Home ನಂಬಿಕೆ ಸುತ್ತಮುತ್ತ ಉತ್ತರಾಯಣ ಪುಣ್ಯಕಾಲದ ವಿಶೇಷ… ಸಂಕ್ರಾಂತಿಯ ಸುಗ್ಗಿ ಸಂಭ್ರಮ

ಉತ್ತರಾಯಣ ಪುಣ್ಯಕಾಲದ ವಿಶೇಷ… ಸಂಕ್ರಾಂತಿಯ ಸುಗ್ಗಿ ಸಂಭ್ರಮ

2526
0
SHARE

ಸನಾತನ ಭಾರತೀಯರ ಮಹಾಪರ್ವಕಾಲಗಳಲ್ಲಿ ಅತ್ಯಂತ ಮುಖ್ಯವಾದ ಒಂದು ಕಾಲ ಉತ್ತರಾಯಣ ಪರ್ವ ಪುಣ್ಯಕಾಲ. ಮಕರ ಸಂಕ್ರಮಣ ದಿಂದ ಆರಂಭವಾಗಿ ಕರ್ಕಾಟಕ ಸಂಕ್ರಮಣದವರೆಗಿನ ಕಾಲವನ್ನು ಉತ್ತರಾಯಣ, ಕರ್ಕಾಟಕದಿಂದ ಮಕರ ಸಂಕ್ರಮಣದವರೆಗಿನ ಕಾಲವನ್ನು ದಕ್ಷಿಣಾಯಣ ಕಾಲ. ಹೀಗೆ ಆರು ತಿಂಗಳು ಉತ್ತರಾಯಣ, ಆರು ತಿಂಗಳು ದಕ್ಷಿಣಾಯಣವೆಂದು ಹೇಳುತ್ತಾರೆ.

ದಕ್ಷಿಣಾಯಣವು ದೇವತೆಗಳ ರಾತ್ರಿಯ ಸಮಯವೆಂದು ಕರೆಯಲ್ಪಟ್ಟು ಪಿತೃದೇವತೆಗಳಿಗೆ ಪ್ರಿಯವಾದ ತರ್ಪಣ , ಶ್ರಾದ್ಧಾದಿಗಳಿಗೆ ಪ್ರಾಶಸ್ತ್ಯವಿರುತ್ತದೆ. ಹಾಗೆ ಉತ್ತರಾಯಣ ಸಮಯವೂ ದೇವತೆಗಳಿಗೆ ಹಗಲು ಎಂದು ಕರೆಯಲ್ಪಟ್ಟು ವಿವಾಹ ಕರ್ಮಗಳಿಗೆ ಪ್ರಶಸ್ತವಾಗಿರುತ್ತದೆ. ಧ್ಯಾನ, ದಾನ ,ಪೂಜೆ ಇತ್ಯಾದಿ ದೇವತಾಕಾರ್ಯಗಳಿಗೆ ಉತ್ತರಾಯಣವು ಪ್ರಶಸ್ತ ಎಂಬುದು ಶಾಸ್ತ್ರಗಳ ಅಭಿಪ್ರಾಯ. ಆದರೆ ಉತ್ತರಾಯಣದಲ್ಲಿ ಮತ್ತೊಂದು ಪ್ರಸಿದ್ಧವಾದ ವಿಚಾರವೊಂದಿದೆ, “ಕಾಶಿಯಲ್ಲಿ ಮರಣ ಹೊಂದಿದವರು ಶಿವ ಸಾಯುಜ್ಯವನ್ನು ಹೊಂದುತ್ತಾರೆ, ಉತ್ತರಾಯಣದಲ್ಲಿ ಮರಣ ಹೊಂದಿದರೆ ಮುಕ್ತಿಯನ್ನು ಪಡೆಯುತ್ತಾರೆ ” ಎಂಬ ಮಾತು ಶಾಸ್ತ್ರಗಳಲ್ಲಿ ಕಂಡುಬರುತ್ತದೆ.

