Home ನಂಬಿಕೆ ಸುತ್ತಮುತ್ತ ವಿಶ್ವವೆಂದರೆ ಪರಮಾತ್ಮನ ಸ್ವರೂಪ

ವಿಶ್ವವೆಂದರೆ ಪರಮಾತ್ಮನ ಸ್ವರೂಪ

692
0
SHARE

ಆತ್ಮ ನಮ್ಮೊಳಗಿದೆ. ಪರಮಾತ್ಮ ಹಾಗಲ್ಲ, ನಮ್ಮೊಳಗೂ ಇದ್ದಾನೆ; ಹೊರಗೂ ಇದ್ದಾನೆ. ಪ್ರಪಂಚದ ಎಲ್ಲಮೂಲೆಯಲ್ಲೂ ಇದ್ದಾನೆ. ಇದ್ದಾನೆ ಎಂದರೆ? ಪರಮಾತ್ಮನನ್ನು ಕಂಡವರು ಇದ್ದಾರೆಯೇ? ನಮ್ಮೊಳಗಿನ ಆತ್ಮವನ್ನು ಕಂಡವರು ಇದ್ದಾರೆಯೇ? ಕಾಣುತ್ತೇನೆ ಎಂದುಕೊಂಡರೆ ಕಾಣಬಹುದು. ಯಾಕೆಂದರೆ ಪರಮಾತ್ಮನಿಗೆ ರೂಪ ನೋಡಿದವರಿಲ್ಲ. ನಮ್ಮ ಕಲ್ಪನೆಯ ಒಳಗೇ ಅವನ ರೂಪ ಬೇರೆಬೇರೆಯಾಗಿ ಕಾಣುತ್ತಿರುತ್ತದೆ. ನಿಜವಾಗಿ ಎಲ್ಲಿ ಕಾಣುತ್ತಾನೆ? ನಾವು ಯಾವುದರಲ್ಲಿ ಆತನನ್ನು ಕಾಣುತ್ತೇವೆಯೋ ಅಲ್ಲಿ ಆತ ಕಾಣುತ್ತಾನೆ. ಒಬ್ಬನಿಗೆ ಒಂದು ಪವಾಡ ಪರಮಾತ್ಮ ಅನ್ನಿಸಬಹುದು. ಇನ್ನೊಬ್ಬನಿಗೆ ಪ್ರಪಾತಕ್ಕೆ ಬಿದ್ದೇ ಬಿಟ್ಟ ಎನ್ನುವಾಗ ರಕ್ಷಿಸಿದವನೇ ಪರಮಾತ್ಮ ಎಂದೆನಿಸಬಹುದು. ಒಂದು ಅಸಾಧ್ಯ ಘಟನೆ, ಒಂದು ಹುಟ್ಟು, ಒಂದು ಸಾವು, ಒಂದು ಅದ್ಭುತ, ಒಂದು ಮುಂಜಾನೆ, ಒಂದು ಮುಸ್ಸಂಜೆ ಹೀಗೆ ಅದಾವುದೋ ಗಳಿಗೆ ಪರಮಾತ್ಮ ಎಂದು ಅನ್ನಿಸಿಬಿಡುತ್ತದೆ. ನಾನು ಪ್ರತಿ ಉಸಿರನ್ನು ತೆಗದುಕೊಳ್ಳುವಾಗ ಅದೇ ಪರಮಾತ್ಮ ಎಂದುಕೊಳ್ಳುತ್ತೇನೆ. ಯಾಕೆಂದರೆ ಉಸಿರು ನಿಂತರೆ ಆತ್ಮ ದೇಹವನ್ನು ತ್ಯಜಿಸಿ ಪರಮಾತ್ಮನನ್ನು ಸೇರುತ್ತದೆ. ಉಸಿರಾಡಲು ಪರಮಾತ್ಮನ ಸಹಾಯ ಬೇಕು. ಎಲ್ಲ ಮೆಯ್ಮರೆತು ನಿದ್ರಿಸಿದಾಗಲೂ ನಾವು ಉಸಿರಾಡುತ್ತಲೇ ಇರುತ್ತೇವೆ. ಉಸಿರಾಟಕ್ಕೆ ನಿದ್ರೆಯಿಲ್ಲ. ಇದನ್ನೇ ನಾನು ಪರಮಾತ್ಮನಾಟ ಎನ್ನುತ್ತೇನೆ.

