಳಿಂದ ಬಗೆಬಗೆ ಕಜ್ಜಾಯಗಳನ್ನು ತಯಾರಿಸುವುದುಂಟು.

ಪಂಚಾಕಜ್ಜಾಯಗಳಲ್ಲಿ ಹಲವು ವಿಧ. ಅವಲಕ್ಕಿ, ಅರಳಿನ ಪಂಚಕಜ್ಜಾಯ ಇದೊಂದು ವಿಧವಾಧರೆ, ಬೇಳೆಗಳಲ್ಲಿ ಹುರಿದು ಬೆಲ್ಲ ಸೇರಿಸಿ ತಯಾರಿಸುವುದು ಮತ್ತೊಂದು ಪ್ರಕಾರ. ಕೃಷ್ಣ, ಗಣೇಶ, ದುರ್ಗೆಯರೂ ಸೇರಿದಂತೆ ಬಹುತೇಕ ಎಲ್ಲಾ ದೇವರಿಗೆ ಪಂಚಕಜ್ಜಾಯವೆಂದರೆ ಬಲು ಪ್ರಿಯ.

ಗಣೇಶನಿಗೆ ಹೆಸರು ಬೇಳೆ ಹಾಗೂ ಅವಲಕ್ಕಿಯ ಪಂಚಕಜ್ಜಾಯಗಳೆಂದರೆ ಬಲು ಇಷ್ಟ. ಗಣನಾಯಕನನ್ನು ಒಲಿಸಲು ಗಣಹೋಮದ ಸಂದರ್ಭ ಅಷ್ಟದ್ರವ್ಯಗಳಿಂದ ಮಾಡಿದ ಕಜ್ಜಾಯ ತಯಾರಿಸಿಅದನ್ನೇ ಆಹುತಿ ಹಾಕುತ್ತಾರೆ. ಗಣೇಶ ಚತುರ್ಥಿಯ ದಿನ ಇವೆರಡನ್ನು ತಯಾರಿಸಿ ಗಣೇಶನ ಮುಂದಿಟ್ಟರೇ ನಿಮಗೆ ಆತನ ಆಶೀರ್ವಾದ ಸಿಕ್ಕಂತೆಯೇ!

ಚಕ್ಕುಲಿ
ಕೃಷ್ಣಾಷ್ಟಮಿ, ಗಣೇಶ ಚತುರ್ಥಿಯ ದಿನ ಪ್ರತಿಯೊಬ್ಬರ ಮನೆಯಲ್ಲೂ ಗರಿಗರಿಯಾದ ಚಕ್ಕುಲಿ ತಯಾರಾಗುತ್ತದೆ. ಬಾಲಕೃಷ್ಣನಿಗೂ ಡೊಳ್ಳು ಹೊಟ್ಟೆಯ ಹಣಪನಿಗೂ ಚಕ್ಕುಲಿಯೆಂದರೆ ಇಷ್ಟ. ಹೀಗಾಗಿ ಆ ವಿಶೇಷ ದಿನದಂದು ತಯಾರಿಸಿದ ಚಕ್ಕುಲಿಯನ್ನು ದೇವರಿಗೆ ನೇವೇದ್ಯವಾಗಿ ಇಡಬಹುದು.

ಉಂಡೆಗಳು
ದೀಪಾವಳಿ, ಗಣೇಶ ಚತುರ್ಥಿ, ಕೃಷ್ಣಾಷ್ಟಮಿ ಮೊದಲಾದ ಹಬ್ಬಗಳಂದು ತಯಾರಿಸುವ ಸರಳವಾದ ಕೆಲವು ಉಂಡೆಗಳು ಇಲ್ಲಿವೆ. ಮಕ್ಕಳಾದಿಯಾಗಿ ಎಲ್ಲರೂ ಇಷ್ಟಪಡುವ ಉಂಡೆಗಳಿವು.

ಮೋದಕ
ಗಣಪನನ್ನು ‘ಮೋದಕ ಪ್ರಿಯ’ ಎಂದೂ ಕರೆಯುತ್ತಾರೆ. ಪ್ರತೀ ಪಕ್ಷದಲ್ಲಿ ಒಮ್ಮೆ ಅಂದರೆ ಹುಣ್ಣಿಮೆ ಕಳೆದು ನಾಲ್ಕನೆಯ ದಿನ ಬರುವ ಸಂಕಷ್ಟ ಚತುರ್ಥಿಯದಿನ ಕೆಲವರು ಮನೆಯಲ್ಲಿ ಮೋದಕ ತಯಾರಿಸಿ ಗಣಪನಿಗೆ ನೈವೇದ್ಯ ಮಾಡುವುದುಂಟು. ಮುದ ಎಂದರೆ ಆನಂದ ಎಂಬ ಅರ್ಥವಿದೆ. ಮೋದಕವು ಗಣೇಶನಿಗೆ ಆನಂದವನ್ನೂ ಭಕ್ತರಿಗೆ ಜ್ಞಾನವನ್ನೂ ನೀಡುವ ಸಿಹಿ ತಿಂಡಿ. ಗಣಪನ ಜನನವಾದಾಗ ಎಲ್ಲಾ ದೇವತೆಗಳೂ ಸಂತಸದಿಂದ ಪಾರ್ವತಿಗೆ ಮೋದಕ ನೀಡಿದರು ಎಂದು ಪುರಾಣದಲ್ಲೂ ಉಲ್ಲೇಖವಿದೆ. ಆ ಬಳಿಕ ಪ್ರತಿ ವರ್ಷ ಹುಟ್ಟುದ್ದ ದಿನ ಪಾರ್ವತಿ ಮಗನಿಗೆ ಮೋದಕ ಮಾಡಿ ಕೊಡುತ್ತಿದ್ದಳಂತೆ.