ದಕ್ಷಿಣಾಯನದಲ್ಲಿ ಶರಶಯ್ಯೆಯಲ್ಲಿ ಬಿದ್ದಿದ್ದ ಭೀಷ್ಮಾಚಾರ್ಯರು ತಮ್ಮ ಪ್ರಾಣಪಕ್ಷಿ ಹಾರಿಹೋಗಲು ಬಿಡದೆ ಉತ್ತರಾಯಣ ಬರುವವರೆಗೂ ತಡೆದ್ದಿದ್ದರು ಎಂಬ ಅಭಿಪ್ರಾಯವನ್ನು ಮಹಾಭಾರತದಲ್ಲಿ ಕೇಳುತ್ತೇವೆ. ಉತ್ತರಾಯಣ ಮಾರ್ಗಕ್ಕೆ ಅರ್ಚಿರಾದಿಮಾರ್ಗ ಎಂದು ಹೆಸರು. ಏಕೆಂದರೆ ಅದು ಅಗ್ನಿಜ್ಯೋತಿಯ ದರ್ಶನದಿಂದ ಪ್ರಾರಂಭವಾಗುತ್ತದೆ. ದೇವದೇವನಾದ ಪರಮಾತ್ಮನು ಪುನರಾವೃತ್ತಿಯಿಲ್ಲದ ಸ್ಥಾನಕ್ಕೆ ತಲುಪಿಸುವುದರಿಂದ ಅದನ್ನು ‘ದೇವಾಯಾನ’ ಮಾರ್ಗವೆಂದು ಕರೆಯುತ್ತಾರೆ. ಹಾಗೆಯೇ ದಕ್ಷಿಣಾಯನ ಮಾರ್ಗಕ್ಕೆ ‘ಧೂಮಾದಿಮಾರ್ಗ’ ಅಥವಾ ‘ಪಿತೃಯಾನಮಾರ್ಗ’ ಎಂದೂ ಕರೆಯುತ್ತಾರೆ. ಇದರಲ್ಲಿ ದೇವಾಯಾನ ಮಾರ್ಗವು ಮುಕ್ತಿಗೆ ಒಯ್ಯುತ್ತದೆ, ಪಿತೃಯಾನಮಾರ್ಗವು ಚಂದ್ರಸಾಯುಜ್ಯಕ್ಕೆ ಕೊಡೊಯ್ಯುತ್ತದೆ. ಅದು ಮರಳಿ ಸಂಸಾರಕ್ಕೆ ಹಿಂದಿರುಗಿಸುತ್ತದೆ ಎಂಬ ಅಭಿಪ್ರಾಯವನ್ನು ಉಪನಿಷತ್ತುಗಳು ಸ್ಪಷ್ಟಪಡಿಸುತ್ತದೆ. ಆದರೆ ಯೋಗಿಗಳು ಯಾವ ಕಾಲದಲ್ಲಿ ಪ್ರಾಣವನ್ನು ಬಿಟ್ಟರೂ ಪುನರಾವೃತ್ತಿಯಿಲ್ಲದ ಮುಕ್ತಿಯನ್ನು ಪಡೆಯುತ್ತಾರೆ.

ಇಂಥ ಉತ್ತರಾಯಣವನ್ನು ಪ್ರಾರಂಭಿಸುವ ದಿನವಾದ ಮಕರ ಸಂಕ್ರಾಂತಿಗೆ ವಿಶೇಷವಾದ ಮಾನ್ಯತೆಯೂ ಶಾಸ್ತ್ರ ಸಂಪ್ರದಾಯದಲ್ಲಿ ಕಂಡುಬರುವುದು ಸಹಜವೇ ಆಗಿದೆ. ಈ ದಿನದಲ್ಲಿ ಶ್ರದ್ಧಾ-ಭಕ್ತಿ-ವಿವೇಕಗಳಿಂದ ಮಾಡುವ ಸ್ನಾನ, ಧ್ಯಾನ, ದಾನ , ಹೋಮ, ಪೂಜೆ, ತರ್ಪಣ ಶ್ರಾದ್ದ ಮುಂತಾದವುಗಳಿಗೆ ಅತ್ಯಂತ ಹೆಚ್ಚಿನ ಫಲವುಂಟೆಂದು ಶಾಸ್ತ್ರಗಳು ತಿಳಿಸುತ್ತವೆ.

ಸಂಕ್ರಾಂತಿ ಎಂಬ ಶಬ್ದಕ್ಕೆ ಸೂರ್ಯನು ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಹೆಜ್ಜೆ ಇಡುವಂತೆ ದರ್ಶನವಾಗುವುದು ಎಂದು ಅರ್ಥ. ಸೂರ್ಯನು ಒಂದು ರಾಶಿಯಿಂದ ಮತ್ತೊಂದು ರಾಶಿಯಲ್ಲಿ ಪ್ರವೇಶಮಾಡುವುದಲ್ಲದೆ ಗ್ರಹಗಳು ನಕ್ಷತ್ರ ಮತ್ತು ರಾಶಿಗಳಲ್ಲಿ ಪ್ರವೇಶಮಾಡುವುದು ಕೂಡ ಸಂಕ್ರಾಂತಿ ಪುಣ್ಯಕಾಲದಲ್ಲಿಯೇ. ಆದರೂ ಸೂರ್ಯನು ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಪ್ರವೇಶ ಮಾಡುವುದನ್ನು ವಿಶೇಷವಾಗಿ ಸಂಕ್ರಾಂತಿಯೆಂದು ಕರೆಯುವುದು ರೂಢಿಯಾಗಿದೆ.

ಸಂಕ್ರಾಂತಿಯು ಸೌರಮಾನದ ಆಚರಣೆ. ಇಂಥ ಸಂಕ್ರಾಂತಿಯು ಹನ್ನೆರಡು- ಮೇಷ ಸಂಕ್ರಾಂತಿ, ವೃಷಭ ಸಂಕ್ರಾಂತಿ, ಮಿಥುನ ಸಂಕ್ರಾಂತಿ, ಕಟಕ ಸಂಕ್ರಾಂತಿ, ಸಿಂಹಸಂಕ್ರಾಂತಿ, ಕನ್ಯಾಸಂಕ್ರಾಂತಿ, ತುಲಾಸಂಕ್ರಾಂತಿ, ವೃಶ್ಚಿಕ ಸಂಕ್ರಾಂತಿ, ಧನು ಸಂಕ್ರಾಂತಿ, ಮಕರ ಸಂಕ್ರಾಂತಿ, ಕುಂಭ ಸಂಕ್ರಾಂತಿ ಹಾಗೂ ಮೀನ ಸಂಕ್ರಾಂತಿ. ಇವುಗಳಲ್ಲಿ ಕರ್ಕಾಟಕ ಮತ್ತು ಮಕರ ಸಂಕ್ರಮಣಗಳು ಆಯನ ಸಂಕ್ರಾಂತಿಗಳು, ಮೇಷ ಮತ್ತು ತುಲಾ ಸಂಕ್ರಮಣಗಳು ವಿಷುವ ಸಂಕ್ರಾಂತಿಗಳು. ಮಿಥುನ, ಕನ್ಯಾ, ಧನು ಮತ್ತು ಮೀನ ಸಂಕ್ರಮಣಗಳು ಷಡಶೀತಿ ಸಂಕ್ರಮಣಗಳು. ಮತ್ತು ವೃಷಭ, ಸಿಂಹ,ವೃಶ್ಚಿಕ ಮತ್ತು ಕುಂಭ ಸಂಕ್ರಮಣಗಳು ವಿಷ್ಣುಪಾದ ಸಂಕ್ರಮಣಗಳು ಎಂದು ವಿಭಾಗ ಮಾಡಲಾಗಿದೆ. ಹೀಗೆ ಹನ್ನೆರಡು ಸಂಕ್ರಮಣಗಳಿದ್ದರು ಜನಸಾಮಾನ್ಯರು ವಿಶೇಷವಾದ ಮಕರ ಸಂಕ್ರಮಣವನ್ನು ಮಾತ್ರವೇ ಸಂಕ್ರಾಂತಿ ಎಂದೂ ಕರೆಯುದು. ಸಂಕ್ರಾಂತಿಯು ಗ್ರಹಣದಂತೆ ಅತ್ಯಂತ ಪುಣ್ಯಕಾಲವೆಂದು ಪರಿಗಣಿತವಾಗಿರುವುದರಿಂದ ಆ ಪುಣ್ಯಕಾಲದಲ್ಲಿ, ಪುಣ್ಯತೀರ್ಥಗಳಲ್ಲಿ ಸ್ನಾನಮಾಡುವುದು ಅತ್ಯಂತ ಪ್ರಶಸ್ತ. ಹೀಗೆ ಮಾಡುವುದರಿಂದ ಅನಿಷ್ಟಗಳು ದೂರಾಗುತ್ತದೆ. ಮಕರ ಸಂಕ್ರಾಂತಿಯನ್ನು ‘ಹುಗ್ಗಿ’ ಹಬ್ಬ ಹಾಗೂ ‘ಸುಗ್ಗಿ’ ಹಬ್ಬ ಮತ್ತು ‘ಎಳ್ಳಿನ’ ಹಬ್ಬ ಎಂತಲೂ ಕರೆಯುತ್ತಾರೆ.

