Home ನಂಬಿಕೆ ಸುತ್ತಮುತ್ತ ಮಾತು ಮನಸ್ಸನ್ನು ಕೆಡಿಸುತ್ತದೆ …ಏಕಾಂತವೇ ಸಾಧಕನಿಗೆ ಶಕ್ತಿ!

ಮಾತು ಮನಸ್ಸನ್ನು ಕೆಡಿಸುತ್ತದೆ …ಏಕಾಂತವೇ ಸಾಧಕನಿಗೆ ಶಕ್ತಿ!

2991
0
SHARE

ಶ್ರೀಮದ್ಭಾಗವತ ಮುನಿಯಾದವನು ಹೇಗಿರಬೇಕು? ಎಂಬುದನ್ನು ಹೇಳುತ್ತದೆ.

ಏಕಚಾರ್ಯನಿಕೇತಃ ಸ್ಯಾದಪ್ರಮತ್ತೋ ಗುಹಾಶಯಃ |
ಅಲಕ್ಷ್ಯಮಾಣ ಆಚಾರೈರ್ಮುನಿರೇಕೋಲ್ಪಭಾಷಣಃ ||

ಮುನಿಯಾದವನು ಮೊದಲು ಒಬ್ಬಂಟಿಯಾಗಿರಬೇಕು. ಇರುವ ಜಾಗದಲ್ಲಿ ಮಮತೆ ಇರಬಾರದು. ಎಚ್ಚರಿಕೆಯಿಂದ ಇರಬೇಕು. ಏಕಾಂತದಲ್ಲಿ ಅಥವಾ ಗುಹೆಯಲ್ಲಿ ವಾಸಿಸಬೇಕು. ತನ್ನ ಆಚಾರ-ವ್ಯವಹಾರದಿಂದ ತನ್ನನ್ನು ಯಾರ ಮುಂದೆಯೂ ಪ್ರಕಟಿಸಬಾರದು. ಮಿತಭಾಷಿಯಾಗಿರಬೇಕು. ಇವು ಸರ್ಪವನ್ನು ನೋಡಿ ಕಲಿಯುವಂತದ್ದು.

ಯಾವೊಬ್ಬನೂ ಏಕಾಂತವಿಲ್ಲದೆ ಮುನಿಯಾಗಲಾರ. ಯಾವುದೇ ಮೋಹಕ್ಕೊಳಗಾದೆ, ಸ್ವಂತ ಬಿಡಾರವನ್ನು ಕಟ್ಟಿಕೊಳ್ಳದೆ, ಗುಂಪು ಅಥವಾ ಮಂಡಳಿಯನ್ನು ಕಟ್ಟಿಕೊಳ್ಳದೆ, ಎಲ್ಲಿಯಾಯಿತೋ ಅಲ್ಲಿ ವಾಸಮಾಡಬೇಕು. ಹೇಗೆ ಹಾವು ಇಲಿ ಕೊರೆದ ಬಿಲದಲ್ಲಿ ವಾಸಮಾಡುವುದೋ ಅಂತೆಯೇ. ಒಂದು ಪ್ರದೇಶ ಅಥವಾ ಸ್ಥಳದ ಮೇಲೆ ಮಮಕಾರ ಇಟ್ಟು ಕೊಳ್ಳದೆ ಅದನ್ನು ತೊರೆಯಲು ಸಿದ್ಧನಿರಬೇಕು. ಮಾತು ಮನಸ್ಸನ್ನು ಕೆಡಿಸುತ್ತದೆ, ಹಾಗಾಗಿ ಮುನಿಯಾದವ ಮಿತಭಾಷಿಯಾಗಿರಬೇಕು. ಇವು ಮುನಿಗೆ ಸಂಬಂಧಪಟ್ಟು ಹೇಳಿದ ಪಾಠವಾದರೂ ಸಾಮಾನ್ಯ ಮಾನವನಿಗೂ ಅನ್ವಯಿಸುತ್ತದೆ.