ಗಣೇಶನಿಗೆ ಮೋದಕ ಯಾಕೆ ಇಷ್ಟ ಎಂಬ ಹಿನ್ನೆಲೆಯಲ್ಲಿ ಪದ್ಮ ಪುರಾಣದಲ್ಲಿ ಕತೆಯೊಂದಿದೆ. ಒಮ್ಮೆ ದೇವಾನುದೇವರೆಲ್ಲಾ ಶಿವ ಪಾರ್ವತಿಯ ಮನೆಗೆ ಬಂದರು. ಆಗ ವಿಶೇಷ ಪರಿಮಳ ಹಾಗೂ ರುಚಿ ಇದ್ದ ಮೋದಕವನ್ನೂ ತಂದಿದ್ದರು. ಇದನ್ನು ಸೇವಿಸಿದವರು ಬುದ್ಧಿಶಾಲಿಯೂ, ಶಕ್ತಿವಂತರೂ ಆಗುತ್ತಾರೆ ಎಂಬುದು ಪಾರ್ವತಿಯ ನಂಬಿಕೆಯಾಗಿತ್ತು.
ಇರುವ ಒಂದು ಮೋದಕವನ್ನು ತನ್ನೆರಡು ಮಕ್ಕಳಾದ ಗಣೇಶ ಮತ್ತು ಕಾರ್ತಿಕೇಯನ ಪೈಕಿ ಯಾರಿಗೆ ಕೊಡುವುದು ಎಂಬ ಗೊಂದಲ ಪಾರ್ವತಿಗೆ. ಕೊನೆಗೆ ಇಬ್ಬರನ್ನೂ ಕರೆದು ಹೀಗೆನ್ನುತ್ತಾಳೆ, ‘ಮಕ್ಕಳೇ ನಿಮ್ಮಿಬ್ಬರಲ್ಲಿ ಯಾರು ನಿಜವಾದ ಶ್ರದ್ಧೇ, ಭಕ್ತಿ ಇದೆ ಎಂದು ತೋರಿಸುವಿರೋ ಅವರಿಗೇ ಈ ಮೋದಕ ಸಿಗುತ್ತದೆ’.

ಕಾರ್ತಿಕೇಯ ಶ್ರದ್ಧೆ ಮತ್ತು ಭಕ್ತಿಯ ಹುಡುಕಾಟಕ್ಕೆ ತನ್ನ ವಾಹನವೇರಿ ಭಕ್ತಿ ಕ್ಷೇತ್ರಗಳ ಹೊರಟ. ಗಣೇಶ ಮಾತ್ರ ತನ್ನ ತಂದೆ ತಾಯಿಯ ಸಾಮೀಪ್ಯದಿಂದ ಒಂದಿಂಚೂ ಕದಲಲಿಲ್ಲ. ಪಾರ್ವತಿಗೆ ಅಚ್ಚರಿ, ಸ್ಪರ್ಧೆ ಇಟ್ಟರೂ ಈವ ಹೋಗುತ್ತಿಲ್ಲವಲ್ಲಾ ಎಂದು.

ಆಗ ಗಣೇಶ, ‘ಅಮ್ಮಾ, ತಂದೆ ತಾಯಿಯನ್ನು ಪ್ರೀತಿಯಿಂದ ಕಾಣುವುದಕ್ಕಿಂತ ಹೆಚ್ಚಿನ ಭಕ್ತಿ, ಶ್ರದ್ಧೆ ಯಾವುದಿದೆ? ಅದರಲ್ಲಿ ಸಿಗುವ ಪುಣ್ಯ ಯಾವ ಪವಿತ್ರ ಕ್ಷೇತ್ರಗಳ ದರ್ಶನದಿಂದಲೂ ಸಿಗದು ಅಲ್ಲವೇನಮ್ಮಾ’ ಎಂದು ಪ್ರಶ್ನಿಸಿದ.

ಮಗನ ಮಾತಿಗೆ ತಲೆದೂಗಿದ ಅಮ್ಮ ಮೋದಕವನ್ನು ಗಣೇಶನಿಗೇ ಕೊಡುತ್ತಾಳೆ. ಅಂದಿನಿಂದ ಮೋದಕ ಗಣೇಶನ ನೆಚ್ಚಿನ ತಿನಿಸಾಯಿತು ಎನ್ನಲಾಗಿದೆ.

LEAVE A REPLY

Please enter your comment!
Please enter your name here