ಸಂಕ್ರಾಂತಿ ಹಬ್ಬವನ್ನು ಮೂರು ದಿನದ ಹಬ್ಬವಾಗಿ ಆಚರಿಸುತ್ತಾರೆ. ಮೊದಲ ದಿನ ಭೋಗಿ ಹಬ್ಬ ಎಂದೂ ಕರೆಯುತ್ತಾರೆ. ಮನೆಯನ್ನೆಲ್ಲ ಶುದ್ಧಗೊಳಿಸಿ, ಬೀದಿ ಬಾಗಿಲಲ್ಲಿ ಗೋಮಯದಿಂದ ಸಾರಿಸಿ, ಬಣ್ಣಬಣ್ಣದ ರಂಗೋಲಿಯನ್ನು ಬಿಡಿಸುತ್ತಾರೆ. ದೇವತಾ ಪೂಜೆಯನ್ನು ವಿಶೇಷವಾಗಿ ಆಚರಿಸಿ ಪ್ರಸಾದ ಸ್ವೀಕರಿಸುತ್ತಾರೆ. ದೇವರಿಗೆ ಹೆಸರುಬೇಳೆಯಿಂದ ನೈವೇದ್ಯಮಾಡಿ ಸ್ವೀಕರಿಸುವ ಭೋಜ್ಯ ಪದಾರ್ಥವನ್ನು ‘ಹುಗ್ಗಿ’ ಎಂದೂ ಕರೆಯುತ್ತಾರೆ. ಹಿಂದಿನ ತಿಂಗಳಾದ ಧನುರ್ಮಾಸದಲ್ಲಿ ಪ್ರತಿದಿನವೂ ದೇವರಿಗೆ ಅರ್ಪಿಸಲ್ಪಡುವ ಭೋಜ್ಯಾದ್ರವ್ಯಕ್ಕೆ ಈ ದಿವಸ ಮಂಗಳಾರಂಭ ಸಮರ್ಪಣೆ ನಡೆಯುತ್ತದೆ.

ಎಳ್ಳಿನ ಹಬ್ಬವೆಂದೇ ಪ್ರಸಿದ್ದವಾಗಿರುವ ಈ ಪರ್ವದಿನದಲ್ಲಿ ಎಳ್ಳನ್ನು ನಾನಾರೂಪಗಳಲ್ಲಿ ಬಳಸುತ್ತಾರೆ. ಎಳ್ಳಿನಿಂದ ಸ್ನಾನಮಾಡುತ್ತಾರೆ, ಎಳ್ಳಿನ ನೀರಿನಿಂದ ತರ್ಪಣ ಕೊಡುತ್ತಾರೆ, ಎಳ್ಳಿನಿಂದ ನಿರ್ಮಿತವಾದ ಗೋವನ್ನು ದಾನಮಾಡುತ್ತಾರೆ, ಸುಗ್ಗಿಕಾಲವಾದ್ದರಿಂದ ಬೆಳೆದ ಬೆಳೆಯನ್ನು ರಾಶಿ ಮಾಡಿ ಅದನ್ನು ಪೂಜಿಸಿ ಮಳೆಯಿಂದ ಸಮೃದ್ಧಿಯನ್ನು ಕೊಟ್ಟ ದೇವರಿಗೆ ವಂದಿಸುತ್ತಾರೆ. ವಿಶೇಷವಾಗಿ ಎಳ್ಳನ್ನು- ಬೆಲ್ಲ, ಕೊಬ್ಬರಿ,ಹುರಿಕಡ್ಲೆ , ಕಡಲೆಕಾಯಿಬೀಜ ಎಲ್ಲವನ್ನು ಮಿಶ್ರಣ ಮಾಡಿ, ಸಕ್ಕರೆ ಗೊಂಬೆಗಳನ್ನು ತಯಾರಿಸುತ್ತಾರೆ. ಇದನ್ನು ಹೊಸ ಬೆಳೆಯಾದ ಕಬ್ಬು, ಬಾಳೆಹಣ್ಣಿನೊಂದಿಗೆ ಎಲ್ಲರಿಗೂ ಹಂಚಿ ಸಂಭ್ರಮಿಸುತ್ತಾರೆ. ಇಷ್ಟೇ ಅಲ್ಲದೆ ಪೀಡಾಪರಿಹಾರಾರ್ಥವಾಗಿ ಅಂಥ ಎಳ್ಳನ್ನು ಶಿಶುಗಳ ಮೇಲೆ ಸುರಿಯುತ್ತಾರೆ. ಅಂತೆಯೇ ಬದರೀಫಲವನ್ನು( ಬೋರೆಹಣ್ಣುಗಳನ್ನು) ಮಕ್ಕಳ ಮೇಲೆ ಸುರಿಯುವುದೂ ಉಂಟು. ಮಕ್ಕಳಿಗೆ ಆರತಿಯನ್ನು ಎತ್ತಿ ಸಕ್ಕರೆ ಪಾಕದಿಂದ ಮಾಡಿದ ಗುಂಡಿನ ಹಾರವನ್ನು ತೊಡಿಸುತ್ತಾರೆ. ಮಕ್ಕಳು , ಗುರುಹಿರಿಯರಿಗೆ ನಮಸ್ಕಾರಮಾಡಿ ಆಶೀರ್ವಾದ ಪಡೆಯಬೇಕು.

