ಜ್ಞಾನ ಎಂಬುದು ಒಂದು ವಿಶೇಷವಾದ ಸಂಪತ್ತು. ಯಾರಿಂದಲೂ ಕದಿಯಲಾಗದ ಆದರೆ ಹಂಚಿದಷ್ಟೂ ವಿಸ್ತಾರಗೊಳ್ಳುವ ಸಂಪತ್ತು. ಆದುದರಿಂದಲೇ “ನಹೀ ಜ್ಞಾನೇನ ಸದೃಶಂ” ಎಂಬ ಉಕ್ತಿ ಹುಟ್ಟಿಕೊಂಡಿದೆ. ಅಂದರೆ ಜ್ಞಾನಕ್ಕಿಂತಲೂ ಮಿಗಿಲಾದುದು ಯಾವುದೂ ಇಲ್ಲ ಎಂದರ್ಥ. ಜ್ಞಾನವನ್ನು ಎಲ್ಲೆಲ್ಲಿ ಯಾವಯಾವ ಮೂಲಗಳಿಂದ ಪಡೆಯಲಾಗುತ್ತದೋ ಅವೆಲ್ಲವುಗಳಿಂದಲೂ ಪಡೆಯಬೇಕಂತೆ. ಒಂದಲ್ಲ ಒಂದು ದಿನ ಬದುಕಿನ ಪಯಣದಲ್ಲಿ ಅವು ಸಹಾಯಕ್ಕೊದಗಿ ಬರುವುದಂತೆ. ಹಾಗಾಗಿಯೇ ಮದ್ಭಾಗವತದಲ್ಲಿ ಆಕಾಶದಿಂದಲೂ ನಾವು ಅರಿತುಕೊಳ್ಳಬೇಕಾದ ಸಂಗತಿಯಿದೆ ಎಂಬುದನ್ನು ಹೇಳಲಾಗಿದೆ.
ಬ್ರಹ್ಮನ ಆತ್ಮದ ಸ್ವರೂಪವನ್ನು ಅರಿತುಕೊಳ್ಳುವಲ್ಲಿ ಆಕಾಶದ ಉದಾಹರಣೆಯನ್ನು ನೀಡಲಾಗಿದೆ. ಆಕಾಶವು ಎಲ್ಲಕಡೆ ತುಂಬಿಕೊಂಡು ಸರ್ವವ್ಯಾಪಿಯಾದುದು. ಇದರಂತೆಯೇ ಬ್ರಹ್ಮವೂ ಸ್ಥಾವರ ಜಂಗಮಗಳಲ್ಲಿ, ಎಲ್ಲ ಪ್ರಾಣಿಗಳಲ್ಲಿ ಸಮರೂಪದಿಂದ ಮತ್ತು ಅನ್ವಯರೂಪದಿಂದ ಸರ್ವವ್ಯಾಪವಾಗಿದೆ. ಅರ್ಥಾತ್ ಅದು ಒಳಗೆ ಹೊರಗೆ ಎಲ್ಲೆಡೆ ಪರಿಪೂರ್ಣವಾದುದಾಗಿದೆ. ಬ್ರಹ್ಮವು ಅಖಂಡರೂಪದಿಂದಿದ್ದು ಅಸಂಗತವಾಗಿದೆ. ಇಂತಹ ಆತ್ಮನ ಸರ್ವವ್ಯಾಪಕತೆಯ ಅನುಭವವನ್ನು ಆಕಾಶದ ಸರ್ವವ್ಯಾಪಕತೆಯನ್ನು ನೋಡಿ ಅರಿತುಕೊಳ್ಳಬೇಕು.
ಆಕಾಶ ಎಂಬುದು ವೈಜ್ಞಾನಿಕವಾಗಿಯೂ ವಿಸ್ಮಯಯುತವಾದ ಪ್ರದೇಶವಾಗಿದೆ. ಭೂಮಿಯ ಮೇಲಿನ ಕಾರ್ಯಗಳನ್ನು ನಿಯಂತ್ರಿಸುವ ಸಾಧನಗಳನ್ನು ಆಕಾಶ ಹಿಡಿದಿಟ್ಟುಕೊಂಡಿದೆ. ಜ್ಞಾನ ವಿಜ್ಞಾನದ ಬೆಳವಣಿಗೆಗೆ, ಪ್ರಪಂಚದ ಅಭಿವೃದ್ಧಿಗೆ ಅನುಕೂಲಕರವಾಗಿರುವ ಆಕಾಶದಿಂದ ಕಲಿಯಬೇಕಾದ, ನಮ್ಮ ಜೀವನಕ್ಕೆ ಬೇಕಾದ ಜ್ಞಾನ ಇದರಲ್ಲಿದೆ. ಆಕಾಶ ಎಂದರೆ ಅವಕಾಶ ಎಂದರ್ಥ. ಮಾನವನ ಜೀವನವೂ ಒಂದು ಅವಕಾಶವೇ. ಹೇಗೆ ಆಕಾಶವು ಸರ್ವವ್ಯಾಪಿಯಾಗಿ ಸರ್ವರಿಗೆ ಉಪಕಾರಿಯಾಗಿ ಹರಡಿಕೊಂಡಿದೆಯೋ ಹಾಗೇ ನಮ್ಮ ಜೀವನವೂ ವಿಶಾಲವಾದ ಮನೋಭಾವದಿಂದ ಕೂಡಿರಬೇಕು. ನಾವು ಎಲ್ಲಿ ಹೋದರೂ ಅಲ್ಲಿ ಕಾಣುವ ಆಕಾಶ ಒಂದೇ ರೂಪವನ್ನು ಹೊಂದಿರುತ್ತದೆ. ಏಕರೂಪ ಎಂಬುದು ಒಂದು ಸತ್ಯದ ರೂಪವೇ ಆಗಿದೆ. ನಾವು ಕೂಡ ಎಲ್ಲಿದ್ದರೂ ಒಂದೇ ಭಾವದಿಂದ ಇರುವುದನ್ನು ಕಲಿಯಬೇಕು. ನಮ್ಮತನ ಎಂಬುದು ಸತ್ಯದ ಕಡೆಗೆ ಇರಬೇಕು. ಯಾಕೆಂದರೆ ಸತ್ಯ ಎಂಬುದು ಆಕಾಶದಂತೆ ಎಲ್ಲಿದ್ದರೂ ಸತ್ಯವೇ, ಆಕಾಶವೂ ಪ್ರಪಂಚದ ಯಾವುದೇ ಮೂಲೆಗೆ ಹೋಗಿ ನೋಡಿದರೂ ಅದು ಆಕಾಶವೇ. ಆದರೆ ಸುಳ್ಳು ಕ್ಷಣದಿಂದ ಕ್ಷಣಕ್ಕೆ, ಊರಿಂದ ಊರಿಗೆ, ವ್ಯಕ್ತಿಯಿಂದ ವ್ಯಕ್ತಿಗೆ ಬೇರೆಬೇರೆ ರೂಪ ಹೊಂದುವಂತದ್ದು. ಹಾಗಾಗಿ ಸುಳ್ಳನ್ನು ಸಂಭಾಳಿಸುವುದೇ ಜೀವನದ ಗುರಿಯಾಗಿಬಿಡುತ್ತದೆ.
ಇನ್ನು, ಆಕಾಶದಷ್ಟು ಬೇಕು ಎಂದು ಕೊಳ್ಳುವುದು ಮಹದಾಸೆ. ಅಂತಹ ಆಸೆಯನ್ನು ಬಿಡುವುದಕ್ಕೂ ಆಕಾಶವೇ ನಿದರ್ಶನವಾಗಿದೆ. ಆಕಾಶದಲ್ಲಿ ಏನೇನಲ್ಲ ಇವೆ. ಮಳೆಗೆ ಕಾರಣವಾಗುವ ಮೋಡದಿಂದ ಹಿಡಿದು ಗ್ರಹಗಳು, ನಕ್ಷತ್ರಗಳು, ಸೂರ್ಯ, ಚಂದ್ರ ಮೊದಲಾದವುಗಳು ಆಕಾಶದ ಒಡಲಿನಲ್ಲಿಯೇ ಇದ್ದರೂ ಅವುಗಳಿಂದ ಆಕಾಶ ಹೊರತಾಗಿದೆ. ಎಲ್ಲವೂ ಇದ್ದು ಅವು ಯಾವುದೂ ತನ್ನದ್ದಲ್ಲ ಎಂಬ ಭಾವನೆಯು ಸುಖ ದುಃಖದಿಂದ ನಮ್ಮ ಮನಸ್ಸು ದೂರವುಳಿಯುವಂತೆ ಮಾಡುತ್ತದೆ. ಗುಣಾತೀತನಾಗುವುದಕ್ಕೂ ಆಕಾಶವೇ ಉದಾಹರಣೆ. ಸತ್ತ್ವಾದಿ ಗುಣಗಳನ್ನು ನಾವು ಮೀರಿ ಬೆಳೆಯಬೇಕು. ಆಕಾಶ ಅನಂತತೆಯ ಪ್ರತಿರೂಪ. ನಮ್ಮ ಆತ್ಮವೂ ಅನಂತವಾದುದು. ಶರೀರ ಎಂಬುದು ಒಂದು ಮಾಧ್ಯಮಷ್ಟೆ. ಶರೀರಕ್ಕೆ ಕೊನೆಯಿದೆ. ಶುದ್ಧ ಆತ್ಮದಿಂದ ಮುಕ್ತಿ ಸಾಧ್ಯ. ಅಂತಹ ಆತ್ಮದ ಸತ್ಯವನ್ನು ಅರಿತುಕೊಂಡು ಆಕಾಶದಂತೆ ಶುಭ್ರವಾದ ಮನಸ್ಸು ನಮ್ಮದಾಗಬೇಕು.
..ಮುಂದುವರಿಯುವುದು.
||ಸರಳವಾಗಿ ಯೋಚಿಸಿ ಸಂಸ್ಕಾರಯುತರಾಗಿ ಸರಳರಾಗಿ ಜೀವಿಸಿ||
ವಿಷ್ಣು ಭಟ್, ಹೊಸ್ಮನೆ (ಭಾಸ್ವ).