ಮೊದಲನೆಯದಾಗಿ ಮಿತಭಾಷಿ ಯಾವತ್ತೂ ಸುಖವಾಗಿಯೇ ಇರುತ್ತಾನೆ. ಹಿತಮಿತವಾದ ಮಾತಿನಿಂದ ಕಲಹವೂ ಉಂಟಾಗುವುದಿಲ್ಲ; ಅನವಶ್ಯಕವಾಗಿ ಸಮಯವೂ ಹಾಳಾಗುವುದಿಲ್ಲ. ಮಾತು ನಮ್ಮ ವ್ಯಕ್ತಿತ್ತ್ವದ ಕನ್ನಡಿ ಇದ್ದ ಹಾಗೆ. ಮಾತು ನಮ್ಮ ಜ್ಞಾನವನ್ನಷ್ಟೇ ಅಲ್ಲದೆ, ನಮ್ಮೊಳಗಿನ ಸಂಸ್ಕಾರವನ್ನೂ ಪ್ರತಿಬಿಂಬಿಸುತ್ತದೆ. ಹಾಗಾಗಿ ಮಾತು ನಮ್ಮತನವನ್ನು ಹಾಳುಗೆಡುವದಂತೆ ಜಾಗರೂಕರಾಗಿರಬೇಕು. ಇನ್ನೊಂದು ಜಾಗದ ಮೇಲಿನ ಮಮತೆಯೂ ನಮ್ಮ ಬದುಕನ್ನು ಸಂಕೀರ್ಣಗೊಳಿಸಿಬಿಡುತ್ತದೆ. ಇಲ್ಲಿ ಜಾಗ ಎಂಬುದು ಒಂದು ವಿಶಾಲವಾದ ಪ್ರದೇಶ, ಅಲ್ಲಿನ ಜನ, ಆಚಾರ-ವಿಚಾರ, ಬಂಧು-ಬಾಂಧವರು ಎಲ್ಲವೂ ಬಂತು. ಯಾವುದೇ ಕ್ಷಣದಲ್ಲಿ ಇವೆಲ್ಲವನ್ನು ಬಿಟ್ಟು ಹೊರಡಬೇಕಾಗಿ ಬರಬಹುದು. ಇಂದಿನ ಬದುಕಿನ ರೂಪವೇ ಹಾಗಿದೆ. ಜಾಗದ ಮೇಲಿನ ಮಮತೆಯಿಂದ ಬಂಧಿಸಲ್ಪಟ್ಟರೆ ಜೀವನದ ಸಾಧನೆ ಅಲ್ಲಿಯ ಕರಗಿ ಹೋಗಬಹುದು. ಏಕಾಂಗಿಯಾಗಿ ಬದುಕಲು ಮುನಿಗಳಿಗೆ ಮಾತ್ರ ಸಾಧ್ಯ. ಆದರೆ ಕೆಲವೊಂದು ಸಾಧನೆಗೆ ಹುಲುಮಾನವನೂ ಏಕಾಂಗಿಯಾಗಬೇಕಾಗುತ್ತದೆ. ಕೆಲವು ಸಾಧನೆಯ ಮಾರ್ಗಗಳು ಏಕಾಂತವನ್ನು ಸಿದ್ಧಿಸಿಕೊಂಡಾಗ ಮಾತ್ರ ಕಾಣಿಸುತ್ತವೆ. ಏಕಾಂತ ಎಂಬುದು ಏಕಾಗ್ರತೆ. ಒಂದು ನಿರ್ಧಿಷ್ಟತೆ. ಇದನ್ನು ಮುರಿಯಲು ಚಂಚಲಗೊಳಿಸುವ ಅಂಶಗಳು ಬೇಗನೆ ನಮ್ಮನ್ನು ತಗಲಾಕಿಕೊಂಡು ಬಿಡುತ್ತವೆ. ಎಚ್ಚರಿಕೆ ಅತ್ಯಗತ್ಯ. ಮಮತೆ ಮನಸ್ಸನ್ನು ವಿಶಾಲಗೊಳಿಸಲು ಅಡ್ಡಿಯಾದರೆ, ಮಾತು ಮನಸ್ಸನ್ನು ಕೆಡಿಸುವ ಸಂಭವವೇ ಹೆಚ್ಚು. ಹಾಗಾಗಿ ಈ ಎಲ್ಲ ಪಾಠಗಳು ಪ್ರಸ್ತುತ ಬದುಕಿಗೆ ಮಾರ್ಗದರ್ಶಕ.

ಪ್ರಪಂಚದ ಎಲ್ಲಾ ಕಡೆಯೂ ಸುತ್ತಬೇಕು, ಎಲ್ಲ ಜ್ಞಾನವನ್ನು ಹೊಂದಬೇಕು. ಆದರೆ ಎಷ್ಟೇ ಜ್ಞಾನವಿದ್ದರೂ ಅದು ಅರಿವಿಗೆ ಬಾರದೇ ಇದ್ದರೆ ಏನೂ ಪ್ರಯೋಜವಿಲ್ಲ. ಈ ಅರಿವಿಗೆ ಏಕಾಂತ ಅನುಕೂಲ. ಒಳ್ಳೆಯ ನಿರ್ಧಾರಕ್ಕೆ ಹಲವರ ಸಲಹೆ, ಅನುಭವಗಳು ಅನುಕೂಲವಾದರೂ ನಮ್ಮ ನಿರ್ಧಾರ ಏನು? ಎಂಬುದು ನಾವೇ ಖುದ್ದಾಗಿ, ಏಕಾಂತದಲ್ಲಿ ಯೋಚಿಸಿಯೇ ಆಗಬೇಕು. ಅರ್ಥ ಇಷ್ಟೇ, ಅಪರಿಮಿತವಾದ ಜ್ಞಾನ ಬದುಕಿಗೆ ಅಗತ್ಯ, ಅದಕ್ಕೆ ಬದುಕು ನಿಂತ ನೀರಿನಂತಾಗದೆ, ಹರಿವ ನೀರಾಗಬೇಕು. ಮುಂದೆ ನಡೆದವರ ಹೆಜ್ಜೆ ಗುರುತು ಗುರಿಗೊಂದು ತೋರು ಬೆರಳು. ನಮ್ಮದೇ ಆದ ಗುರಿಯೂ ಇರಬೇಕು; ದಾರಿಯೂ ಹೊಸತಾಗಿರಬೇಕು. ಪ್ರತಿಕ್ಷಣವೂ ಮುಕ್ತಿಯ ಅನುಭವವನ್ನೇ ನೀಡಬೇಕು.

||ಸರಳವಾಗಿ ಯೋಚಿಸಿ-ಸಂಸ್ಕಾರಯುತರಾಗಿ-ಸರಳರಾಗಿ ಜೀವಿಸಿ||

– ಭಾಸ್ವ.

LEAVE A REPLY

Please enter your comment!
Please enter your name here