ಸಂಕ್ರಾಂತಿಯಲ್ಲಿ ಮತ್ತೊಂದು ವಿಶೇಷವೆಂದರೆ ಗೋವುಗಳನ್ನು ಪೂಜಿಸುವುದು. ಇದನ್ನು ಹೆಚ್ಚಾಗಿ ಸಂಕ್ರಾಂತಿಯ ಮಾರನೆಯದಿನ ಆಚರಿಸುತ್ತಾರೆ. ದನಕರುಗಳಿಗೆ ಸ್ನಾನಮಾಡಿಸಿ ಅವುಗಳ ಕೊಂಬುಗಳಿಗೆ ಬಣ್ಣಹಚ್ಚಿ ಅವುಗಳನ್ನು ಸಿಂಗರಿಸಿ, ಅವುಗಳಿಗೆ ಪ್ರಿಯವೂ, ಹಿತಕರವೂ ಆದ ಹುಲ್ಲುಕಡ್ಡಿ, ಧಾನ್ಯ , ಕಾಯಿ ,ಬೆಲ್ಲಗಳನ್ನು ಅವುಗಳಿಗೆ ತಿನ್ನಿಸುತ್ತಾರೆ. ಪೀಡಾಪರಿಹಾರಾರ್ಥವಾಗಿ ಹಾಗು ಅವುಗಳಿಗೆ ಯಾವುದೇ ರೀತಿಯ ರೋಗಭಾದೆಗಳು ಬರದಿರಲೆಂದು ಅವುಗಳನ್ನು ಉರಿಯುತ್ತಿರುವ ಬೆಂಕಿಯನ್ನು ದಾಟಿಹೋಗುವಂತೆ ಮಾಡುತ್ತಾರೆ. ಇದಕ್ಕೆ ‘ಕಿಚ್ಚು ಹಾಯಿಸುವುದು’ ಎಂದೂ ಕರೆಯುತ್ತಾರೆ.

ಇದೊಂದು ಪುಣ್ಯಕಾಲ, ಅಂತೆಯೇ ಪರ್ವಕಾಲ ಈ ಕಾಲ ಧಾನ್ಯಗಳನ್ನು ,ಎಳ್ಳು ಬೆಲ್ಲವನ್ನು ಹಂಚುವ ಕಾಲ. “ಎಳ್ಳು ಬೆಲ್ಲ ತಿಂದು ಒಳ್ಳೆಯದನ್ನು ಮಾತನಾಡು” ಎಂದೂ ಕನ್ನಡದ ಗಾದೆಗೆ ಮೂಲವೇ ಈ ಮಕರ ಸಂಕ್ರಾತಿಯ ಹಬ್ಬವಾಗಿದೆ. ಅಧ್ಯಾತ್ಮದ ದೃಷ್ಟಿಯಲ್ಲಿ ಇದು ಮೋಕ್ಷದ ಹಾದಿಯ ಪರ್ವಕಾಲವಾಗಿದೆ.

ಪಲ್ಲವಿ

LEAVE A REPLY

Please enter your comment!
Please enter your name here