ಶ್ರೀಮದ್ಭಾಗವತದಲ್ಲಿ ವಿಶ್ವವು ಪರಮಾತ್ಮನ ಸ್ವರೂಪ ಎನ್ನಲಾಗಿದೆ. “ಜೇಡರಹುಳುವು ಹೃದಯದಿಂದ ಹೊರಬಂದ ನೂಲೆಳೆಯನ್ನು ಬಾಯಿಯಿಂದ ಹರಡಿ ಬಲೆಯನ್ನು ಕಟ್ಟಿಕೊಂಡು, ಅದರಲ್ಲಿಯೇ ವಾಸಮಾಡಿ, ಸ್ವೇಚ್ಛೆಯಿಂದ ವಿಹರಿಸುತ್ತಿದ್ದು, ಕಡೆಗೆ ಆ ಬಲೆಯನ್ನು ತಾನೇ ನುಂಗಿಬಿಡುತ್ತದೆ. ಹಾಗೆಯೇ ಪರಮೇಶ್ವರನೂ ಈ ಜಗತ್ತನ್ನು ಸೃಷ್ಟಿಸಿ, ಅದರಲ್ಲಿ ಜೀವರೂಪದಿಂದ ವಿಹರಿಸುತ್ತ ಕೊನೆಗೆ ಅದನ್ನು ತನ್ನಲ್ಲಿಯೇ ಲೀನಗೊಳಿಸಿಕೊಳ್ಳುತ್ತಾನೆ. ಇದರಿಂದ ಮೊತ್ತವಾಗಿ ಈ ವಿಶ್ವವು ಪರಮಾತ್ಮದೇ ಸ್ವರೂಪವಾಗಿದೆ ಎಂದು ತಿಳಿಯಬೇಕು” ಎಂದು ಶ್ರೀಮದ್ಭಾಗವತದ ಅವಧೂತೋಪಾಖ್ಯಾನದಲ್ಲಿ ಹೇಳಲಾಗಿದೆ. ಅದ್ವಿತೀಯನಾದ, ದೇವದೇವನಾದ ನಾರಾಯಣನೇ ತನ್ನ ಮಾಯೆಯಿಂದ ವಿಶ್ವವನ್ನು ನಿರ್ಮಿಸುತ್ತಾನೆ. ಅವನೇ ಕಲ್ಪದ ಕೊನೆಯಲ್ಲಿ ತನ್ನ ಕಾಲಶಕ್ತಿಯ ಮೂಲಕ ಇದರ ಉಪಸಂಹಾರವನ್ನು ಮಾಡುತ್ತಾನೆ. ಆ ಪರಮಾತ್ಮನು ಓರ್ವನೇ ಆಗಿದ್ದಾನೆ. ಹಾಗೂ ಸ್ವಗತಭೇದರಹಿತನಾಗಿದ್ದಾನೆ. ಅಂದರೆ ವಿಜಾತಿಯ ಪ್ರಧನಾದಿ ಭೇದದಿಂದ ರಹಿತನಾಗಿದ್ದಾನೆ. ನಿರುಪಾಧಿಕನಾಗಿದ್ದಾನೆ. ಈ ಪ್ರಕಾರ ಪರಮಾತ್ಮನು ಅಖಂಡರೂಪದಿಂದ ಸ್ವಯಂ ತಾನೇ ತಾನಾಗಿದ್ದಾನೆ. ಆ ಭಗವಾನ್ ಆದಿನಾರಾಯಣನೇ ಪ್ರಕೃತಿ-ಪುರುಷರ ನಿಯಾಮಕನಾಗಿದ್ದಾನೆ. ಅವನು ತನ್ನ ಕಾಲಶಕ್ತಿಯ ಮೂಲಕ ಈ ಸತ್ತ್ವಾದಿ ಶಕ್ತಿಗಳನ್ನು ಸಾಮ್ಯಾವಸ್ಥೆಗೆ ಒಯ್ದಾಗ ಏಕಮಾತ್ರ ಪರಮಾತ್ಮನೇ ಶೇಷವಾಗಿ ಇರುತ್ತಾನೆ. ಹಾಗಾಗಿ ವಿಶ್ವವೇ ದೇವರ ಸ್ವರೂಪ.

ದೇವರನ್ನು ಎಲ್ಲಿ ಹುಡುಕುತ್ತೇವೆಯೋ ಅಲ್ಲಿಯೇ ಇರುತ್ತಾನೆ. ಆತ ಸರ್ವಾಂತರ್ಯಾಮಿ. ಹಾಗಾಗಿ ನೋಡುವ ಕಣ್ಣು ಬೇಕು. ಇಲ್ಲಿ ಹೇಳಿದ ಜೇಡರಹುಳುವಿನ ಉದಾಹರಣೆಯೇ ಸಾಕು, ದೇವರ ಸ್ವರೂಪವನ್ನು ಅರಿಯಲು. ಸೃಷ್ಟಿ, ಸ್ಥಿತಿ ಮತ್ತು ಲಯ ಈ ಮೂರೂ ಅವನಿಂದಲೇ, ಅವನೇ ಆಗಿದ್ದಾನೆ. ನೀ ಮಾಯೆಯೊಳಗೋ, ನಿನ್ನೊಳು ಮಾಯೆಯೋ ಎಂಬ ದಾಸರ ಪದದಂತೆ, ದೇವನೆಂದರೇ ಮಾಯೆ; ಎಲ್ಲವೂ ಅವನ ಮಾಯೆಯೇ.

||ಸರಳವಾಗಿ ಯೋಚಿಸಿ-ಸಂಸ್ಕಾರಯುತರಾಗಿ-ಸರಳರಾಗಿ ಜೀವಿಸಿ||

– ಭಾಸ್ವ.

LEAVE A REPLY

Please enter your comment!
Please enter your name here